ನವದೆಹಲಿ ಫೆ 09 : ದೆಹಲಿಯ ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ಹಿಂಸಾಚಾರ ನಡೆಸಲು ಪ್ರಮುಖ ಕಾರಣಕರ್ತ ಎಂದು ಆರೋಪ ಎದುರಿಸುತ್ತಿದ್ದ ನಟ ದೀಪ್ ಸಿಧುವನ್ನು ಇಂದು (ಮಂಗಳವಾರ) ಪೊಲೀಸರು ಬಂಧಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಕಳೆದ ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಕೆಂಪು ಕೋಟೆ ಮೇಲೆ ಏರಿ ಸಿಖ್ ಧ್ವಜ ಹಾರಿಸಿ ಗಲಭೆಯೆಬ್ಬಿಸಿದ್ದ ಎಂಬ ಆರೋಪ ದೀಪ್ ಸಿಧು ಮೇಲೆ ಕೇಳಿಬಂದಿತ್ತು. ಈ ಸಂದರ್ಭದಲ್ಲಿ ಕೆಂಪು ಕೋಟೆ ಬಳಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ಹಲವರಿಗೆ ಗಾಯಗಳಾಗಿತ್ತು, ಸಾಕಷ್ಟು ಆಸ್ತಿಪಾಸ್ತಿಗಳು ನಷ್ಟವಾಗಿದ್ದವು. ಜನವರಿ 26 ರಂದು ನಡೆದ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಘಟನೆಯಲ್ಲಿ ಒಬ್ಬ ರೈತ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಬಹಳಷ್ಟು ರೈತರು ಗಾಯಗೊಂಡಿದ್ದರು.
ಸಿಖ್ ಧ್ವಜ ಹಾರಿಸಿದ್ದು, ಕೆಂಪುಕೋಟೆಗೆ ನುಗ್ಗಿದ್ದು ಬಿಜೆಪಿ ಕಾರ್ಯಕರ್ತ !?
ಘಟನೆ ಬಳಿಕ ಪಂಜಾಬಿ ನಟ ದೀಪ್ ಸಿಧು ತಲೆಮರೆಸಿಕೊಂಡಿದ್ದ. ದೆಹಲಿ ಪೊಲೀಸರು ಈತನ ಪತ್ತೆಗಾಗಿ ಲುಕ್ ಔಟ್ ನೊಟೀಸ್ ಹೊರಡಿಸಿದ್ದರು. ನಟ ದೀಪ್ ಸಿಧು ಸೇರಿದಂತೆ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದವರಿಗೆ 1 ಲಕ್ಷ ರೂ ಹಾಗೂ ಬೂಟಾ ಸಿಂಗ್, ಸುಖ್‌ದೇವ್ ಸಿಂಗ್ ಮತ್ತು ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು 50,000 ರೂ ನಗದು ಪುರಸ್ಕಾರ ಘೋಷಣೆ ಮಾಡಿದ್ದರು.
ದೀಪ್ ಸಿಧು ಬಿಜೆಪಿ ಪರ ಎಂಬ ಮಾತುಗಳು ಕೇಳಿಬಂದವು. ಈತ ಪ್ರಧಾನಿ ಮೋದಿಯವರೊಂದಿಗೆ ನಿಂತುಕೊಂಡಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಕಳೆದ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸಂಸದ ನಟ ಸನ್ನಿ ಡಿಯೋಲ್ ಪರ ಪ್ರಚಾರದ ಮ್ಯಾನೇಜರ್ ಆಗಿದ್ದ ಎಂಬ ದಾಖಲೆಗಳು ಕೂಡಾ ಬಹಿರಂಗ ಗೊಂಡಿದ್ದವು.