ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಸುತ್ತಿರುವ ನಡುವೆಯೇ, ನಿಗದಿತ ಸಮಯಕ್ಕಿಂತ ಒಂದು ಅಥವಾ ಎರಡು ತಿಂಗಳ ಅವಧಿಗೆ ಚುನಾವಣೆಯನ್ನು ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ಒತ್ತಾಯಿಸಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರದ ಮೆರವಣಿಗೆಗಳನ್ನು ನಿಷೇಧಿಸುವಂತೆ ಕೋರ್ಟ್ ಸಲಹೆ ನೀಡಿದೆ.
ಕೊರೊನಾ ರೂಪಾಂತರಿ ತಳಿ ಓಮೈಕ್ರಾನ್ ಸೋಂಕು ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಯುಪಿ ವಿಧಾನಸಭೆ ಚುನಾವಣೆ ನಿಗದಿತ ಸಮಯದಲ್ಲಿ ನಡೆಸದಂತೆ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಯಾದವ್ ಸೂಚನೆ ನೀಡಿದ್ದಾರೆ.
ದೇಶದಲ್ಲಿ ಮತ್ತೆ ಆತಂಕ ಹೆಚ್ಚಿಸುತ್ತಿರುವ ಕೊವಿಡ್-19ರ ರೂಪಾಂತರಿ ಓಮೈಕ್ರಾನ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಚುನಾವಣಾ ಪ್ರಚಾರದ ಮೆರವಣಿಗೆಗಳನ್ನು ನಡೆಸದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಕೋರ್ಟ್ ಒತ್ತಾಯಿಸಿದೆ.
ಚುನಾವಣಾ ಪ್ರಚಾರಕ್ಕೆ ಕಡಿವಾಣ ಹಾಕಿ
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಕಡಿವಾಣ ಹಾಕಿ ಇಲ್ಲವಾದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವು ಎರಡನೇ ಅಲೆಗಿಂತ ಭೀಕರವಾಗಿ ಎದುರಿಸಬೇಕಾಗಿ ಬರಬಹುದು ಎಂದು ನ್ಯಾಯಮೂರ್ತಿ ಶೇಖರ್ ಯಾದವ್ ಎಚ್ಚರಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ನಡೆಸುವ ಸಭೆ, ಸಮಾರಂಭ ಮತ್ತು ಪ್ರಚಾರ ಸಮಾವೇಶಗಳು ಆತಂಕಕ್ಕೆ ಕಾರಣವಾಗಿವೆ. ಪ್ರತಿನಿತ್ಯ ನೂರಾರು ಪ್ರಕರಣಗಳು ದಾಖಲಾಗುತ್ತಿದ್ದರೂ ಚುನಾವಣಾ ಮೆರವಣಿಗೆ ಮತ್ತು ಸಮಾವೇಶಗಳು ನಡೆಯುತ್ತಲೇ ಇವೆ.
ಪ್ರಚಾರ ಸಭೆಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ಉಲ್ಲೇಖಿಸಿದ ನ್ಯಾಯಾಧೀಶರು ಕೊವಿಡ್-19 ಪ್ರಕರಣಗಳ ಸಂಖ್ಯೆಯ ಬಗ್ಗೆ ವರದಿಗಳನ್ನು ಉಲ್ಲೇಖಿಸಿದರು ಮತ್ತು ಲಾಕ್‌ಡೌನ್ ಅನ್ನು ಜಾರಿಗೊಳಿಸಿದ ದೇಶಗಳ ಬಗ್ಗೆ ಪ್ರಸ್ತಾಪಿಸಿದರು.