ಬೆಳಗಾವಿ: ಇದೇ ತಿಂಗಳು 13ರಿಂದ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅಧಿವೇಶನಕ್ಕೆ ಪೂರ್ವಭಾವಿಯಾಗ ಆಗಿರುವ ಸಿದ್ಧತೆಗಳ ಬಗ್ಗೆ ಈಗಾಗಲೇ ಸಭಾಧ್ಯಕ್ಷರು ವೀಕ್ಷಿಸಿದ್ದಾರೆ. ಜಿಲ್ಲಾಡಳಿತವು ಕೈಗೊಳ್ಳಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿವೆ. ಕೋವಿಡ್ ಮಾರ್ಗಸೂಚಿಯಂತೆಯೇ ಅಧಿವೇಶನ ನಡೆಸುತ್ತೇವೆ ಎಂದು ಬೆಳಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.
ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿ ಸಂಭವಿಸಿದ್ದವು. ನಿನ್ನೆಯವರೆಗೆ 420 ಕೋಟಿ ರೂ. ನೆರೆ ಪರಿಹಾರ ಕೊಟ್ಟಿದ್ದೇವೆ. ಬೆಳಗಾವಿ ಭಾಗದಲ್ಲಿ ದ್ರಾಕ್ಷಿ, ತರಕಾರಿ ಬೆಳೆ ಹಾನಿಯಾಗಿದೆ. ಅವುಗಳಿಗೂ ಪರಿಹಾರ ಒದಗಿಸಲು ತೀರ್ಮಾನ ಮಾಡಿದ್ದೇವೆ. ವಸತಿ ರಹಿತರಿಗೆ ವಿಶೇಷ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.
ಚುನಾವಣೆಗಳು ಹತ್ತಿರ ಬಂದಾಗ ಮಾತ್ರ ಸಿದ್ದರಾಮಯ್ಯ ಅವರಿಗೆ ಗ್ರಾಮ ಪಂಚಾಯತ್ಗಳ ಬಗ್ಗೆ ಕಳಕಳಿ ವ್ಯಕ್ತವಾಗುತ್ತದೆ. ಈ ಹಿಂದೆ ಚುನಾವಣೆ ಸಮೀಪಿಸಿದಾಗ ಮನೆಗಳನ್ನು ಹಂಚುವುದಾಗಿ ಘೋಷಿಸಿ ಹಣ ಬಿಡುಗಡೆ ಮಾಡಲಿಲ್ಲ. ಇದನ್ನು ನಾನು ಹೇಳಿಲ್ಲ ದಾಖಲೆಗಳು ಹೇಳುತ್ತವೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೂಡ ಹೇಳಿದ್ದಾರೆ. ಕೃಷಿ ಯೋಜನೆಗಳು, ಜಲಜೀವನ್ ಮಿಷನ್, ಮಾನವ ದಿನಗಳನ್ನು ಹೆಚ್ಚಿಸಿದ್ದು ಮೋದಿ ಸರ್ಕಾರ. ನಮ್ಮ ಸರ್ಕಾರ ಬಂದ ಮೇಲೆ ವಿದ್ಯಾನಿಧಿ ಯೋಜನೆ ಮನೆ ಬಾಗಿಲಿಗೆ ಸರ್ಕಾರ ತರುವ ಕೆಲಸ ಮಾಡುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.