ದಸರಾ ಮೆರವಣಿಗೆ ಭಕ್ತರ ಮೇಲೆ ಕಾರು ಹರಿದು ನಾಲ್ವರ ಸಾವು

ರಾಯ್​ಪುರ: ದಸರಾ ಮೆರವಣಿಗೆ ಮೇಲೆ ಕಾರು ಹರಿದು ನಾಲ್ವರು ಮೃತಪಟ್ಟಿರುವ ಘಟನೆ ಛತ್ತೀಸಗಡದ ಜಶ್​ಪುರ ಪಟ್ಟಣದಲ್ಲಿ ನಡೆದಿದೆ.

ದಸರಾ ಮೆರವಣಿಗೆ ಮೂರ್ತಿ ವಿಸರ್ಜನೆ ವೇಳೆ ಈ ಅವಘಡ ಸಂಭವಿಸಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆರವಣಿಗೆಯಲ್ಲಿದ್ದವರ ಮೇಲೆ ನುಗ್ಗಿದ ಕಾರನ್ನು ಬೆನ್ನಟ್ಟಿ ಹೋದ ಸ್ಥಳೀಯರು ಆಕ್ರೋಶದಿಂದ ಬೆಂಕಿ ಹಚ್ಚಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಜನರು ನೆರೆದಿದ್ದು ಕಾರು ನುಗ್ಗಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾರಿನಲ್ಲಿ ಗಾಂಜಾ ತುಂಬಿದ್ದರು, ಪೊಲೀಸರು ಹಿಡಿಯಬಹುದು ಎಂದು ಕಾರನ್ನು ವೇಗವಾಗಿ ಓಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ದುರ್ಗಾ ವಿಸರ್ಜನೆಯ ಮೆರವಣಿಗೆಯಲ್ಲಿದ್ದ ಭಕ್ತರ ಮೇಲೆ ಕಾರು ಹರಿದಿದೆ. ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದು, ಶೋಧದ ವೇಳೆ ಕಾರಿನಲ್ಲಿ ಗಾಂಜಾ ಪತ್ತೆಯಾಗಿದೆ.

 

ಯಾವುದೇ ಹಾರ್ನ್​ ಇಲ್ಲದೆ ವಾಹನ ಓಡಿಸುತ್ತಿದ್ದರು. ಹಾಗಾಗಿ ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಕಾರು ನುಗ್ಗಿದೆ. ಪರಿಣಾಮ ಈ ದುರ್ಘಟನೆ ನಡೆದಿದೆ. ಕೆಂಪು ವಸ್ತ್ರಗಳನ್ನು ತೊಟ್ಟು ಮೆರವಣಿಗೆಯ ಸಂಭ್ರಮದಲ್ಲಿದ್ದ ಭಕ್ತರಿಗೆ ಏನಾಗುತ್ತಿದೆ ಎಂಬುದು ಅರಿವಾಗುವ ಮೊದಲೇ ಅವರ ಮೇಲೆ ಮಧ್ಯಪ್ರದೇಶದ ನಂಬರ್​ ಪ್ಲೇಟ್ ಇದ್ದ ಮಹೀಂದ್ರ ಕ್ಸೈಲೊ ವಾಹನ ಹರಿದಿತ್ತು. ಮಧ್ಯಪ್ರದೇಶ ಸಾರಿಗೆ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಈ ವಾಹನದ ಮಾಲೀಕನ ಹೆಸರು ಕಾಮೇಶ್ವರ್ ಸಿಂಗ್. ಜನರ ಸಾವಿಗೆ ಕಾರಣರಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 21 ವರ್ಷದ ಬಬ್ಲು ವಿಶ್ವಕರ್ಮ ಮತ್ತು  26 ವರ್ಷದ ಶಿಶುಪಾಲ್ ಸಾಹು ಆರೋಪಿಗಳು, ಇಬ್ಬರೂ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ನಿವಾಸಿಗಳಾಗಿದ್ದು, ಛತ್ತೀಸ್‌ಗಢದ ಮೂಲಕ ಹಾದು ಹೋಗುತ್ತಿದ್ದರು

ಘಟನೆ ಕುರಿತು ಪ್ರತಿಕ್ರಿಯಿಸಿರುವ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್, ‘ಜಶ್​ಪುರ ಘಟನೆಯು ಹೃದಯವಿದ್ರಾವಕವಾಗಿದೆ. ಅಪರಾಧಿಗಳನ್ನು ತಕ್ಷಣ ಬಂಧಿಸಲಾಗಿದೆ. ತನಿಖೆ ನಡೆಸಲಾಗುತ್ತಿದ್ದು, ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದ್ದಾರೆ.

ಮೃತರಿಗೆ ತಲಾ ₹ 50 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ರಮಣ್ ಸಿಂಗ್ ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *