ದೊಡ್ಡಬಳ್ಳಾಪುರ: ತಾಲೂಕಿನ ಕನಕೇನಹಳ್ಳಿ ಗ್ರಾಮದಲ್ಲಿ ಗುಡಿಸಲುಗಳಿಗೆ ದುಷ್ಕರ್ಮಿಗಳು ಕೆಲದಿನಗಳ ಹಿಂದೆ ಬೆಂಕಿ ಹಚ್ಚಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕನಕೇನಹಳ್ಳಿ ಗ್ರಾಮದ ಸರ್ಕಾರಿ ಜಮೀನು ಎಂದು ಹೇಳಲಾದ ಜಾಗದಲ್ಲಿ ಎಲ್ಲ ಜಾತಿ ಜನಾಂಗದ 40 ಕುಟುಂಬದವರು ಗುಡಿಸಲು ಕಟ್ಟಿಕೊಂಡಿದ್ದರು. ಆದರೆ ಇದೇ ಗ್ರಾಮದ ಮುತ್ತುರಾಜೇಗೌಡ ಎಂಬುವವರು ಜಮೀನು ತಮಗೆ ಸೇರಿದೆ ಎಂದು ಖ್ಯಾತೆ ತೆಗೆದಿದ್ದರು. ಜಿಲ್ಲಾಧಿಕಾರಿ ಹಾಗೂ ಉಪವಿಭಾಗಧಿಕಾರಿ ನ್ಯಾಯಾಲಯದಲ್ಲಿ ವಾಸವಾಗಿದ್ದ ಕುಟುಂಬಗಳ ಪರವಾಗಿಯೆ ಆದೇಶ ಬಂದಿತ್ತು. ಇದನ್ನು ಪ್ರಶ್ನಿಸಿ ಮುತ್ತು ರಾಜೇಗೌಡ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಯಥಾಸ್ಥಿತಿಗೆ ಸೂಚಿಸಿತ್ತು.
ಕನಕೇನಹಳ್ಳಿಯ ಸರ್ವೆ ನಂ58 ರಲ್ಲಿ 3.20 ಎಕರೆ ಇನಾಮ್ತಿ ಸರ್ಕಾರಿ ಜಮೀನಿದೆ. ಅಲ್ಲಿ ಗ್ರಾಮದ ಹೆಚ್ಚಿನ ದಲಿತರು ಮತ್ತು ಕೆಲ ಇತರ ಸಮುದಾಯಗಳು ಗುಡಿಸಲು, ಮನೆ ಕಟ್ಟಿಕೊಂಡು ವಾಸವಿದ್ದಾರೆ. ಮುತ್ತುರಾಜೇಗೌಡ ಎಂಬ ಸವರ್ಣೀಯ ಸಮುದಾಯದ ವ್ಯಕ್ತಿ ಅಲ್ಲಿಯೇ ಮನೆ ಕಟ್ಟಿಕೊಂಡಿದ್ದು, ದಲಿತರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಇಡೀ ಜಮೀನನ್ನು ಕಬಳಿಸಲು ಯತ್ನಿಸಿದ್ದರು. ಅವರು ಮತ್ತು ಅವರ ಪುತ್ರ ಸೇರಿಕೊಂಡು ಮೇ 03ರ ರಾತ್ರಿ 10.30ರ ಸಮಯದಲ್ಲಿ ನಾಗಮ್ಮ ಮತ್ತು ಹನುಮಕ್ಕನವರ ದಲಿತ ಕುಟುಂಬಗಳ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ.
ಗುಡಿಸಲು ಕಟ್ಟಿಕೊಂಡಿದ್ದ ಅನ್ಯ ಜಾತಿಯ ಕುಟುಂಬಗಳನ್ನು ಒಂದೊಂದಾಗಿ ತೆರವು ಮಾಡಿಸುವಲ್ಲಿ ಮುತ್ತು ರಾಜೆಗೌಡ ಯಶಸ್ವಿಯಾಗಿದ್ದರು. ಆದರೆ, ಪರಿಶಿಷ್ಟ ಜಾತಿ ಹಾಗೂ ಪಂಗಡದ 20 ಕುಟುಂಬಗಳು ಜಾಗ ಬಿಡಲು ಒಪ್ಪದೇ ರಾತ್ರಿ ವೇಳೆ ಮಾತ್ರ ಗುಡಿಸಲಿನಲ್ಲಿ ತಂಗುತ್ತಿದ್ದರು. ಕೆಲವರು ಜಾನುವಾರುಗಳನ್ನು ಕಟ್ಟಿಹಾಕುತ್ತಿದ್ದರು.
ದಲಿತರನ್ನು ಅಲ್ಲಿಂದ ಎತ್ತಂಗಡಿ ಮಾಡಲು ಈ ರೀತಿ ಬೆಂಕಿ ಹಚ್ಚಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೆ ಮೊದ ಮೊದಲು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದರು. ಆದರೆ ಪ್ರತಿಭಟನೆಗಳು ನಡೆದ ನಂತರ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ವಾಸವಿದ್ದ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆಯೂ ನಡೆದಿದೆ. ಗುಡಿಸಲಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಮುತ್ತುರಾಜೇಗೌಡ ಎಂಬುವರನ್ನು ದೊಡ್ಡಬೆಳವಂಗಲ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಸ್ಥಳೀಯರಾದ ನಾಗಮ್ಮ, ಹನುಮಕ್ಕ ಅವರು ನೀಡಿದ ದೂರು ಆಧರಿಸಿ ಮುತ್ತು ರಾಜೇಗೌಡನನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗ್ರಾಮದಲ್ಲಿ ದಲಿತರಿಗೆ ಸಣ್ಣ ಸಣ್ಣ ಮನೆಗಳಷ್ಟೆ ಇವೆ. ಹಾಗಾಗಿ ಅವರು ಅನಿವಾರ್ಯವಾಗಿ ಸರ್ಕಾರಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ. ತಹಶೀಲ್ದಾರ್‌ರವರು ಬೇರೆಡೆ 11 ಕುಂಟೆ ಜಾಗ ನೀಡುವುದಾಗಿ ಹೇಳಿದ್ದಾರೆ. ಆದರೆ 50ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಆ ಜಾಗ ಸಾಲುವುದಿಲ್ಲ ಮಾತ್ರವಲ್ಲ, ಅದು ನಿಜವಾಗಿಯೂ ದಲಿತರ ಕೈಗೆ ಸಿಗುವುದು ಅಷ್ಟು ಸುಲಭವಲ್ಲ. ಹಾಗಾಗಿ ಸದ್ಯ ದಲಿತರು ಇರುವ ಜಾಗವನ್ನು ಅವರ ಹೆಸರಿಗೆ ಮಾಡಿ ಹಕ್ಕುಪತ್ರ ನೀಡಬೇಕು. ಅವರಿಗೆ ರಕ್ಷಣೆ ಒದಗಿಸಬೇಕು ಎಂದು ಪ್ರಜಾ ವಿಮೋಚನಾ ಚಳವಳಿಯ ಅಧ್ಯಕ್ಷರಾದ ಮುನಿ ಆಂಜನಪ್ಪ ಹೇಳಿದ್ದಾರೆ.
3 ಎಕರೆ 20 ಗುಂಟೆ ವಿವಾದಿತ ಜಮೀನಿಗೆ ಸಂಬಂಧಿಸಿ ಈ ಹಿಂದೆ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದೇವೆ. ಬಡವರಿಗೆ ನಿವೇಶನ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.