ಅಧಿಕಾರಿಗಳಿಂದ 40% ಕಮಿಷನ್‌ ಬೇಡಿಕೆ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗುತ್ತಿಗೆದಾರ

ಹುಬ್ಬಳ್ಳಿ: ಚಿಕ್ಕಮಗಳೂರು ಜಿಲ್ಲೆ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಗುತ್ತಿಗೆದಾರನೊಬ್ಬ ಕೋವಿಡ್ ಪರಿಕರಗಳ ಸರಬರಾಜು ಮಾಡಿದ್ದರು. ಕಳೆದ ಎರಡು ವರ್ಷ ಕಳೆದರೂ ಬಿಲ್‌ ಮೊತ್ತ ಪಾವತಿಯಾಗಿಲ್ಲ. ಬಿಲ್ ಪಾವತಿ ಮಾಡಲು ಕಾರ್ಯ ನಿರ್ವಹಣಾಧಿಕಾರಿ ಲಂಚಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇಸತ್ತ ಗುತ್ತಿಗೆದಾರ ಬಸವರಾಜ್ ಎಂಬವರು ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

ಬಸವರಾಜು ಮೂಡಗೆರಿ ತಾಲೂಕಿಗೆ 27 ಲಕ್ಷ ರೂ., ಕಡೂರು ತಾಲೂಕಿಗೆ 85 ಲಕ್ಷ ರೂಪಾಯಿ ಮೌಲ್ಯದ ಪರಿಕರಗಳನ್ನು ಪೂರೈಕೆ ಮಾಡಿದ್ದಾರೆ. 2020-21ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಪತ್ರದ ಅನುಸಾರ ಪರಿಕರ ಪೂರೈಕೆ ಮಾಡಲಾಗಿದೆ. ಆದರೆ, ಬಿಲ್ ಪಾವತಿ ಮಾಡಿಲ್ಲ.

ಶಾಸಕರ ಹೆಸರಲ್ಲಿ ಕಡೂರು ಕಾರ್ಯ ನಿರ್ವಹಣಾಧಿಕಾರಿ ದೇವರಾಜ್ ನಾಯಕ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೇರೆ ಬೇರೆಯವರ ಹೆಸರಲ್ಲಿ ಬಿಲ್‌ನ ಒಟ್ಟು 40 ಪರ್ಸಂಟೇಜ್ ಗಿಂತ ಹೆಚ್ಚಿನ ಹಣಕ್ಕೆ ಅವರು ಬೇಡಿಕೆ ಇಟ್ಟಿದ್ದಾರೆಂದು ಬಸವರಾಜು ಆರೋಪಿಸಿದ್ದಾರೆ.

ಬಿಲ್‌ ಪಾವತಿಸಲು ಕಮಿಷನ್‌ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ಗುತ್ತಿಗೆದಾರ ಬಸವರಾಜು ದಯಾಮರಣ ಕೋರಿದ್ದಾರೆ. ರಾಷ್ಟ್ರಪತಿಗಳಿಗೆ ಎಲ್ಲಾ ದಾಖಲೆ ಮತ್ತು ಪರ್ಸಂಟೇಜ್‌ಗಾಗಿ ಬೇಡಿಕೆ ಇಟ್ಟ ಆಡಿಯೋ ರೆಕಾರ್ಡ್ ದಾಖಲೆಗಳೆಲ್ಲವನ್ನೂ ಬಸವರಾಜು ಅಂಚೆ ಮೂಲಕ ರವಾನಿಸಿದ್ದಾರೆ. ಬಸವರಾಜು ಅವರಿಗೆ ಸಾಲಗಾರರು ಹಣ ಪಾವತಿಗೆ ಪಟ್ಟು ಹಿಡಿದಿದ್ದು, ಇದರಿಂದ ಮಾನಸಿಕವಾಗಿ ನೊಂದಿರುವ ಅವರು ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರ ಹೆಸರನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಆರೋಪಿಗಳಿವೆ.

ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಬಿಲ್ ಪಾವತಿ ಮಾಡಬೇಕೆಂದು ಈಗಾಗಲೇ 4 ಬಾರಿ ಸೂಚನೆಗಳು ಬಂದಿದ್ದರೂ ಅಧಿಕಾರಿಗಳು ಮಾತ್ರ ಬಿಲ್‌ ಪಾವತಿ ಮಾಡುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಾಲಯದಿಂದ ಆದೇಶ ಬಂದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದರೂ ಬಿಲ್ ಬಿಡುಗಡೆ ಮಾಡಿಲ್ಲ ಎಂದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *