ರಾಜ್ಯ ಬಜೆಟ್‌ ಮಂಡನೆಗೆ ಶೀಘ್ರದಲ್ಲಿಯೇ ದಿನಾಂಕ ಘೋಷಿಸಲಾಗುವುದು: ಸಿಎಂ ಸಿದ್ದರಾಮಯ್ಯ

ದಾವಣಗೆರೆ: ರಾಜ್ಯ ಬಜೆಟ್‌ ಮಂಡನೆಗೆ ಶೀಘ್ರದಲ್ಲಿಯೇ ದಿನಾಂಕ ಘೋಷಿಸಲಾಗುವುದು ಎಂದು ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಾಲ್ಮೀಕಿ ಜನಾಂಗದವರಿಗೆ ಖಾಲಿ ಇರುವ 2 ಸಚಿವ ಸ್ಥಾನ ಕೊಡಬೇಕೆಂಬ ಬೇಡಿಕೆ ಇದೆ. ನಾವು ಸಚಿವರನ್ನು ತೆಗೆದು ಹಾಕಿಲ್ಲ. ಕಾರಣಾಂತರದಿಂದ ಅವರು ರಾಜೀನಾಮೆ ಕೊಡುವ ಪರಿಸ್ಥಿತಿ ಬಂತು. ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಪರಿಗಣಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಲು ಬೇಡಿಕೆಯಿದ್ದು ಅದನ್ನು ಪರಿಶೀಲಿಸಿ ಸರ್ಕಾರ ತೀರ್ಮಾನ ಮಾಡಲಿದೆ. ಭಾರತ ಮತ್ತು ಅಮೆರಿಕ ನಡುವೆ ಆಗಿರುವ ಒಪ್ಪಂದದಿಂದ ರೈತರಿಗೆ ಅನ್ಯಾಯವಾಗುತ್ತದೆ. ಪ್ರಧಾನ ಮಂತ್ರಿಗಳು ಅಮೆರಿಕದ ಒತ್ತಡಕ್ಕೆ ಮಣಿದಿದ್ದಾರೆ ಎಂದರು.

ಇದನ್ನೂ ಓದಿ: ತೇಜಸ್ವಿ ಸೂರ್ಯ ತಮ್ಮ ಬದ್ಧತೆಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಬೇಕು: ಡಿ.ಕೆ.ಸುರೇಶ್ ಕಿಡಿ

ಮೆಟ್ರೋ ದರವನ್ನು ಕೇಂದ್ರ ಸರ್ಕಾರದಿಂದ ನೇಮಕವಾಗಿರುವ ಮೆಟ್ರೋ ಅಧ್ಯಕ್ಷರು ನಿಗದಿ ಮಾಡುತ್ತಾರೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಮೆಟ್ರೋ ದರದ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳುತ್ತಿರುವ ಡಿ.ಕೆ.ಶಿವಕುಮಾರ್‌ ಕುರಿತು ಅವರನ್ನೇ ಕೇಳಬೇಕು ಎಂದರು.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ರಾಜೀನಾಮೆ ಸತ್ಯಕ್ಕೆ ದೂರ:

ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಕಾ ಇಲಾಖೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ರಾಜೀನಾಮೆ ಸಲ್ಲಿಸಿದ್ದಾರೆ ಅನ್ನುವುದು ಸತ್ಯಕ್ಕೆ ದೂರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮಲ್ಲಿಕಾರ್ಜುನ್‌ ನನ್ನ ಹತ್ತಿರ ಬಂದೂ ಇಲ್ಲ, ರಾಜೀನಾಮೆ ಕೊಟ್ಟೂಇಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಮ್ಮನ್ನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ವದಂತಿ ಕೇಳಿ ಬಂದಿತ್ತು. ಕೆಲ ಮಾಧ್ಯಮಗಳಲ್ಲೂ ಸುದ್ದಿ ಬಿತ್ತರವಾಗಿತ್ತು. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ನೋಡಿ: ಮುಚ್ಚುವ ಅಂಚಿನಿಂದ.. ನೂರರ ಸಂಭ್ರಮದವರೆಗೆ – ಸರಕಾರಿ ಶಾಲೆಯ ಕಥೆ Janashakthi Media

Donate Janashakthi Media

Leave a Reply

Your email address will not be published. Required fields are marked *