ಡಿಸೆಂಬರ್ 25, 1927 ಮನುಸ್ಮೃತಿ ದಹನ ದಿನ

‘ಮಹಾಡ್’ ಭಾರತದ ಚರಿತ್ರೆಯಲ್ಲಿ ಪ್ರಮುಖ ಮೈಲಿಗಲ್ಲಾದ ಎರಡು ಮಹತ್ವದ ಘಟನೆಗಳನ್ನು ನೆನಪಿಸುತ್ತದೆ. ಒಂದು ದಲಿತರು ಅಸ್ಪೃಶ್ಯತೆಯ ನಿರ್ಬಂಧಗಳನ್ನು ಮುರಿದು ಮಹಾಡ್ ಕೆರೆಯ ನೀರು ಕುಡಿದದ್ದು. ಎರಡನೆಯದು ಮನುಸ್ಮೃತಿಯ ದಲಿತ-ವಿರೋಧಿ ಭಾಗಗಳನ್ನು ಸುಟ್ಟದ್ದು. ಈ ಎರಡೂ ಚಾರಿತ್ರಿಕ ಘಟನೆಗಳು ಡಾ.ಅಂಬೇಡ್ಕರ್ ಅವರ ನಾಯಕತ್ವದಲ್ಲಿ ಮಹಾರಾಷ್ಟ್ರದ ಸಾವಿರಾರು ದಲಿತರು ಭಾಗವಹಿಸಿ ಮಹಾರಾಷ್ಟçದ ಕೊಂಕಣ ಪ್ರದೇಶದಲ್ಲಿರುವ ಮಹಾಡ್ ಪಟ್ಟಣದಲ್ಲಿ ನಡೆದರೂ, ಮಹಾರಾಷ್ಟ್ರ ಮಾತ್ರವಲ್ಲ ಇಡೀ ದೇಶದ ಗಮನ ಸೆಳೆದಿತ್ತು. ಭಾರತದ ಸ್ವಾತಂತ್ರ್ಯ ಮತ್ತು ಸಾಮಾಜಿಕ-ರಾಜಕೀಯ ಚಳುವಳಿಗಳ ಭವಿಷ್ಯದ ದಿಕ್ಕು ದೆಸೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿತ್ತು. ಆದರೂ ಶಾಲಾಶಿಕ್ಷಣದ ಚರಿತ್ರೆಯ ಪಾಠದಲ್ಲಿ ಇದರ ಪ್ರಸ್ತಾಪವೇ ಇಲ್ಲ.

ಇದನ್ನು ಓದಿ :ಮೊದಲ ದಲಿತ ಬಂಡಾಯ ಮಹಾಡ್ ಕಂಪನಗಳು : ದೇವನೂರ ಮಹಾದೇವ

“ಮಹಾಡ್ ಹೋರಾಟ ತೋರಿದ ದಿಕ್ಕುಗಳನ್ನು, ಆ ಎರಡೂ ಸಮ್ಮೇಳನಗಳು ನಡೆದ ದಿನಗಳ ಸಾಂಕೇತಿಕ ಮಹತ್ವವನ್ನು ಇವತ್ತಿಗೂ ಭಾರತದಾದ್ಯಂತ ಹಾಗೂ ನಿರ್ದಿಷ್ಟವಾಗಿ ಕರ್ನಾಟಕದಲ್ಲಿ ದಲಿತ ಸಂಘಟನೆಗಳು ನೆನೆಯುತ್ತಿರುತ್ತವೆ. ಅಂಬೇಡ್ಕರ್ ಬದುಕಿರುವವರೆಗೂ ಮನುಸ್ಮೃತಿಯನ್ನು ಸುಟ್ಟ ದಿನವನ್ನು ಅವರೇ ಸಾಂಕೇತಿಕವಾಗಿ ಆಚರಿಸುತ್ತಿದ್ದರು. ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆಗಳಲ್ಲಿ ಈ ಆಚರಣೆ ಇವತ್ತಿಗೂ ಮುಂದುವರೆದಿದೆ.” ಎಂದು ಪ್ರೊ. ನಟರಾಜ ಹುಳಿಯಾರ್ ಎಂದಿದ್ದಾರೆ ಈ ದಿನದ ಮಹತ್ವದ ಬಗ್ಗೆ. “ಅಂದು ಮನುಸ್ಮೃತಿಯನ್ನು ಸುಟ್ಟಬೆಂಕಿ ಈಗಲೂ ಸುಡುತ್ತಾ ಭಾರತದ ಉದ್ದಗಲಕ್ಕೂ ಉರಿಯುತ್ತಿದೆ.” ಎಂದು ದೇವನೂರ ಮಹಾದೇವ ಅವರು ಈ ದಿನವನ್ನು ನೆನಪಿಸಿಕೊಳ್ಳುತ್ತಾ ಹೇಳಿದ್ದಾರೆ.

ಮಹಾಡ್ ನ ಎರಡು ಚಾರಿತ್ರಿಕ ಸಮ್ಮೇಳನಗಳಲ್ಲಿ ನಡೆದ ಎರಡು ಚಾರಿತ್ರಿಕ ಘಟನೆಗಳ ಸಾರಸತ್ವವನ್ನು ದೇವನೂರ ಅವರು ತಮ್ಮ ಮಾತುಗಳಲ್ಲಿ ಹೀಗೆ ಸೆರೆ ಹಿಡಿದಿದ್ದಾರೆ :

“1927, ಮಾರ್ಚ್ 20. ಅಂದು ಅಂಬೇಡ್ಕರ್ ಅವರು ಮಹಾಡ್‌ನ ಚಾವದಾರ್ ಕೆರೆಯ ನೀರನ್ನು ಸ್ಪರ್ಶಿಸಿ ಆ ನೀರನ್ನು ಕುಡಿಯುತ್ತಾರೆ. ಆ ಒಂದು ಕ್ರಿಯೆಯಲ್ಲಿ ಆಗ ಎದ್ದ ಅಲೆಗಳು ಇನ್ನೂ ಇಂದಿಗೂ ಭಾರತದಲ್ಲಿ ಅಪ್ಪಳಿಸುತ್ತಲೇ ಇವೆ.  ಈ ಸಂದರ್ಭದಲ್ಲಿ ದಲಿತರ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಲು ಹಾಗೂ ಸತ್ಯಾಗ್ರಹವನ್ನು ಮುಂದುವರಿಸಲು 1927ರ ಡಿಸೆಂಬರ್ ಕೊನೆಯ ವಾರದಲ್ಲಿ ಸತ್ಯಾಗ್ರಹವನ್ನು ಹಮ್ಮಿಕೊಂಡಾಗ, ಕೆಲವು ಜಾತಿವಾದಿಗಳು ಚಾವದಾರ್ ಕೆರೆ ಖಾಸಗಿ ಆಸ್ತಿ ಎಂದು ವಿತಂಡವಾದ ಮಾಡಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಬಿಡುತ್ತಾರೆ. ಆಗ ಆ ಸತ್ಯಾಗ್ರಹವು, ಮೆರವಣಿಗೆ ಸಮಾವೇಶವಾಗಿ ಬದಲಾವಣೆಯಾಗುತ್ತದೆ. ಹತ್ತು ಸಹಸ್ರಕ್ಕೂ ಹೆಚ್ಚಾಗಿ ಸೈನಿಕರೇನೊ ಎಂಬAತೆ ಶಿಸ್ತಾಗಿ ದೃಢನಿರ್ಧಾರದಿಂದ ದಲಿತ ಸಮುದಾಯ ಆ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಆ ಸಮಾವೇಶ ಮರ‍್ನಾಲ್ಕು ದಿನಗಳ ಕಾಲ ಜರುಗುತ್ತದೆ. ಇಲ್ಲೇ, ಈ ಸಮಾವೇಶದಲ್ಲೆ ಮನುಸ್ಮೃತಿಯ ಶವ ಸಂಸ್ಕಾರದ ವಿಧಿಗಳನ್ನು ಅಸ್ಪೃಶ್ಯ ವರ್ಗದ ಸಂತರು ಮತ್ತು ಸನ್ಯಾಸಿಗಳು ನಡೆಸಿಕೊಡುತ್ತಾರೆ. ಇದಾದ ಮೇಲೆ ಮನುಸ್ಮೃತಿಯ ಅಮಾನವೀಯ ಭಾಗಗಳನ್ನು ಸುಡಲಾಗುತ್ತದೆ. “ಉದ್ದೇಶಿತ ಸತ್ಯಾಗ್ರಹವು ಚಾವ್‌ದಾರ್ ಕೆರೆಯ ಬಳಿ ನಡೆಯದೇ ಇದ್ದರೂ, ಸಮ್ಮೇಳನವು ಮನುಸ್ಮೃತಿಯನ್ನು ಸುಡುವುದರಲ್ಲಿ ಮತ್ತು ಆ ಮೂಲಕ ಸಾಂಕೇತಿಕವಾಗಿ ಜಾತಿವ್ಯವಸ್ಥೆಯ ಸೈದ್ಧಾಂತಿಕ ಮೂಲವನ್ನೇ ನಿರಾಕರಿಸುವುದರಲ್ಲಿ ಯಶಸ್ವಿಯಾಯಿತು”. ಆ ಅಂದು ಮನುಸ್ಮೃತಿಯನ್ನು ಸುಟ್ಟಬೆಂಕಿ ಈಗಲೂ ಸುಡುತ್ತಾ ಭಾರತದ ಉದ್ದಗಲಕ್ಕೂ ಉರಿಯುತ್ತಿದೆ.”

ಇದನ್ನು ಓದಿ :“ಮಹಾಡ್ ನಿಂದ ದಲಿತ ಚಳುವಳಿ ಏನು ಕಲಿಯಬಹುದು?” : ಸಂವಾದ

ಮನುಸ್ಮೃತಿ ದಹನ ನಡೆದ ಮಹಾಡ್ ಸತ್ಯಾಗ್ರಹ ಸಮ್ಮೇಳನದ ಪ್ರಧಾನ ಸಂಘಟಕರಾಗಿದ್ದ ಆಮೇಲೆ ಕಮ್ಯುನಿಸ್ಟ್ ಪಕ್ಷದ ಮತ್ತು ಸಿಪಿಐ(ಎಂ)ನ ಹಿರಿಯ ನಾಯಕರಾಗಿ ಬೆಳೆದ ಕಾಮ್ರೆಡ್ ಆರ್.ಬಿ. ಮೋರೆ ಅವರು ಮನುಸ್ಮೃತಿ ದಹನವನ್ನು ನೆನಪಿಸಿಕೊಂಡದ್ದು ಹೀಗೆ :

“ಕೆಲವರು, ಸತ್ಯಾಗ್ರಹವನ್ನು ಮಾಡಬೇಕು, ಆದರೆ ಬಾಬಾಸಾಹೇಬ್‌ರು ಅದರಲ್ಲಿ ಭಾಗವಹಿಸಬಾರದು ಎಂದು ಸಲಹೆ ನೀಡಿದರು. ಹೆಚ್ಚಿನವರು ಸತ್ಯಾಗ್ರಹದ ಪರವಾಗಿಯೇ ಇದ್ದರು. ಬಾಬಾಸಾಹೇಬ್ ಮೌನವಾಗಿ ಎಲ್ಲರ ಅಭಿಪ್ರಾಯಗಳನ್ನು ಜಾಗರೂಕತೆಯಿಂದ ಆಲಿಸುತ್ತಿದ್ದರು. ಕೊನೆಯಲ್ಲಿ, ಅವರೆಂದರು, “ಸತ್ಯಾಗ್ರಹವನ್ನು ಮಾಡಿ ಜೈಲಿಗೆ ಹೋಗಲು 1000 ಜನ ಸಿದ್ಧವಾಗಿದ್ದರೆ ನಾವು ಸತ್ಯಾಗ್ರಹ ಮಾಡೋಣ.” ಈ ನಿರ್ಧಾರವನ್ನು ತೆಗೆದುಕೊಳ್ಳುವ ಹೊತ್ತಿಗೆ ರಾತ್ರಿ 12 ಆಗಿತ್ತು. ಸತ್ಯಾಗ್ರಹಿಗಳು ತೆಗೆದುಕೊಳ್ಳಬೇಕಾಗಿದ್ದ ಶಪಥದ ಕರಡನ್ನು ತಯಾರಿಸಲಾಯಿತು. ಕರಡಿನ ಮುಖ್ಯವಾದ ಭಾಗದ ಒಕ್ಕಣೆ ಹೀಗಿತ್ತು: “ನಾನು ಜೈಲಿಗೆ ಹೋಗಲು, ಹೋರಾಡಲು, ಸತ್ಯಾಗ್ರಹವನ್ನು ಮಾಡುತ್ತಾ ಮಡಿಯಲೂ ಸಿದ್ಧನಿದ್ದೇನೆ”. ಧರ್ಮಶಾಲಾದ ಕಛೇರಿಯಲ್ಲಿ ಇದರ ಹಲವಾರು ಪ್ರತಿಗಳನ್ನು ತಯಾರಿಸಲಾಯಿತು, ಶಿಕ್ಷಿತ ಪ್ರತಿನಿಧಿಗಳಲ್ಲಿ ಅದನ್ನು ಹಂಚಿ, ಸತ್ಯಾಗ್ರಹಿಗಳಿಗೆ ಓದಿ ಹೇಳಿ ಅವರ ಸಮ್ಮತಿಗಾಗಿ ಹೆಬ್ಬೆಟ್ಟಿನ ಗುರುತನ್ನು ಪಡೆಯಲು ಹೇಳಲಾಯಿತು. ಬೆಳಗಿನ ಜಾವ 4 ಗಂಟೆಗೆ 3,500 ಜನ ತಮ್ಮ ಸಮ್ಮತಿಯನ್ನು ದಾಖಲಿಸಿದ್ದರು.

ಇದಲ್ಲದೇ ಇನ್ನೂ ಹೆಚ್ಚಿನ ಜನ ಮುಂದೆ ಬರುತ್ತಲಿದ್ದರು. ಆದ್ದರಿಂದ ಸಹಿಯನ್ನು ಸಂಗ್ರಹಿಸುವ ಕೆಲಸವನ್ನು ನಿಲ್ಲಿಸಲಾಯಿತು. ಬೆಳಿಗ್ಗೆ 4.30ರ ಹೊತ್ತಿಗೆ ಸತ್ಯಾಗ್ರಹಿಗಳು ಸಹಿ ಹಾಕಿದ್ದ ಕಾಗದಗಳ ಕಟ್ಟುಗಳನ್ನು ಬಾಬಾಸಾಹೇಬ್‌ರ ಸಮ್ಮುಖದಲ್ಲಿ ಇಡಲಾಯಿತು. ಅಷ್ಟು ಹೊತ್ತಿಗೆ ಕ್ಯಾಂಪಿನಲ್ಲಿದ್ದ ಇತರರ ಹಾಗೆಯೇ ಅವರು ಎದ್ದು ಬಹಳ ಹೊತ್ತಾಗಿತ್ತು. ಬೆಳಿಗ್ಗೆ 7 ಗಂಟೆಗೆ ಅವರು ಕಲೆಕ್ಟರ್‌ರಿಗೆ ಒಂದು ಪತ್ರವನ್ನು ತಲುಪಿಸಲು ಹೇಳಿದರು. ನಾನು ಆ ಪತ್ರವನ್ನು ತೆಗೆದುಕೊಂಡು ಹೋಗುತ್ತಿರುವಾಗ ಡಾಕ್ ಬಂಗಲೆಯ ಹಾದಿಯಲ್ಲಿ ಒಬ್ಬ ಮನುಷ್ಯ ಜೀವಿಯನ್ನೂ ಕಾಣಲಿಲ್ಲ. ಇಡೀ ಮಾರ್ಕೆಟ್ಟು ನಿರ್ಜನವಾಗಿತ್ತು. ನಾನು ಪತ್ರವನ್ನು ಕಲೆಕ್ಟರ್‌ಅವರ ಕೈಗೊಪ್ಪಿಸಿದೆ, ಅವರ ಅದರ ಮೇಲೆ ಕಣ್ಣಾಡಿಸಿದವರೇ ತಾವು ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ಆಗಮಿಸುವುದಾಗಿ ನನ್ನ ಮೂಲಕ ಮೌಖಿಕ ಸೂಚನೆ ನೀಡಿ ನನ್ನನ್ನು ಕಳಿಸಿಕೊಟ್ಟರು. ನಾನು ಬಂದು ಅದನ್ನು ಬಾಬಾಸಾಹೇಬ್‌ರಿಗೆ ತಿಳಿಸಿದೆ. ಬಾಬಾಸಾಹೇಬ್‌ರ ಜೊತೆ ಸ್ನೇಹದಿಂದ ಇದ್ದ ಬಾಪು ಸಹಸ್ರಬುದ್ಧೆ, ತಮಾಷೆಯಾಗಿ ಹೇಳಿದರು, “ನಿನ್ನನ್ನು ಬಂಧಿಸದೇ ಹಿಂದಕ್ಕೆ ಹೇಗೆ ಕಳಿಸಿದರು?” ಅದಕ್ಕೆ ನಾನು ಏನೂ ಹೇಳಲಿಲ್ಲ. ಆ ಹೊತ್ತಿನಲ್ಲಿ ಬಾಬಾಸಾಹೇಬ್ ಸುತ್ತ ಕೆಲವರಿದ್ದರು. ಉಳಿದವರು ಸಭಾಂಗಣಕ್ಕೆ ಹೊರಟು ಹೋಗಿದ್ದರು. ಆ ದಿನದ ಗೋಷ್ಠಿ ಬೆಳಗಿನ 9 ಗಂಟೆಗೆ, ಮನುಸ್ಮೃತಿ ಪ್ರತಿಯನ್ನು ಸುಡುವುದರೊಂದಿಗೆ ಆರಂಭವಾಯಿತು. ಪವಿತ್ರ ಚಿತೆಗಾಗಿ ಒಂದು ವಿಶೇಷ ಸ್ಥಳವನ್ನು ಪೆಂಡಾಲ್ ಹತ್ತಿರದಲ್ಲಿ ನಿರ್ಮಿಸಲಾಗಿತ್ತು. ಹೋಮಹವನಕ್ಕೆ ಬೇಕಾದ ಎಲ್ಲಾ ಸಾಮಗ್ರಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಬಾಬಾಸಾಹೇಬ್ ಬೆಂಕಿಯ ಎದುರಿಗೆ ನಿಂತಿದ್ದರು ಮತ್ತು ಬಾಪು ಸಹಸ್ರಬುದ್ದೆ ಮನುಸ್ಮೃತಿಯ ಆಕ್ಷೇಪಾರ್ಹ ಭಾಗಗಳ ಹಾಳೆಗಳನ್ನು ಬಾಬಾಸಾಹೇಬ್‌ರ ಕೈಗಳಿಂದ ತೆಗೆದುಕೊಂಡು, ಅದನ್ನೊಮ್ಮೆ ಓದಿ ಬೆಂಕಿಗೆ ಹಾಕುತ್ತಿದ್ದರು. ಈ ಕಾರ್ಯಕ್ರಮ ನಡೆಯುತ್ತಿರುವಾಗ ಜನರಲ್ಲಿ ಉತ್ಸಾಹ, ಹುಮ್ಮಸ್ಸು ತುಂಬಿತುಳುಕುತ್ತಿತ್ತು.”

ಇದನ್ನು ಓದಿ : “ದಲಿತ-ಎಡ ಚಳುವಳಿಗಳ ಐಕ್ಯತೆಗೆ ‘ಮಹಾಡ್’ ಪಾಠಗಳು” : ಸಂವಾದ

ಮನುಸ್ಮೃತಿ ದಹನದ, ಎರಡು ಮಹಾಡ್ ಸಮ್ಮೇಳನಗಳ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ಡಾ. ಆನಂದ್ ತೆಲತುಂಬ್ಡೆ ಅವರ “Mahad : The Making of the First Dalit Revolt” ಎಂಬ ವಿಶ್ಲೇಷಣಾತ್ಮಕ ಪುಸ್ತಕ ಹಾಗೂ ಕ್ರಿಯಾ ಮಾಧ್ಯಮ ಪ್ರಕಟಿಸಿದ ಅದರ ಕನ್ನಡ ಅನುವಾದದ ‘ಮಹಾಡ್ ಕೆರೆ ಸತ್ಯಾಗ್ರಹ – ದಲಿತ ಚಳುವಳಿಗಳ ಒರೆಗಲ್ಲು’  ಮತ್ತು ‘ಮಹಾಡ್ – ಮೊದಲ ದಲಿತ ಬಂಡಾಯ’- ಎಂಬ ಎರಡು ಪುಸ್ತಕಗಳಲ್ಲಿ ಪಡೆಯಬಹುದು.

ಚಾರಿತ್ರಿಕ ಮಹಾಡ್ ಚಳುವಳಿಯ ಮಹಾಕಥನದ ಎರಡು ಪುಸ್ತಕಗಳು ಬಿಡುಗಡೆ ಗೊಂಡವು

 

Donate Janashakthi Media

Leave a Reply

Your email address will not be published. Required fields are marked *