ದೆಹಲಿ: ಕೇಂದ್ರದ ಬಿಜೆಪಿ ಸರ್ಕಾರದ ಮಹಿಳಾ ದ್ವೇಷಿ ನೀತಿಗಳ ವಿರುದ್ಧ ಮತ್ತು ಮಹಿಳೆಯರ ಹಕ್ಕುಗಳ ಮೇಲಿನ ದಾಳಿಗಳನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ (AIDWA) ನೇತೃತ್ವದಲ್ಲಿ ರಾಷ್ಟ್ರರಾಜಧಾನಿಯ ಜಂತರ್ ಮಂತರ್‌ನಲ್ಲಿ ಸಾವಿರಾರು ಮಹಿಳೆಯರು ಗುರುವಾರ ರ‍್ಯಾಲಿ ನಡೆಸಿದ್ದಾರೆ. “ಬಿಜೆಪಿ-ಆರೆಸ್ಸೆಸ್ ತೊಲಗಿಸಿ, ಮಹಿಳೆಯರನ್ನು ರಕ್ಷಿಸಿ, ದೇಶ ಉಳಿಸಿ” ಎಂಬ ಘೋಷ ವಾಕ್ಯದೊಂದಿಗೆ ಸಂಸತ್ತಿಗೆ ಮುತ್ತಿಗೆ ಹಾಕಲು ಹೊರಟಿದ್ದ AIDWA ಕಾರ್ಯಕರ್ತರಿಗೆ ಅನುಮತಿ ನಿರಾಕರಿಸಲಾಯಿತು.
ರ‍್ಯಾಲಿಯನ್ನು ಉದ್ದೇಶಿಸಿ AIDWA ಪ್ರಧಾನ ಕಾರ್ಯದರ್ಶಿ ಮರಿಯಮ್ ಧಾವಲೆ ಅವರು ಮಾತನಾಡಿದ್ದು, ದೇಶದಾದ್ಯಂತ ಸುಮಾರು 25 ರಾಜ್ಯಗಳಿಂದ 10,000 ಕ್ಕೂ ಹೆಚ್ಚು ಮಹಿಳೆಯರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಸುಮಾರು ಒಂದು ತಿಂಗಳಿನಿಂದ “ಬಿಜೆಪಿ-ಆರೆಸ್ಸೆಸ್ ತೊಲಗಿಸಿ, ಮಹಿಳೆಯರನ್ನು ರಕ್ಷಿಸಿ, ದೇಶ ಉಳಿಸಿ” ಎಂಬ ಘೋಷವಾಕ್ಯದೊಂದಿಗೆ ದೇಶದಾದ್ಯಂತ ಹಲವಾರು ಪ್ರದೇಶಗಳಲ್ಲಿ ಸಂಘಟನೆಯ ನೇತೃತ್ವದಲ್ಲಿ ರ‍್ಯಾಲಿ ನಡೆದಿದ್ದವು. ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಬೃಹತ್ ಮಟ್ಟದ ರ‍್ಯಾಲಿಗಳನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ ಸಂಘಟಿಸಿತ್ತು.
ಇದನ್ನೂ ಓದಿ: ನ್ಯೂಸ್ ಕ್ಲಿಕ್ ಸಂಸ್ಥೆ ಮೇಲೆ ಆಗಿರುವ ಕಾನೂನು ಬಾಹಿರ ದಾಳಿಯನ್ನು ಖಂಡಿಸಿ ಪ್ರತಿಭಟನೆ
ಒಂದು ವೇಳೆ ಭಾರತವೂ ಹಿಂದೂ ರಾಷ್ಟ್ರವಾದರೆ ಅದರಿಂದಾಗಿ ಮಹಿಳೆಯರೇ ಹೆಚ್ಚು ನಷ್ಟಕ್ಕೊಳಗಾಗುತ್ತಾರೆ ಎಂದು AIDWA ಪ್ರತಿಪಾದಿಸಿದೆ. “ಹಿಂದೂ ರಾಷ್ಟ್ರವೆಂದರೆ ಶ್ರೇಣೀಕೃತ ವ್ಯವಸ್ಥೆಯಾಗಿದೆ. ಇದು ಮೇಲ್ಜಾತಿ ಪ್ರಾಬಲ್ಯವನ್ನು ಮತ್ತು ಷುರುಷ ಪ್ರಧಾನ ಸಮಾಜವನ್ನು ಪ್ರತಿಪಾಸಿ, ಅದನ್ನು ಬಲಪಡಿಸುವುದಕ್ಕೆ ಸಹಾಯ ಮಾಡುತ್ತದೆ. ನಾವು ಎಲ್ಲಾ ಭಾರತೀಯರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಬಹಳಷ್ಟು ಅಪಾಯದಲ್ಲಿರುವ ಹೊಸ್ತಿಲಲ್ಲಿದ್ದೇವೆ” ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ ಹೇಳಿದೆ.
“ಬಿಜೆಪಿ ಆಡಳಿತದ 2016 ಮತ್ತು 2021 ರ ನಡುವೆ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ 26% ರಷ್ಟು ಏರಿಕೆಯಾಗಿದೆ. ಪ್ರತಿ ಮೂರು ನಿಮಿಷಕ್ಕೊಂದು ಅಪರಾಧ ಮಹಿಳೆಯರ ವಿರುದ್ಧ ನಡೆಯುತ್ತದೆ. ಪ್ರತಿ 29 ನಿಮಿಷಗಳಿಗೊಮ್ಮೆ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ವರದಕ್ಷಿಣೆ ಸಾವುಗಳು ಪ್ರತಿ 77 ನಿಮಿಷಗಳಿಗೊಮ್ಮೆ ಸಂಭವಿಸುತ್ತವೆ” ಎಂದು AIDWA ಹೇಳಿದೆ.
ಇದನ್ನೂ ಓದಿ: ಬೀದರ್| ಬಾಲಕಿ ಸಾವಿನ ತನಿಖೆಗೆ ನಿರ್ಲಕ್ಷ್ಯ; ಪಿಎಸ್‌ಐ ಅಮಾನತು
“ದ್ವೇಷ ರಾಜಕೀಯದಿಂದಾಗಿ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ಮೇಲೆ ಕ್ರೌರ್ಯ ಮತ್ತು ಹಿಂಸಾಚಾರ ಹೆಚ್ಚಾಗಿದೆ” ಎಂದು ಹೇಳಿರುವ ಮಹಿಳಾ ಸಂಘಟನೆ ನೇರವಾಗಿ ಹಿಂದೂ ಮತೀಯವಾದಿ ಬಿಜೆಪಿಯತ್ತ ಬೆರಳು ತೋರಿಸಿದೆ.
ಸಾಮಾಜಿಕ ಭದ್ರತೆಯ ಮೇಲೆ ಪ್ರಧಾನಿ ಮೋದಿ ಸರ್ಕಾರವು ದಾಳಿ ಮಾಡಿದೆ ಎಂದು AIDWA ಆರೋಪಿಸಿದ್ದು, “ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಯೋಜನೆಗೆ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸರ್ಕಾರ ಬಜೆಟ್ ಕಡಿತ ಮಾಡಿದೆ. ಭಾರತವು ಈಗಾಗಲೇ ಜಗತ್ತಿನಲ್ಲಿ ಅತಿ ಹೆಚ್ಚು ಹಸಿದಿರುವ ಜನರನ್ನು ಹೊಂದಿರುವ ದೇಶವಾಗಿದೆ. ಹಸಿವಿನ ಸೂಚ್ಯಂಕದಲ್ಲಿ ದೇಶವು ವಿಶ್ವದ 121 ದೇಶಗಳಲ್ಲಿ 107 ನೇ ಸ್ಥಾನದಲ್ಲಿದೆ. ದೇಶದಾದ್ಯಂತ ಈ ಯೋಜನೆಗಳು ಇನ್ನೂ ಜಾರಿಯಲ್ಲಿರಬೇಕಾದ ಅಗತ್ಯವಿದ್ದರೂ ಕೇಂದ್ರ ಸರ್ಕಾರದ ನಿಧಿ ಕಡಿತ ಮಾಡಿದೆ” ಎಂದು ಮಹಿಳಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ವಿಡಿಯೊ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ