ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂದವರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುವ ಮೊಕದ್ದಮೆಗಳನ್ನು ಶೀಘ್ರವೇ ಇತ್ಯರ್ಥಗೊಳಿಸಿ, ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ರಡಿ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆ ನಡೆಯಿತು.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಗೃಹ ಮತ್ತು ಕಾನೂನು ಇಲಾಖೆಯೊಂದಿಗೆ ಸಮನ್ವಯದೊಂದಿಗೆ ತನಿಖೆಯ ಹಂತದಿಂದ ಹಿಡಿದು ಚಾರ್ಜ್ ಶೀಟ್ ಸಲ್ಲಿಸುವಾಗ ಹಾಗೂ ಪ್ರಾಸಿಕ್ಯೂಷನ್ ಸಂದರ್ಭದಲ್ಲಿಯೂ ವಿಳಂಬವಾಗದಂತೆ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.
ಇದನ್ನು ಓದಿ: ಐಐಎಸ್‌ಸಿ : ದಲಿತ, ಹಿಂದುಳಿದವರಿಗೆ ಮೀಸಲಿಟ್ಟ ಸ್ಥಾನಗಳು ‘ಇನ್ನೊಬ್ಬರ’ ಪಾಲು?!
ಸಭೆಯ ತೀರ್ಮಾನಗಳ ಕುರಿತು ಪ್ರತಿ ತಿಂಗಳು ಪರಿಶೀಲನೆ ನಡೆಸಬೇಕಿಕು ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. ರಾಜ್ಯಮಟ್ಟದ ಸಮಿತಿಯು ತುರ್ತು ವಿಷಯಗಳಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ನಿರ್ಧರಿಸಲಾಯಿತು. ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ಹಂತದಲ್ಲಿ ಸಭೆಗಳು ನಿಯಮಿತವಾಗಿ ನಡೆಸಬೇಕು. ಒಂದು ತಿಂಗಳ ಒಳಗೆ ಸಭೆಯ ತೀರ್ಮಾನಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ವರದಿಗಳನ್ನು ನೀಡಬೇಕೆಂದು ಸೂಚಿಸಿದರು.
ದೌರ್ಜನ್ಯ ಪ್ರಕರಣಗಳಲ್ಲಿ ದೂರುದಾರರು ಮತ್ತು ಸಾಕ್ಷಿದಾರರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಸೂಕ್ಷ್ಮ ಪ್ರಕರಣಗಳಿದ್ದಲ್ಲಿ ಅಂತಹ ಸಂದರ್ಭದಲ್ಲಿ ಪೊಲೀಸರೇ ದೂರುದಾರರು ಮತ್ತು ಸಾಕ್ಷಿದಾರರನ್ನು ಕರೆದುಕೊಂಡು ಹೋಗಬೇಕು. ಜೊತೆಗೆ ಈ ಪ್ರಕರಣಗಳ ಸಂಪೂರ್ಣ ಮೇಲುಸ್ತುವಾರಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಯಿತು.
‘ಅರಣ್ಯ ಹಕ್ಕು ಕಾಯ್ದೆಯಲ್ಲಿ 1.80 ಲಕ್ಷ ಅರ್ಜಿಗಳು ತಿರಸ್ಕೃತವಾಗಿದೆ. ಅವುಗಳನ್ನು ಮರು ಪರಿಶೀಲಿಸಲು ರಾಜ್ಯಮಟ್ಟದ ಸಮಿತಿ ರಚಿಸಲಾಗುವುದು. ಆ ಸಮಿತಿಗೆ ಮೂರು ಮಂದಿಯನ್ನು ನೇನಿಸಲಾಗುವುದು. ಎಸ್‌ಸಿ ನಕಲಿ ಜಾತಿ ಪ್ರಮಾಣಪತ್ರಗಳನ್ನು ರದ್ದು ಮಾಡುವ ಜೊತೆಗೆ, ಯಾವ ಅಧಿಕಾರಿ ಕೊಟ್ಟಿದ್ದಾರೆ ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ’ ಎಂದೂ ತಿಳಿಸಿದರು.
ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಈ ಸಮುದಾಯಗಳ ಹಕ್ಕು ಕಸಿದುಕೊಳ್ಳುವವರ ವಿರುದ್ಧ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಮೃತಪಟ್ಟವರ ಅವಲಂಬಿತರಿಗೆ ಅನುಕಂಪ ಆಧಾರದಲ್ಲಿ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಲು 2 ವರ್ಷ ಅವಧಿ ಹಾಗೂ ಅಪ್ರಾಪ್ತ ವಯಸ್ಕರಿಗೆ ಅರ್ಜಿ ಸಲ್ಲಿಸಲು 3 ವರ್ಷಗಳ ಅವಧಿ ನಿಗದಿಪಡಿಸಿ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಸೂಚಿಸಿದರು.
ಇದನ್ನು ಓದಿ: ಐಐಟಿ, ಎನ್‌ಐಟಿಗಳಲ್ಲಿ ಮೀಸಲಾತಿ ಸೀಟು ನಷ್ಟದ ಬಗ್ಗೆ ಕ್ರಮಕೈಗೊಳ್ಳಿ: ಎಸ್‌ಎಫ್‌ಐ
ಪರಿಶಿಷ್ಟ ಜಾತಿ, ಪಂಗಡದವರ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು. ಈ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಎಸ್ಕಾಂಗಳು ಎಸ್ ಸಿ ಪಿ, ಟಿ ಎಸ್ ಪಿ ಅನುದಾನ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಎಸ್.ಸಿ.ಪಿ/ ಟಿಎಸ್ ಪಿ ಕಾಯ್ದೆಯನ್ವಯ ಈ ಸಮುದಾಯಗಳಿಗೆ ನಿಗದಿ ಪಡಿಸಿದ ಅನುದಾನ, ಅವರ ಕ್ಷೇಮಾಭಿವೃದ್ಧಿಗೇ ಬಳಕೆಯಾಗುವ ಕುರಿತು ಕಾಯ್ದೆಗೆ ತಿದ್ದುಪಡಿ ಮಾಡಲು ಕ್ರಮ ವಹಿಸುವಂತೆ ಕಾನೂನು ಇಲಾಖೆಗೆ ಸೂಚನೆ ನೀಡಿದರು.
ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಸಮಿತಿಯ ಸದಸ್ಯರಾದ ಸಂಸದರು, ಶಾಸಕರು ಮತ್ತು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರುಗಳು ಉಪಸ್ಥಿತರಿದ್ದರು.