ಕೆಂಪುಕೋಟೆ ಪ್ರವೇಶಿಸಿದವರು ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರುವ ಪ್ರತಿಭಟನೆಕಾರರು ಅಲ್ಲ
ದೆಹಲಿ :ಜ. 26 : ದಿಲ್ಲಿಯ ಸುತ್ತ ಐದು ಗಡಿಗಳಲ್ಲಿ ಕಳೆದ ಎರಡು ತಿಂಗಳಿಂದ ಪ್ರತಿಭಟಿಸುತ್ತಿರುವ ರೈತರು ಮತ್ತು ದೇಶಾದ್ಯಂತ ಅವರಿಗೆ ಬೆಂಬಲವಾಗಿ ನಿಂತಿರುವ ಇನ್ನೂ ಲಕ್ಷಾಂತರ ರೈತರು ಮತ್ತು ಇತರರು 72ನೇ ಗಣತಂತ್ರ ದಿನವನ್ನು ಅಭೂತಪೂರ್ವ ರೀತಿಯಲ್ಲಿ ಆಚರಿಸಿದ್ದಾರೆ.
ದಿಲ್ಲಿಯಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿವೆ. ಬೆಳಿಗ್ಯೆ ಸಿಂಘು ಗಡಿಯಲ್ಲಿ ಕೆಲವರು ಪೋಲೀಸರ ತಡೆಬೇಲಿಗಳನ್ನು, ಡಂಪರುಗಳ ತಡೆಯನ್ನು ಬೇಧಿಸಿ ದಿಲ್ಲಿ ಪ್ರವೇಶಿಸಿದರು, ನಂತರ ಕೆಲವರು ದಿಲ್ಲಿಯ ಕೇಂದ್ರ ಪ್ರದೇಶಗಳತ್ತವೂ ಹೋಗಿ ಕೆಂಪುಕೋಟೆಯನ್ನು ಪ್ರವೇಶಿಸಿದರು ಎಂದೂ ವರದಿಯಾಗಿದೆ. ಕೆಲವೆಡೆಗಳಲ್ಲಿ ಪೋಲೀಸರು ಲಾಠೀ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದರು. ಆದರೆ ಇವರು ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರುವ ಪ್ರತಿಭಟನಾಕಾರರಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಹೇಳಿದ್ದಾರೆ. ಆ ನಂತರ ತಮ್ಮ ಮನವಿಗಳಂತೆ ಶಾಂತಿಯುತವಾಗಿ ಟ್ರಾಕ್ಟರ್ ಪರೇಡ್‍ಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಈ ಕೆಲವು ಅಹಿತಕರ ಘಟನೆಗಳು ಕಳೆದ ಏಳು ತಿಂಗಳಿಂದ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿರುವ ಈ ಚಳುವಳಿಯ ಹೆಸರುಗೆಡಿಸುವ ಪಿತೂರಿಯಿರಬಹುದು ಎಂದೂ ಕೆಲವು ರೈತ ಮುಖಂಡರು ಹೇಳಿದ್ದಾರೆ. ಇದನ್ನು ಮತ್ತೆ-ಮತ್ತೆ ತೋರಿಸಿ ಜನಗಳನ್ನು ಉದ್ರೇಕಿಸುವ ಪ್ರಯತ್ನ ಮಾಡಬೇಡಿ ಎಂದು ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಮಾಧ್ಯಮಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ.
ಸಿಂಘು ಗಡಿಯಿಂದ ಪಾಣಿಪತ್‍ನ ವರೆಗೆ ಸುಮಾರು ನೂರು ಕಿ.ಮೀ. ಉದ್ದಕ್ಕೂ ಟ್ರ್ಯಾಕ್ಟರುಗಳು ಬಂದು ಸೇರಿಕೊಂಡದ್ದರಿಂದ ರೈತರು ಪೋಲಿಸರು ವಿಧಿಸಿದ ಮಾರ್ಗದಲ್ಲೇ ಸಾಗಲು ಸಾಧ್ಯವಾಗಲಿಲ್ಲ. ದಿಲ್ಲಿ-ನೋಯ್ಡಾ ಹೆದ್ದಾರಿಯಲ್ಲಿರುವ ಚಿಲ್ಲಾದಲ್ಲಿ ಮೊದಲಿಗೆ ಪೋಲಿಸರು ಅನುಮತಿ ನೀಡದ್ದರಿಂದ ರೈತರು ಬ್ಯಾರಿಕೇಡುಗಳನ್ನು ಮುರಿದು ಮುಂದೊತ್ತಿದರು. ನಂತರ ಪೋಲಿಸರು ಅನುಮತಿ ನೀಡಿದರು.
ಪಲ್ವಲ್ ಗಡಿಯಲ್ಲಿ ಬದರ್‍ಪುರ್ ವರೆಗೆ 45 ಕಿ.ಮೀ. ಟ್ರಾಕ್ಟರ್ ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ 15 ಕಿ.ಮೀ. ಸಾಗಿ ಸಿಕ್ರಿ ತಲುಪಿದಾಗ ಪೋಲೀಸರು ಲಾಠೀ ಪ್ರಹಾರ ನಡೆಸಿದರು. ಡಿವೈಎಫ್‍ಐ ಮುಖಂಡರ ಸಹಿತ ಹಲವರು ಗಾಯಗೊಂಡರು. ರೈತರು ಅಲ್ಲೇ ಕೂತು ಪ್ರತಿಭಟನೆ ನಡೆಸಿದರು ಎಂದು ಅಖಿಲ ಭಾರತ ಕಿಸಾನ್ ಸಭಾದ ಮುಖಂಡರು ಹೇಳಿದ್ದಾರೆ.
ಕಳೆದ 60 ದಿನಗಳಿಂದ ಸರಕಾರ ಪ್ರದರ್ಶಿಸುತ್ತಿರುವ ಮೊಂಡುತನದ ನಿಲುವು ಕೂಡ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ ಎಂದಿರುವ ಸಂಯುಕ್ತ ಕಿಸಾನ್ ಮೋರ್ಚಾ, ಈ ಕೆಲವು ಅಹಿತಕರ ಘಟನೆಗಳನ್ನು ಬಿಟ್ಟರೆ ಪರೇಡ್ ಗಳು ದೇಶಾದ್ಯಂತ ಶಾಂತಿಯುತವಾಗಿ ನಡೆಯುತ್ತಿರುವ ವರದಿಗಳು ಬರುತ್ತಿವೆ ಎಂದು ಹೇಳಿದೆ.