LGBTQ ದಂಪತಿಗಳ ಹಕ್ಕುಗಳನ್ನು ಗುರುತಿಸಲು ಮತ್ತು ಸಮಾಜದಲ್ಲಿ ಅಂತಹ ಸಂಬಂಧಗಳಲ್ಲಿ ವ್ಯಕ್ತಿಗಳ ಸ್ಥಾನಮಾನವನ್ನು ಹೆಚ್ಚಿಸಲು “ಕೌಟುಂಬಿಕ ಜೊತೆಗಾರಿಕೆ ಪತ್ರ” (Deed of Familial Association) ಅನ್ನು ಕಾನೂನು ದಾಖಲೆಯಾಗಿ ಸ್ವೀಕರಿಸುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದೆ. ಲೆಸ್ಬಿಯನ್ ದಂಪತಿಗಳು ತಮ್ಮ ಸಂಬಂಧಿಕರಿಂದ ರಕ್ಷಣೆ ಕೋರಿ ಸಲ್ಲಿಸಿದ ಮನವಿಯ ನಂತರ ಈ ಆದೇಶವನ್ನು ಜಾರಿಗೊಳಿಸಲಾಗಿದೆ.
ಕೌಟುಂಬಿಕ ಜೊತೆಗಾರಿಕೆ ಪತ್ರದಂತಹ ನಿಬಂಧನೆಯು LGBTQIA+ ಸಮುದಾಯದ ಸದಸ್ಯರ ಹಕ್ಕುಗಳನ್ನು ರಕ್ಷಿಸುತ್ತದೆ. ಅಲ್ಲದೆ ಅವರು ತೊಂದರೆಗೊಳಗಾಗದಂತೆ ಅಥವಾ ಕಿರುಕುಳವಿಲ್ಲದೆ ಬದುಕಲು ಸಾಧ್ಯವಾಗುತ್ತದೆ ಎಂದು ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲ ಹಿಂದಿರುಗಿಸಿದ ಎಲ್ಲಾ 10 ಮಸೂದೆಯನ್ನು ಪುನಃ ಅಂಗೀಕರಿಸಿದ ತಮಿಳುನಾಡು ಸರ್ಕಾರ
“ಈ ಪ್ರಕ್ರಿಯೆಯನ್ನು ಕೈಗೊಳ್ಳುವಾಗ, ಅರ್ಜಿದಾರರು ನೀಡಿದ ಈ ಸಲಹೆ ಹಾಗೂ ಪ್ರಸ್ತಾಪವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಂತಹ ಕೌಟುಂಬಿಕ ಜೊತೆಗಾರಿಕೆ ಪತ್ರ ಮತ್ತು ಅಂತಹ ದಾಖಲೆಯ ವ್ಯಾಪ್ತಿಯನ್ನು ನೋಂದಾಯಿಸಲು ರಾಜ್ಯವು ಕಾರ್ಯವಿಧಾನವನ್ನು ತರಬಹುದು” ಎಂದು ನ್ಯಾಯಾಲಯ ಹೇಳಿದೆ.
“ಅದನ್ನು ಮಾಡಿದರೆ, ಸಮುದಾಯದಲ್ಲಿ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ರಾಜ್ಯ ಸರ್ಕಾರ ತನ್ನ ಅನುಮೋದನೆಯ ಮುದ್ರೆಯನ್ನು ನೀಡಲು ಸಾಧ್ಯವಾಗುತ್ತದೆ. ಹೆಚ್ಚಿನ ಮಟ್ಟಿಗೆ, ಇದು ಸಮಾಜದಲ್ಲಿ ಅಂತಹ ವ್ಯಕ್ತಿಗಳ ಸ್ಥಾನಮಾನವನ್ನು ಹೆಚ್ಚಿಸುತ್ತದೆ. LGBTQAI+ ಸಮುದಾಯಕ್ಕಾಗಿ ನೀತಿಯನ್ನು ಅಂತಿಮಗೊಳಿಸುವಾಗ ನ್ಯಾಯಾಲಯವು ನೀಡಿದ ಈ ಸಲಹೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು” ಎಂದು ಕೋರ್ಟ್ ಹೇಳಿದೆ.
ಅಲ್ಲದೆ, ಈಗಾಗಲೇ LGBTQIA+ ಸಮುದಾಯಕ್ಕೆ ನೀತಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿರುವ ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಇಲಾಖೆಗೆ ನ್ಯಾಯಮೂರ್ತಿ ವೆಂಕಟೇಶ್ ಅವರು ಕೌಟುಂಬಿಕ ಜೊತೆಗಾರಿಕೆ ಪತ್ರಗಳನ್ನು ನೋಂದಾಯಿಸುವ ವ್ಯವಸ್ಥೆಯನ್ನು ಪರಿಗಣಿಸುವಂತೆ ಸೂಚಿಸಿದರು. ವಿಚಾರಣೆಯ ವೇಳೆ, ಅವರ ಕಲ್ಯಾಣವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನದಲ್ಲಿ ನ್ಯಾಯಾಲಯವು ಹಲವಾರು ನಿರ್ದೇಶನಗಳನ್ನು ನೀಡಿದೆ.
ವಿಡಿಯೊ ನೋಡಿ: ದಲಿತರ ಶೃಂಗಸಭೆ : ಸನಾತನಿ ಸರ್ಕಾರದಿಂದ ದಲಿತರ ಮೇಲೆ ನಿರಂತರ ದರ್ಜನ್ಯ – ಜನಾಕ್ರೋಶ Janashakthi Media