ಬೆಂಗಳೂರು : ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಹೆಚ್ಚುತ್ತಿರುವ ಜಾತಿ ತಾರತಮ್ಯ ವಿರುದ್ಧ, ಇತ್ತೀಚೆಗೆ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಬರಗೂರು, ವಿಜಯಪುರದ ದೇವರಹಿಪ್ಪರಗಿಯ ಸಾಲದಹಳ್ಳಿ ಗ್ರಾಮದ ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕರನ್ನು ಮತ್ತು ಹೆಣ್ಣುಮಕ್ಕಳನ್ನು ಅಮಾನವೀಯವಾಗಿ ಹೊಡೆದು ಹತ್ಯೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ.
ದಲಿತ ಹಕ್ಕುಗಳ ಸಮಿತಿ, ಕರ್ನಾಟಕ (ಡಿಹೆಚ್ಎಸ್) ವತಿಯಿಂದ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಿ, ದೌರ್ಜನ್ಯಕ್ಕೊಳಗಾದವರಿಗೆ ಕೂಡಲೇ ಪರಿಹಾರ ನೀಡಿ ತಪ್ಪಿತಸ್ಥರ ಮೇಲೆ ಕಾನೂನಾತ್ಮಕ ಕ್ರಮಕೈಗೊಳ್ಳಲು ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದರು.
ಕೊಪ್ಪಳ ಜಿಲ್ಲೆಯ ಹೊಸಹಳ್ಳಿ, ಚಿಗರಿ, ಹಾಗೆದಲ್ ಮತ್ತು ವಜ್ರ ಬಂಡಿಯಲ್ಲಿ ದಲಿತರಿಗೆ ಕ್ಷೌರ ಮಾಡುವುದನ್ನು ನಿರಾಕರಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಬಾಯಿಗೆ ಮೂತ್ರ ಕುಡಿಸಿ ಪೊಲೀಸ್ ದೌರ್ಜನ್ಯ. ದಲಿತರನ್ನು ಮನುಷ್ಯರಂತೆ ಕಾಣದ ಇಂತಹ ಅನಾಗರಿಕ ಸಮಾಜದಲ್ಲಿನ ಅರಣ್ಯ ನ್ಯಾಯದ ಸಂಕಟಗಳನ್ನು ಎದುರಿಸಿ ಬದುಕುತ್ತಿರುವ ದಲಿತರು ವಾಸಿಸಲು ಮನೆಗಳಿಲ್ಲ. ಸತ್ತರೆ ಸ್ಮಶಾನಗಳಿಲ್ಲ, ಸಾಕಷ್ಟು ಸಮಸ್ಯೆಗಳ ಮಧ್ಯೆ ಬದುಕುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಕೊರೊನಾ ದಲಿತರ ಜೀವನ ಸ್ಥಿತಿಯನ್ನು ಇನ್ನಷ್ಟು ಬರ್ಬರಗೊಳಿಸಿದೆ. ಮೊದಲೇ ಬಡತನ, ನಿರುದ್ಯೋಗದಿಂದ ಬಳಲುತ್ತಿದ್ದ ದಲಿತ ಸಮುದಾಯ ಕೊರೊನಾ ಸಾಂಕ್ರಾಮಿಕ ರೋಗದಿಂದ ಜೀವ ಮತ್ತು ಜೀವನ ಎರಡನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯೂ ಕೊರೊನಾ ಕಾಲದಲ್ಲೂ ದಲಿತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಇಲಾಖೆಯ ಅಡಿ ಇರುವ ಅಭಿವೃದ್ಧಿ ನಿಗಮ ಮತ್ತು ಮಂಡಳಿಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ. ಇಂತಹ ದಲಿತ ವಿರೋಧಿ ರಾಜ್ಯ ಸರ್ಕಾರದ ಧೋರಣೆಯನ್ನು ದಲಿತ ಹಕ್ಕುಗಳ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಈ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕು. ದೌರ್ಜನ್ಯಕ್ಕೆ ಒಳಗಾದ ದಲಿತ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ತಪ್ಪಿತಸ್ಥರಿಗೆ ಕಾನೂನಾತ್ಮಕ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ದೇಶದ ಆನೇಕ ರಾಜ್ಯಗಳಲ್ಲಿ ಸವರ್ಣಿಯರು ಗಂಭೀರವಾಗಿ ದಲಿತರ ಮೇಲೆ ಮಾರಣಾಂತಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ. ಇಡೀ ರಾಜ್ಯಾದ್ಯಂತ ದಲಿತರ ಮೇಲೆ ಎಗ್ಗಿಲ್ಲದೆ ಕೊಲೆಗಳು, ದೌರ್ಜನ್ಯಗಳು ದಬ್ಬಾಳಿಕೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಮೌನವಹಿಸಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಪೊಲೀಸ್ ಇಲಾಖೆ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ಅಸ್ಪೃಶ್ಯತೆ ಆಚರಣೆ ವಿರೋಧಿ ಕಾಯ್ದೆ ಅಡಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳದೆ, ದಲಿತರನ್ನು ತಪ್ಪಿತಸ್ಥರಂತೆ ಮಾಡಿ ದಲಿತರ ಮೇಲೆಯೇ ಕೇಸುಗಳನ್ನು ದಾಖಲಿಸುತ್ತಿದೆ ಎಂದು ವಿವರಿಸಿದರು.
ದೇಶಕ್ಕೆ ಸ್ವಾತಂತ್ರ್ಯಗಳಿಸಿ 74 ವರ್ಷಗಳು ಕಳೆದರೂ ಸಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಇನ್ನೂ ಸ್ವಾಭಿಮಾನದಿಂದ ಬದುಕಲಾಗುತ್ತಿಲ್ಲ. ಪ್ರತಿದಿನ ಅರ್ಧಗಂಟೆಗೊಮ್ಮೆ ಒಂದಲ್ಲಾ, ಒಂದು ಕಾರಣಕ್ಕಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಾ ಇವೆ ಎಂದು ದಲಿತ ಹಕ್ಕುಗಳ ಸಮಿತಿ, ಕರ್ನಾಟಕ ಸಂಘಟನೆಯು ತಿಳಿಸಿದೆ.