ಇನ್ನು ಬಿಹಾರ ವಿಧಾನಸಭೆಯಲ್ಲಿಯೂ ಶ್ರಮಜೀವಿಗಳ ಪರವಾಗಿ ಚೈತನ್ಯಪೂರ್ಣ ಹೋರಾಟ : ಎಡಪಕ್ಷಗಳು

“ಮತ ಎಣಿಕೆಯ ಕೊನೆಯ ಹಂತಗಳಲ್ಲಿನ ಅನಿಯಮಿತತೆಗಳನ್ನು ಚುನಾವಣಾ ಆಯೋಗದ ಮುಂದೆ ಎತ್ತಿಕೊಳ್ಳಲಾಗುವುದು ”

ಎಡಪಕ್ಷಗಳು ಬಿಹಾರದ ಮತದಾರರನ್ನು ಅವರು ‘ಮಹಾಗಟ್‌ಬಂಧನ್’ಗೆ ನೀಡಿರುವ ಬೆಂಬಲಕ್ಕಾಗಿ ಅಭಿನಂದಿಸುತ್ತ  ಮೂರು ಎಡಪಕ್ಷಗಳು- ಸಿಪಿಐ(ಎಂ), ಸಿಪಿಐ ಮತ್ತು ಸಿಪಿಐ(ಎಂ.ಎಲ್)-  ಬಿಹಾರದ ವಿಧಾನಸಭಾ ಚುನಾವಣೆಗಳ ಬಗ್ಗೆ ಒಂದು ಜಂಟಿ  ಹೇಳಿಕೆಯನ್ನು ನೀಡಿವೆ:

ಈ ರಂಗದ ಭಾಗವಾಗಿ ಸ್ಪರ್ಧಿಸಿದ್ದ ಎಡಪಕ್ಷಗಳು ಈ ಚುನಾವಣೆಯಲ್ಲಿ ಆಳುವ ಬಿಜೆಪಿ-ಜೆಡಿ(ಯು) ಮತ್ತು ಅವರ ಸರಕಾರದ ವಿರುದ್ಧ ಒಂದು ಕೆಚ್ಚಿನ ಸ್ಪರ್ಧೆಯನ್ನು ಕೊಟ್ಟು ‘ಮಹಾಗಟ್‌ಬಂಧನ್’ಗೆ ತಮ್ಮ ಕೊಡುಗೆ ನೀಡಿವೆ. ಜನಗಳ ಜೀವನೋಪಾಯಗಳು ಮತ್ತು ಉದ್ಯೋಗದ ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಎಡಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಎತ್ತಿದ ವಿಷಯಗಳಿಗೆ ಯುವಜನರ ಮತ್ತು ಜನತೆಯ ಸ್ಪಂಧನ ಚೇತೋಹಾರಿಯಾಗಿತ್ತು.

ಎಡಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದ್ದ 29 ಕ್ಷೇತ್ರಗಳಲ್ಲಿ 16ರಲ್ಲಿ ಗೆದ್ದಿವೆ : ಸಿಪಿಐ(ಎಂಎಲ್) -12, ಸಿಪಿಐ(ಎಂ) -2 ಮತ್ತು ಸಿಪಿಐ-2.

ಎರಡು ಮೈತ್ರಿಕೂಟಗಳ ಮತಗಳಿಕೆಯಲ್ಲಿ ಅಂತರ ಬಹಳ ಬಹಳ ಕಡಿಮೆ. ಬಿಜೆಪಿ ನೇತೃತ್ವದ ಮೈತ್ರಿಕೂಟ 2019ರ ಲೋಕಸಭಾ ಚುನಾವಣೆಗಳ ಮತಗಳಿಕೆಗೆ ಹೋಲಿಸಿದರೆ ಈ ಚುನಾವಣೆಗಳಲ್ಲಿ 12ಶೇ.ದಷ್ಟು ಕಳಕೊಂಡಿದೆ.

ಈಗಿರುವ ಮುಖ್ಯಮಂತ್ರಿಗಳ ಪಕ್ಷ, ಜನತಾ ದಳ(ಯು) ಕಳೆದ ವಿಧಾನಸಭಾ ಚುನಾವಣೆಗಳಲ್ಲಿ 71 ಸ್ಥಾನಗಳನ್ನು ಪಡೆದಿದ್ದರೆ, ಈ ಬಾರಿ ಕೇವಲ 43 ಸೀಟುಗಳಲ್ಲಿ ಗೆದ್ದಿದೆ. ಮತದಾರರ ಒಂದು ದೊಡ್ಡ ವಿಭಾಗ ಅದನ್ನು ತಿರಸ್ಕರಿಸಲು ಒಂದು ಕಾರಣ ಮುಖ್ಯಮಂತ್ರಿಗಳು ಆಗಿನ ಮಹಾಗಟ್‌ಬಂಧನ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದು ಎಂದು ಈ  ಎಡಪಕ್ಷಗಳು ಅಭಿಪ್ರಾಯ ಪಟ್ಟಿವೆ.

ಬಿಜೆಪಿ ಮತ್ತು ಪ್ರಧಾನ ಮಂತ್ರಿಗಳು ಕೋಮುವಾದಿ ಅಜೆಂಡಾದ ರಾಗವನ್ನ್ನು ತಾರಕಕ್ಕೆ ಏರಿಸಿದರು, ಮತದಾರರ ನಡುವೆ ಕೋಮುಧ್ರುವೀಕರಣ ತರಲು ಪ್ರಯತ್ನಿಸಿದರು. ಇದನ್ನು, ಮಹಾಗಟ್‌ಬಂಧನ್, ಲಾಕ್‌ಡೌನ್ ಉಂಟುಮಾಡಿರುವ ಆರ್ಥಿಕ ಹತಾಶೆ ಮತ್ತು ಕೊವಿಡ್ ಮಹಾಸೋಂಕನ್ನು ಮತ್ತು ನಾಗಾಲೋಟ ಹೂಡಿರುವ ನಿರುದ್ಯೋಗವನ್ನು ತಡೆಯುವಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿಫಲತೆಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಸಾಕಷ್ಟು ಪರಿಣಾಮಕಾರಿಯಾಗಿ ಎದುರಿಸಿತು.

ಮತಗಳಿಕೆಯ ಕೊನೆಯ ಹಂತಗಳಲ್ಲಿ ಕೆಲವು ಸ್ಪಷ್ಟ ಅನಿಯಮಿತತೆಗಳು ನಡೆದಿವೆ, ಇವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಶೀಲಿಸುವ ಅಗತ್ಯವಿದೆ ಎಂಬುದು ತಮ್ಮ ಅಭಿಪ್ರಾಯ ಎಂದಿರುವ ಈ ಎಡಪಕ್ಷಗಳು, ಮಹಾಗಟ್‌ಬಂಧನ್‌ನ ಇತರ ಭಾಗೀದಾರರೊಂದಿಗೆ ತಾವು ಈ ವಿಷಯಗಳನ್ನು ಬಾರತದ ಚುನಾವಣಾ ಆಯೋಗದ ಸಮ್ಮುಖ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿವೆ.

ವಿಧಾನಸಭೆಯಲ್ಲಿ ಎಡಪಕ್ಷಗಳ ಉಪಸ್ಥಿತಿಯನ್ನು ಶ್ರಮಜೀವಿ ಜನಗಳ ಹಿತರಕ್ಷಣೆಗೆ, ಉದ್ಯೋಗಗಳು ಮತ್ತು ಸಾಮಾಜಿಕ/ ಆರ್ಥಿಕ ಅನ್ಯಾಯಗಳನ್ನು ಕುರಿತಾದ ಪ್ರಧಾನ ಪ್ರಶ್ನೆಗಳನ್ನು ಎತ್ತಲು ಬಳಸಿಕೊಳ್ಳಲಾಗುವುದು. ಈ ಗುರಿಸಾದನೆಯ ಹೋರಾಟಗಳು ಹುರುಪಿನಿಂದ ಮುಂದುವರೆಯುತ್ತವೆ ಎಂದು ಎಡಪಕ್ಷಗಳು ಭರವಸೆ ನೀಡಿವೆ.

 

Donate Janashakthi Media

Leave a Reply

Your email address will not be published. Required fields are marked *