ಮಂಗಳೂರು : “ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ನೋಡುವುದಕ್ಕೂ ಮೊದಲೇ ನಾನು ನೋಡಿದ್ದೇನೆ. ಅವರು ತಡವಾಗಿ ರಾಜಕೀಯಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನ ಬಜಪೆ ವಿಮಾನ ನಿಲ್ದಾಣ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಚನ್ನಪಟ್ಟಣಕ್ಕೆ ನೀವು ಏನೂ ಮಾಡಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಚನ್ನಪಟ್ಟಣಕ್ಕೆ ನಾನು ಏನು ಮಾಡಿದ್ದೇನೆ, ಏನು ಮಾಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿಯವರಿಗೇನು ಗೊತ್ತು? ನಾನು 1985 ರಲ್ಲೇ ಅವರ ತಂದೆ ವಿರುದ್ಧ ಚುನಾವಣೆಗೆ ನಿಂತವನು. ಕುಮಾರಸ್ವಾಮಿ ಅವರು 1995 ರ ಬಳಿಕ ಲೋಕಸಭಾ ಚುನಾವಣೆಗೆ ನಿಂತವರು. ದೊಡ್ಡವರು ಅಧಿಕಾರ ಅನುಭವಿಸಿದರೂ ಚನ್ನಪಟ್ಟಣದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಲ್ಲಿನ ಜನರಿಗೆ ಅಳಿಲು ಸೇವೆ ಮಾಡೋಣ. ಹಿಂದೆ ಮಂತ್ರಿಯಾಗಿದ್ದಾಗ ಸೇವೆ ಮಾಡಿದ್ದೇನೆ. ಈಗ ಉತ್ತಮ ಸಮಯ ಒದಗಿ ಬಂದಿದೆ. ಸಣ್ಣ ಸಹಾಯ ಮಾಡೋಣ ಎಂದು ಕಾರ್ಯಪ್ರವೃತ್ತನಾಗಿದ್ದೇನೆ’ ಎಂದು ಹೇಳಿದರು.
ಇದನ್ನು ಓದಿ : ಅಶ್ಲೀಲ ಪೆನ್‌ಡ್ರೈವ್ ಹಂಚಿಕೆ – ಬಿಜೆಪಿಯ ಪ್ರೀತಂಗೌಡ ವಿರುದ್ಧ ಎಫ್‌ಐಆರ್ ದಾಖಲು
‘ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ತಮ್ಮ ಡಿ.ಕೆ. ಸುರೇಶ್ ಗೆ ಆಸಕ್ತಿಯಿಲ್ಲ. ಜನರು ಸುರೇಶ್ ಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಆದರೆ ಅವರಿಗೆ ಪಕ್ಷದ ಕೆಲಸ ಮಾಡಬೇಕೆಂಬ ಆಸೆಯಿದೆ. ನಮ್ಮನ್ನು ನಂಬಿ ಚನ್ನಪಟ್ಟಣದ ಜನ 85 ಸಾವಿರ ಮತಕೊಟ್ಟಿದ್ದಾರೆ. ನಮ್ಮನ್ನು ನಂಬಿದ ಜನರ ಕೈ ಬಿಡುವುದಕ್ಕೆ ಆಗುವುದಿಲ್ಲ. ದೇವರಂತ ಜನ ರಾಜ್ಯದಲ್ಲಿ ನಮಗೆ 136 ಸ್ಥಾನ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ಅದನ್ನು ಜನರ ಅಭಿವೃದ್ಧಿಗೆ ವಿನಿಯೋಗಿಸಬೇಕಿದೆ” ಎಂದರು.
ಹೆಚ್ಚುವರಿ ಡಿಸಿಎಂ ಸ್ಥಾನಗಳ ಬೇಡಿಕೆ ಬಗ್ಗೆ ಉತ್ತರಿಸಿದ ಅವರು, ‘ನೀವು ದಿನವೂ ಈ ಬಗ್ಗೆ ಸುದ್ದಿ ಮಾಡುತ್ತಿದ್ದೀರಿ. ಇದರಿಂದ ಖುಷಿ ಆಗುವವರಿಗೆ ಆಗಲಿ. ಖುಷಿ ಪಡುವವರಿಗೆ ಬೇಡ ಎಂದು ಹೇಳಲು ಆಗುತ್ತದೆಯೇ? ಯಾರು ಏನು ಬೇಕಾದರೂ ಬೇಡಿಕೆ ಇಡಲಿ. ಪಕ್ಷವು ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತದೆ’ “ನಮ್ಮ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಅಥವಾ ಈ ಬಗ್ಗೆ ಮುಖ್ಯಮಂತ್ರಿಗಳನ್ನೇ ಕೇಳಬೇಕು ಎಂದು ಡಿಕೆಶಿ ಸೂಚ್ಯವಾಗಿ ಹೇಳಿದರು.
ಇದನ್ನು ನೋಡಿ : ಅಂಗನವಾಡಿಗಳಲ್ಲಿ ಎಲ್‌ಕೆಜಿ- ಯುಕೆಜಿ ಆರಂಭಿಸಿ – ಅಂಗನವಾಡಿ ನೌಕರರ ಬೃಹತ್ ಪ್ರತಿಭಟನೆ Janashakthi Media