ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭೆ ಚುನಾವಣೆ-2025ಯ ಕಾವು ಹೆಚ್ಚಾಗುತ್ತಿದ್ದು, ಎಎಪಿ ಪಕ್ಷಕ್ಕೆ ಬಿಜೆಪಿ, ಕಾಂಗ್ರೆಸ್ ಸಮಾನ ಎದುರಾಳಿಗಳು. ಫೆಬ್ರವರಿ 5ರಂದು ಒಂದೇ ಹಂತದಲ್ಲಿ 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯಲಿದೆ. ಫೆಬ್ರವರಿ 8ರಂದು ನಡೆಯುವ ಮತ ಎಣಿಕೆ ಮೇಲೆ ದೇಶದ ಗಮನವಿದೆ.
ಎಎಪಿಯನ್ನು ಅಧಿಕಾರದಿಂದ ದೂರವಿಟ್ಟು ದೆಹಲಿ ಚುನಾವಣೆ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ತಂತ್ರ ರೂಪಿಸುತ್ತಿವೆ. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ ಅತಿಶಿ ಮೂರನೇ ಬಾರಿಗೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ನಾಯಕರ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ.
2025ರ ಚುನಾವಣೆಗೆ ಮುಖ್ಯಮಂತ್ರಿ ಅತಿಶಿ ಕಲ್ಕಜಿ ಕ್ಷೇತ್ರದ ಅಭ್ಯರ್ಥಿ. ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಾಂಬಾ, ಬಿಜೆಪಿ ಅಭ್ಯರ್ಥಿ ಮಾಜಿ ಸಂಸದ ರಮೇಶ್ ಬಿಂಧುರಿ. ಈಗ ಮುಖ್ಯಮಂತ್ರಿ ಅತಿಶಿ ಕೇಳಿರುವ ಒಂದು ಪ್ರಶ್ನೆಗೆ ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಯಾರು?; ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ. ಆದರೆ ಮುಖ್ಯಮಂತ್ರಿ ಯಾರು? ಎಂದು ಘೋಷಣೆ ಮಾಡಿಲ್ಲ. ಮುಖ್ಯಮಂತ್ರಿ ಅತಿಶಿ ಈ ಕುರಿತು ಮಾತನಾಡಿ, “ದೆಹಲಿಯ ಜನರಿಗೆ ಎಎಪಿಗೆ ಮತ ಹಾಕಿದರೆ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗುತ್ತಾರೆ ಎಂದು ತಿಳಿದಿದೆ.
ಇದನ್ನೂ ಓದಿ : ಮುಂಬರುವ ಚುನಾವಣೆಯಲ್ಲಿ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸಲಿದೆ: ಸಂಜಯ್ ರಾವತ್
ನಿಮ್ಮಲ್ಲಿ (ಬಿಜೆಪಿ) ಸಿಎಂ ಅಭ್ಯರ್ಥಿ ಯಾರು?. ರಮೇಶ್ ಬಿಂಧುರಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡುವಿರಾ?” ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.
“ದೆಹಲಿ ಜನರು ಮುಖ್ಯಮಂತ್ರಿ ಯಾರು? ಎಂದು ಕೇಳುತ್ತಿದ್ದಾರೆ. ಎಎಪಿ ಚುನಾವಣೆ ಗೆದ್ದರೆ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗುತ್ತಾರೆ” ಎಂದರು. 2024ರಲ್ಲಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದಾಗ ಅತಿಶಿ ಮುಖ್ಯಮಂತ್ರಿಯಾದರು. ಆದರೆ ಈ ಬಾರಿ ಪುನಃ ಎಎಪಿ ಗೆದ್ದರೆ ಕೇಜ್ರಿವಾಲ್ ಮುಖ್ಯಮಂತ್ರಿ ಎಂದು ಅತಿಶಿ ಘೋಷಣೆ ಮಾಡಿದರು.
“ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ಚರ್ಚೆ ಮಾಡಿ ಘೋಷಣೆ ಮಾಡಿ. ತಮ್ಮ ಹೇಳಿಕೆಗಳ ಮೂಲಕವೇ ಈಗಾಗಲೇ ರಮೇಶ್ ಬಿಂಧುರಿ ದೆಹಲಿಯ ಜನರ ಗಮನ ಸೆಳೆದಿದ್ದಾರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ? ಎಂದು ಘೋಷಣೆ ಮಾಡುತ್ತೀರಾ?” ಎಂದು ಅತಿಶಿ ಪ್ರಶ್ನೆ ಮಾಡಿದರು.
ಕೆಲವು ದಿನಗಳ ಹಿಂದೆ ರಮೇಶ್ ಬಿಂಧುರಿ ದೆಹಲಿಯ ರಸ್ತೆಗಳನ್ನು ಸಂಸದೆ ಪ್ರಿಯಾಂಕಾ ವಾದ್ರಾ ಕೆನ್ನೆಯಂತೆ ನುಣುಪಾಗಿ ಮಾಡುತ್ತೇನೆ ಎಂದು ಹೇಳಿಕೆ ನೀಡಿ ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿದ್ದರು. ತಮ್ಮ ಹೇಳಿಕೆ ಟೀಕೆಗಳಿಗೆ ಕಾರಣವಾದ ಬಳಿಕ ಅದನ್ನು ಅವರು ವಾಪಸ್ ಪಡೆದಿದ್ದರು.
ಬಿಜೆಪಿ ಮತ್ತು ಎಎಪಿ ನಡುವೆ ದೆಹಲಿ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಅದರಲ್ಲೂ ಇವಿಎಂ ಬಗ್ಗೆ ಸದಾ ಅನುಮಾನ ವ್ಯಕ್ತಪಡಿಸುವ ಅರವಿಂದ್ ಕೇಜ್ರಿವಾಲ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಪಣತೊಟ್ಟಿದ್ದಾರೆ. 26 ವರ್ಷಗಳ ಬಳಿಕ ರಾಜ್ಯದಲ್ಲಿ ಅಧಿಕಾರ ಪಡೆಯುವ ಉತ್ಸಾಹದಲ್ಲಿ ಬಿಜೆಪಿ ನಾಯಕರು ಇದ್ದಾರೆ.
ಇದನ್ನೂ ನೋಡಿ : ಉನ್ನತ ಶಿಕ್ಷಣವನ್ನು ಕೇಂದ್ರೀಕರಣಗೊಳಿಸುವ, ಆರೆಸ್ಸೆಸ್ ಸಿದ್ಧಾಂತಕ್ಕೆ ಅವಕಾಶ ಕಲ್ಪಿಸುವ ಯುಜಿಸಿ ತಿದ್ದುಪಡಿಗಳು…