ವಸತಿ ನಿಲಯ ಮುಚ್ಚುವ ತೀರ್ಮಾನ: ಅಂಗವಿಕಲರ ಹಕ್ಕುಗಳ ಕಾಯ್ದೆ ಉಲ್ಲಂಘನೆ – ಜಿಲ್ಲಾಧಿಕಾರಿಗಳೆ ನೇರ ಹೊಣೆ – ರಂಗಪ್ಪ ದಾಸರ

ಹಾವೇರಿ: ಅಂಗವಿಕಲ ಹಕ್ಕುಗಳ ಕಾಯ್ದೆ2016 ರ ಪ್ರಕಾರ ಜಿಲ್ಲಾಧಿಕಾರಿಗಳೆ ಅಂಗವಿಕಲ ವ್ಯಕ್ತಿಗಳ ಕಾಯಿದೆಯ ಆಯುಕ್ತರಾಗಿದ್ದು ವಸತಿ ಸೌಕರ್ಯದಿಂದ ವಂಚಿತರಾದರೆ ಜಿಲ್ಲಾಧಿಕಾರಿಗಳೆ ನೇರಾ ಹೊಣೆಗಾರರಾಗುತ್ತಾರೆ ಎಂದು ಅಂಗವಿಕಲರ, ಪಾಲಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ ಮಾತನಾಡಿದರು.

ವಿಕಲಚೇತನ ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಪುನರ್ ವಸತಿ ಕೇಂದ್ರದ ಅವ್ಯವಸ್ಥೆ, ಶೋಷಣೆ, ಅನ್ಯಾಯದ ಕುರಿತು ಸಮಗ್ರ ತನಿಖೆಗಾಗಿ ಒತ್ತಾಯಿಸಿ, ಅಂಗವಿಕಲರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಕೆ.ಎಸ್.ಡಿ.ಸಿ.ಎಫ್ ಮತ್ತು ಎಸ್ಎಫ್ಐ ಜಿಲ್ಲಾ ಸಮಿತಿಯು ನಗರದ ಪತ್ರಿಕಾ ಭವನದಲ್ಲಿ ನಡೆದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕಲ್ಮೇಶ್ವರ ಗ್ರಾಮೀಣ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಮುಚ್ಚಿಸಿ ಇದರಲ್ಲಿರುವ ಅಂಗವಿಕಲ ಮಹಿಳೆಯರನ್ನು ಹೊರದಬ್ಬುತ್ತಿರುವ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ (ಕೆ.ಎಸ್.ಡಿ.ಸಿ.ಎಫ್) ಮತ್ತು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಬಲವಾಗಿ ಖಂಡಿಸುತ್ತದೆ. ಇದಕ್ಕೆ ಯಾವುದೇ ಸಬೂಬು ಹೇಳದೆ ಇವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ:ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಒತ್ತಾಯ, ಕಠಿಣ ಕ್ರಮಕ್ಕೆ ಆಗ್ರಹ- ಡಿಎಚ್ಎಸ್

ಅಂಗವಿಕಲರಿಗಾಗಿ ಕೆಲಸ ಮಾಡುವ ಸಂಸ್ಥೆಯು ಅಂಗವಿಕಲರ ಪೋಷಣೆ, ರಕ್ಷಣೆ, ಶಿಕ್ಷಣ ತರಬೇತಿ, ಪುನಶ್ಚೇತನದ ಉದ್ದೇಶಗಳಿಡಿಯಲ್ಲಿಯೇ ಸಂಸ್ಥೆಯ‌ನ್ನು ಪ್ರಾರಂಭಿಸಿರುತ್ತಾರೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಅನುದಾನವನ್ನು ಪಡೆದಿರುತ್ತಾರೆ. ಇದನ್ನು ಪುನಶ್ಚೇತನಗೊಳಿಸದೇ ಅಂಗವಿಕಲ ಮಹಿಳೆಯರನ್ನು ಹೊರ ಹಾಕುವುದು ಪರ್ಯಾಯ ಮಾರ್ಗವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮಹಿಳೆಯರ ಶೋಷಣೆಗಳ ಕುರಿತಂತೆ ಮಾತನಾಡುವಾಗ ಅದರ ಮೊದಲ ಬಲಿಪಶು ಅಂಗವಿಕಲ ಮಹಿಳೆಯೇ ಆಗಿರುತ್ತಾಳೆ. ಅತ್ಯಚಾರ, ದೌರ್ಜನ್ಯ, ನಿಂದನೆಯಂತಹ ಅನೇಕ ಸಂಕಷ್ಟಗಳಲ್ಲಿ ಸುಲಭಕ್ಕೆ ತುತ್ತಾಗಿರುವುದು ಅಂಗವಿಕಲ ಮಹಿಳೆ, ಎಂಬುದನ್ನು ಗಮನಿಸಬೇಕಾದ ವಿಚಾರ.

ಶೇಕಡ 95ರಷ್ಟು ವೈವಾಹಿಕ ಜೀ‌ವನಕ್ಕೆ ಕಾಲಿಡದೇ, ಕುಟುಂಬ ಮತ್ತು ಸಮಾಜದ ಕಿರುಕುಳದ ಸಂಕಷ್ಟಗಳನ್ನು ಎದುರಿಸಿ, ತನ್ನ ಉತ್ತಮ ಬದುಕು ಕಟ್ಟಿಕೊಳ್ಳಲು ಅವಿರತ ಶ್ರಮ ಪಡುತ್ತಿರುತ್ತಾರೆ. ಇಂತಹ ಮಹಿಳೆಯರನ್ನು ಸಂಕಷ್ಟದಿಂದ ಹೊರ ತರಲು ಅಂಗವಿಕಲರ ಹಕ್ಕುಗಳ ಕಾಯ್ದೆ- 2016ನ್ನು ರೂಪಿಸಲಾಗಿದೆ. ಇಂತಹ ಸಂದರ್ಭದಲ್ಲಿ ಅಂಗವಿಕಲ ಮಹಿಳೆಯರನ್ನು ವಸತಿ ನಿಲಯದಿಂದ ಹೊರ ಹಾಕುವುದು ಅಂಗವಿಕಲರ ಹಕ್ಕುಗಳ ಕಾಯ್ದೆ- 2016ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬೆಂಗಳೂರು| ಗರ್ಭಕಂಠ ಕ್ಯಾನ್ಸರ್: 14 ವರ್ಷದ ಬಾಲಕಿಯರಿಗೆ ಉಚಿತ ಲಸಿಕೆ

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಅಂಗವಿಕಲರ ಆಯುಕ್ತರೂ ಆಗಿರುವ ಮಾನ್ಯ ಜಿಲ್ಲಾಧಿಕಾರಿಗಳು, ಈ ಕುರಿತಂತೆ ಮಧ್ಯಪ್ರವೇಶ ಮಾಡಬೇಕು. ವಸತಿ ನಿಲಯದ ಪುನಶ್ಚೇತನಕ್ಕೆ ಬೇಕಾದ ಎಲ್ಲಾ ರೀತಿಯ ಕ್ರಮಗಳಿಗೆ ಮುಂದಾಗಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ.

ಅಂಗವಿಕಲರಿಗೆ ಪುನರ್ ವಸತಿ ಮತ್ತು ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕಳಪೆ ನಿರ್ವಹಣೆ ಮತ್ತು ಭ್ರಷ್ಟಾಚಾರದ ದೂರುಗಳು ಶ್ರೀ ಕಲ್ಮೇಶ್ವರ ಸಂಸ್ಥೆಯ ಮೇಲೆ ಕೇಳಿ ಬರುತ್ತಿದ್ದು, ಈ ಕುರಿತಂತೆ ತನಿಖೆ ನಡೆಸಿ ಸೂಕ್ತ ಕ್ರಮಗಳಾಗಬೇಕು ಎಂದು ಒತ್ತಾಯಿಸುತ್ತಿದ್ದೇವೆ.

2012 ರಲ್ಲಿ ರಾಜ್ಯ ಸರ್ಕಾರ ಅಂಗವಿಕಲ ಮಹಿಳೆಯರಗಾಗಿ ಪುನರ್ವಸತಿ ಕೇಂದ್ರ ಜಾರಿಗೆ ತಂದಿದೆ. ಇದು ಜಿಲ್ಲೆಯ ಏಕೈಕ ಪುನರ್ಸತಿ ಕೇಂದ್ರವಾಗಿದೆ. ಅನುದಾನ ನೆಪ, ಕಡಿಮೆ ಜನರಿದ್ದಾರೆ ಎಂಬ ನೆಪ ಹೇಳಿಕೊಂಡು ಆಶ್ರಯ ತಾಣವನ್ನು ಮುಚ್ಚುವುದು ಸರಿಯಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಬೇಕು. ಮಹಿಳೆಯರನ್ನು ಹೊರ ಹಾಕಿದರೆ, ಅವರು ಘನತೆಯ ಬದುಕನ್ನು ಕಟ್ಟಿಕೊಳ್ಳುವುದಾದರೂ ಹೇಗೆ…? ಆಗ ನಾವು ಅನಿವಾರ್ಯವಾಗಿ ಹೋರಾಟದ ಹಾದಿಯನ್ನು ತುಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದರು.

ಅಂಗವಿಕಲ ವಿದ್ಯಾರ್ಥಿನಿ ಹೇಮಾ ಪ್ರಕಾಶ್ ಮಾತನಾಡಿ, ಏಳು ವರ್ಷದಿಂದ ಆಶ್ರಯ ನೀಡಿದ ಸಂಸ್ಥೆ ಏಕಾಏಕಿ ಹೊರದೂಡುವ ಕಾರ್ಯಕ್ಕೆ ಬೇಸರವಾಗಿದೆ. ಊಟ ಉಪಚಾರ ಸಾಕಷ್ಟು ಲೋಪದೋಷಗಳು ಇದ್ದರೂ ಸಹಿಸಿಕೊಂಡು ಬಂದೆವು ಕಾರಣ ವಸತಿಯ ತೃಪ್ತಿಯಲ್ಲಿದೆವು ಆದರೆ ಸರ್ಕಾರ ನಮಗೆ ನಡೆಯುವ ಅನ್ಯಾಯ ಸರಿಪಡಿಸದೆ ನಮ್ಮ ಹಕ್ಕುಗಳನ್ನು ದಹನ ಮಾಡುತ್ತಿದೆ. ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಿದ ಸಂಸ್ಥೆ ಮುಂದಿನ ಜೀವನ ಬೆಂಕಿ ಕೊಳ್ಳಿ ಹಿಡುತ್ತಿದೆ. ಜಿಲ್ಲಾಧಿಕಾರಿಗಳು ಅನುದಾನ ನೀಡುತ್ತಿಲ್ಲ ಎಂದು ಸಂಸ್ಥೆ ನಮ್ಮನ್ನು ಹೊರಗಡೆ ಹೋಗಿ ಎನುತ್ತಿದ್ದಾರೆ. ಸಂಖ್ಯೆ ಕಡಿಮೆ ಇದೆ ಎಂದು ಸಬಬೂ ನೀಡುತ್ತಿರುವ ಅಧಿಕಾರಗಳು ಸಂಸ್ಥೆ ಅನ್ಯಾಯ, ಮೊಸ, ವಂಚನೆ, ಭ್ರಷ್ಟಾಚಾರ ತನಿಖೆ ನೆಡಸಿ ನಮಗೆ ನ್ಯಾಯ ಕೊಡಿಸಿ ಎಂದರು.

ಅಂಗವಿಕಲ ಉದ್ಯೋಗಸ್ಥ ಮಹಿಳೆ ಗಿರಿಜಾ ಗೌಳಿ ಮಾತನಾಡಿ, ಸರ್ಕಾರ ನಮ್ಮನ್ನು ನಡು ನೀರಿನಲ್ಲಿ ಬಿಡ ಬಾರದು ವಸತಿ ಸೌಕರ್ಯವನ್ನು ಯಥಾವತ್ತಾಗಿ ಮುಂದುವರೆಸಬೇಕು ಎಂದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಕೇವಲ ಐದು ಜನ ಇದ್ದಾರೆ ಮಾತ್ರ ವಸತಿ ಸೌಕರ್ಯ ಮುಂದುವರೆಸುತ್ತೇವೆ ಎಂಬ ಆದೇಶ ರದ್ದಾಗಲಿ. ಒಬ್ಬರೆ ವಿಶೇಷ ಚೇತನ ವ್ಯಕ್ತಿ ಇದ್ದರೂ ಸೌಲಭ್ಯ ದೊರಕಲಿ, ಸರ್ಕಾರವೇ ನೇರವಾಗಿ ಸಂಸ್ಥೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಕಲಚೇತನ ವಿದ್ಯಾರ್ಥಿನಿ ಸುಮಾ ದೊಡ್ಡಗೌಡರ, ರೇಖಾ ಮಾದಗುಂಡಿ, ಶ್ರೇಯಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ತಿಪ್ಪೇಸ್ವಾಮಿ ಹೊಸಮನಿ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *