ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ; ಮೃತರ ಸಂಖ್ಯೆ 74ಕ್ಕೆ ಏರಿಕೆ

ಶಿಮ್ಲಾ: ಮಳೆಯಿಂದ ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟವರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಶಿಮ್ಲಾದಲ್ಲಿನ  ಶಿವ ದೇವಾಲಯವೊಂದರ ಅವಶೇಷಗಳಿಂದ ಮತ್ತೊಂದು ದೇಹವನ್ನು ಹೊರತೆಗೆಯಲಾಗಿದ್ದು, ಚಂಬಾ ಜಿಲ್ಲೆಯಲ್ಲಿ ಮತ್ತಿಬ್ಬರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಶಿಮ್ಲಾದ ಸಮ್ಮರ್ ಹಿಲ್ ನಲ್ಲಿರುವ ಶಿವ ದೇವಾಲಯ, ಫಾಗ್ಲಿ ಮತ್ತು ಕೃಷ್ಣನಗರದಲ್ಲಿ ಸಂಭವಿಸಿದ ಮೂರು ಪ್ರಮುಖ ಭೂ ಕುಸಿತಗಳಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಎಂಟು ಜನರು ಇನ್ನೂ ದೇವಾಲಯದ ಅವಶೇಷಗಳಲ್ಲಿ ಸಿಲುಕಿರುವ ಸಾಧ್ಯತೆಯಿದೆ.

ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ ಭೀಕರ ಮಳೆ:ಕೆಲವುಕಡೆ ಭೂಕುಸಿತ ರಾಷ್ಟ್ರೀಯ ಹೆದ್ದಾರಿ ಬಂದ್‌

ಮುಂಗಾರು ಆರಂಭವಾದ 55 ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ 113 ಕಡೆ ಭೂಕುಸಿತು ಸಂಭವಿಸಿದ್ದು, ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) 2,491 ಕೋಟಿ ರೂ. ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) 1,000 ಕೋಟಿ ರೂ. ನಷ್ಟವಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬುಧವಾರ ಸಮ್ಮರ್ ಹಿಲ್ ಭೂಕುಸಿತ ಸ್ಥಳದಲ್ಲಿ  ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಪಿ.ಎಲ್‌.ಶರ್ಮಾ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಗಾಂಧಿ ತಿಳಿಸಿದ್ದಾರೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಚಂಬಾ ಜಿಲ್ಲೆಯಲ್ಲಿ ಎರಡು ಮಳೆ ಸಂಬಂಧಿತ ಸಾವುಗಳು ವರದಿಯಾಗಿದ್ದು, ಒಬ್ಬ ವ್ಯಕ್ತಿಯು ಎತ್ತರದಿಂದ ಬಿದ್ದು ಮತ್ತೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಕಳೆದ ನಾಲ್ಕು ದಿನಗಳ ಅವಧಿಯಲ್ಲಿ 74 ಮಂದಿ ಸಾವನ್ನಪ್ಪಿದ್ದಾರೆ.  ಭಾನುವಾರದಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ದಾಖಲಾಗಿದೆ. ಮಂಗಳವಾರದ ನಂತರ ಮಳೆ ಕಡಿಮೆಯಾಗಿದೆ. ಗುರುವಾರ ಕೆಲವೆಡೆ ತುಂತುರು ಮಳೆಯಾಗಿದೆ.

ಹಿಮಾಚಲ ಪ್ರದೇಶದಲ್ಲಿ ಜೂನ್ 24 ರಂದು ಮಾನ್ಸೂನ್ ಪ್ರಾರಂಭವಾದಾಗಿನಿಂದ ಮಳೆ ಸಂಬಂಧಿತ ಘಟನೆಗಳಲ್ಲಿ 217 ಜನರು ಸಾವನ್ನಪ್ಪಿದ್ದಾರೆ. ಶಿಮ್ಲಾದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೆ ಸಮ್ಮರ್ ಹಿಲ್‌ನಿಂದ 14, ಫಾಗ್ಲಿಯಿಂದ ಐದು ಮತ್ತು ಕೃಷ್ಣನಗರದಿಂದ ಎರಡು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಗಾಂಧಿ ತಿಳಿಸಿದ್ದಾರೆ.ಕಂಗ್ರಾ ಜಿಲ್ಲೆಯ ಫತೇಪುರ್ ಮತ್ತು ಇಂದೋರಾದ ಪಾಂಗ್ ಡ್ಯಾಮ್‌ನ ಪ್ರವಾಹ ಪೀಡಿತ ಪ್ರದೇಶದಿಂದ ಭಾರತೀಯ ಸೇನೆ, ವಾಯುಪಡೆ ಮತ್ತು ಇತರ ರಕ್ಷಣಾ ಸಿಬ್ಬಂದಿ 309 ಜನರನ್ನು ಸ್ಥಳಾಂತರಿಸಿದ್ದಾರೆ.ಕಳೆದ ಮೂರು ದಿನಗಳಲ್ಲಿ ಈ ಪ್ರದೇಶಗಳಿಂದ 2074 ಜನರನ್ನು ಸ್ಥಳಾಂತರಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *