ನವದೆಹಲಿ: ಸಂಸ್ಕೃತವನ್ನು ಭಾರತದ ರಾಷ್ಟ್ರ ಭಾಷೆಯನ್ನಾಗಿ ಘೋಷಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಘೋಷಣೆ ಮಾಡುವುದಾಗಲಿ, ರಾಷ್ಟ್ರಭಾಷೆ ಅಲ್ಲ ಎಂದು ಹೇಳುವುದಾಗಲಿ ದೇಶದ ಸಂಸತ್ತಿಗೆ ಬಿಟ್ಟ ವಿಚಾರ. ಅದೇ ಸರಿಯಾದ ವೇದಿಕೆ. ನ್ಯಾಯಾಲಯ ಈ ಬಗ್ಗೆ ತೀರ್ಮಾನಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ವಕೀಲ ಕೆ.ಜಿ.ವಂಝಾರ ಅವರು ಸಲ್ಲಿಸಿದ ಅರ್ಜಿಯ ಬಗ್ಗೆ ನ್ಯಾಯಾಲಯ ನಾವು ಅರ್ಜಿಯನ್ನು ಪರಿಗಣಿಸಲು ನಿರಾಕರಿಸುತ್ತೇವೆ. ಅರ್ಜಿ ವಜಾಗೊಳಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಮುಂದೆ ವಕೀಲರು ಇದನ್ನು ಸಲ್ಲಿಸಬಹುದು ಎಂದು ಆದೇಶ ನೀಡಿದೆ.
ಅರ್ಜಿದಾರರು ಒಂದು ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ನೀವು ಹೇಳಿದ ವಿಚಾರವನ್ನು ತೀರ್ಮಾನ ಮಾಡುವ ಸರಿಯಾದ ವೇದಿಕೆ ಸಂಸತ್ತು. ಅಲ್ಲಿಯೇ ಇದರ ಚರ್ಚೆಯಾಗಬೇಕು ನ್ಯಾಯಾಲಯದಲ್ಲಲ್ಲ. “ಈ ಕುರಿತಾಗಿ ನಾವು ಏಕೆ ನೋಟಿಸ್ ಜಾರಿ ಮಾಡಬೇಕು ಅಥವಾ ಪ್ರಚಾರಕ್ಕಾಗಿ ಯಾಕೆ ನೋಟಿಸ್ ಘೋಷಿಸಬೇಕು? ಇದು ನೀತಿಯ ವಿಷಯವಾಗಿದ್ದು ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲʼʼ ಎಂದು ಪ್ರಶ್ನಿಸಿದೆ.
ಅರ್ಜಿದಾರರು, ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಅದೇ ವೇಳೆ ಇಂಥಾ ಕ್ರಮವು ದೇಶದ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಮತ್ತು ಹಿಂದಿಯನ್ನು ಒದಗಿಸುವ ಪ್ರಸ್ತುತ ಸಾಂವಿಧಾನಿಕ ನಿಬಂಧನೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಮನವಿ ಮಾಡಿದ್ದರು.
ಕೆ.ಜಿ.ವಂಝಾ ಅವರು, ಗುಜರಾತ್ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಪ್ರಸ್ತುತ ಗುಜರಾತ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಂಝಾರ ಅವರು ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ ವಿವಾದಿತ ಐಪಿಎಸ್ ಅಧಿಕಾರಿ ಡಿಜಿ ವಂಝಾರ ಅವರ ಸಹೋದರರು.