ಕರ್ನಾಟಕ | ಸೊರಗುತ್ತಿರುವ ಸಾರ್ವಜನಿಕ ಆರೋಗ್ಯ

ಅಪೌಷ್ಠಿಕತೆ, ರಕ್ತಹೀನತೆಯಿಂದ ಬಾಣಂತಿಯರ ಸಾಲು ಸಾಲು ಸಾವು ಒಂದು ಕಡೆಯಾದರೆ, ಮತ್ತೊಂದಡೆ ವೈದ್ಯರಿಲ್ಲದೆ ಸಾವುಗಳು ಸಂಭವಿಸುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲದೆ ಪ್ರಾಥಮಿಕ ಚಿಕಿತ್ಸೆ ನೀಡಲಾಗದೆ ಹಲವು ಸಾವು ನೋವುಗಳು ಸಂಭವಿಸಿದ ಉದಾಹರಣೆಗಳಿವೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಲಭ್ಯಗಳು ಇಲ್ಲದ ಕಾರಣ, ಖಾಸಗಿ ಆಸ್ಪತ್ರೆಗಳತ್ತ ಜನ ಮುಖ ಮಾಡುತ್ತಿದ್ದಾರೆ. ಖಾಸಗಿ ಅಸ್ಪತ್ರೆಗಳು ಇದನ್ನೇ ಬಂಡವಾಳವಾಗಿಸಿಕೊಂಡು ಸುಲಿಗೆಗೆ ಇಳಿಯುತ್ತಿವೆ. ರಾಜ್ಯದಲ್ಲಿ ಬಹುತೇಕ ರಾಜಕಾರಣಿಗಳು ಖಾಸಗಿ ಆಸ್ಪತ್ರೆಗಳ ಮಾಲೀಕರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕಾಗಿರುವ ಶಾಸಕರುಗಳೆ ಖಾಸಗಿ ಆಸ್ಪತ್ರೆಗಳನ್ನು ತೆರೆದಿರುವಾಗ, ಅವರಿಂದ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ದಿಯಾಗಲು ಸಾಧ್ಯವೆ? ಕರ್ನಾಟಕ

-ಗುರುರಾಜ ದೇಸಾಯಿ

ಆಸ್ಪತ್ರೆ ಎಂಬುದು ರೋಗಿಗಳಿಗೆ ಆರೋಗ್ಯ ರಕ್ಷಣೆ ನೀಡುವ ಜಾಗ. ಇಲ್ಲಿ ಸ್ವಲ್ಪ ಎಡವಟ್ಟಾದರೂ ಜೀವನ ಅಲ್ಲೋಲ ಕಲ್ಲೋಲವಾಗಿಬಿಡುತ್ತದೆ ಎಂಬುದಕ್ಕೆ ಕೋವೀಡ್ -19 ನಮ್ಮ ಕಣ್ಮುಂದೆಯೆ ಇದೆ. ಕೋವಿಡ್ ಸಮಯದಲ್ಲಿ ನಮ್ಮ ರಾಜ್ಯ ಸೇರಿದಂತೆ ಇಡೀ ದೇಶ, ಜಗತ್ತು ಹೇಗೆಲ್ಲ ನರಳಾಡಿತು ಎಂಬುದನ್ನು ನೋಡಿದ್ದೇವೆ. ಆರೋಗ್ಯ ವ್ಯವಸ್ಥೆಯಲ್ಲಿ ‘ರಾಜಕಾರಣದ’ ಪ್ರವೇಶದಿಂದ ಸಾರ್ವಜನಿಕ ಆಸ್ಪತ್ರೆಗಳು ದುರ್ಭಲಗೊಳ್ಳುತ್ತಿವೆ. ಪರಿಣಾಮ ರೋಗಗಳ ಸಂಖ್ಯೆಯಲ್ಲಿ
ಏರಿಕೆಯಾಗುತ್ತಲೆ ಇದೆ.

ಅಪೌಷ್ಠಿಕತೆ, ರಕ್ತಹೀನತೆಯಿಂದ ಬಾಣಂತಿಯರ ಸಾಲು ಸಾಲು ಸಾವು ಒಂದು ಕಡೆಯಾದರೆ, ಮತ್ತೊಂದಡೆ ವೈದ್ಯರಿಲ್ಲದೆ ಸಾವುಗಳು ಸಂಭವಿಸುತ್ತಿವೆ. ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲದೆ ಪ್ರಾಥಮಿಕ ಚಿಕಿತ್ಸೆ ನೀಡಲಾಗದೆ ಹಲವು ಸಾವು ನೋವುಗಳು ಸಂಭವಿಸಿದ ಉದಾಹರಣೆಗಳಿವೆ. “ಸರ್ಕಾರಿ ಆಸ್ಪತ್ರೆಗಳಿಗೆ ಬಡವರು ಮಾತ್ರ ಹೋಗುತ್ತಾರೆ, ಅವರು ಇದ್ದರೆಷ್ಟು ಬಿಟ್ಟರೆಷ್ಟು” ಎಂಬ ಭಾವನೆ ಆಳುವವರಲ್ಲಿದೆ. ಆ ಕಾರಣಕ್ಕಾಗಿಯೇ ಸಾರ್ವಜನಿಕ ಆರೋ ವ್ಯವಸ್ಥೆಯನ್ನು
ದುರ್ಬಲಗೊಳಿಸಲಾಗದೆ.

ಇದನ್ನೂ ಓದಿ: ಬಗರ್ ಹುಕುಂ: ನಿರೀಕ್ಷೆಯ ಮಟ್ಟ ತಲುಪಿಲ್ಲ – ಕೃಷ್ಣ ಬೈರೇಗೌಡ

ರಾಜಕಾರಣಿಗಳ ಮಾಲೀಕತ್ವದಲ್ಲಿ ಆಸ್ಪತ್ರೆಗಳು

ರಾಜ್ಯದಲ್ಲಿ ಬಹುತೇಕ ರಾಜಕಾರಣಿಗಳು ಖಾಸಗಿ ಆಸ್ಪತ್ರೆಗಳ ಮಾಲೀಕರಾಗಿದ್ದಾರೆ. ಶಾಸಕರು, ಅವರ ಸಂಬಂಧಿಗಳು, ಇಲ್ಲವೆ ಅವರ ಹಿಂಬಾಲಕರು ಹೀಗೆ ಪಟ್ಟಿಮಾಡುತ್ತಾ ಹೋದರೆ ದೊಡ್ಡ ಸಂಖ್ಯೆಯಲ್ಲಿ ಸಿಗುತ್ತಾರೆ. ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕಾಗಿರುವ ಶಾಸಕರುಗಳೆ ಖಾಸಗಿ ಆಸ್ಪತ್ರೆಗಳನ್ನು ತೆರೆದಿರುವಾಗ, ಅವರಿಂದ ಸಾರ್ವಜನಿಕ ಆಸ್ಪತ್ರೆಗಳು ಅಭಿವೃದ್ದಿಯಾಗಲು ಸಾಧ್ಯವೆ? ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲದಿರುವುದು ಖಾಸಗಿ ಆಸ್ಪತ್ರೆಗೆ ಸಂಜೀವಿನಿ ಇದ್ದಂತೆ. ಖಾಸಗಿ ಆಸ್ಪತ್ರೆಗಳ ಸಂಖ್ಯೆಗಳಲ್ಲೂ ಹೆಚ್ಳಳ ಆಗುತ್ತಿರುವುದು ಈ ಕಾರಣದಿಂದಾಗಿಯೇ.

ಸ್ವತಃ ಶಾಸಕರು, ಮಂತ್ರಿಗಳು ಸರ್ಕಾರಿ ಆಸ್ಪತ್ರೆಗಳ ಕಡೆ ಮುಖ ಮಾಡುವುದಿಲ್ಲ. ಇಲ್ಲಿಗೆ ಚಿಕಿತ್ಸೆಗೆಂದು ಬರುವವರು ಬಡವರು. ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ, ನಮ್ಮ ಊರಿನ ಒಟ್ಟು ಆರೋಗ್ಯ ವ್ಯವಸ್ಥೆ ಉತ್ತಮವಾಗಿರಬೇಕು. ಅದ ರೀತಿ ರಾಜ್ಯ, ದೇಶದ್ದು ಕೂಡಾ. ಆದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲಾಗದೆ, ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಧೋರಣೆ ನಮ್ಮನ್ನಾಳುವವರದ್ದು.

ಶೇ. 70 ರಷ್ಟು ಸಿಬ್ಬಂದಿಗಳ ಕೊರತೆ

2023ರ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 2844 ಸರ್ಕಾರಿ ಆಸ್ಪತ್ರೆಗಳಿವೆ. 16.993 ನೋಂದಾಯಿತ ಖಾಸಗಿ ಆಸ್ಪತ್ರೆಗಳಿವೆ. ರಾಜ್ಯದಲ್ಲಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾನವ ಸಂಪನ್ಮೂಲದ ಕೊರತೆಯ ಕಾರಣ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಜೂರಾದ ವೈದ್ಯರ ಸಂಖ್ಯೆ 2392. ಆದರೆ 2052 ನೇಮಕಾತಿ ಆಗಿದ್ದರೆ, 340 ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಶೇ. 14ರಷ್ಟು ವೈದ್ಯರ ಕೊರತೆಯನ್ನು ಎದುರಿಸುತ್ತಿವೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶೇಷ ತಜ್ಞರು 451 ಜನ ಕಾರ್ಯನಿರ್ವಹಿಸಬೇಕಿತ್ತು. ಆದರೆ 273 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ, 178 ಹುದ್ದೆಗಳು ಖಾಲಿ ಇವೆ. ಕರ್ನಾಟಕ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇಲ್ಲಿ 728 ಜನ ವಿಶೇಷ ತಜ್ಞರು ಇರಬೇಕು. ಇದಕ್ಕೆ ಹೋಲಿಸಿದರೆ ಶೇ. 70 ರಷ್ಟು ಸಿಬ್ಬಂದಿಗಳ ಕೊರತೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫಾರ್ಮಾಸಿಸ್ಟ್ (ಔಷಧಿಕಾರ)ಗಳ ಮಂಜೂರಾದ ಹುದ್ದೆ 2273, ನೇಮಕಾತಿ ಆಗಿರುವುದು 1504. ಖಾಲಿ ಇರುವ ಹುದ್ದೆಗಳು 769. ಸಮುದಾಯ ಆರೋಗ್ಯ ಕೇಂದ್ರದಲ್ಲಿ 45 ಸರ್ಜನ್‌ ಗಳು ಇರಬೇಕು. ಜನಸಂಖ್ಯೆಗೆ ಅನುಗುಣವಾಗಿ ನೋಡಿದರೆ 182 ಜನ ಸರ್ಜನ್‌ ಇರಬೇಕು. ಆದರೆ
16 ಜನ ಸರ್ಜನ್‌ ಮಾತ್ರ ಇದ್ದಾರೆ. ನಗರ ಪ್ರದೇಶದ ಆಸ್ಪತ್ರೆಗಳಲ್ಲೂ 2000 ಕ್ಕೂ ಹೆಚ್ಚು ವೈದ್ಯರ ಕೊರತೆ ಇದೆ ಎಂದು ಅಂಕಿಅಂಶಗಳು ಹೇಳುತ್ತಿವೆ.

ಇನ್ನೊಂದೆಡೆ ಜನಸಂಖ್ಯೆಗೆ ಅನುಗುಣವಾಗಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸಿ ರೋಗಿಗಳ ಸಹಾಯಕ್ಕ ಗಮನಹರಿಸಬೇಕಿದೆ. ಕೇರಳದಲ್ಲಿ ನಾಲ್ಕು ಸಾವಿರ ಜನರಿಗೆ ಒಂದರಂತೆ ಸಮುದಾಯ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿದ್ದಾರೆ. ಕೋವಿಡ್- 19 ನಿವಾರಣೆಯಲ್ಲಿ ಈ ಕೇಂದ್ರಗಳು ಮಹತ್ವದ ಪಾತ್ರ ವಹಿಸಿದ್ದವು. ಎಡರಂಗ ಸರ್ಕಾರದಲ್ಲಿ ಆರೋಗ್ಯ ಸಚಿವೆಯಾಗಿದ್ದ ಕೆ.ಕೆ.ಶೈಲಜಾ ಅವರಿಗೆ ಪ್ರತಿಷ್ಠಿತ ಯುರೋಪಿಯನ್ ಪ್ರಶಸ್ತಿ ಲಭಿಸಿದ್ದನ್ನು
ನೆನಪಿಸಿಕೊಳ್ಳಬೇಕಿದೆ. ಕರ್ನಾಟಕ

18,000 ಜನಸಂಖ್ಯೆಗೆ ಒಬ್ಬ ವೈದ್ಯರು!!

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ಸಾವಿರ ಜನರಿಗೆ ಒಬ್ಬರು ವೈದ್ಯರಿರಬೇಕು. ಆದರೆ ನಮ್ಮ ರಾಜ್ಯದಲ್ಲಿ 18,000 ಜನರಿಗೆ ಒಬ್ಬ ವೈದ್ಯರಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಲಭ್ಯಗಳು ಇಲ್ಲದ ಕಾರಣ, ಖಾಸಗಿ ಆಸ್ಪತ್ರೆಗಳತ್ತ ಜನ ಮುಖ ಮಾಡುತ್ತಿದ್ದಾರೆ. ಖಾಸಗಿ ಅಸ್ಪತ್ರೆಗಳು ಇದನ್ನೇ ಬಂಡವಾಳವಾಗಿಸಿಕೊಂಡು ಸುಲಿಗೆಗೆ ಇಳಿಯುತ್ತಿವೆ.

ಗಂಭೀರ ಖಾಯಿಲೆಗಳಾದ ಮೂತ್ರಪಿಂಡ ವೈಫಲ್ಯ, ಕ್ಯಾನ್ಸರ್‌, ಹೃದಯ ಸಮಸ್ಯೆಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ಪಡೆಯುವುದು ಕಠಿಣವಾಗುತ್ತಿದೆ. ದೂರದ ಜಿಲ್ಲೆಗಳಿಂದ ಕ್ಯಾನ್ಸರ್‌ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದು ತಿಂಗಳಾನುಗಟ್ಟಲೆ ಸಮಯ ವ್ಯಯಿಸಬೇಕಾದ ಸ್ಥಿತಿ ಇದೆ. 2021ರ ರಾಜ್ಯ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 1192 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿವೆ. ಇಲ್ಲಿ ಮಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯುವ ಅಗತ್ಯವಿದೆ. ಸಕಲ ವೈದ್ಯಕೀಯ ವ್ಯವಸ್ಥೆಯನ್ನು ಒದಗಿಸಬೇಕಿದೆ. ಆಗ ಕ್ಷೇತ್ರದಲ್ಲಿ ಬದಲಾವಣೆ ಬೀಸಲಿದೆ. ಆರೋಗ್ಯವೇ ಭಾಗ್ಯ ಎಂದು ಕೇವಲ ಬಾಯಲ್ಲಿ ಹೇಳಿದರೆ ಸಾಕಾಗುವುದಿಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ನೀಲನಕ್ಷೆಯನ್ನು ಸರ್ಕಾರಗಳು ರೂಪಿಸಬೇಕಿದೆ. ಕರ್ನಾಟಕ

ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣವಿಲ್ಲವೆ?

ಕರ್ನಾಟಕದಲ್ಲಿನ ಸಾರ್ವಜನಿಕ ಆಸ್ಪತ್ರೆಗಳು ಕಡಿಮೆ ಮಾನವ ಶಕ್ತಿಯಿಂದಾಗಿ ಮತ್ತು ತಾಂತ್ರಿಕ ಬೆಂಬಲವಿಲ್ಲದೆ ಸೊರಗಿ ಹೋಗಿವೆ. ಕೋವಿಡ್-19 ಸಾರ್ವಜನಿಕ ಆಸ್ಪತ್ರೆ ವ್ಯವಸ್ಥೆಯ ಶೋಚನೀಯ ಸ್ಥಿತಿಯನ್ನು ಮೇಲ್ಮೈಗೆ ತಂದರೂ, ಸಾಂಕ್ರಾಮಿಕವಲ್ಲದ ಸಮಯಗಳಲ್ಲಿಯೂ ಸಹ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವುದು ಕಷ್ಟ. ಕರ್ನಾಟಕ

ಕರ್ನಾಟಕದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ವೆಚ್ಚಗಳ ನಡುವೆ ದೊಡ್ಡ ಪ್ರಮಾಣದ ಅಂತರವಿದೆ ಮತ್ತು ಜನರು ಚಿಕಿತ್ಸೆಗಳಿಗೆ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ವಾಲುತ್ತಿರುವ ಕರಾಳ ಚಿತ್ರಣ ಎದ್ದು ಕಾಣುತ್ತಿದೆ. ಖಾಸಗಿ ವಲಯದ ಆಸ್ಪತ್ರೆಗಳಲ್ಲಿನ ಚಿಕಿತ್ಸಾ ವೆಚ್ಚಗಳು ಏರಿಕೆಯಾಗುತ್ತಿರುವುದಕ್ಕೆ ಕಡಿವಾಣ ಹಾಕಲು ಸರ್ಕಾರದ ಕಡೆಯಿಂದ ಸಾಧ್ಯವಾಗುತ್ತಲೇ ಇಲ್ಲ. “ಎಷ್ಟೆ ದುಡ್ಡು ಖರ್ಚಾದರೂ ಪರ್ವಾಗಿಲ್ಲ, ಕಾಯಿಲೆ ವಾಸಿ ಆದ್ರೆ ಸಾಕು” ಎಂದು ಹೇಳಿದರೆ ಸಾಕು, ಖಾಸಗಿ ಆಸ್ಪತ್ರೆಯವರು ಗ್ರಾಹಕರ ರಕ್ತ ಹೀರಿಬಿಡುತ್ತಾರೆ. ಇತ್ತ ರೋಗಿಯೂ ಇಲ್ಲ, ಹಣವೂ ಉಳಿಯಲಿಲ್ಲ ಎಂಬ ವೇದನೆಯಲ್ಲಿ ಕುಟುಂಬದ ಸದಸ್ಯರು ಗೋಳಾಡುತ್ತಿರುವ ಬಹಳಷ್ಟು ಉದಾಹರಣೆಗಳಿವೆ. ಪೂರ್ಣ ಹಣ ನೀಡದೆ ಸತ್ತ ದೇಹವನ್ನು ನೀಡದ “ಧನದಾಹಿ” ಖಾಸಗಿ ಆಸ್ಪತೆಗಳು ರಾಜ್ಯದಲ್ಲಿವೆ. ಕರ್ನಾಟಕ

ಗ್ರಾಮೀಣ ಮತ್ತು ನಗರ ನಗರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಸ್ವಲ್ಪಮಟ್ಟಿಗೆ ಒಂದೇ ರೀತಿಯ ಮಾದರಿಯನ್ನು ತೋರಿಸುತ್ತವೆ. ನಗರ ಪ್ರದೇಶಗಳಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವವರ ಪ್ರಮಾಣವು 61.04 ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ. 35.3 ರಷ್ಟಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕ್ರಮವಾಗಿ ಶೇ. 51.9 ಮತ್ತು ಶೇ. 45.7 ರಷ್ಟಿದೆ .

ದುಬಾರಿ ವೆಚ್ಚ

ಖಾಸಗಿ ಆಸ್ಪತ್ರೆಗಳಲ್ಲಿನ ಚಿಕಿತ್ಸಾ ವೆಚ್ಚಗಳು ಸಾರ್ವಜನಿಕ ಆಸ್ಪತ್ರೆಗಳಿಗಿಂತ 20 ಪಟ್ಟು ಹೆಚ್ಚು ದುಬಾರಿಯಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಒಂದು ದಿನದ ವಾಸ್ತವ್ಯಕ್ಕೆ 1,500 ರೂ. ವೆಚ್ಚವಾಗುತ್ತದೆ, ಆದರೆ ಖಾಸಗಿ ಆಸ್ಪತ್ರೆಯಲ್ಲಿ ಅದೇ ವಾಸ್ತವ್ಯಕ್ಕೆ 30,000 ರೂ. ವೆಚ್ಚವಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಸುಮಾರು 2.8 ಲಕ್ಷ ರೂ. ವೆಚ್ಚವಾದರೆ, ಸಾರ್ವಜನಿಕ ಆಸ್ಪತ್ರೆಯಲ್ಲಿ 95,000 ರೂ.ಗಳಷ್ಟು ವೆಚ್ಚವಾಗಲಿದೆ.

ಅದೇ ರೀತಿ, ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯಲ್ಲಿ 65,000 ರೂ. ವೆಚ್ಚವಾದರೆ ಖಾಸಗಿ ಆಸ್ಪತ್ರೆಯಲ್ಲಿ ನಿಖರವಾಗಿ ನಾಲ್ಕರಿಂದ ಐದು ಪಟ್ಟು ಹೆಚ್ಚು ವೆಚ್ಚವಾಗುತ್ತದೆ. ವೈದ್ಯಕೀಯ ಚಿಕಿತ್ಸೆಗಳು ಮತ್ತು ಹಾಸಿಗೆ ವೆಚ್ಚವನ್ನು ಹೊರತುಪಡಿಸಿ, ರೋಗ ನಿರ್ಣಯ ಪರೀಕ್ಷೆಗಳು, ವೈದ್ಯರ ಶುಲ್ಕಗಳು, ಪ್ಯಾಕೇಜ್ ಘಟಕಗಳು, ಔಷಧಿಗಳು ಇತ್ಯಾದಿಗಳಂತಹ ಅಂಶಗಳ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಬಿಲ್‌ ಮಾಡುತ್ತವೆ.

ಹತ್ತರಿಂದ ನೂರು ಪಟ್ಟು ಹೆಚ್ಚಿಗೆ ಬಿಲ್‌ ಪಡೆಯುವ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಸರ್ಕಾರ ಮುಂದಾಗಬೇಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ವಿಧಿಸುವ ಮಿತಿ ಮೀರಿದ ಶುಲ್ಕ ಮತ್ತು ಶೋಷಣೆ ತಡೆಗೆ ನೀತಿ ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ತಿಳಿಸಿದೆ. ಸುಪ್ರೀಂ ಕೋರ್ಟ್‌ ಆದೇಶ ಜಾರಿಗೆ ಬರಬೇಕಿದೆ.

ಅತ್ಯುತ್ತಮವಾದ ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆ ಹೊಂದಿರುವ ಕೇರಳ

ಭಾರತದ ಇತರ ರಾಜ್ಯಗಳು ಮತ್ತು ಇದೇ ರೀತಿಯ ಆರ್ಥಿಕ ಪರಿಸ್ಥಿತಿಗಳನ್ನು ಹೊಂದಿರುವ ದೇಶಗಳಿಗೆ ಹೋಲಿಸಿದರೆ ಕೇರಳದ ಸಾರ್ವಜನಿಕ ಆರೋಗ್ಯವು ಸುಧಾರಿಸಿದೆ. ಇದು ಯಶಸ್ವಿ ಆರೋಗ್ಯ-ಕೇಂದ್ರಿತ ನೀತಿಗಳ ದೀರ್ಘ ಇತಿಹಾಸವನ್ನು ಆಧರಿಸಿದೆ. ಕೇರಳದಲ್ಲಿ ಅಧಿಕಾರ ನಡೆಸುತ್ತಿರುವ ಎಡರಂಗ ಸರ್ಕಾರ ಸಾರ್ವಜನಿಕ ರಂಗವನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.

ಅಭಿವೃದ್ಧಿಯ ಬಗ್ಗೆ ಯೋಚಿಸುವಾಗ ನಾವು ಹೆಚ್ಚಾಗಿ ರಸ್ತೆಗಳು, ಕಟ್ಟಡಗಳು, ಮಾಲ್ ಗಳು, ಐಟಿ ಕಂಪನಿಗಳು ಮತ್ತು ಕಾರ್ಖಾನೆಗಳನ್ನು ಚಿತ್ರಿಸಿಕೊಳ್ಳುತ್ತೇವೆ. ಆದಾಗ್ಯೂ, ಸಾಮಾಜಿಕ ಪ್ರಗತಿ, ಮಾನವ ಅಭಿವೃದ್ಧಿ ಅಥವಾ ಸಾಮಾಜಿಕ ಸಮಾನತೆಯ ಮೇಲಿನ ಚರ್ಚೆಗಳನ್ನು ವಿರಳವಾಗಿ ಕೇಂದ್ರೀಕರಿಸುತ್ತವೆ. ಅಭಿವೃದ್ಧಿಯನ್ನು ನಗರೀಕರಣದೊಂದಿಗೆ ಸಮೀಕರಿಸಲು ನಾವು ಷರತ್ತು ಬದ್ಧರಾಗಿದ್ದೇವೆ. ಭಾರತೀಯ ಸನ್ನಿವೇಶದಲ್ಲಿ, ನಿರ್ಮಿಸಲಾದ ರಸ್ತೆಗಳ ಸಂಖ್ಯೆ ಮತ್ತು
ಆಕರ್ಷಿಸಲ್ಪಟ್ಟ ಕಂಪನಿಗಳ ಸಂಖ್ಯೆಯನ್ನು ಅನೇಕ ರಾಜಕೀಯ ಪಕ್ಷಗಳು ಎತ್ತಿತೋರಿಸುತ್ತವೆ. ಆದರೂ, ಸಮಾಜಕ್ಕೆ ಅಗತ್ಯವಿರುವ ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಹಳ್ಳಿಗಳ ಬಗ್ಗೆ ಕೆಲವರು ಮಾತ್ರ ಮಾತನಾಡುತ್ತಾರೆ.

ಕೇರಳವು ಎದ್ದು ಕಾಣುವುದು ಇಲ್ಲಿಯೇ. ಕೇರಳವು ಅತ್ಯುತ್ತಮವಾದ ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ ಎಂದು ನಿರಂತರವಾಗಿ ಪ್ರದರ್ಶಿಸಿದೆ. ಕೇಂದ್ರ-ರಾಜ್ಯ ಸಂಬಂಧಗಳಲ್ಲಿನ ಸವಾಲುಗಳ ಹೊರತಾಗಿಯೂ, ‘ನಿಪಾ’ದಂತಹ ಮಾರಕ ರೋಗಗಳ ಏಕಾಏಕಿ ನಿರ್ವಹಣೆ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಇಲ್ಲಿನ ಈ ವ್ಯವಸ್ಥೆಯು ಕೇರಳಕ್ಕೆ ಸಹಾಯ ಮಾಡಿದೆ. ವ್ಯಾಪಕವಾದ ಸಾರ್ವಜನಿಕ ಆರೋಗ್ಯ ರಕ್ಷಣಾ ಜಾಲ ಮತ್ತು ಬಲವಾದ, ಉತ್ತಮ ತರಬೇತಿ ಪಡೆದ ವೈದ್ಯಕೀಯ ವೃತ್ತಿಪರರ ಗುಂಪು ಈ ಪ್ರಯತ್ನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ರಾಜ್ಯದ ಸಾರ್ವಜನಿಕ ಆರೋಗ್ಯ ಸೌಲಭ್ಯಗಳ ವ್ಯಾಪಕ ಜಾಲವು ಶಿಶುಮರಣ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಜೀವಿತಾವಧಿಯನ್ನು ಹೆಚ್ಚಿಸಲು ಗಮನಾರ್ಹವಾಗಿ ಕೊಡುಗೆ ನೀಡಿದೆ. ಕೇರಳವು ಅತಿ ಹೆಚ್ಚು ಸಾಂಸ್ಥಿಕ ಜನನಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ ಮತ್ತು ಯಾವುದೇ ಮಗು ಅಪೌಷ್ಟಿಕತೆಯಿಂದ ಬಳಲುತ್ತಿಲ್ಲ. ಇಲ್ಲಿನ ಆರೋಗ್ಯ ವ್ಯವಸ್ಥೆಯು ರಾಜ್ಯದ ಅಭಿವೃದ್ಧಿಯ ಮೂಲಾಧಾರವಾಗಿದೆ.

ರಾಜ್ಯ ಸರ್ಕಾರದ ಮುಂದಿರುವ ತುರ್ತು

ಕರ್ನಾಟಕ ರಾಜ್ಯ ಸರ್ಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ತುರ್ತಾಗಿ ಬಲಪಡಿಸಬೇಕಿದೆ. ‘ಪ್ರಪಂಚದ ಯಾವ ರಾಷ್ಟ್ರ ತನ್ನ ಜನರನ್ನು ಆರೋಗ್ಯದ ಮಾರ್ಗದಲ್ಲಿ ಕೊಂಡೊಯ್ದಿದೆಯೋ ಅವುಗಳು, ಸದೃಢ ಸಾರ್ವಜನಿಕ ಅರೋಗ್ಯ ವ್ಯವಸ್ಥೆಯ ಬಲದಿಂದಲೇ ವಿನಃ, ಖಾಸಗೀಕೃತ ವ್ಯವಸ್ಥೆಯಿಂದಲ್ಲ’ ಎಂಬ ಅಂಶ ಸರ್ಕಾರದ ತಲೆಗೆ ಹೋಗಬೇಕು.

ಸರ್ಕಾರವು ವಿಷನ್ ಸಮಿತಿ ಶಿಫಾರಸ್ಸು ಮಾಡಿರುವ ಹಾಗೆ ಹಣ ಹೂಡಿಕೆಯನ್ನು ಸಧ್ಯ ಇರುವ ಜಿಡಿಪಿಯ ಶೇ. 0.8 ರಷ್ಟಿರುವುದನ್ನು ಶೇ. 2.5 ಕ್ಕೆ ಏರಿಸಬೇಕು. ಸಿಬ್ಬಂದಿ ಕೊರತೆಯನ್ನು ಅದರಲ್ಲೂ ವಿಶೇಷಜ್ಞರ ಕೊರತೆಯನ್ನು ಒಡನೆಯೇ ನೀಗಿಸುವ ದಿಕ್ಕಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಪ್ರಸನ್ನ ಸಾಲಿಗ್ರಾಮ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಮುಂದಿರುವ ತುರ್ತು

ಕರ್ನಾಟಕ ರಾಜ್ಯ ಸರ್ಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ತುರ್ತಾಗಿ ಬಲಪಡಿಸಬೇಕಿದೆ. ‘ಪ್ರಪಂಚದ ಯಾವ ರಾಷ್ಟ್ರ ತನ್ನ ಜನರನ್ನು ಆರೋಗ್ಯದ ಮಾರ್ಗದಲ್ಲಿ ಕೊಂಡೊಯ್ದಿದೆಯೋ ಅವುಗಳು, ಸದೃಢ ಸಾರ್ವಜನಿಕ ಅರೋಗ್ಯ ವ್ಯವಸ್ಥೆಯ ಬಲದಿಂದಲೇ ವಿನಃ, ಖಾಸಗೀಕೃತ ವ್ಯವಸ್ಥೆಯಿಂದಲ್ಲ’ ಎಂಬ ಅಂಶ ಸರ್ಕಾರದ ತಲೆಗೆ ಹೋಗಬೇಕು.

ಸರ್ಕಾರವು ವಿಷನ್ ಸಮಿತಿ ಶಿಫಾರಸ್ಸು ಮಾಡಿರುವ ಹಾಗೆ ಹಣ ಹೂಡಿಕೆಯನ್ನು ಸಧ್ಯ ಇರುವ ಜಿಡಿಪಿಯ ಶೇ. 0.8 ರಷ್ಟಿರುವುದನ್ನು ಶೇ. 2.5 ಕ್ಕೆ ಏರಿಸಬೇಕು. ಸಿಬ್ಬಂದಿ ಕೊರತೆಯನ್ನು ಅದರಲ್ಲೂ ವಿಶೇಷಜ್ಞರ ಕೊರತೆಯನ್ನು ಒಡನೆಯೇ ನೀಗಿಸುವ ದಿಕ್ಕಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಪ್ರಸನ್ನ ಸಾಲಿಗ್ರಾಮ ಆಗ್ರಹಿಸಿದ್ದಾರೆ.

ಉಚಿತ ಔಷಧಿಗಳ ಲಭ್ಯತೆ

ಉಚಿತ ಔಷಧಿಗಳ ಲಭ್ಯತೆಯನ್ನು ಸುನಿಶ್ಚಿತಗೊಳಿಸಬೇಕು ಆಗ ತಂತಾನೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಜನರು ಹೆಚ್ಚಾಗಿ ಉಪಯೋಗಿಸಲು ಶುರುಮಾಡುತ್ತಾರೆ ಎಂದೆನ್ನುತ್ತಾರೆ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದ ರೈತ ಸಕ್ಕರಗೌಡ ಅಡವಿಗೌಡರ. ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲು ಮುಂದಾಗಬೇಕಿದೆ.

ಎಲ್ಲರನ್ನೂ/ಎಲ್ಲವನ್ನೂ ಒಂದು ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಛತ್ರಿಯಡಿ ತರಬೇಕು. ಈಗ ಇರುವಂತೆ ಶ್ರೀಮಂತರಿಗೆ ಒಂದು ವ್ಯವಸ್ಥೆ, ಬಡವರಿಗೆ ಒಂದು ವ್ಯವಸ್ಥೆ ಎಂಬುದು ಬದಲಾಗಬೇಕು. ಸಾರ್ವತ್ರಿಕ ಅರೋಗ್ಯ ವ್ಯವಸ್ಥೆಯಡಿಯಲ್ಲಿ ಸಮುದಾಯಗಳ ಭಾಗವಹಿಸುವಿಕೆಗೆ ಸೃಷ್ಟಿಸಿರುವ ಗ್ರಾಮ ಅರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳು, ಅರೋಗ್ಯ ರಕ್ಷಾ ಸಮಿತಿಗಳು, ಮಹಿಳಾ ಅರೋಗ್ಯ ಸಮಿತಿಗಳು ಇತ್ಯಾದಿಯನ್ನು ಬಲಗೊಳಿಸಬೇಕು. ಆ ಮೂಲಕ ವ್ಯವಸ್ಥೆಯನ್ನು
ಸಮುದಾಯಗಳ ಅವಶ್ಯತೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲ ಮುಂದಾಗಬೇಕಿದೆ.

ಇದನ್ನೂ ನೋಡಿ: ಮಂಗಳೂರು | ಪೌರ ಕಾರ್ಮಿಕರೊಂದಿಗೆ ಸಾಮೂಹಿಕ ಇಫ್ತಾರ್ ಕೂಟ Janashakthi Media

Donate Janashakthi Media

Leave a Reply

Your email address will not be published. Required fields are marked *