ಬೆಂಗಳೂರು: ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆ ವಿಚಾರದ ಹಗರಣದ ಸೂತ್ರಧಾರರೂ ಎಲ್ಲರೂ ಬಿಜೆಪಿಯವರೆ ಆಗಿದ್ದಾರೆ. ತಾವೇ ದಂಧೆಯಲ್ಲಿ ಭಾಗಿಯಾಗಿ ಜನರ ಮುಂದೆ ನಾಟಕ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು ʻʻಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಶಾಸಕ ಸಹಚರರು ಹಾಗೂ ಬಿಜೆಪಿಯ ಕಾರ್ಯಕರ್ತರು ಪುಡಿರೌಡಿಗಳಂತೆ ವರ್ತನೆ ಮಾಡಿದ್ದಾರೆ. ಸಂಸದ ಹಾಗೂ ಶಾಸಕರು ವಾರ್ ರೂಂ ಮೇಲೆ ದಾಳಿ ಮಾಡಿ ಲೈವ್ ಮಾಡಿದ್ದಾರೆ. ಇದರಲ್ಲಿ ಲೈವ್ ಮಾಡುವ ಅಗತ್ಯವಾದರೂ ಏನಿತ್ತು. ಒಂದು ವೇಳೆ ಲೋಪವಾಗಿದ್ದರೆ ಅಧಿಕಾರಿಗಳನ್ನು ಕರೆದು ಲೋಪ ಸರಿಪಡಿಸಬಹುದಿತ್ತು. ಆದರೆ ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಶಾಸಕ ಸಹಚರರು ನಾನು ಸತ್ತಂತೆ ಮಾಡ್ತೀನಿ, ನೀನು ಅತ್ತಂತೆ ಮಾಡು ಎಂಬ ಡ್ರಾಮಾ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು.
ಇದನ್ನು ಓದಿ: “ನೀವು ಉಳೀತಿರೋ ಇಲ್ವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು” ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ
ಪ್ರದರ್ಶನ ಶೂರ ತೇಜಸ್ವಿ ಸೂರ್ಯ ಯಾವ ರೀತಿ ನಾಟಕ ಮಾಡಿದ್ದಾರೆಂದರೆ, ಇವರು ದಾಳಿ ಮಾಡಿದ ಮೇಲೆ ಬೆಡ್‌ಗಳು ಸಿಕ್ಕವಂತೆ, ಬೆಡ್ ಲಭ್ಯತೆ ಸೊನ್ನೆಯಾಗಿತ್ತಂತೆ ಇದ್ಯಾವ ಹೊಸ ನಾಟಕ. ಆದರೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ವಾಸ್ತವ ಸ್ಥಿತಿಯನ್ನು ಟ್ವೀಟ್ ಮಾಡಿ ತೋರಿಸಿದ್ದಾರೆ. ಅಂದರೆ ಸಂಸದರ ಉದ್ದೇಶವೇನಿತ್ತು? ಜನರಿಗೆ ಸಹಾಯ ಮಾಡುವ ಉದ್ದೇಶವೋ ಅಥವಾ ಜನರನ್ನು ದಾರಿ ತಪ್ಪಿಸುವ ಉದ್ದೇಶವೋ ಎಂದು ಪ್ರಶ್ನೆ ಮಾಡಿದರು.
ಇವರ ಪ್ರಕಾರ ವಾರ್ ರೂಂ ಬಿಜೆಪಿಯವರ ನಿಯಂತ್ರಣದಲ್ಲಿರಬೇಕು. ವಾರ್ ರೂಂನಲ್ಲಿ ಕಾರ್ಯನಿರ್ವಹಿಸುತ್ತಿರುವ 206 ಸಿಬ್ಬಂದಿಗಳ ಪೈಕಿ ಯಾರು ಅಲ್ಪಸಂಖ್ಯಾತರಿದ್ದಾರೋ ಅವರನ್ನು ಗುರಿಯಾಗಿಸಿ ಹೊರಗಟ್ಟಬೇಕು ಮತ್ತು ಬಿಜೆಪಿ ಗೂಂಡಾಗಳು ಅಲ್ಲಿ ಕೆಲಸ ಮಾಡಬೇಕು ಅವರು ಹೇಳಿದವರಿಗೆ ಬೆಡ್ ಮತ್ತು ಐಸಿಯು ನೀಡಬೇಕು ಇದು ಇವರ ನಿಜವಾದ ಉದ್ದೇಶವಾಗಿದೆ ಎಂದು ಹೇಳಿದರು.
ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಸಂಕಷ್ಟದಲ್ಲಿರುವವರ ರಕ್ಷಣೆಗೆ ಧಾವಿಸಬೇಕು. ನಮ್ಮಲಿರುವ ಶಕ್ತಿಯನ್ನು ಜನರಿಗೆ ಅರ್ಪಿಸುವ ಸಂದರ್ಭವಿದು. ಯಾಕಂದರೆ ಈಗ ಎಲ್ಲರೂ ಆರ್ಥಿಕ ಹಾಗೂ ಆರೋಗ್ಯ ಸಂಕಷ್ಟದಲ್ಲಿದ್ದಾರೆ. ಜನರ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಇಂತಹ ಕಾಲದಲ್ಲಿ ಈ ಕೀಳು ಮಟ್ಟದ ನಾಟಕ ಮಾಡಿದ ಬಿಜೆಪಿಯವರಿಗೆ ಸಮಯ ಸಿಕ್ಕಿದಾದರೂ ಹೇಗೆ? ಸಾರ್ವಜನಿಕ ಜೀವನದಲ್ಲಿರುವ ಯಾರೇ ಆದರೂ ಇಂತಹ ಕೀಳು ಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ. ಆದರೆ ತೇಜಸ್ವಿ ಸೂರ್ಯ ಆ ಮಟ್ಟಕ್ಕೂ ಇಳಿದು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿ: ಮಠ ಮಾನ್ಯಗಳಿಗೆ ನೀಡಿದ ದೇಣಿಗೆಯನ್ನು ವಾಪಸ್ ಪಡೆಯಿರಿ: ಹೆಚ್.ವಿಶ್ವನಾಥ್
ಬಿಜೆಪಿ ನಾಯಕರಿಂದ ನಡೆಯುತ್ತಿರುವ ಈ ಮಟ್ಟದ ದೌರ್ಜನ್ಯವನ್ನು ಅಧಿಕಾರಿಗಳು ಯಾರೊಂದಿಗೂ ಹೇಳಿಕೊಳ್ಳಲಾಗದೇ ಗೋಳಾಡುತ್ತಿದ್ದಾರೆ. ಕೆಲವು ಅಧಿಕಾರಿಗಳು ವೈಯಕ್ತಿಕವಾಗಿ ನನ್ನ ಬಳಿ ಅವರ ಮೇಲಿನ ದೌರ್ಜನ್ಯ ಹೇಳಿಕೊಂಡಿದ್ದಾರೆ. ಹಾಗಾಗಿ ನಾನು ಮುಖ್ಯಮಂತ್ರಿಯವರಿಗೆ ಹೇಳುವುದೇನೆಂದರೆ ಈ ಹಗರಣದಲ್ಲಿ ಭಾಗಿಯಾದ ಎಲ್ಲರ ಮೇಲೂ ಕೇಸ್ ದಾಖಲಿಸಿ ತನಿಖೆಗೆ ಆದೇಶ ನೀಡಲಿ. ಜೊತೆಗೆ ಕೊರೊನಾ ನಿಯಂತ್ರಿಸಲು ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ರಕ್ಷಣೆ ಒದಗಿಸಲಿ. ಮುಖ್ಯಮಂತ್ರಿಗಳು ದಿಟ್ಟ ಕ್ರಮ ತೆಗೆದುಕೊಳ್ಳದೆ ಹೋದರೆ ನಾಳೆಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಈಗಾಗಲೇ ಕೆಲ ಸಿಬ್ಬಂದಿಗಳನ್ನು ಉಗ್ರಗಾಮಿಗಳಂತೆ ಬಿಂಬಿಸಲಾಗಿದೆ. ಹಾಗಾಗಿ ಈ ಕೂಡಲೇ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಕ್ರಮ ತೆಗೆದುಕೊಳ್ಳುವ ವಾಗ್ದಾನ ನೀಡಬೇಕು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.
ಇದನ್ನು ಓದಿ: ಬೆಡ್ ಹಗರಣದ ಹಿಂದೆ ಯಾರಿರಬಹುದು?
ಇನ್ನು ಕೊವಿಡ್ ಪರಿಸ್ಥಿತಿ ನಿಭಾಯಿಸಲು ಎಡವಿರುವ ಸರ್ಕಾರದ ವೈಫಲ್ಯ ಮತ್ತು ಚಾಮರಾಜನಗರದ ದುರಂತ ಮರೆಮಾಚಲು ಈ ರೀತಿಯ ಹೊಸ ನಾಟಕ ಪ್ರದರ್ಶಿಸಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸುವುದಲ್ಲದೆ, ಪ್ರಚಾರಕ್ಕಾಗಿ ಈ ಕಪಟ ನಾಟಕ ರಚಿಸಿದ ಸೂತ್ರಧಾರಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.