ಕೊಪ್ಪಳ: ತಾಲೂಕಿನ ಹೊಸ್ಕೇರಾ-ಡಗ್ಗಿ ಗ್ರಾಮದಲ್ಲಿ ದಲಿತರಿಗೆ ಶವ ಸಂಸ್ಕಾರಕ್ಕೆ ಸರಕಾರ ಗುರುತಿಸಿದ ಜಾಗದಲ್ಲಿ ಸವರ್ಣಿಯವರು ಅವಕಾಶ ನೀಡದ ಕಾರಣ ಹಳ್ಳದ ಬದಿಯಲ್ಲಿ ಶವ ಸಂಸ್ಕಾರ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಹಳ್ಳದ ದಂಡೆಗೆ ಹೋಗಲು ಹೋಗಲು ಸೂಕ್ತ ದಾರಿ ಇಲ್ಲದ ಕಾರಣ ಯಾರಾದರೂ ಸತ್ತ ದಿನ ಟ್ರಾಕ್ಟರ್ ನಿಂದ ದಾರಿ ಮಾಡಿಕೊಂಡು ನಂತರ ಶವವನ್ನು ತೆಗೆದುಕೊಂಡು ಹೋಗಬೇಕು ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘಟನೆಯ ಗಂಗಾವತಿ ತಾಲ್ಲೂಕ ಅಧ್ಯಕ್ಷ ಮರಿನಾಗ ಡಗ್ಗಿ ಆರೋಪಿಸಿದ್ದಾರೆ.
ಈ ಕುರಿತು ಕೊಪ್ಪಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳದ ಬದಿಯ ಶವ ಸಂಸ್ಕಾರಕ್ಕೂ ಗ್ರಾಮದ ಮಧ್ಯೆ ರಸ್ತೆಯಿಂದ ದಲಿತರ ಸ್ಮಶಾನಕ್ಕೆ ಹೋಗುವಂತಿಲ್ಲ. ಹೆಣವನ್ನು ಗ್ರಾಮದ ಮಧ್ಯೆ ಹೊತ್ತುಕೊಂಡ ಹೋದರೆ ಆಕ್ಷೇಪ ಎತ್ತುತ್ತಾರೆ. ಈ ಹಿಂದೆ ಗ್ರಾಮದ ಮಧ್ಯೆ ಮೃತದೇಹದವನ್ನು ತೆಗೆದುಕೊಂಡು ಹೋಗಿದ್ದರಿಂದ ಘರ್ಷಣೆ ನಡೆದಿತ್ತು. ಹೊಸ್ಕೇರಾ ಡಗ್ಗಿ ಗ್ರಾಮದಲ್ಲಿ ಅಂದಾಜು 400 ಮನೆಗಳಿವೆ. ಗ್ರಾಮದ ಜನರ ಮುಖ್ಯ ಕಸುಬು ಕೃಷಿಯಾಗಿದೆ. ಕೆಲವರು ಗಂಗಾವತಿ ಸಮೀಪ ಇರುವುದರಿಂದ ವ್ಯಾಪಾರ ಸೇರಿದಂತೆ ಇತರೆ ಕೆಲಸಕ್ಕಾಗಿ ಬೆಳ್ಳಿಗ್ಗೆ ಆಗಮಿಸಿ ಸಂಜೆ ಪುನಃ ಗ್ರಾಮಕ್ಕೆ ತೆರಳುತ್ತಾರೆ. ಗ್ರಾಮದ ಅಂದಾಜು 5 ಎಕರೆ ಪ್ರದೇಶದಲ್ಲಿ ಸ್ಮಶಾನವಿದೆ ಆದರೆ ಅಲ್ಲಿ ದಲಿತರ ಶವಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದರು. ಈ ಘಟನೆಯನ್ನು ಖಂಡಿಸಿ ನವೆಂಬರ್ 11 ರಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಕೂಲಿಕಾರ ಸಂಘಟನೆಯ ಜಿಲ್ಲಾಧ್ಯಕ್ಷ ಎಂ. ಬಸವರಾಜ್ ಮಾತನಾಡಿ, ಸ್ವಾತಂತ್ರ ಬಂದು 78 ವರ್ಷ ಗತಿಸಿದರೂ ಕೂಡ ದಲಿತ (ಮಾದಿಗ) ಸಮುದಾಯಕ್ಕೆ ಗ್ರಾಮೀಣ ಪ್ರದೇಶದಲ್ಲಿ ಶವಸಂಸ್ಕಾರಕ್ಕೆ ಭೂಮಿ ನೀಡಿರುವುದಿಲ್ಲ, ಇದು ಅತ್ಯಂತ ನೀವಿನ ಸಂಗತಿಯಾಗಿದೆ. ಗಂಗಾವತಿ ತಾಲೂಕಿನ ಹೊಸಕೇರಾ ಗ್ರಾಮ ಪಂಚಾಯತ ವ್ಯಾಪ್ತಿಯ ಹೊಸಕೇರಾ ಗ್ರಾಮದಲ್ಲಿ ಅಸ್ಪರ್ಶ ಸಮುದಾಯದ ಮಾದಿಗ ಸಮುದಾಯದ ಕುಟುಂಬಗಳು ಯಾತನೆಯನ್ನು ಅನುಭವಿಸುತ್ತಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಸುಂಕಪ್ಪ ಗದಗ್, ಮುಖಂಡರಾದ ಕೆ ಹುಸೇನಪ್ಪ, ಸೋಮನಾಥಪ್ಪ ಸುಳೇಕಲ್, ಪಾಮಪ್ಪ ದೊಡ್ಮನಿ, ಮಂಜುನಾಥ್ ಡಗ್ಗಿ, ಹನುಮಂತಪ್ಪ ಡಗ್ಗಿ, ಭೀಮಪ್ಪ ಪೂಜಾರಿ, ಹುಲಗಪ್ಪ ಡಗ್ಗಿ, ಭೀಮಪ್ಪ ಜಿರಾಳ, ಕೆಂಚಪ್ಪ ಹಾಜರಿದ್ದರು.