11 ಮಂದಿ ಮಕ್ಕಳಿದ್ರೂ ಊಟ ಹಾಕುವವರಿಲ್ಲ- ದಯಾಮರಣಕ್ಕೆ ಮನವಿ ಸಲ್ಲಿಸಿದ ವೃದ್ಧೆ

ಹಾವೇರಿ: ಆ ಹೆತ್ತಮ್ಮಳಿಗೆ 11 ಜನ ಮಕ್ಕಳು, ಒಂದಿಷ್ಟು ಮೊಮ್ಮಕ್ಕಳೂ ಇರೋ ತುಂಬು ಸಂಸಾರ. ಹಣ್ಣು ಹಣ್ಣಾಗಿರೋ ಆಕೆಗೀಗ 75 ವಯಸ್ಸು. ಆದರೆ ಅಷ್ಟೊಂದು ಮಕ್ಕಳು, ಮೊಮ್ಮಕ್ಕಳು ಇದ್ರೂ ಇಳಿ ವಯಸ್ಸಿನಲ್ಲಿರೋ ಆಕೆಯನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ಸಾಕಷ್ಟು ಆಸ್ತಿ ಇದ್ದರೂ ತುತ್ತು ಊಟಕ್ಕಾಗಿ ಪರದಾಡುತ್ತಿರುವ 11 ಮಕ್ಕಳ ತಾಯಿ ದಯಾಮರಣ  ಕೋರಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ, ಅರ್ಜಿ ಸಲ್ಲಿಸಿದ್ದಾರೆ.

ವಯೋವೃದ್ಧೆಯ ಹೆಸರು ಪುಟ್ಟವ್ವ ಕೊಟ್ಟೂರ. ಹಾವೇರಿ  ಜಿಲ್ಲೆ ರಾಣೆಬೆನ್ನೂರು ನಗರದ ರಂಗನಾಥ ನಗರದ ನಿವಾಸಿ. ಪುಟ್ಟವ್ವಳಿಗೆ 7 ಜನ ಗಂಡು ಹಾಗೂ 4 ಜನ ಹೆಣ್ಣು ಮಕ್ಕಳಿದ್ದಾರೆ. ಎಲ್ಲಾ ಮಕ್ಕಳಿಗೂ ಮದುವೆಯಾಗಿದ್ದು, ಅವರೆಲ್ಲರಿಗೂ 1-2 ಎಂಬಂತೆ ಮಕ್ಕಳಿದ್ದಾರೆ. ಪುಟ್ಟವ್ವಳ ಪತಿ ರಾಣೆಬೆನ್ನೂರು ನಗರದಲ್ಲಿ 7 ಮನೆಗಳು, ಸೈಟು ಮತ್ತು ಜಮೀನಿದೆ. ತಾಲೂಕಿನ ಹುಲ್ಲತ್ತಿ ಗ್ರಾಮದ ಹದ್ದಿನಲ್ಲಿರೋ 28 ಎಕರೆ ಜಮೀನು ವ್ಯಾಜ್ಯದಲ್ಲಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆಯಂತೆ.

ಪುಟ್ಟವ್ವಳ ಪತಿ ಹನುಮಂತಪ್ಪ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಆದರೆ ಈಗಲೂ ಮನೆಗಳು, ಜಮೀನು ಸೇರಿದಂತೆ ಎಲ್ಲವೂ ಪುಟ್ಟವ್ವಳ ಪತಿ ಹನುಮಂತಪ್ಪನ ಹೆಸರಿನಲ್ಲೇ ಇವೆ. ಇಷ್ಟೆಲ್ಲಾ ಇದ್ದರೂ ಇಳಿ ವಯಸ್ಸಿನಲ್ಲಿರೋ ಹೆತ್ತ ತಾಯಿಯನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ಪುಟ್ಟವ್ವಳಿಗೆ ಹಲವು ವಯೋಸಹಜ ಕಾಯಿಲೆಗಳೂ ಇವೆ. ಗಂಡು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಇದ್ದರೂ ಯಾರೂ ಪುಟ್ಟವ್ವಳಿಗೆ ಒಂದು ಹೊತ್ತಿನ ಊಟ ಹಾಕುತ್ತಿಲ್ಲ. ಆರೋಗ್ಯ ಸಮಸ್ಯೆಯಾದಾಗ ಆಸ್ಪತ್ರೆಗೂ ಕರೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ನನಗೆ ಈ ಜೀವನ ಸಾಕಾಗಿದೆ. ದಯಾಮರಣ ಕೊಡಿ ಅಂತ ವೃದ್ಧೆ ಪುಟ್ಟವ್ವ ದಯಾಮರಣದ ಪತ್ರ ಹಿಡಿದುಕೊಂಡು ಜಿಲ್ಲಾಡಳಿತ ಭವನಕ್ಕೆ ಬಂದಿದ್ದಾಳೆ.

ಇದನ್ನೂ ಓದಿ :  ಸಾರ್ಥಕತೆ ಮೆರೆದ ವಿದ್ಯಾರ್ಥಿನಿ ರಕ್ಷಿತಾ – ಅಂಗಾಂಗ ದಾನದಿಂದ 9 ಜನರಿಗೆ ಜೀವದಾನ!

ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದಾರೆ. 7 ಜನ ಗಂಡು ಮಕ್ಕಳ ಪೈಕಿ ಕಿರಿಯ ಮಗ ಗೋವಿಂದರಾಜ ಮಾತ್ರ ಪುಟ್ಟವ್ವಳಿಗೆ ಕೆಲವು ವರ್ಷಗಳ ಕಾಲ ನೋಡಿಕೊಂಡಿದ್ದರು. ಆದರೆ ಅವರ ಆರ್ಥಿಕ ಪರಿಸ್ಥಿತಿ ಪ್ರಸ್ತುತ ಸರಿ ಇಲ್ಲ. ಪತಿಯ ಹೆಸರಿನಲ್ಲಿರೋ ಆಸ್ತಿಗಳಲ್ಲಿ ಅಲ್ಪಸ್ವಲ್ಪ ಮಾರಾಟ ಮಾಡಿ ಜೀವನ ಸಾಗಿಸಬೇಕು ಎಂದರೆ ಗಂಡು ಮಕ್ಕಳು ಅದಕ್ಕೂ ಬಿಡುತ್ತಿಲ್ಲ. ಎರಡು ಹೊತ್ತಿನ ಊಟವನ್ನೂ ಹಾಕುತ್ತಿಲ್ಲ. ಹೀಗಾಗಿ 11 ಜನ ಮಕ್ಕಳಿದ್ರೂ ಅಕ್ಕಪಕ್ಕದ ಮನೆಯವರು, ಅವರಿವರು ಕೊಟ್ಟ ಊಟ ಮಾಡಿ ಬದುಕಬೇಕಾಗಿದೆ ಎಂದು ಪುಟ್ಟವ್ವ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಮಕ್ಕಳು ನೋಡಿಕೊಳ್ಳದೇ ಇರೋದನ್ನು ಕಂಡು ಜೀವನವೇ ಸಾಕು ಸಾಕು ಅನ್ನಿಸಿದೆ. ನನಗೆ ದಯಾಮರಣ ಕೊಡಿಸಿ ಅಂತ ವೃದ್ಧ ತಾಯಿ ಪುಟ್ಟವ್ವ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಬಳಿ ತನ್ನ ಅಳಲು ತೋಡಿಕೊಂಡಿದ್ದಾಳೆ. ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಬರೆದಿರೋ ಪತ್ರ ಹಿಡಿದು ಬಂದಿರೋ ವೃದ್ಧೆಯನ್ನು ಭೇಟಿಯಾಗಿ ಹಿರಿಯ ನಾಗಕರಿಕರ ಕಲ್ಯಾಣ ಇಲಾಖೆ ಅಧಿಕಾರಿ ಆಶು ನದಾಫ ಸಮಸ್ಯೆ ಆಲಿಸಿದರು. ಪುಟ್ಟವ್ವಳಿಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು. ಉಳಿದಂತೆ ಪುಟ್ಟವ್ವಳಿಗೆ ಯಾವುದೇ ಸಮಸ್ಯೆ ಆಗದಂತೆ ಉಳಿದುಕೊಳ್ಳಲು ವೃದ್ಧಾಶ್ರಮದಲ್ಲಿ ವ್ಯವಸ್ಥೆ ಕಲ್ಪಿಸೋದಾಗಿ ಹೇಳಿದ್ದಾರೆ.

ಪುಟ್ಟವ್ವ ದಯಾಮರಣ ಕೋರಿ ಪತ್ರ ಹಿಡಿದುಕೊಂಡು ಬಂದಿದ್ದು ಗಮನಿಸಿ ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಅಧಿಕಾರಿ ವೃದ್ಧೆಗೆ ಧೈರ್ಯ ತುಂಬಿದ್ದಾರೆ. ನಂತರ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಪುಟ್ಟವ್ವ ಮಕ್ಕಳಿಂದ ಆಗಿರೋ ಸಮಸ್ಯೆ ವಿವರಿಸಿದ್ದಾಳೆ. ಆದರೆ 11 ಜನ ಮಕ್ಕಳಿದ್ರೂ ಇಳಿ ವಯಸ್ಸಿನಲ್ಲಿರೋ ಆಕೆಯನ್ನು ನೋಡಿಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.

 

Donate Janashakthi Media

Leave a Reply

Your email address will not be published. Required fields are marked *