ಮೈಸೂರು: ಮಾನಸಗಂಗೋತ್ರಿಯಲ್ಲಿ ನಡೆದಿದ್ದ ಪ್ರಶಸ್ತಿ ಸಮಾರಂಭ ಕಾರ್ಯಕ್ರಮವೊಂದರಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿದ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರವಿರೋಧ ಚರ್ಚೆಗೆ ಕಾರಣವಾಗಿದೆ.
”ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?” ಎಂದು ಹಂಸಲೇಖ ಪ್ರಶ್ನೆ ಮಾಡಿದರು.
”ಬಲಿತರು ದಲಿತರ ಮನೆಗೆ ಹೋಗುವುದು ಅದೇನು ದೊಡ್ಡ ವಿಷಯ? ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು, ಊಟ ಹಾಕಬೇಕು, ಕುಡಿಯಲು ಲೋಟ ಕೊಡಬೇಕು ಆ ಲೋಟವನ್ನು ನಾವು ತೊಳೆಯುತ್ತೀವಿ ಎಂದು ಅವರು ಹೇಳಬೇಕು” ಎಂದ ಅವರು ಅಲ್ಲದೆ ಗ್ರಾಮ ವಾಸ್ತವ್ಯ ಎನ್ನುವುದು ಬೂಟಾಟಿಕೆ, ಅದೊಂದು ನಾಟಕ. ಇತ್ತೀಚಿಗೆ ಇದನ್ನ ಎಲ್ಲರೂ ಶುರು ಮಾಡಿಕೊಂಡಿದ್ದಾರೆ. ಇದು ಒಂದು ಗೀಳಾಗಿದೆ. ರಾಜಕಾರಣಿಗಳು ಎಲ್ಲರು ಶುರು ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾ ಕುಮಾರಸ್ವಾಮಿ, ಆರ್ ಅಶೋಕ್, ಅಶ್ವಥ್ ನಾರಾಯಣ್ ಮಾಡಿದ್ದ ಗ್ರಾಮವಾಸ್ತವ್ಯ ಬಗ್ಗೆಯೂ ಹಂಸಲೇಖ ಅವರು ಮಾತಾಡಿದ್ದರು.
”ಭಗವದ್ಗೀತೆ ನಮಗೆ ಎಷ್ಟು ಸಹಾಯ ಮಾಡಿದೆಯೋ ಗೊತ್ತಿಲ್ಲ, ಆದರೆ ಅಂಬೇಡ್ಕರ್ ಕೊಟ್ಟ ಬಡವರ ಗೀತೆ ಸಂವಿಧಾನ ನಮ್ಮನ್ನು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರಗೆ ತಂದಿದೆ. ನಮ್ಮ ಡೆಮಾಕ್ರಸಿ (ಪ್ರಜಾಪ್ರಭುತ್ವ) ಧರ್ಮಾಕ್ರಸಿ ಆಗುತ್ತದೆಂಬ ಆತಂಕ ಜನಸಾಮಾನ್ಯರಲ್ಲಿ ಇದೆ. ಹಾಗೇನಾದರೂ ಆದರೆ ನಾವು ಮತ್ತೆ ಹಳೆಯ ಕಾಲಕ್ಕೆ ಜಾರುತ್ತೇವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ನಾಶವಾಗುವುದಿಲ್ಲ ಎಂಬ ನಂಬಿಕೆ ಇದೆ. ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲ ಎಚ್ಚರದಿಂದ ಕೆಲಸ ಮಾಡಬೇಕು” ಎಂದಿದ್ದಾರೆ.
”ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಆ ಹೆಣ್ಣಿನೊಂದಿಗೆ ಸಂಸಾರ ಮಾಡುವುದರಲ್ಲಿ ಯಾವ ದೊಡ್ಡ ವಿಷಯವಿದೆ. ರಂಗಯ್ಯ, ಆ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಸ್ಥಾನದಲ್ಲಿ ಇಟ್ಟು ಗೌರವ ಮಾಡಿದ್ದರೆ ಅದು ರಂಗಯ್ಯನ ತಾಕತ್ತು. ಬೆಳಕು ಇಲ್ಲದಾಗ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುವುದು ಅದೇನು ದೊಡ್ಡ ವಿಷಯ. ಅದು ನಾಟಕ, ಅದು ಬೂಟಾಟಿಕೆ” ಎಂದಿದ್ದಾರೆ.
ಹಂಸಲೇಖ ಅವರ ಮಾತಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಕೆಲವರು ಪರವಾಗಿ, ಕೆಲವರು ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಕ್ಷಮೆಯಾಚಿಸಿದ ಹಂಸಲೇಖ
ಸಂಗೀತ ನಿರ್ದೇಶಕ ಹಂಸಲೇಖ ಆಡಿರುವ ಮಾತು ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ವಿವಾದಕ್ಕೆ ತಿಲಾಂಜಲಿ ನೀಡುವಂತೆ ಕ್ಷಮೆಯಾಚಿಸಿದ್ದಾರೆ. ಅಸ್ಪೃಶತೆಯನ್ನ ತೊಡಗಿಸಲು ಶ್ರೀಗಳು ಶ್ರಮ ವಹಿಸುತ್ತಿದ್ದಾರೆ. ಅದರ ಬಗ್ಗೆ ನನಗೆ ಗೌರವವಿದೆ. ನುಡಿದರೆ ಮುತ್ತಿನಂತಿರಬೇಕು, ಆದ್ರೆ ನಾನು ತಪ್ಪು ಮಾಡಿದೆ. ನಾನು ಆಡಿದ ಮಾತುಗಳು ನನ್ನ ಪತ್ನಿಗೇ ಹಿಡಿಸಲಿಲ್ಲ. ಅಕೆಯೂ ಸಹ ಅದನ್ನ ವಿರೋಧ ಮಾಡಿದರು. ನನ್ನ ಪತ್ನಿಯ ಬಳಿಯೂ ನಾನು ಕ್ಷಮೆ ಕೇಳಿದ್ದೇನೆ. ನಾನು ಸಂಗೀತಗಾರ – ಕಂಟ್ರೋಲ್‌ನಲ್ಲಿ ಇರಬೇಕು. ಯಾರ ಮನಸ್ಸು ನೋಯಿಸಲು ನನಗೆ ಇಷ್ಟವಿಲ್ಲ. ಹೀಗಾಗಿ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಕೋರಿದ್ದಾರೆ.