ದೆಹಲಿ ರೈತ ಚಳುವಳಿ ನೇರ ಅನುಭವ -6 : ರೈತರ ಹೋರಾಟ ಒಂದು ವಿಶ್ವವಿದ್ಯಾಲಯದಂತಿದೆ

ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ

ಇಂದು ದೆಹಲಿ ಮತ್ತು ಹರಿಯಾಣದ ಗಡಿಯಾದ ಟಿಕ್ರಿ ಬಾರ್ಡರ್ ಗೆ ನಮ್ಮ ಪಯಣ. ದೆಹಲಿಯಿಂದ ಸುಮಾರು 30 ಕಿಲೋಮೀಟರ್ ದೂರವಿದ್ದರೂ ಇದು ದೆಹಲಿ ನಗರದಲ್ಲಿಯೇ ಇರುವ ಗಡಿ. ನಾವು ಗಡಿಯನ್ನು ತಲುಪಿದಾಗ ನಮ್ಮನ್ನ ಸ್ವಾಗತ ಮಾಡಿದ್ದು ಸರಿ ಸುಮಾರು 10 ದೊಡ್ಡ ದೊಡ್ಡ ಕ್ರೇನ್ ಗಳು ಮತ್ತು‌ ಎಂಜಿನ್ ಇಲ್ಲದ 20 ಚಕ್ರಗಳ ಸುಮಾರು 50 ಕ್ಕೂ ಹೆಚ್ಚು ಲಾರಿಯ ಬಾಡಿಗಳು. ಇವುಗಳನ್ನ ಕ್ರೇನ್ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಲಾಗುತ್ತಿತ್ತು. ದಿನದಿಂದ ದಿನಕ್ಕೆ ರೈತ ಚಳುವಳಿಯಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾದಂತೆಲ್ಲ ಕೋಟೆಯ ಹೆಬ್ಬಾಗಿಲನ್ನ ಭದ್ರಪಡಿಸಿಕೊಳ್ಳಲು ಆಳುವ ಪ್ರಭುತ್ವ ಪೋಲೀಸ್ ಮತ್ತು ಸೈನ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಸುತ್ತಿದೆ. ಕಳೆದ 56 ದಿನಗಳ ಹಿಂದೆ ನಿರ್ಮಿಸಿರುವ ಬ್ಯಾರಿಕೇಡ್ಸ್, ಸಿಮೆಂಟ್ ಬ್ಲಾಕ್ಸ್ ಗಳಲ್ಲದೆ ಇಂದು ಈ ಲಾರಿಗಳನ್ನು ರಸ್ತೆಗೆ ಅಡ್ಡಲಾಗಿ ಸರಿಸುಮಾರು ನೂರು ಮೀಟರ್ ಗಳವರೆಗೆ ನಿಲ್ಲಸಲಾಗಿದೆ. ಅಂದರೆ ಈ ಅಡತಡೆಗಳನ್ನು, ಪ್ರಭುತ್ವ ನಿರ್ಮಿತ ತಡೆಗೋಡೆಗಳನ್ನು ಭೇದಿಸಿ ರೈತರು ದೆಹಲಿಯತ್ತ ಬರಬಾರದು ಎಂಬುದು ಸರ್ಕಾರದ ನಿರ್ಧಾರ ವಿದ್ದಂತೆ ಕಾಣುತ್ತಿದೆ.

ಇದನ್ನು ಓದಿ : ಮೋದಿಯವರ ಅಡ್ಡಗೋಡೆಗಳನ್ನು ದಾಟಿದ ದೇಶಪ್ರೇಮಿ ಹೋರಾಟ

ದೆಹಲಿಯ ಸುತ್ತ 5 ರಾಷ್ಟ್ರೀಯ ಹೆದ್ದಾರಿಯ ಗಡಿಗಳಲ್ಲಿ ಸಾವಿರಾರು ಟ್ರ್ಯಾಕ್ಟರ್ ಗಳು, ಸಾವಿರಾರು ಟೆಂಟ್ ಗಳು ಅದರಲ್ಲಿ ಲಕ್ಷಾಂತರ ರೈತರು. ಇದನ್ನ ಕಣ್ಣಾರೆ ನೋಡಿದ ಮೇಲೆ ನಾವು ಶಾಲೆಯಲ್ಲಿ ಇತಿಹಾಸದ ಪಾಠದಲ್ಲಿ ಓದಿದ ನೆನಪು ರಾಜನ ಕೋಟೆಗೆ ಮುತ್ತಿಗೆ ಹಾಕಲು ಬಂದವರು ಕೋಟೆ ಬಾಗಿಲು ಮುಚ್ಚಿದಾಗ ಸುತ್ತಲೂ ಬಿಡಾರಗಳಲ್ಲಿ ತಿಂಗಳುಗಳ ಕಾಲ ಕಾದು ಕೋಟೆಗೆ ಮುತ್ತಿಗೆ ಹಾಕಲು ಸರಿಯಾದ ಕಾಲಕ್ಕಾಗಿ ಸೈನಿಕರು ಕಾಯುತ್ತಿದ್ದ ಹಾಗೆ ದೆಹಲಿಯ ಗಡಿ ಭಾಗಗಳಲ್ಲಿನ ಸ್ಥಿತಿಯನ್ನ ನೋಡಿದರೆ ಹಾಗೇ ಭಾಸವಾಗುತ್ತಿದೆ.

ಪ್ರತಿಭಟನಾ ವೇದಿಕೆಯ ಕಡೆಗೆ ಹೋಗುವ ದಾರಿಯನ್ನ ಸಂಪೂರ್ಣ ಬಂದ್ ಮಾಡಲಾಗಿತ್ತು. ಬದಲಿಸಿದ ದಾರಿಯಲ್ಲಿ ಹೊರಟ ನಮಗೆ ದೆಹಲಿಯ ಸಾಮಾನ್ಯ ಜನರ ಜೀವನ ಸ್ಥಿತಿಯ ಸತ್ಯದರ್ಶನವಾಯಿತು. ದೆಹಲಿ ಎಂದರೆ ಎಲ್ಲರಿಗೂ ನೆನಪಾಗುವುದು ಕೆಂಪುಕೋಟೆ, ಸಂಸತ್ ಭವನ, ರಾಷ್ಟ್ರಪತಿ ಭವನ, ಇಂಡಿಯಾ ಗೇಟ್ ಮತ್ತು ಅದೇ ರೀತಿಯ ದೊಡ್ಡ ದೊಡ್ಡ ಕಟ್ಟಡಗಳು ಮಾತ್ರ. ಅಥವಾ ಅವುಗಳು ಮಾತ್ರವೇ ಕಾಣುತ್ತವೆ. ಆದರೆ ಇದರ ನೆರಳಲ್ಲಿ ಇರುವ ಜನಸಾಮಾನ್ಯರ ಬದುಕು ಯಾರಿಗೂ ಗೋಚರಿಸುವುದಿಲ್ಲ. ನಾವು ನಡೆದುಕೊಂಡು ಹೊರಟ್ಟಿದ್ದು ಸ್ಲಂನಲ್ಲಿ ಖಂಡಿತಾ ಅಲ್ಲ. ಅದು ಹೆಚ್ಚಿಗೆ ಶ್ರಮಜೀವಿಗಳು ಬದುಕುವ ಪ್ರದೇಶ ಅಲ್ಲಿರುವುದು ಗಲ್ಲಿ, ಓಣಿಗಳು. ಒಂದೊಂದು ಓಣಿಯಲ್ಲೂ ಕನಿಷ್ಟ ಇಪ್ಪತ್ತು ಸಣ್ಣ ಪುಟ್ಟ ಮನೆಗಳು, ಕನಿಷ್ಟ ಒಂದು ದ್ವಿಚಕ್ರವನ್ನು ವಾಹನವನ್ನೂ ನಿಲ್ಲಿಸಲು ಸಾಧ್ಯವಾಗದ ಕಿರಿದಾದ ಜಾಗ. ಸುತ್ತಲೂ ಮನೆಗಳು ಮಧ್ಯದಲ್ಲಿ ಸ್ವಲ್ಪ ಜಾಗ ಇದರಲ್ಲಿ ಸಮಾರು ಹತ್ತು ತಂತಿಗಳನ್ನು ಆಚಿಂದೀಚೆ ಈಚಿಂದಾಚೆ ಎಳೆದು ಅವುಗಳ ಮೇಲೆ ತೊಳೆದ ಬಟ್ಟೆಗಳನ್ನು ಒಣಹಾಕಲಾಗಿತ್ತು. ಆ ವಟಾರಕ್ಕೆ ಸೇರಿದ ಒಂದೆರಡು ಜನರಲ್ ಟಾಯ್ಲೆಟ್ ರೂಂಗಳು ಅವು ಎಷ್ಟು ವಿಶಾಲವಾಗಿದ್ದವೆಂದರೆ ಅದರಲ್ಲಿ ಕುಳಿತರೆ ಆಚೆ ಈಚೆ ತಿರುಗುವ ಪ್ರಮಯವೇ ಇರುವುದಿಲ್ಲ. ಇಷ್ಟು ವಿವರಣೆ ಸಾಕು ಎಂದೆನಿಸುತ್ತದೆ ಅಲ್ಲಿರುವವರು ಯಾವ ಸ್ಥಿತಿಯಲ್ಲಿ ವಾಸಮಾಡುತ್ತಿದ್ದಾರೆಂದು ಊಹಿಸಿಕೊಳ್ಳಬಹುದು. ದೆಹಲಿ ಒಂದು ಕಡೆ ಎಲ್ಲ ಸಿರಿ ಸಂಪತ್ತು, ಸವಲತ್ತುಗಳನ್ನು ಹೊಂದಿರುವ ಅತ್ಯಂತ ದೊಡ್ಡ ಶ್ರೀಮಂತರು ಮತ್ತು ಇನ್ನೊಂದು ಕಡೆ ಕನಿಷ್ಟ ಸೌಲಭ್ಯಗಳೂ ಇಲ್ಲದೆ ಜೀವನವನ್ನು ನಡೆಸುತ್ತಿರುವ ಅತ್ಯಂತ ಬಡ ವರ್ಗವನ್ನು ತನ್ನ ಮಡಿಲಲ್ಲಿಟ್ಟುಕೊಂಡಿದೆ. ದೇಶದ ಭವಿಷ್ಯವನ್ನು ರೂಪಿಸುವ ಸಂಸದರು ಬಂಗಲೆಗಳಲ್ಲಿ ಮಲಗಿದ್ದರೆ ಭವಿಷ್ಯವೇ ಇಲ್ಲದವರು ಬೀದಿಯಲ್ಲಿ ಬಿದ್ದಿದ್ದಾರೆ….

ಇದನ್ನೂ ಓದಿ : ಜೈಜವಾನ್ ಜೈಕಿಸಾನ್ ಘೋಷಣೆ ಗೆ ಅರ್ಥ ಬರಬೇಕಾದರೆ ನಾವು ಈ ರೈತ ಹೋರಾಟದಲ್ಲಿ ಭಾಗಿಯಾಗಬೇಕು

ಪ್ರತಿಭಟನೆಯ ಪ್ರಧಾನ ವೇದಿಕೆಯ ಬಳಿ ಬಂದು ತಲುಪಿದಾಗ ಅಲ್ಲಿ ತಮಿಳುನಾಡಿನಿಂದ ಬಂದಿದ್ದ ಪೀಪಲ್ಸ್ ಪವರ್ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿ ತಮಿಳು ಹಾಡನ್ನು ಹಾಡುತ್ತಿದ್ದರು. ಗುಂಪು ಗುಂಪುಗಳಲ್ಲಿ ಪ್ರತಿಭಟನಾಕಾರರು ಕೈಯಲ್ಲಿ ಭಾವುಟಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ವೇದಿಕೆಯ ಮುಂಬಾಗ ಬಂದು ಬಂದು ಸೇರುತ್ತಿದ್ದರು. ಪಂಜಾಬ್ ಮತ್ತು ಹರಿಯಾಣದ ರೈತರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಸುತ್ತಾಡುತ್ತಿದ್ದರೆ ಹರಿಯಾಣ ಪಂಜಾಬಿನಲ್ಲೇ ಸುತ್ತಾಡುವ ಅನುಭವವಾದಂತಾಗುತ್ತದೆ.

ಪ್ರಧಾನ ವೇದಿಕೆಯ ಮುಂದೆ ಹೋದರೆ ಊಟದ ಲಂಗರ್ ಗಳು ಪ್ರಾರಂಬ ಮತ್ತು ಟ್ರ್ಯಾಕ್ಟರ್ ನ ಟಿಲ್ಲರ್ ಗಳನ್ನೇ ವಾಸದ ಟೆಂಟ್ ಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಮಾತ್ರವಲ್ಲ ಅದರ ಇಂಜಿನ್ ಗಳನ್ನ ಪ್ಲಾಸ್ಟಿಕ್ ನ ಹೊದಿಕೆಗಳಿಂದ ಸುರಕ್ಷಿತವಾಗಿ ಕಾಪಾಡುತ್ತಿದ್ದಾರೆ. ಕೆಲವುಕಡೆ ಕಾರುಗಳಿಗೆ ಹೊದಿಸುವ ಕವರ್ ಗಳ ರೀತಿಯ ಕವರ್ ಗಳನ್ನು ಹೊದಿಸಿ ದೂಳು, ಮಳೆ, ಬಿಸಿಲಿನಿಂದ ಜೋಪಾನವಾಗಿ ರಕ್ಷಿಸುತ್ತಿದ್ದಾರೆ. ಅವರು ಟ್ರ್ಯಾಕ್ಟರ್ ಗಳಿಗೆ ಕೊಟ್ಟಿರುವ ಗಮನವನ್ನು ನೋಡಿದರೆ ಇವರು ಟ್ರ್ಯಾಕ್ಟರ್ ಗಳ ಜೊತೆ ಮಕ್ಕಳಂತೆಯೇ ಒಂದು ಭಾವನಾತ್ಮಕ ಸಂಬಂಧವನ್ನಿಟ್ಟುಕೊಂಡಂತೆ ಅನಿಸಿತು.

ಸರಿಸುಮಾರು ಇಪ್ಪತ್ತು ಕಿಲೋಮೀಟರ್ ದೂರದವರೆಗೆ ನಾಲ್ಕುಪಥಗಳ ರಸ್ತೆಯಲ್ಲಿ ಆಚೆ ಬದಿ ಈಚೆ ಬದಿ ಟ್ರ್ಯಾಕ್ಟರ್ ಗಳನ್ನ ನಿಲ್ಲಿಸಿಕೊಂಡು ಚಳುವಳಿಯನ್ನ ನಡೆಸುತ್ತಿದ್ದಾರೆ. ಅವರ ನೆತ್ತಿಯ ಮೇಲೇ ಡೆಲ್ಲಿ ಮೆಟ್ರೋ ರೈಲು ವೇಗವಾಗಿ ಓಡಾಡುತ್ತದೆ. ಈ ಪ್ರತಿಭಟನಾ ಸ್ಥಳಗಳಲ್ಲಿರುವ ಮೆಟ್ರೋ ರೈಲು ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.

ಸಿಂಗು ಬಾರ್ಡರ್ ನಲ್ಲಿ ನಮಗೆ ಕಂಡಂತೆ ಇಲ್ಲಿ ದೊಡ್ಡ ದೊಡ್ಡ ಲಂಗರ್ ಗಳಿಗೆ ಹೋಲಿಸಿದರೆ ಇಲ್ಲಿ ಚಿಕ್ಕ ಚಿಕ್ಕ ಲಂಗರ್ ಗಳ ಸಂಖ್ಯೆಯೇ ಹೆಚ್ಚಾಗಿ ಕಂಡು ಬಂತು. ಒಂದೊಂದು ಗ್ರಾಮದವರು ಪ್ರತ್ತೇಕವಾಗಿ, ಹತ್ತು ಹದಿನೈದು ಜನ ಸೇರಿಕೊಂಡು ಸಣ್ಣದಾಗಿ ಅಡುಗೆ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಲಂಗರ್ ದೊಡ್ಡದಿರಲಿ, ಚಿಕ್ಕದಿರಲಿ ಎಲ್ಲಕಡೆಗಳಲ್ಲೂ ಊಟಕ್ಕೆ ಅತ್ಯಂತ ಪ್ರೀತಿಯಿಂದ ಎಲ್ಲರನ್ನೂ ಬರಮಾಡಿಕೊಂಡು ಸೇವೆ ಮಾಡುತ್ತಾರೆ.

ಇದನ್ನೂ ಓದಿ : ದೆಹಲಿ ರೈತ ಚಳುವಳಿ ನೇರ ಅನುಭವ – 3 : ಮೋದಿ ಅಂದರೆನೇ “ಏನೂ ಆಗಲ್ಲ”

ಇಲ್ಲಿಯ ವಿಶೇಷತೆ ಏನಂದರೆ ಇಲ್ಲಿ ಎಲ್ಲವುಗಳನ್ನು ಸ್ವಲ್ಪ ವ್ಯವಸ್ಥಿತವಾಗಿ ಮಾಡಿಕೊಳ್ಳಲಾಗಿದೆ. ಸ್ನಾನಕ್ಕೆ ಅಗತ್ಯವಿರುವ ತಾತ್ಕಾಲಿಕ ಸ್ನಾನಗೃಹಗಳನ್ನು ತಗಡಿನ ಶೆಡ್ ಗಳಲ್ಲಿ ನಿರ್ಮಿಸಿಕೊಳ್ಳಲಾಗಿದೆ. ದಿನದ 24 ಗಂಟೆಗಳು ಬಿಸಿನೀರಿನ ವ್ಯವಸ್ಥೆಗೆ ಸೌದೆಗಳ ಮೂಲಕ ದೇಸೀ ಗೀಸರ್ ಬಳಕೆ. ಇಟ್ಟಿಗೆಗಳಿಂದ ನಿರ್ಮಾಣವಾಗಿರುವ ಅಡುಗೆ ಒಲೆಗಳು, ಎರಡು ರಸ್ತೆಯ ಮಧ್ಯದಲ್ಲಿನ ಡಿವೈಡರನ್ನೇ ನೆಲದ ಹಾಸನ್ನಾಗಿ ಮಾಡಿಕೊಂಡು ಕನಿಷ್ಟ ಹತ್ತು ಜನ ಉಳಿದುಕೊಳ್ಳಲು ಬೇಕಾದ ಸಾಮೂಹಿಕ ಮಲಗುವ ಕೋಣೆಗಳನ್ನೆ ಶೆಡ್ ಗಳಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಬಹುತೇಕ ರೈತರೇ ಸ್ವತಃ ಅಡುಗೆಗಳನ್ನ ಮಾಡಿಕೊಳ್ಳುವುದರಿಂದ ಅವರಿಗೆ ಅಗತ್ಯವಾದ ಅಡುಗೆ ಸಾಮಾನುಗಳ ಕಿಟ್ ಗಳನ್ನ ಮತ್ತು ದಾನಿಗಳು ನೀಡಿದ ರೇಷನ್ ಇನ್ನಿತರೆ ವಸ್ತುಗಳನ್ನ ಟ್ರ್ಯಾಕ್ಟರ್ ಗಳಲ್ಲಿ ತುಂಬಿಸಿಕೊಂಡು ಸಂಯುಕ್ತ ಕಿಸಾನ್ ಮೋರ್ಚಾದಾ ಸ್ವಯಂ ಸೇವಕರು ಕೈಯಲ್ಲಿ ಸಣ್ಣ ಮೈಕೊಂದನ್ನ ಹಿಡಿದುಕೊಂಡು ಅದರ ಮೂಲಕ ಹೇಳುತ್ತಾ ಸಾಮಾನುಗಳನ್ನು ಹಂಚುತ್ತಿದ್ದದ್ದು, ಗೋಧಿ ಹಿಟ್ಟು, ಲಾಡು ವಿತರಣೆ ಇವೆಲ್ಲ ಒಂದು ರೀತಿ‌ ಸರ್ವೆ ಸಾಮಾನ್ಯದಂತೆ‌ ಕಂಡಿತು.

ಈ ಚಳುವಳಿಯನ್ನ ದೂಷಿಸುವವರು ಒಮ್ಮೆ ಈ ಕದನ ಕಣಕ್ಕೆ ಭೇಟಿಕೊಡಬೇಕು. ಭೇಟಿ ಕೊಡಲಾರದವರಿಗೆ ಮಾಧ್ಯಮಗಳು ಇದರ ಸತ್ಯಾಸತ್ಯತೆಗಳನ್ನ, ನೈಜವಾದ ತಳಮಟ್ಟದ ವರದಿಯನ್ನ ಬಿತ್ತರಿಸಬೇಕು ಆದರೆ ಈ ದೇಶದ ಪ್ರಧಾನ ಮಾಧ್ಯಮಗಳು ಆ ಕೆಲಸವನ್ನ ಮಾಡುತ್ತಿಲ್ಲ. ಬದಲಾಗಿ ಈ ಚಳುವಳಿಯ ವಿರುದ್ಧ ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನ ಬಿತ್ತರಿಸುತ್ತಿವೆ. ಅದಕ್ಕಾಗಿ ಇಲ್ಲಿ ರೈತರು ಯಾವ ಮೀಡಿಯಾಗಳು “ಗೋದಿ ಮೀಡಿಯಾ” ಎಂದು ಸ್ಪಷ್ಟವಾಗಿ ಗುರುತಿಸಿದ್ದಾರೆ. ಜೀ಼ ನ್ಯೂಸ್, ಆಜ್ ತಕ್ ಮತ್ತು ರಿಪಬ್ಲಿಕ್ ಟಿವಿಗಳನ್ನು ಬಹಿಷ್ಕರಿಸಿದ್ದಾರೆ ಮಾತ್ರವಲ್ಲ ಅವುಗಳನ್ನ ಸಂಪೂರ್ಣವಾಗಿ ಬಹಿಷ್ಕರಿಸಿ ಅವುಗಳ ಮೇಲಿರುವ ಆಕ್ರೋಷವನ್ನ ಬ್ಯಾನರ್, ಪೋಸ್ಟರ್ ಗಳ ಮೂಲಕ ತಮ್ಮ ತಮ್ಮ ಟ್ರ್ಯಾಕ್ಟರ್ ಗಳ‌ ಮೆಲೆ ಬರೆದು ಹಾಕಿಕೊಂಡಿದ್ದಾರೆ. ಈ ಚಳುವಳಿಯನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತಿರುವುದು ಸದ್ಯಕ್ಕೆ ಸಾಮಾಜಿಕ ಮಾಧ್ಯಮಗಳು ಈ ಚಳಯವಳಿಗಾಗಿಯೇ ಸಾವಿರಾರು ಯೂಟ್ಯೂಬ್ ಚಾನಲ್ ಗಳು, ಫೇಸ್‌ಬುಕ್‌ ಪೇಜ್ ಗಳು, ಲಕ್ಷಾಂತರ ವಾಟ್ಸ್ ಆಪ್ ಗುಂಪುಗಳು ರಚನೆಯಾಗಿವೆ. ಪ್ರತಿದಿನದ ಬೆಳವಣಿಗೆಗಳನ್ನು ನಿಖರವಾಗಿ ವರದಿ ಮಾಡಲು‌ ಈ ಚಳುವಳಿಯನ್ನ ಮುನ್ನಡೆಸುತ್ತಿರುವ 500 ಕ್ಕೂ ಹೆಚ್ಚು ಸಂಘಟನೆಗಳಿರುವ ವೇದಿಕೆ “ಕಿಸಾನ್ ಏಕ್ತಾ ಮೋರ್ಚ” ವು ಇದೇ ಹೆಸರಿನಲ್ಲಿ ಅಧಿಕೃತ ಯೂಟ್ಯೂಬ್ ಚಾನಲ್, ಫೇಸ್‌ಬುಕ್‌ ಬುಕ್ ಪೇಜ್, ಮತ್ತು ಟ್ವಿಟರ್ ಹ್ಯಾಂಡಲ್ ಗಳನ್ನ ಹೊಂದಿದೆ. ಇವುಗಳ ಮೂಲಕ ಲಕ್ಷಾಂತರ ವೀಕ್ಷಕರು ಮತ್ತು ಪ್ರತಿಭಟನಾ ನಿರತ ರೈತರು ಪ್ರತೀದಿನ ಸ್ಪಷ್ಟ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಯಾರಾದರೂ ಕೈಯಲ್ಲಿ ಲೋಗೋ, ಕ್ಯಾಮೆರಾ ಹಿಡಿದುಕೊಂಡು ಹೋದರೆ ಸಾಕು‌ ಅದು ಯಾವುದು, ಎಲ್ಲಿಂದ ಬಂದಿದೆ ಏನನ್ನ ಸುದ್ದಿ ಮಾಡುತ್ತಿದೆ ಎಂದು ಬಹಳ ಸೂಕ್ಷ್ಮವಾಗಿ ಪ್ರತಿಯೊಬ್ಬರೂ ಗಮನಿಸುತ್ತಾರೆ.

ಈ ಚಳುವಳಿಯಲ್ಲಿ ಒಂದು ಕಡೆ ಅನ್ನ ದಾಸೋಹ ನಡೆಯುತ್ತಿದ್ದರೆ ಮತ್ತೊಂದು ಕಡೆ ಅಕ್ಷರ ದಾಸೋಹದ ಮೂಲಕ ಜ್ಞಾನಾರ್ಜನೆಯನ್ನ ಹೆಚ್ಚಿಸಿಕೊಳ್ಳುವ ಸಲುವಾಗಿ ವಿವಿಧ ಸಂಘಟನೆಗಳು ಹತ್ತಾರು ಗ್ರಂಥಾಲಯಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅದರಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಪಂಜಾಬ್ ಭಾಷೆಯ ಪುಸ್ತಕಗಳು, ನಿಯತಕಾಲಿಕೆಗಳು, ಪತ್ರಿಕೆಗಳನ್ನು ಇಡಲಾಗಿದೆ. ಈ ಕುರಿತು ಒಂದು ಗ್ರಂಥಾಲಯದ ಮೇಲ್ವಿಚಾರಕರನ್ನ ಮಾತನಾಡಿಸಿದಾಗ ಅವರು ಹೇಳಿದ ಮಾತು “ದೇಶದಲ್ಲಿ ಬುದ್ದಿಜೀವಿಗಳು ಬೇರೆ, ಶ್ರಮ ಜೀವಿಗಳು ಬೇರೆ ಎಂದು ವ್ಯವಸ್ಥಿತವಾಗಿ ವಿಂಗಡಿಸಲಾಗುತ್ತಿದೆ ಜೊತೆಗೆ ರೈತರಿಗೆ ಓದು ಬರಹ ಬರುವುದಿಲ್ಲ ಅವರು ಅನಕ್ಷರಸ್ತರು, ಅವರಿಗೆ ತಿಳುವಳಿಗೆ ಇಲ್ಲ ಎಂಬ ವ್ಯವಸ್ಥಿತ ಅಪಪ್ರಚಾರವನ್ನೂ ಮಾಡಲಾಗುತ್ತಿದೆ. ಆದರೆ ನಾವು ಇಲ್ಲಿ ಗ್ರಂಥಾಲಯವನ್ನು ಸ್ಥಾಪಿಸಿದ ಮೇಲೆ ಇಲ್ಲಿಗೆ ಬಂದು ರೈತರು ಓದುವುದನ್ನು ನೋಡಿದರೆ ಇದೆಲ್ಲಾ ಸುಳ್ಳು ಎಂದು ಮನವರಿಕೆಯಾಗಿದೆ” ಎಂದರು. ಕೇವಲ ಗ್ರಂಥಾಲಯಗಳಿಗೆ ಬಂದು ಓದುವುದು ಮಾತ್ರವಲ್ಲದೆ ತಾವು ಉಳಿದು ಕೊಂಡಿರುವ ಪ್ರತಿಯೊಂದು ಟೆಂಟ್ ಗಳನ್ನು ಗ್ರಂಥಾಲಯಗಳನ್ನಾಗಿ ಪರಿವರ್ತಿಸಿ ಕೊಂಡಿದ್ದಾರೆ. ಅಲ್ಲಿಯೇ ಕುಳಿತು ಪತ್ರಿಕೆಗಳನ್ನ, ಪುಸ್ತಕಗಳನ್ನ ಓದುವ ಮೂಲಕ ಈ ಚಳುವಳಿಯನ್ನ ಸೈದ್ದಾಂತಿಕವಾಗಿಯೂ ಗಟ್ಟಿಗೊಳಿಸುತ್ತಿದ್ದಾರೆ. ಕಿಲೋ ಮೀಟರ್ ಗಟ್ಟಲೆ ಉದ್ದಕ್ಕೆ ಇರುವ ಈ ಟೆಂಟ್ ಗಳಿಗೆ ಪ್ರಧಾನ ವೇದಿಕೆಯ ಭಾಷಣಗಳು ಕೇಳಿಸುವ ಹಾಗೆ ಮೈಕ್ ವ್ಯವಸ್ಥೆ ಮಾಡಲಾಗಿದೆ. ಬೆಳಗಿನಿಂದ ಸಂಜೆಯವರೆಗು ನಡೆಯುವ ಭಾಷಣಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಟೆಂಟ್ ನಲ್ಲಿಯೇ ಕುಳಿತು ಕಳೆದ ಒಂದುವರೆ ತಿಂಗಳುಗಳಿಂದ ಕೇಳಿಸಿಕೊಂಡು ಎಷ್ಟು ಜ್ಞಾನಾರ್ಜನೆ ಮಾಡಿಕೊಂಡಿರಬಹುದು.

ಈ ಪ್ರತಿಭಟನೆಯಲ್ಲಿ ಗಮನ ಸೆಳೆಯುವ ಪೋಸ್ಟರ್ ಗಳನ್ನ ಎಲ್ಲೆಡೆ ಕಾಣಬಹುದು ಅದರಲ್ಲಿ No Farmers No Food, No Farmers No GDP, No Farmers No Future ಹೀಗೆ ಹತ್ತು ಹಲವು ಘೋಷಣೆಗಳನ್ನು ಬರೆದು ಪ್ರದರ್ಶನ ಮಾಡಲಾಗಿದೆ. ಇಲ್ಲಿ ಎಲ್ಲರೊಳಗೆ ಭಗತ್ ಸಿಂಗ್ ಮನೆಮಾಡಿರುವುದನ್ನ ನಾವು ಗಮನಿಸಬಹುದು ಬಹುತೇಕ ಎಲ್ಲ ಕಡೆಗಳಲ್ಲಿ ಭಗತ್ ಸಿಂಗ್ ನ ಭಾವಚಿತ್ರಗಳನ್ನು ಚಳುವಳಿಯ ಸ್ಪೂರ್ತಿಯಾಗಿ ಬಳಸಿಕೊಳ್ಳಲಾಗಿದೆ. ಇನ್ನೂ ಕೆಲವುಕಡೆಗಳಲ್ಲಿ “ನಾವು ಭಗತ್ ಸಿಂಗರ ವಾರಸುದಾರರು ಅವರ ಕನಸುಗಳನ್ನ ನನಸು ಮಾಡುತ್ತೇವೆ ಎಂದು ಬರೆಯಲಾಗಿದೆ. ಭಗತ್ ಸಿಂಗ್ ನ ವಿಚಾರಗಳಿಂದ ಈ ರೈತರು ಚೈತನ್ಯ ಪಡೆದಿರುವುದು ಗೊತ್ತಾಗುತ್ತದೆ.

ಚಳುವಳಿಯ ನೆಲ ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ “ರಕ್ತ ದಾನ ಶಿಬಿರ” ವಂತು ವಿಶೇಷಗಳಲ್ಲಿ ವಿಶೇಷ ಅಂತನೇ ಹೇಳಬಹುದು. ಪಂಜಾಬ್ ನ ಜಲಂದರ್ ನ ಬ್ಲಡ್ ಸೆಂಟರ್ ಹೋರಿ ಹಾಸ್ಪಿಟಲ್‌ ನಿಂದ ಈ ಶಿಬಿರವನ್ನ ಏರ್ಪಡಿಸಲಾಗಿತ್ತು. ಇದರ ಸಂಘಟಕರನ್ನ ಮಾತನಾಡಿಸಿದಾಗ “ಮಕ್ಕಳಲ್ಲಿರುವ ಆರೋಗ್ಯದ ಸಮಸ್ಯೆಗೆ ರಕ್ತದ ಅಗತ್ಯವಿರುವವರಿಗೆ ನಾವು ಉಚಿತವಾಗಿ ರಕ್ತವನ್ನು ಒದಗಿಸುತ್ತೇವೆ ಅದಕ್ಕಾಗಿ ಇಂತಹ ಚಳುವಳಿಗಳಲ್ಲಿ ಕ್ಯಾಂಪನ್ನ ಮಾಡುತ್ತೇವೆ. ಇಲ್ಲಿ ಸ್ವಯಂ ಸ್ಪೂರ್ತಿಯಿಂದ ರೈತರು ದೊಡ್ಡ ಸಂಖ್ಯೆಯಲ್ಲಿ ರಕ್ತದಾನ ಮಾಡುತ್ತಿದ್ದಾರೆ. ಇವರು ದೇಶವನ್ನೂ ಉಳಿಸುತ್ತಾರೆ ಜೊತೆಗೆ ಜೀವಗಳನ್ನೂ ಉಳಿಸುತ್ತಾರೆ” ಎಂದರು. ಇದೇ ಕ್ಯಾಂಪಿನಲ್ಲಿ ನಾನು ಮತ್ತು ಜಗದೀಶ್ ಸೂರ್ಯ ರಕ್ತದಾನ ಮಾಡಿದೆವು.

ಹಾಗೆ ಸ್ವಲ್ಪ ಮುಂದೆ ಹೋದರೆ ಅಲ್ಲಿ ಹರಿಯಾಣದ ರೈತರು ಹಾಡುಗಳನ್ನ ಹಾಡುತ್ತಿದ್ದರು ಇಲ್ಲಿ ಅವರು ಬಳಸುತ್ತಿದ್ದ ವಾದ್ಯಗಳು ಪಕ್ಕ ದೇಸೀ ವಾದ್ಯಗಳು. ಹಾರ್ಮೋನಿಯಂ, ಮಣ್ಣಿನ ಮಡಿಕೆ ಅದರ ಬಾಯಿಗೆ ತೆಳುವಾದ ರಬ್ಬ ಶೀಟುಗಳನ್ನು ಎಳೆದು ಕಟ್ಟಲಾಗಿದೆ . ಒಂದು ರೀತಿಯ ತಮಟೆ ಇದ್ದ ಹಾಗೆ. ಕೈಯ್ಯಲ್ಲಿ ಟಯರ್ ನ ಒಂದು ಸಣ್ಣ ತುಂಡನ್ನ ಹಿಡಿದುಕೊಂಡು ಗಡವನ್ನ ಬಾರಿಸುತ್ತಿದ್ದರೆ ಅದರ ತಾಳಕ್ಕೆ ತಕ್ಕಂತೆ ಹಾಡು ಇವುಗಳಿಗೆ ಹೆಜ್ಜೆ ಹಾಕದೆ ಮುಂದೆ ಹೋಗಲು ಯಾರಿಗೂ ಮನಸ್ಸಾಗುವುದೇ ಇಲ್ಲ. ಒಬ್ಬ ಯುವ ರೈತ ಹಾಡುಗಾರ ಭಗತ್ ಸಿಂಗ್ ನ ಕುರಿತು ಭಾವ ಪರವಶನಾಗಿ ಒಂದು ಹಾಡನ್ನ ಹಾಡಿದ‌. ಆ ಹಾಡನ್ನು ಕೇಳಿದ ಅಲ್ಲೇ ಕುಳಿತಿದ್ದ 80 ವರ್ಷದ ಮುದುಕನ ಕಣ್ಣಲ್ಲಿ ನೀರು ಹರಿಯಲು ಶುರುವಾಯಿತು. ಹಾಡು ಮುಗಿದ ಕೂಡಲೇ ಆತ ಮೇಲೆದು ತನ್ನ ಭಾವನೆಗಳನ್ನ ಘೋಷಣೆ ಕೂಗುವ ಮೂಲಕ ವ್ಯಕ್ತ ಪಡಿಸಿದ. ಪ್ರಧಾನ ವೇದಿಕೆಯಲ್ಲಿ ಕಲಾವಿದರ ತಂಡವೊಂದು “ಗೋದಿ ಮೀಡಿಯಾ”ದ ಕುರಿತು ಒಂದು ನಾಟಕವನ್ನು ಪ್ರದರ್ಶಸಿತು. ಈ ನಾಟಕವನ್ನ ಅಲ್ಲಿದ್ದವರೆಲ್ಲಾ ತದೇಕಚಿತ್ತದಿಂದ ವೀಕ್ಷಿಸಿದರು. ಕೇವಲ ಭಾಷಣ ಮತ್ತು ಘೋಷಣೆಗಳಲ್ಲದೆ ಸಾಂಸ್ಕೃತಿಕವಾಗಿಯೂ ಪ್ರತಿರೋದವನ್ನ ಹೊಡ್ಡುವ ಮತ್ತು ಸಾಂಸ್ಕೃತಿಕವಾಗಿ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಚಾರಮಾಡಲು ಬಳಸಿಕೊಳ್ಳುತ್ತಾರೆ.

ಬಿಡುವೇ ಇಲ್ಲದಂತೆ ಟ್ರ್ಯಾಕ್ಟರ್ ಗಳ ಇಂಜಿನ್ ಗಳಲ್ಲಿ 5-6 ಜನ ಕುಳಿತುಕೊಂಡು ಕೆಲವುದರಲ್ಲಿ ಮೇಲಿನ ಚಾವಣಿಯ ಮೇಲೂ ಕುಳಿತುಕೊಂಡು ಒಂದರ ಹಿಂದೆ ಒಂದರಂತೆ ತ್ರಿವರ್ಣ ದ್ವಜವನ್ನು ಕಟ್ಟಿಕೊಂಡು ಜನವರಿ 26 ರ ಗಣರಾಜ್ಯೋತ್ಸವದ ಪೆರೇಡ್ ಗೆ ತಾಲೀಮು ನಡೆಸುತ್ತಿದ್ದರು. ಪ್ರತೀ ಟ್ರ್ಯಾಕ್ಟರ್ ಗಳಲ್ಲೂ ಅಳವಡಿಸಿದ್ದ ಸ್ಪೀಕರ್ ಬಾಕ್ಸ್ ಗಳಿಂದ ಮೋದಿಯ ವಿರುದ್ದದ ಹಾಳುಗಳು ಮೊಳಗುತ್ತಿದ್ದವು.

ಬಹುತೇಕ ರೈತರು ಕುಟುಂಬ ಸಮೇತರಾಗಿ ಈ ಚಳುವಳಿಯಲ್ಲಿ ದುಮುಕಿದ್ದಾರೆ. ಮಾತ್ರವಲ್ಲ ಯುವಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವುದು ಮೋದಿ ಭವಿಷ್ಯ ಮತ್ತು ದೇಶದ ಭವಿಷ್ಯ ಎರಡನ್ನೂ ನಿರ್ಧರಿಸಲಿದೆ.

 

Donate Janashakthi Media

Leave a Reply

Your email address will not be published. Required fields are marked *