ಬೆಂಗಳೂರು: ಮಸೀದಿಗಳಲ್ಲಿನ ಆಜಾನ್ ವಿರುದ್ಧ ಸಮರ ಸಾರಿರುವ ಶ್ರೀರಾಮಸೇನೆ ಇಂದು(ಮೇ 09) ಬೆಳಗ್ಗೆ ರಾಜ್ಯದ ಕೆಲವು ದೇವಾಲಯಗಳಲ್ಲಿ ಸುಪ್ರಭಾತ, ಭಕ್ತಿಗೀತೆಗಳ ಮೂಲಕ ಭಜನೆ, ಮಂತ್ರ ಪಠಣ ಅಭಿಯಾನಕ್ಕೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಿಂದೂ ಮುಖಂಡರನ್ನು ಬೆಂಗಳೂರಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ನೀಲಸಂದ್ರದ ಆಂಜನೇಯ ಸ್ವಾಮಿ ದೇವಾಲಯದ ಬಳಿ ವಾಗ್ವಾದ ನಡೆದು ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿರುದ್ಧ ಹಿಂದೂ ಕಾರ್ಯಕರ್ತರು ತೀವ್ರ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇಲ್ಲಿ ಭದ್ರತೆಗಾಗಿ 2 ಎಸಿಪಿ, 4 ಇನ್ಸ್ಪೆಕ್ಟರ್ 10ಕ್ಕೂ ಹೆಚ್ಚು ಎಸ್ಐ, 30ಕ್ಕೂ ಹೆಚ್ವು ಪೊಲೀಸ್ ಕಾನ್ಸ್‌ಟೇಬಲ್, 1 ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು.
ನಗರದ ವಿವೇಕನಗರದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಭದ್ರತೆ ಏರ್ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಹಿತಕರ ಘಟನೆ ಸಂಭವಿಸದಂತೆ ಕಣ್ಗಾವಲು ಹಾಕಿದ್ದೇವೆ. ಕೆಲ ಮುಖಂಡರನ್ನು ಮುಂಜಾಗೃತಾ ಕ್ರಮವಾಗಿ ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು ನಗರದ ಪಾದರಾಯನಪುರದ ಮಸೀದಿಗಳಲ್ಲಿ ಆಜಾನ್ ಮೊಳಗಿದರೂ ದೇಗುಲದಲ್ಲಿ ಸುಪ್ರಭಾತ ಸದ್ದುಮಾಡಿಲ್ಲ. ಕೋದಂಡರಾಮಸ್ವಾಮಿ ದೇಗುಲದತ್ತ ಹಿಂದೂ ಕಾರ್ಯಕರ್ತರು ಆಗಮಿಸಿದ್ದರೂ ಸಹವರಿಗೆ ದೇವಸ್ಥಾನ ಆಡಳಿತ ಮಂಡಳಿ ಅವಕಾಶ ನೀಡಿಲ್ಲ. ದೇವಸ್ಥಾನದ ಬಳಿ ಒಂದು ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಪಾದರಾಯನಪುರ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ.
ಬೆಂಗಳೂರು, ಮೈಸೂರು, ಮಂಡ್ಯ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆಯ ದೇವಸ್ಥಾನಗಳಲ್ಲಿ ಆಜಾನ್ ಆರಂಭವಾಗುವ ವೇಳೆಯಲ್ಲಿ ಬೆಳಗ್ಗೆ 5 ಗಂಟೆಯಿಂದ ಆರು ಗಂಟೆಯವರೆಗೂ ಭಕ್ತಿಗೀತೆ, ಸುಪ್ರಭಾತ ಹಾಕಲಾಗಿತ್ತು, ನಂತರ ಭಕ್ತಿಗೀತೆಯನ್ನು ದೇವಾಲಯದ ಆರ್ಚಕರು ನಿಲ್ಲಿಸಿದ್ದಾರೆ.
ಇಂದು ಬೆಳಗ್ಗೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸುವುದಾಗಿ ಶ್ರೀರಾಮಸೇನೆ ಕರೆ ನೀಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಶ್ರೀರಾಮಸೇನಾ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ದೇವಾಲಯಗಳ ಸುತ್ತಲೂ ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರದ ಹಲವು ದೇವಸ್ಥಾನಗಳ ಸುತ್ತ ಪೊಲೀಸ್ ಸರ್ಪಗಾವಲು ಇತ್ತು.
ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ದೇವಸ್ಥಾನಗಳ ಮೇಲೆ ದ್ವನಿವರ್ಧಕಗಳನ್ನು ಅಳವಡಿಸಬಾರದು ಎಂದು ಎಚ್ಚರಿಕೆ ನೀಡಿದ್ದ ಮುಜರಾಯಿ ಇಲಾಖೆ ಅಧಿಕಾರಿಗಳು, ಈಗಾಗಲೇ ಪೊಲೀಸರಿಂದ ದೇವಸ್ಥಾನದ ಅರ್ಚಕರಿಗೆ ಎಚ್ಚರಿಕೆ ನೀಡಿದ್ದರು. ಅದರಂತೆ, ವಿವಾದದಿಂದ ಅನಾಹುತ ಸಂಭವಿಸಿದರೆ ಮೊಕದ್ದಮೆ ಹಾಕುವುದಾಗಿ ದೇವಸ್ಥಾನದ ಅರ್ಚಕರಿಗೆ ಎಚ್ಚರಿಕೆ ನೀಡಿದ್ದರು.