ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾಗೆ ಸಿಬಿಐ ಸಮನ್ಸ್

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅಕ್ಟೋಬರ್‌ 17ರ ಬೆಳಗ್ಗೆ 11 ಗಂಟೆಗೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಕಳುಹಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ(ಎಎಪಿ), ಸಿಸೋಡಿಯಾ ಅವರನ್ನು ಬಂಧಿಸಲು ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದೆ.

ಈ ಬಗ್ಗೆ ಮಾನಾಡಿರುವ ಎಎಪಿ ಹಿರಿಯ ನಾಯಕ ಸೌರಭ್ ಭಾರದ್ವಾಜ್, ಮನೀಶ್ ಸಿಸೋಡಿಯಾ ಅವರಿಗೆ ಸಮನ್ಸ್ ನೀಡಿರುವುದರ ಹಿಂದೆ ಬಿಜೆಪಿ ಹಾಗೂ ಎಎಪಿ ಪಕ್ಷ ನೇರ ಸ್ಪರ್ಧೆಯಲ್ಲಿರುವ ಗುಜರಾತ್ ಚುನಾವಣೆಗೆ ಸಂಬಂಧವಿದೆ. ಈ ಬಗ್ಗೆ ಬಿಜೆಪಿ ಭಯಪಟ್ಟಿದೆ. ಇದಕ್ಕಾಗಿ ಸಿಸೋಡಿಯಾ ಅವರನ್ನು ಬಂಧಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಸಿಬಿಐನಿಂದ ಸಮನ್ಸ್ ಬಂದಿರುವ ಬಗ್ಗೆ ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ, ಸಿಬಿಐ ನನ್ನ ಮನೆ ಮೇಲೆ 14 ಗಂಟೆಗಳ ಕಾಲ ದಾಳಿ ನಡೆಸಿತ್ತು. ನನ್ನ ಬ್ಯಾಂಕ್ ಲಾಕರ್ ಅನ್ನು ತೆರೆದು ಹುಡುಕಿದ್ದರು. ಆದರೆ ಎಲ್ಲೂ ಏನೂ ಅವರಿಗೆ ಸಿಕ್ಕಿರಲಿಲ್ಲ. ಈಗ ಅವರು ಸಿಬಿಐ ಕಚೇರಿಗೆ ಕರೆದಿದ್ದಾರೆ. ನಾನು ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಬರೆದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೋಟ್ಯಂತರ ಬಡವರ ಪ್ರಾರ್ಥನೆ ನಿಮ್ಮೊಂದಿಗಿದೆ. ಜೈಲಿನ ಕಂಬಿಗಳು ಮತ್ತು ಗಲ್ಲು ಶಿಕ್ಷೆ ಭಗತ್ ಸಿಂಗ್ ಅವರ ದೃಢ ಉದ್ದೇಶವನ್ನು ತಡೆಯಲಿಲ್ಲ. ಇದು ನಮ್ಮ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಸುತ್ತಿದೆ. 75 ವರ್ಷಗಳ ಬಳಿಕ ದೇಶ ಉತ್ತಮ ಶಿಕ್ಷಣ ಸಚಿವರನ್ನು ಪಡೆದಿದ್ದು, ಬಡವರಿಗೆ ಉತ್ತಮ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ನೀಡುತ್ತಿದೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *