ಉಕ್ರೇನ್ ಹೊರತು ಪಡಿಸಿಯೂ ಆಳಗೊಂಡ ಭಾರತ-ಆಮೇರಿಕ ಮೈತ್ರಿ

ಪ್ರಕಾಶ್ ಕಾರಟ್
ಅನು: ಕೆ. ಪ್ರಕಾಶ್

ಲಾಜಿಸ್ಟಿಕ್ಸ್ ಒಪ್ಪಂದದ ಅಡಿಯಲ್ಲಿ, ತನ್ನ ಯುದ್ಧನೌಕೆಗಳಿಗೆ ಭಾರತದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಸೌಲಭ್ಯವನ್ನು (ಎಂಆರ್‌ಓ) ಸ್ಥಾಪಿಸಲು ಅಮೇರಿಕ ಪರಿಗಣಿಸುತ್ತಿದೆ. ಹೀಗಾಗಿ, ಭಾರತವು ರಷ್ಯಾದ ಮಿಲಿಟರಿ ಉಪಕರಣಗಳನ್ನು ಖರೀದಿಸುವುದನ್ನು ಮುಂದುವರೆಸಿದರೆ ನಿರ್ಬಂಧಗಳ ಬೆದರಿಕೆ ಮತ್ತು ಅದೇ ಸಂದರ್ಭದಲ್ಲಿ ಅಮೇರಿಕದ ಶಸ್ತ್ರಾಸ್ತ್ರ ವ್ಯವಸ್ಥೆಗಳ ಖರೀದಿಗೆ ಪ್ರೋತ್ಸಾಹ ನೀಡುವ-ಕ್ಯಾರಟ್ ಮತ್ತು ಸ್ಟಿಕ್ ನೀತಿಯನ್ನು ಬಳಸಲಾಗುತ್ತಿದೆ.

ತಪ್ಪು ಎಂದು, ಉಕ್ರೇನ್ ಸಂಘರ್ಷದ ಕುರಿತು ಮೋದಿ ಸರ್ಕಾರ ತೆಗೆದುಕೊಂಡಿರುವ ನಿಲುವು ತೋರಿಸುತ್ತದೆ ಎಂದು ಕೆಲವು ರಾಜಕೀಯ ವಿಶ್ಲೇಷಕರು ವಾದಿಸಿದ್ದಾರೆ. ಉಕ್ರೇನ್ ಮೇಲಿನ ರಷ್ಯನ್ ಆಕ್ರಮಣವನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಲ್ಲಿ ಭಾರತ ತಟಸ್ಥವಾಗಿ ಉಳಿದಿದ್ದು ಮತ್ತು ರಷ್ಯನ್ ತೈಲ ಅಥವಾ ಅನಿಲವನ್ನು ದೇಶಗಳು ಖರೀದಿಸಬಾರದು ಎಂಬ ಅಮೇರಿಕಾದ ನಿಲುವಿನ ಹೊರತಾಗಿಯೂ ಭಾರತ ರಷ್ಯಾದಿಂದ ಕಚ್ಛಾ ತೈಲವನ್ನು ಸಣ್ಣ ಪ್ರಮಾಣದಲ್ಲಿ ಖರೀದಿಸುವ ತೀರ್ಮಾನವು, ಭಾರತದ ಸ್ವತಂತ್ರ ವಿದೇಶಾಂಗ ನೀತಿ ಮತ್ತು ವ್ಯೂಹಾತ್ಮಕ ಸ್ವಾಯತ್ತತೆಗೆ ಒಂದು ನಿದರ್ಶನವಾಗಿ ಕಾಣಲಾಗುತ್ತಿದೆ.

ಇದು ಪರಿಸ್ಥಿತಿಯ ತೋರಿಕೆಯ ಅಂದಾಜಷ್ಟೆ. ಭಾರತವು ಕಳೆದ ಒಂದೂವರೆ ದಶಕದಲ್ಲಿ ಅಮೇರಿಕಾದೊಂದಿಗೆ ವ್ಯೂಹಾತ್ಮಕ ಮೈತ್ರಿಯನ್ನು ಮಾಡಿಕೊಂಡಿದೆ. ಈ ಪಾಲುದಾರಿಕೆಯ ಕೇಂದ್ರ ಬಿಂದುವಾಗಿ ರಕ್ಷಣಾ ಸಹಕಾರ ಒಪ್ಪಂದವಿದೆ. ಮೋದಿ ಸರ್ಕಾರದ ಅವಧಿಯಲ್ಲಿ, ಲಾಜಿಸ್ಟಿಕ್ಸ್ ಒಪ್ಪಂದಗಳು (LEMOA)-2016, ಸಂವಹನ ಜಾಲದ ಒಗ್ಗೂಡುವಿಕೆ (COMCASA)-2018 ಮತ್ತು ಮೂಲಭೂತ ವಿನಿಮಯ ಮತ್ತು ಸಹಕಾರ ಒಪ್ಪಂದ (BECA)-2020, ಈ ಮೂರು ಅಸ್ತಿಭಾರ ಒಪ್ಪಂದಗಳಿಗೆ ಸಹಿ ಹಾಕುವುದರೊಂದಿಗೆ ಮಿಲಿಟರಿ ಮತ್ತು ವ್ಯೂಹಾತ್ಮಕ ಸಹಕಾರವು ಬಲಿಷ್ಟಗೊಂಡಿತು. ಈ ಒಪ್ಪಂದಗಳ ಸ್ವರೂಪವು, ತನ್ನ ಆಪ್ತ ಮಿಲಿಟರಿ ಮಿತ್ರರಾಷ್ಟ್ರಗಳೊಂದಿಗಿನ ಅಮೇರಿಕಾದ ಒಪ್ಪಂದಗಳ ರೀತಿಯದ್ದೇ ಆಗಿದೆ.

ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿರುವ ಇಂಡೋ-ಪೆಸಿಫಿಕ್ ಕಾರ್ಯವ್ಯೂಹವನ್ನು ಮುಂದೊತ್ತಲು ಅಮೇರಿಕ ರೂಪಿಸಿದ ಚತುರ್ಭುಜ ಮೈತ್ರಿಯ ಭಾಗವಾಗಿ ಭಾರತವೂ ಸೇರ್ಪಡೆ ಆಯಿತು. ಜೂನ್ 2020 ರಲ್ಲಿ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯಲ್ಲಿನ ಘಟನೆಗಳಿಗೆ ಮುಂಚೆಯೇ ಕ್ವಾಡ್‌(QUAD) ಅಸ್ತಿತ್ವಕ್ಕೆ ಬಂದಿತು ಎಂಬುದನ್ನು ಗಮನಿಸಬೇಕು.

ಎರಡೂ ಕಡೆಯ ರಕ್ಷಣಾ ಮತ್ತು ವಿದೇಶಾಂಗ ಮಂತ್ರಿಗಳನ್ನು ಒಳಗೊಂಡಿರುವ 2+2 ಸಚಿವರ ವೇದಿಕೆಯನ್ನು ಸಾಂಸ್ಥಿಕಗೊಳಿಸಲಾಯಿತು ಮತ್ತು ಅದರ ನಿಯಮಿತ ಸಭೆಗಳನ್ನು ಸೆಪ್ಟೆಂಬರ್ 2018 ರಲ್ಲಿ ಪ್ರಾರಂಭಿಸಲಾಯಿತು.

ಅಮೇರಿಕದೊಂದಿಗೆ ಸಾಮೀಪ್ಯತೆ ಹೆಚ್ಚುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತದ ನಿಲುವನ್ನು ಗಮನಿಸಬೇಕು. ನ್ಯಾಟೋಗೆ ಸೇರಿಲ್ಲದ ಪ್ರಮುಖ ಮಿತ್ರರಾಷ್ಟ್ರವಾದ ಭಾರತವು ರಷ್ಯಾ ವಿರೋಧಿ ಬ್ಯಾಂಡ್‌ವ್ಯಾಗನ್‌ಗೆ ಸೇರದಿರುವ ಬಗ್ಗೆ ಅಮೇರಿಕ ಅತೃಪ್ತಿ ಹೊಂದಿದೆ. ಉಕ್ರೇನ್ ಸಮಸ್ಯೆಗೆ ಸಂಬಂಧಿಸಿ, ಕ್ವಾಡ್‌ ಪಾಲುದಾರರಾದ ಆಸ್ಟ್ರೇಲಿಯಾ ಮತ್ತು ಜಪಾನ್ ಸಂಪೂರ್ಣವಾಗಿ ತಮ್ಮೊಂದಿಗಿವೆ, ಆದರೆ ಭಾರತ “ಸ್ವಲ್ಪಮಟ್ಟಿಗೆ ಅಲುಗಾಡುತ್ತಿದೆ” ಎಂದು ಅಮೇರಿಕದ ಅಧ್ಯಕ್ಷ ಬೈಡನ್ ಹೇಳಿದ್ದಾರೆ. ಅಂದಿನಿಂದ, ಅಮೇರಿಕ ಮತ್ತು ಯೂರೋಪಿಯನ್ ಯೂನಿಯನ್ ರಷ್ಯದ ಮೇಲೆ ಹೇರಿರುವ ನಿರ್ಬಂಧಗಳನ್ನು ಅನುಸರಿಸಲು ಮತ್ತು ತೈಲ ಖರೀದಿಯನ್ನು ನಿಲ್ಲಿಸಲು ಭಾರತದ ಮೇಲೆ ಅಮೇರಿಕ ಒತ್ತಡವನ್ನು ಹೆಚ್ಚಿಸುತ್ತಿದೆ. ತೈಲ ವ್ಯಾಪಾರದ ಪಾವತಿಯನ್ನು ರೂಪಾಯಿ-ರೂಬಲ್‌ನಲ್ಲಿ ವಿನಿಮಯ ಮಾಡುವ ಚರ್ಚೆಗಳು ಅಮೇರಿಕವನ್ನು ಕೆರಳಿಸಿವೆ.

ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ದಿಲೀಪ್ ಸಿಂಗ್ ಅವರು ದೆಹಲಿಗೆ ಭೇಟಿ ನೀಡಿ, ರಷ್ಯಾ ವಿರುದ್ಧದ ನಿರ್ಬಂಧಗಳನ್ನು ತಪ್ಪಿಸಲು ಯಾವುದೇ ಪ್ರಯತ್ನ ಮಾಡಿದರೆ ಭಾರತದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು. ಯುರೋಪ್ ರಾಷ್ಟ್ರಗಳು ರಷ್ಯಾದಿಂದ ತೈಲ ಮತ್ತು ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವುದನ್ನು ಮುಂದುವರೆಸುತ್ತಿವೆ ಎಂದು ಭಾರತವು ಆ ಸಮಯದಲ್ಲಿ ಗಮನ ಸೆಳೆದಿತ್ತು.

2+2 ಸಭೆಗೆ ಕೆಲವೇ ಗಂಟೆಗಳ ಮೊದಲು, ಏಪ್ರಿಲ್ 12ರಂದು ಪ್ರಧಾನಿ ಮೋದಿ ಅವರೊಂದಿಗಿನ ವರ್ಚುವಲ್ ಶೃಂಗಸಭೆಯಲ್ಲಿ ಅಧ್ಯಕ್ಷ ಬೈಡೆನ್, ಹೆಚ್ಚಿನ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವುದು ಭಾರತದ ಹಿತಾಸಕ್ತಿಗೆ ಪೂರಕವಲ್ಲ ಎಂದು ಪುನರುಚ್ಚರಿಸಿದರು. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಅವರು ಮೋದಿಯೊಂದಿಗಿನ ಕರೆಯಲ್ಲಿ ಬೈಡೆನ್ ಅವರ ಹೇಳಿಕೆಗಳು “ಕೆಲವು ದಿನಗಳ ಹಿಂದೆ ಅವರ ಭೇಟಿಯ ಸಮಯದಲ್ಲಿ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮಾಡಿದ್ದಕ್ಕೆ ಅನುಗುಣವಾಗಿವೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

ಭಾರತದ ರಕ್ಷಣಾ ಮತ್ತು ವಿದೇಶಾಂಗ ಮಂತ್ರಿಗಳ ವಾಷಿಂಗ್ಟನ್ ಭೇಟಿಯ ಸಮಯದಲ್ಲಿ ಏನಾಯಿತು ಎಂಬುದರ ಜೊತೆಯಲ್ಲೇ ಭಾರತದ ಮೇಲೆ ಒತ್ತಡ ಹೇರುವ ಈ ಪ್ರಯತ್ನವನ್ನು ನೋಡಬೇಕು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೇರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ನಡುವಿನ ಸಭೆಯಲ್ಲಿ ಅವರು ರಕ್ಷಣಾ ಪಾಲುದಾರಿಕೆಯನ್ನು ಬಲಪಡಿಸುವ ಮತ್ತು ದ್ವಿಪಕ್ಷೀಯ ರಕ್ಷಣಾ ಸಹಕಾರದ ವ್ಯಾಪ್ತಿಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು. ಸಭೆಯ ನಂತರ ಬಿಡುಗಡೆಯಾದ ಹೇಳಿಕೆಯು ರಕ್ಷಣಾ ಉದ್ಯಮಗಳ ನಡುವೆ ನಿಕಟ ಸಹಯೋಗವನ್ನು ಹೊಂದಿರುತ್ತದೆ ಎಂದು ಹೇಳಿದೆ. ರಷ್ಯಾದ ಮಿಲಿಟರಿ ಸರಬರಾಜು ಮತ್ತು ಬಿಡಿಭಾಗಗಳ ಮೇಲೆ ನಿರಂತರ ಅವಲಂಬನೆಯನ್ನು ಅರ್ಥಮಾಡಿಕೊಳ್ಳಲು ಭಾರತ ಕೇಳುತ್ತಿರುವಾಗ ಹೆಚ್ಚಿನ ಅಮೇರಿಕದ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಸಾಧನಗಳನ್ನು ಖರೀದಿಸಲು ಭಾರತವನ್ನು ಒಪ್ಪಿಸಲು ಅಮೇರಿಕವು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿದೆ. 2+2 ಮಾತುಕತೆಯ ನಂತರ ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ರಷ್ಯಾದಿಂದ ಎಸ್-400 ಕ್ಷಿಪಣಿ ವ್ಯವಸ್ಥೆಯ ಖರೀದಿಗೆ ಸಂಬಂಧಿಸಿ ಭಾರತದ ಮೇಲೆ ನಿರ್ಬಂಧಗಳನ್ನು ಅನ್ವಯಿಸುವ ಬಗ್ಗೆ ಇನ್ನೂ ಯಾವುದೇ ನಿರ್ಣಯವನ್ನು ಮಾಡಲಾಗಿಲ್ಲ ಎಂದು ಹೇಳಿದ್ದಾರೆ. ಆದರೂ ಲಾಜಿಸ್ಟಿಕ್ಸ್ ಒಪ್ಪಂದದ ಅಡಿಯಲ್ಲಿ, ತನ್ನ ಯುದ್ಧನೌಕೆಗಳಿಗೆ ಭಾರತದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಸೌಲಭ್ಯವನ್ನು (ಎಂಆರ್‌ಓ) ಸ್ಥಾಪಿಸಲು ಅಮೇರಿಕ ಪರಿಗಣಿಸುತ್ತಿದೆ. ಹೀಗಾಗಿ, ಭಾರತವು ರಷ್ಯಾದ ಮಿಲಿಟರಿ ಉಪಕರಣಗಳನ್ನು ಖರೀದಿಸುವುದನ್ನು ಮುಂದುವರೆಸಿದರೆ ನಿರ್ಬಂಧಗಳ ಬೆದರಿಕೆ ಮತ್ತು ಅದೇ ಸಂದರ್ಭದಲ್ಲಿ ಅಮೇರಿಕದ ಶಸ್ತ್ರಾಸ್ತ್ರ ವ್ಯವಸ್ಥೆಗಳ ಖರೀದಿಗೆ ಪ್ರೋತ್ಸಾಹ ನೀಡುವ-ಕ್ಯಾರಟ್ ಮತ್ತು ಸ್ಟಿಕ್ ನೀತಿಯನ್ನು ಬಳಸಲಾಗುತ್ತಿದೆ.

“ನಾವು ನೈಸರ್ಗಿಕ ಪಾಲುದಾರರು ಮತ್ತು ಕಳೆದ ಕೆಲವು ವರ್ಷಗಳಲ್ಲಿ ಆಗಿರುವ ಪ್ರಗತಿ… ಒಂದು ದಶಕದ ಹಿಂದೆ ಊಹಿಸಿಕೊಳ್ಳುವುದು ಸಹ ಕಷ್ಟವಾಗಿತ್ತು” ಎಂದು ಮೋದಿಯವರು ಬೈಡೆನ್ ಅವರೊಂದಿಗಿನ ಮಾತುಕತೆಯಲ್ಲಿ ಅಮೇರಿಕಕ್ಕೆ ಭರವಸೆ ನೀಡಲು ಪ್ರಯತ್ನಿಸಿದರು. ಉಕ್ರೇನ್ ಪ್ರಕರಣದ ಹೊರತಾಗಿಯೂ, ಅಮೇರಿಕದ ಜೊತೆಗಿನ ಅಂತಹ ಮೈತ್ರಿಯು ಸ್ವತಂತ್ರ ವಿದೇಶಾಂಗ ನೀತಿ ಮತ್ತು ಕಾರ್ಯವ್ಯೂಹದ ಸ್ವಾಯತ್ತತೆಯ ವ್ಯಾಪ್ತಿಯನ್ನು ದುರ್ಬಲಗೊಳಿಸುತ್ತದೆ ಎಂಬ ಯಾವುದೇ ಅರಿವು ಇಲ್ಲ.

ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಟ ನ್ಯಾಟೋದ ನಾಯಕನಾಗಿ ಅಮೇರಿಕವು ಅದರ ಕೆಲವು ಮಿತ್ರರಾಷ್ಟ್ರಗಳೊಂದಿಗೆ ಸಾಂದರ್ಭಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಉದಾಹರಣೆಗೆ, ಟರ್ಕಿಯು ಸಿರಿಯಾದಂತಹ ಕೆಲವು ಪ್ರಮುಖ ವಿಷಯಗಳಲ್ಲಿ ಅಮೇರಿಕಕ್ಕಿಂತ ಭಿನ್ನವಾದ ನಿಲುವುಗಳನ್ನು ತೆಗೆದುಕೊಂಡಿತು. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದವರೆಗೂ ಜರ್ಮನಿಯು ಅಮೆರಿಕದ ಇಚ್ಛೆಗೆ ವಿರುದ್ಧವಾಗಿ ನಾರ್ಡ್ ಸ್ಟ್ರೀಮ್‌-2 ಗ್ಯಾಸ್ ಪೈಪ್‌ಲೈನ್‌ನೊಂದಿಗೆ ಮುಂದುವರಿಯುತ್ತಿತ್ತು.

ರಷ್ಯಾದೊಂದಿಗಿನ ಭಾರತದ ಸಂಬಂಧವನ್ನು ದುರ್ಬಲಗೊಳಿಸಲು ಅಮೇರಿಕವು ಭಾರತದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸುತ್ತದೆ. ಈ ಉದ್ದೇಶಕ್ಕಾಗಿಯೂ ಇದು `ಚೀನಾ ಕಾರ್ಡ್’ ಅನ್ನು ಉಪಯೋಗಿಸುತ್ತದೆ. ಗಡಿ ವಿಚಾರದಲ್ಲಿ ಭಾರತದ ಪರವಾಗಿ ಅಮೆರಿಕ ನಿಲ್ಲಲಿದೆ ಎಂಬ ರಕ್ಷಣಾ ಕಾರ್ಯದರ್ಶಿ ಆಸ್ಟಿನ್ ಹೇಳಿಕೆ ಹಾಗೂ ರಷ್ಯಾ-ಚೀನಾ ನಡುವಿನ ನಿಕಟ ಸಂಪರ್ಕ ಭಾರತದ ಸ್ಥಾನದ ಮೇಲೆ ಪರಿಣಾಮ ಬೀರಲಿದೆ ಎಂಬ ಮೋದಿ-ಬೈಡೆನ್ ಮಾತುಕತೆಯ ಅಧಿಕೃತ ಹೇಳಿಕೆಯು ಅಮೆರಿಕ ಮುಂದುವರಿಯಲಿರುವ ಹಾದಿಯನ್ನು ಸೂಚಿಸುತ್ತದೆ. ಭಾರತವನ್ನು ತನ್ನ ಇಂಡೋ-ಪೆಸಿಫಿಕ್ ಕಾರ್ಯವ್ಯೂಹ ಹತ್ತಿರ ಸೆಳೆಯುವುದು ಮತ್ತು ಭಾರತಕ್ಕೆ ಮಿಲಿಟರಿ ಉಪಕರಣಗಳ ಪ್ರಬಲ ಪೂರೈಕೆದಾರನಾಗುವುದು ಇದರ ವಿಶಾಲ ಉದ್ದೇಶವಾಗಿದೆ.

ರಷ್ಯಾ ವಿರುದ್ಧದ ಆಕ್ರಮಣಕಾರಿ ಅಮೇರಿಕದ ನಿಲುವಿನಲ್ಲಿ, ಉಕ್ರೇನ್ ಬಿಕ್ಕಟ್ಟು ಮತ್ತು ಇಂಡೋ-ಪೆಸಿಫಿಕ್ ಕಾರ್ಯವ್ಯೂಹದ ನಡುವೆ ಸಂಬಂಧವಿದೆ. ತನ್ನ ಅಧಿಪತ್ಯ ಚಲಾವಣೆಯ ಶಕ್ತಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಅಧಿಪತ್ಯವನ್ನು ಪುನರ್‌ಸ್ಥಾಪಿಸಲು ಅಮೇರಿಕದ ಪ್ರಯತ್ನದ ಭಾಗವಾಗಿ ಎರಡೂ ಇವೆ. ಈ ಯೋಜನೆಗೆ ಭಾರತ ಅತ್ಯಂತ ಮುಖ್ಯವಾಗಿದೆ, ಏಕೆಂದರೆ ಅಮೇರಿಕಕ್ಕೆ ಚೀನಾ ಅಂತಿಮವಾದ ಗುರಿಯಾಗಿದೆ. ಉಕ್ರೇನ್ ಬಿಕ್ಕಟ್ಟಿನಲ್ಲಿ ರಷ್ಯಾದೊಂದಿಗೆ ಹೇಗೆ ವ್ಯವಹರಿಸಬೇಕೆಂಬ ವಿಷಯದ ಹೊರತಾಗಿಯೂ ಭಾರತವನ್ನು ತನ್ನ ಅಧೀನ ಪಾಲುದಾರರನ್ನಾಗಿ ನಿರ್ವಹಿಸುವ ಪ್ರಯತ್ನವನ್ನು ಬಿಟ್ಟುಕೊಡುವುದಿಲ್ಲ. ಅಮೇರಿಕದ ಒಟ್ಟಾರೆ ವಿಶಾಲ ಯೋಜನೆಯಲ್ಲಿ ಇದು ಸಣ್ಣ ಕಿರಿಕಿರಿಯಷ್ಟೆ.

Donate Janashakthi Media

Leave a Reply

Your email address will not be published. Required fields are marked *