ಮುಳಬಾಗಿಲು: ತಾಲೂಕಿನ ಗ್ರಾಮವೊಂದರಲ್ಲಿ ದ್ವಿಚಕ್ರ ವಾಹನ ಓವರ್ ಟೆಕ್ ಮಾಡಿದ ಕಾರಣದಿಂದ ಸವರ್ಣೀಯರು ದಲಿತ ಯುವಕ ಉದಯ್ ಕಿರಣ್ (25 ವರ್ಷ) ಎಂಬ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಕಾರಣದಿಂದ ಮನನೊಂದು ಸಾವಿಗೀಡಾಗಿರುವ ಅಮಾನವೀಯ ಘಟನೆಗೆ ಕಾರಣಕರ್ತರಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಂಡು ಗಡಿಪಾರು ಮಾಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಆಗ್ರಹಿಸಿದರು.
ಜಾತಿ ದೌರ್ಜನ್ಯದಿಂದ ಮೃತಪಟ್ಟಿರುವ ದಲಿತ ಯುವಕ ಉದಯ್ ಕಿರಣ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಸಿಪಿಐ(ಎಂ), ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ), ದಲಿತ ಸಂಘಟನೆಗಳ ಮುಖಂಡರು ಪೆತ್ತಾಂಡ್ಲಹಳ್ಳಿಯಲ್ಲಿ ಸಾವಿಗೀಡಾದ ದಲಿತ ಯುವಕ ಉದಯ್ ಕಿರಣ್ ಗೆ ನ್ಯಾಯ ಸಿಗಬೇಕು, ಜಾತಿ ದೌರ್ಜನ್ಯಗಳು ನಿಲ್ಲಬೇಕು ಎಂದು ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ : ಕ್ಷುಲ್ಲಕ ಕಾರಣಕ್ಕೆ ಮರಕ್ಕೆ ಕಟ್ಟಿ ಹಲ್ಲೆ; ನೊಂದ ದಲಿತ ಯುವಕ ಆತ್ಮಹತ್ಯೆ: ಆರೋಪ
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ(ಎಂ) ಮುಖಂಡರು ದಲಿಯ ಯುವಕ ಉದಯ್ ಕಿರಣ್ ಸಾವಿನ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದರು, ದಲಿತರನ್ನು ಮನುಷ್ಯರಂತೆ ಸಮಾನವಾಗಿ ಕಾಣದ ಪಾಳೇಗಾರಿ ಮೌಲ್ಯಗಳೇ ಉದಯ್ ಕಿರಣ್ ಸಾವಿಗೆ ಕಾರಣ. ಕೋಲಾರ ಜಿಲ್ಲೆ ಮತ್ತು ಮುಳಬಾಗಿಲು ತಾಲೂಕು ದಲಿತ ಮೀಸಲಾತಿಯ ಸಂಸದರು, ಶಾಸಕರು ಇದ್ದರೂ ಸಹ ದಲಿತರ ಮೇಲೆ ದಾಳಿ ದೌರ್ಜನ್ಯಗಳು ನಿರಂತರವಾಗಿ ಹೆಚ್ಚಾಗುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಜಾತಿ ದೌರ್ಜನ್ಯದಿಂದ ಯುವಕ ಸಾವನ್ನಪ್ಪಿದ್ದರು ಸಹ ಈ ಕ್ಷೇತ್ರದ ಶಾಸಕರು, ಸಂಸದರು ಯಾವೊಬ್ಬ ಜನಪ್ರತಿನಿಧಿ ಬಾಯಿ ಬಿಚ್ಚದಿರುವುದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಎಚ್ಚರಿಸಿದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ, ಘಟನೆ ಸಂಬಂಧಿತ ಆರೋಪಿಗಳನ್ನು 24 ಗಂಟೆಗಳ ಒಳಗೆ ಬಂಧಿಸಬೇಕು. ಮೃತ ಉದಯ್ ಕಿರಣ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು, ಆತನ ತಾಯಿಗೆ ಸರ್ಕಾರಿ ಉದ್ಯೋಗ, ಮನೆ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಸಾವಿರಾರು ಸಂಖ್ಯೆಯ ಜನತೆ ಪೆತ್ತಾಂಡ್ಲಹಳ್ಳಿ ಚಲೋ ಪಾದಯಾತ್ರೆ ಹಮ್ಮಿಕೊಂಡು ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಈ ವೇಳೆ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ, ಪುಣ್ಯಹಳ್ಳಿ ಶಂಕರ್, ದಲಿತ ಮುಖಂಡರಾದ ಸಂಗಸಂದ್ರ ವಿಜಯ್ ಕುಮಾರ್, ಮೆಕ್ಯಾನಿಕ್ ಶ್ರೀನಿವಾಸ್, ಮೃತನ ಸೋದರ ಮಾವ ನಾಗರಾಜ್ ಬೇವಹಳ್ಳಿ, ಡಿವೈಎಫ್ಐ ಮುಖಂಡ ಕೇರಳ ಶ್ರೀನಿವಾಸ್, ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಬಾಬು, ತಾಲ್ಲೂಕು ಅಧ್ಯಕ್ಷ ಶಶಿಕುಮಾರ್, ತಾಲೂಕು ಕಾರ್ಯದರ್ಶಿ ಸುದರ್ಶನ್ ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.