ಸಿಲಿಕಾನ್ ಸಿಟಿಯಲ್ಲಿವೆ 568 ದುರ್ಬಲ ಕಟ್ಟಡಗಳು!

  • ಸಿಲಿಕಾನ್ ಸಿಟಿಯಲ್ಲಿ 568 ದುರ್ಬಲ‌ಕಟ್ಟಡಗಳು
  • 5000 ಅನಧಿಕೃತ 4 ಅಂತಸ್ತಿನ ಕಟ್ಟಡಗಳಿವೆ ಸಿಲಿಕಾನ್ ಸಿಟಿಯಲ್ಲಿ
  • ಆರ್ಕಿಟೆಕ್ಟ್ ಗಳ ಸಲಹೆ ಪಡೆಯದೆ ನಿರ್ಮಾಣ ಮಾಡುತ್ತಿರುವುದು ಮನೆ ಕುಸಿತಕ್ಕೆ ಕಾರಣ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಹೊಸದಾಗಿ ಮಾಡಿದ ಸಮೀಕ್ಷೆಯ ಪ್ರಕಾರ, ನಗರದಲ್ಲಿ 568 ಕಟ್ಟಡಗಳು ದುರ್ಬಲವಾಗಿದ್ದು ಯಾವುದೇ ಸಮಯದಲ್ಲಿ ಕುಸಿಯುವ ಸಾಧ್ಯತೆಗಳಿವೆ.

ಕಳೆದ ಕೆಲ ಸಮಯಗಳಿಂದ ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಕಟ್ಟಡ ಕುಸಿಯುವುದು, ವಾಲುವುದು ಆಗುತ್ತಿದೆ. ಹಲವಾರು ಕಟ್ಟಡಗಳ ನಿವಾಸಿಗಳು, ಅವುಗಳಲ್ಲಿ ಕೆಲವು ಹೊಸದಾಗಿ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿನ ಜನರು ಕೂಡ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

ಬಿಬಿಎಂಪಿಯ ನಿರ್ಲಕ್ಷ್ಯವೇ ಕಟ್ಟಡಗಳ ಕುಸಿತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಕೊನೆಗೂ ಸಮೀಕ್ಷೆ ನಡೆಸಿ ಕಟ್ಟಡಗಳ ನೆಲಸಮಕ್ಕೆ ಮುಂದಾಗಿದೆ. ಆ ಮೂಲಕ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಬಿಬಿಎಂಪಿ ಮುಂದಾಗಿದೆ.

ಎಷ್ಟು ಕಟ್ಟಡಗಳಿವೆ : ಯಾವ ಪ್ರದೇಶದಲ್ಲಿ ಎಷ್ಟು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿವೆ?
ಬೆಂಗಳೂರು ದಕ್ಷಿಣ ವಲಯ 132
ಬೆಂಗಳೂರು ಪಶ್ಚಿಮ ವಲಯ 121
ಬೆಂಗಳೂರು ಪೂರ್ವ ವಲಯ 113
ಮಹದೇವಪುರ ವಲಯ 27
ಯಲಹಂಕ ವಲಯ 144
ಆರ್.ಆರ್. ನಗರ 11
ದಾಸರಹಳ್ಳಿ 11
ಬೊಮ್ಮನಹಳ್ಳಿ 9

ಹೀಗೆ ಒಟ್ಟು 568 ಕಟ್ಟಡಗಳು ಅಪಾಯದಂಚಿನಲ್ಲಿರುವ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದೆ.

ಶಿಥಿಲ ಕಟ್ಟಡಗಳಲ್ಲಿ ಬೀಳುವ ಕಟ್ಟಡಗಳು ಕಂಡು ಬಂದಲ್ಲಿ ಕೂಡಲೇ ಅವುಗಳನ್ನು ನೆಲಸಮ ಮಾಡಲು ಕ್ರಮಕೈಗೊಳ್ಳುತ್ತೇವೆ. ಬಿಬಿಎಂಪಿ ಕಟ್ಟಡವಾಗಲೀ ಅಥವಾ ಯಾವುದೇ ಕಟ್ಟಡವಿರಲೀ ಬೀಳುವಂತಿದ್ದರೆ ಕೂಡಲೇ ಅದನ್ನು ಖಾಲಿ ಮಾಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಲಿದ್ದಾರೆ. ನೆಲಸಮ ಮಾಡುವುದಕ್ಕೂ ಸಿದ್ಧರಿದ್ದು, ಅವಶ್ಯಕತೆಗೆ ತಕ್ಕಂತೆ ಕ್ರಮಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

5 ಸಾವಿರ ಕಟ್ಟಡ ಕಾನೂನು ಬಾಹಿರ? : ಸಿಲಿಕಾನ್ ಸಿಟಿಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು 4 ಅಂತಸ್ಥಿನ ಹೈರೇಜ್ ಬಿಲ್ಡಿಂಗ್ ಗಳಿವೆ ಎಂಬುದಾಗಿ ತಿಳಿದು ಬಂದಿದ್ದು, ಅವುಗಳ ಕುರಿತಂತೆ ಶೀಘ್ರವೇ ಬಿಬಿಎಂಪಿ ಸರ್ವೆ ಕಾರ್ಯ ನಡೆಸಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನು ಗಾಳಿಗೆ ತೂರಿ ನಿರ್ಮಾಣ ಮಾಡಿರುವ ಕಟ್ಟಡಗಳು, ನಿರ್ಮಿಸಿರುವ ವರ್ಷ, ಕಟ್ಟಡಗಳ ಆಯಸ್ಸು, ಅವುಗಳ ಗುಣಮಟ್ಟ ಇನ್ನಿತರ ಮಾಹಿತಿ ಸಂಗ್ರಹಿ ಸುವಂತೆ ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ಬಿಬಿಎಂಪಿ ಮೌಖಿಕ ಸೂಚನೆ ನೀಡಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಕಟ್ಟಡಗಳನ್ನು ಕಾನೂನು ಬಾಹಿರವಾಗಿ ಕಟ್ಟಲಾಗಿದೆ ಎನ್ನಲಾಗಿದ್ದು, ಅವುಗಳ ಬಗ್ಗೆ ಕ್ರಮಕೈಗೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆ. ಕಳೆದ ಹತ್ತು ವರ್ಷದಲ್ಲಿ ಬಿಬಿಎಂಪಿಯಿಂದ ಅಧಿಕೃತವಾಗಿ ಅನುಮತಿ ಪಡೆದ ಹೈರೇಜ್‌ ಕಟ್ಟಡಗಳ ಸಂಖ್ಯೆ ಕೇವಲ 1178 ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಇನ್ನು ಈ 5 ಸಾವಿರ ಕಟ್ಟಡಗಳಲ್ಲಿ ಸರ್ಕಾರಿ ಸ್ವಾಮ್ಯದ ಕಚೇರಿಗಳಿವೆ. ಖಾಸಗಿ ವ್ಯಕ್ತಿಗಳ ಇಂತಹ ಕಟ್ಟಡಗಳನ್ನು ನೆಲಸಮಗೊಳಿಸಿದಾಗ ಅಗತ್ಯ ಪರಿಹಾರ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ ಬಿಬಿಎಂಪಿಗೆ ಯಾವುದೇ ಮಾಹಿತಿ, ಆಸ್ತಿ ತೆರಿಗೆ ನೀಡದೆ ಮನೆ ನಿರ್ಮಾಣ ಮಾಡಿದವರಿಗೆ ಈಗ ಸಂಕಷ್ಟ ಎದುರಾಗಲಿದೆ.

ಮನೆ ಕುಸಿತಕ್ಕೆ ಕಾರಣಗಳೇನು? : ತಜ್ಞರ ಪ್ರಕಾರ, ಕುಸಿತಕ್ಕೆ ಹಲವು ಕಾರಣಗಳನ್ನು ಗುರಿತಿಸುತ್ತಿದ್ದಾರೆ. ಪ್ರಮುಖ ಕಾರಣಗಳೇನು ಎಂಬುದನ್ನು ಈ ಕೆಳಗಿನಂತೆ ನೋಡೋಣ.

1) ಕಟ್ಟಡ ನಿರ್ಮಾಣ ಮಾಡುವಾಗ ನಿಯಮವನ್ನು ಸರಿಯಾಗಿ ಪಾಲಿಸದೇ ಇರುವುದು. ಬೈ-ಲಾಗಳ ವ್ಯಾಪಕ ದುರುಪಯೋಗ, ಗೊತ್ತುಪಡಿಸಿದ ನೆಲದ ವಿಸ್ತೀರ್ಣ ಅನುಪಾತ (ಎಫ್‌ಎಆರ್) ಮತ್ತು ಅನಧಿಕೃತ ಸೇರ್ಪಡೆಗಳು ದೊಡ್ಡ ಕಟ್ಟಡಗಳ ಹಾನಿಗೆ ಕಾರಣವಾಗಿದೆ.

2) ಕಾಂಕ್ರೀಟ್ ಗಾತ್ರವು ಬಹಳ ಮುಖ್ಯವಾಗಿದೆ. ಕನಿಷ್ಠ 8 ಇಂಚುಗಳಷ್ಟು ಇರಬೇಕು ಆದರೆ ಅನೇಕ ಬಿಲ್ಡರ್‌ಗಳು ಹಣವನ್ನು ಉಳಿಸಲು, ಆರು ಇಂಚಿನ ಕಾಂಕ್ರೀಟ್ ಕಾಲಮ್ ಅನ್ನು ನಿರ್ಮಿಸುತ್ತಾರೆ, ಇದರಿಂದ ಹೊಸದಾಗಿ ನಿರ್ಮಿಸಿದ ಕಟ್ಟಡಗಳನ್ನು ಮುರಿಯಲು ಕಾರಣವಾಗುತ್ತದೆ

3) ಯೋಜನೆ ಮತ್ತು ನಿರ್ಮಾಣವನ್ನು ಪ್ರಾರಂಭಿಸುವ ಮೊದಲು ಸೈಟ್ ಪ್ರದೇಶದ ಮಣ್ಣಿನ ಬಲವನ್ನು ನಿರ್ಧರಿಸುವುದು ಬಹಳ ಮುಖ್ಯ ಎಂದು ಹೇಳುತ್ತಾರೆ. ಕಟ್ಟಡದ ಸ್ಥಳವನ್ನು ಸರಿಯಾಗಿ ನಿರೂಪಿಸಲು ಮತ್ತು ರಚನೆಯನ್ನು ಬೆಂಬಲಿಸುವ ಅಡಿಪಾಯವನ್ನು ವಿನ್ಯಾಸಗೊಳಿಸಲು, ಅಡಿಪಾಯವನ್ನು ಬೆಂಬಲಿಸುವ ಮಣ್ಣಿನ ನಿಕ್ಷೇಪಗಳ ಪ್ರಕಾರಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಆದರೆ ಕಟ್ಟಡ ಕಟ್ಟುವವರು ಇದನ್ನು ಗಮಿನಿಸುತ್ತಿಲ್ಲ.

4) ಸೈಟ್‌ನ ಮಾಲೀಕರು ನಿರ್ಮಾಣಕ್ಕೆ ಯೋಜಿಸುವ ಮೊದಲು ಮೊದಲನೆಯದಾಗಿ, ಅವರು ಅರ್ಹ ಆರ್ಕಿಟೆಕ್ಟ್ ಗಳನ್ನು ಸಂಪರ್ಕಿಸಬೇಕು. ರಚನಾ ಯೋಜನೆಯನ್ನು ಸಿದ್ಧಪಡಿಸುವ ಪ್ರಮಾಣೀಕೃತ ರಚನಾತ್ಮಕ ಎಂಜಿನಿಯರ್ ಅನ್ನು ನೇಮಿಸಿಕೊಳ್ಳಬೇಕು ಮತ್ತು ಯೋಜನೆಯ ಅಂತ್ಯದ ವೇಳೆಗೆ ರಚನಾತ್ಮಕ ಸ್ಥಿರತೆ ಪ್ರಮಾಣಪತ್ರವನ್ನು ನೀಡುವ ಸ್ಥಿತಿಯಲ್ಲಿರಬೇಕು .

ಜನಾಕ್ರೋಶದ ನಡುವೆ ಬಿಬಿಎಂಪಿ ಉತ್ತಮ‌ ನಿರ್ಧಾರವನ್ನೆ ಮಾಡಿದೆ. ಇನ್ನೂ ಎರಡು ದಿನಗಳ ಕಾಲ ವಿಪರೀತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಈಗಾಗಲೆ ಸೂಚಿಸಿದೆ. ಕುಸಿಯುವ ಹಂತದಲ್ಲಿರುವ ಮನೆಗಳಲ್ಲಿ ವಾಸವಾಗಿರುವ ಜನರನ್ನು ಕೂಡಲೆ ಬೇರೆಡೆ ಸ್ಥಳಾಂತರಿಸಬೇಕು. ಹಾಗೂ ಅವರಿಗೆ ಶಾಶ್ವತ ಪರಿಹಾರವನ್ನು ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತ ವಾಗುತ್ತಿವೆ.

Donate Janashakthi Media

Leave a Reply

Your email address will not be published. Required fields are marked *