ನವದೆಹಲಿ: ದೆಹಲಿಯಲ್ಲಿ ಹನುಮ ಜಯಂತಿ ಅಂಗವಾಗಿ ನಡೆದ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ತನಿಖೆಗಾಗಿ 10 ತಂಡಗಳ ರಚನೆ ಮಾಡಲಾಗಿದೆ.
ದೆಹಲಿಯ ವಾಯುವ್ಯ ಭಾಗದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಪ್ರಕರಣ ನಡೆದಿತ್ತು.
ಎರಡು ಕೋಮುಗಳ ನಡುವೆ ತೀವ್ರ ವಾಗ್ವಾದ ನಡೆದು, ಮಾರಾಮಾರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಎರಡೂ ಸಮುದಾಯಗಳ ಮಧ್ಯ ವಾಗ್ವಾದ ನಡೆದಿದ್ದು, ಪರಸ್ಪರ ಕಲ್ಲು ತೂರಾಟವನ್ನು ನಡೆಸಿದ್ದಾರೆ. ಕೆಲವರು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿದರೆ, ಇನ್ನೂ ಕೆಲವರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ‘ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸುವೆ’ ವಿವಾದಾತ್ಮಕ ಪೋಸ್ಟ್ : ಹುಬ್ಬಳ್ಳಿ ಉದ್ವಿಗ್ನ
ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 120ಬಿ (ಕ್ರಿಮಿನಲ್ ಪಿತೂರಿ), 147(ಗಲಭೆ) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಘಟನೆಯಲ್ಲಿ 8 ಜನ ಪೊಲೀಸರು ಸೇರಿದಂತೆ 9 ಜನರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಮೊದಲಿಗೆ 9 ಜನರನ್ನು ಬಂಧಿಸಲಾಗಿತ್ತು. ಬಳಿಕ ಮತ್ತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಉಪ ಕಮಿಷನರ್ ಉಷಾ ರಂಗಾನಿ ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಭಾಗಿಯಾದವರನ್ನು ಪತ್ತೆಹಚ್ಚಲು ಡ್ರೋನ್‌ಗಳು ಮತ್ತು ಮುಖವನ್ನು ಗುರುತಿಸುವ ಸಾಫ್ಟ್‌ವೇರ್‌ಗಳನ್ನು ಬಳಸಲಾಗುತ್ತಿದೆ. ಎಲ್ಲಾ ಮೊಬೈಲ್ ದೃಶ್ಯಾವಳಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಘರ್ಷಣೆ ನಡೆದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪರಿಸ್ಥಿಯನ್ನು ಹತೋಟಿಗೆ ತರಲು ಕ್ಷಿಪ್ರ ಕಾರ್ಯಪಡೆಯ ತಂಡವನ್ನು ಸಹ ನಿಯೋಜಿಸಲಾಗಿದೆ.
ಇದನ್ನು ಓದಿ: ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು 13 ಪಕ್ಷಗಳ ಮುಖಂಡರ ಜಂಟಿ ಮನವಿ
ಹನುಮ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಶೋಭಾ ಯಾತ್ರೆಯಲ್ಲಿ ಶನಿವಾರ ಸಂಜೆ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ನಡೆದ ಕಲ್ಲುತೂರಾಟದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಉದ್ರಿಕ್ತರು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು.
ರಾಷ್ಟ್ರ ರಾಜಧಾನಿ ದೆಹಲಿಯ ಎಲ್ಲಾ ಜಿಲ್ಲೆಗಳಲ್ಲಿನ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಗಾವಲು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.