ದೆಹಲಿಯ ಐದು ಪ್ರವೇಶ ಮಾರ್ಗಗಳೂ ಬಂದ್‌: ರೈತರ ಎಚ್ಚರಿಕೆ

  • ಷರತ್ತುಬದ್ಧ ಮಾತುಕತೆ ರೈತರಿಗೆ ಮಾಡುವ ಅವಮಾನ

ನವದೆಹಲಿ: ಪ್ರತಿಭಟನೆಗೆ ಸರ್ಕಾರ ನಿಗದಿ ಮಾಡಿರುವ ದೆಹಲಿಯ ಬುರಾಡಿ ಮೈದಾನಕ್ಕೆ ತೆರಳಿದ ನಂತರ ಮಾತುಕತೆ ನಡೆಸಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪ್ರಸ್ತಾವವನ್ನು ರೈತರು ತಿರಸ್ಕರಿಸಿದ್ದಾರೆ. ಅಲ್ಲದೆ, ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸುವ ಎಲ್ಲ ಐದು ಪ್ರವೇಶ ಮಾರ್ಗಗಳನ್ನೂ ಮುಚ್ಚುವ ಎಚ್ಚರಿಕೆ ನೀಡಿದ್ದಾರೆ. 

ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್‌ ಮತ್ತು ಹರಿಯಾಣದ ರೈತರು ನಾಲ್ಕು ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

‘ಅಮಿತ್ ಶಾ ಅವರು ರೈತರ ಜತೆ ಮಾತುಕತೆ ನಡೆಸಲಿದ್ದಾರೆ. ಆದರೆ ರೈತರು ಬುರಾಡಿ ಮೈದಾನಕ್ಕೆ ಹೋಗಲು ಒಪ್ಪಿಕೊಳ್ಳಬೇಕು. ಆಗ ಮಾತ್ರ  ಡಿ.3ಕ್ಕೂ ಮೊದಲೇ ಮಾತುಕತೆ ಏರ್ಪಡಿಸುತ್ತೇವೆ’ ಎಂದು ಸರ್ಕಾರವು ಷರತ್ತು ಹಾಕಿತ್ತು. ಈ ಷರತ್ತನ್ನು ಒಪ್ಪಿಕೊಳ್ಳಲು ರೈತ ನಾಯಕರು ತಿರಸ್ಕರಿಸಿದ್ದಾರೆ.

‘ಗೃಹ ಸಚಿವ ಅಮಿತ್ ಶಾ ಅವರು ವಿಧಿಸಿರುವ ಷರತ್ತು ನಮಗೆ ಒಪ್ಪಿತವಾಗಿಲ್ಲ. ನಾವು ಯಾವುದೇ ಷರತ್ತುಬದ್ಧ ಮಾತುಕತೆಗಳನ್ನು ನಡೆಸುವುದಿಲ್ಲ. ಸರ್ಕಾರದ ಪ್ರಸ್ತಾಪವನ್ನು ನಾವು ತಿರಸ್ಕರಿಸುತ್ತೇವೆ. ಇಲ್ಲಿ ನಡೆಯುತ್ತಿರುವ (ಸಿಂಗು ಗಡಿ) ನಮ್ಮ ಹೋರಾಟ ಕೊನೆಗೊಳ್ಳುವುದಿಲ್ಲ. ದೆಹಲಿ ಪ್ರವೇಶಿಸುವ ಎಲ್ಲಾ ಐದು ಐದು ಮಾರ್ಗಗಳನ್ನು ನಾವು ಬಂದ್‌ ಮಾಡುತ್ತೇವೆ,’ ಎಂದು ಪಂಜಾಬ್‌ನ ಭಾರತೀಯ ಕಿಸಾನ್ ಯೂನಿಯನ್‌ನ ಅಧ್ಯಕ್ಷ ಸುರ್ಜೀತ್ ಎಸ್ ಫುಲ್ ಸುದ್ದಿಗಾರರಿಗೆ ತಿಳಿಸಿದರು.

‘ಮಾತುಕತೆಗೆ ಹಾಕಲಾದ ಷರತ್ತು ರೈತರಿಗೆ ಮಾಡಿದ ಅವಮಾನ. ನಾವು ಎಂದಿಗೂ ಬುರಾಡಿಗೆ ಹೋಗುವುದಿಲ್ಲ. ಅದು ಉದ್ಯಾನವನವಲ್ಲ ‘ತೆರೆದ ಜೈಲು’ ಎಂದು ಅವರು ಹೇಳಿದರು.

ಶನಿವಾರ ಬುರಾರಿಯ ನಿರಂಕರಿ ಸಮಗಂ ಮೈದಾನವನ್ನು ತಲುಪಿದ ರೈತರು ಕೂಡ ಅಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *