ಡಿಸೆಂಬರ್‌ವರೆಗೆ ಶಾಲೆ ಇಲ್ಲ : ಸಿಎಂ ಅಧಿಕೃತ ಘೋಷಣೆ 

ಆರೋಗ್ಯ ಇಲಾಖೆ ತಾಂತ್ರಿಕ ಸಮಿತಿ ಸಲಹೆಗೆ ಸಿಎಂ ಅಸ್ತು

ಬೆಂಗಳೂರು: ಡಿಸೆಂಬರ್‌ವರೆಗೆ ಶಾಲೆ ಇಲ್ಲ. ಡಿಸೆಂಬರ್ ಕೊನೆಯಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಶಾಲಾ-ಕಾಲೇಜು ಪ್ರಾರಂಭ ಕುರಿತು ಸೋಮವಾರ ಸಿಎಂ ನೇತೃತ್ವದಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ತಜ್ಞರ ಅಭಿಪ್ರಾಯಗಳನ್ನು ಪಡೆಯಲಾಗಿದ್ದು, ಸದ್ಯಕ್ಕೆ ಶಾಲೆ ಪ್ರಾರಂಭ ಬೇಡ ಎಂದು ನಿರ್ಧರಿಸಲಾಯಿತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯದವರೆಗೂ ಶಾಲೆ ಪ್ರಾರಂಭ ಮಾಡಲಾಗುವುದಿಲ್ಲ ಎಂದು ಸಿಎಂ ಅಧಿಕೃತವಾಗಿ ಘೋಷಿಸಿದ್ದಾರೆ.

ಸಭೆ ಪ್ರಾರಂಭದಲ್ಲಿ ಡಿಗ್ರಿ ಕಾಲೇಜುಗಳ ಬಗ್ಗೆ ಚರ್ಚೆ ನಡೆಯಿತು. ಎಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರ್ತಿದ್ದಾರೆ. ಟೆಸ್ಟ್ ಮಾಡಿಸಿದಾಗ ಎಷ್ಟು ವಿದ್ಯಾರ್ಥಿಗಳಿಗೆ ಸೋಂಕು ಬಂದಿದೆ ಅನ್ನೋದ್ರ ಕುರಿತು ಚರ್ಚಿಸಲಾಯಿತು. ಇದೇ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ವರದಿಯನ್ನು ಸಚಿವ ಸುರೇಶ್ ಕುಮಾರ್ ಸಿಎಂಗೆ ಸಲ್ಲಿಕೆ ಮಾಡಿದರು. ಶಾಲೆ ಪ್ರಾರಂಭ ಕುರಿತು ವರದಿಯನ್ನು ಆಯುಕ್ತ ಅನ್ಬುಕುಮಾರ್ ರೆಡಿ ಮಾಡಿದ್ದರು. ಸಭೆಯಲ್ಲಿ ಈ ವರದಿ ಬಗ್ಗೆ ಚರ್ಚೆ ನಡೆಯಿತು.

ಇದನ್ನೂ ಓದಿ: ಸೋಂಕು ಹೆಚ್ಚಳದ ಕಾರಣ: ‘ಡಿಸೆಂಬರ್‌ನಲ್ಲಿ ಶಾಲೆ ತೆರೆಯುವುದು ಸೂಕ್ತವಲ್ಲ’

ಹೈದರಾಬಾದ್ ನಲ್ಲಿರುವ ಆರೋಗ್ಯ ಸಚಿವ ಡಾ.ಸುಧಾಕರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡು, ಡಿಸೆಂಬರ್ ಮುಕ್ತಾಯದವರೆಗೂ ಶಾಲೆ ಬೇಡ ಎಂದು ಸಭೆಗೆ ತಮ್ಮ ಅಭಿಪ್ರಾಯ ತಿಳಿಸಿದರು. ಡಿಸೆಂಬರ್ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಶುರುವಾಗುವ ಸಾಧ್ಯತೆ ಇದೆ. ಇದು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗ್ತಿದೆ. ನಮ್ಮ ರಾಜ್ಯದ ಹವಾಮಾನದಲ್ಲಿ ಬದಲಾವಣೆ ಆಗುತ್ತಿದೆ. ಈಗಾಗಲೇ ಚಳಿಗಾಲ ಶುರುವಾಗ್ತಿದೆ. ತಜ್ಞರು ಕೂಡ ಡಿಸೆಂಬರ್ ವರೆಗೆ ಶಾಲೆ ಬೇಡ ಅಂದಿದ್ದಾರೆ. ಹೀಗಾಗಿ ಡಿಸೆಂಬರ್ ಕೊನೆಯವರೆಗೂ ಶಾಲಾ ಕಾಲೇಜು ಓಪನ್ ಮಾಡುವುದು ಸೂಕ್ತವಲ್ಲ ಎಂದು ಸುಧಾಕರ್ ತಿಳಿಸಿದರು.

ಸಭೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಿಎಸ್ ವಿಜಯ್ ಭಾಸ್ಕರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *