ದಲಿತರ ಅಭಿವೃದ್ಧಿ ಹಣ ಬಳಕೆಗೆ ಸರಕಾರದ ನಿರ್ಲಕ್ಷ್ಯ

ದಲಿತರ ಅಭಿವೃದ್ಧಿಗಾಗಿ ಇರುವಂತಹ ಎಸ್.ಸಿ. ಎಸ್.ಟಿ./ ಟಿ.ಎಸ್.ಪಿ ಉಪ ಯೋಜನೆ ಸಮರ್ಪಕವಾಗಿ ಜಾರಿಯಾಗ್ತಾ ಇದೆಯಾ? ದಲಿತರ ಉದ್ಧಾರಕ್ಕಾಗಿ ಮೀಸಲಾಗಿರುವ 28 ಸಾವಿರ ಕೋಟಿ ರೂ. 39 ಇಲಾಖೆಯಲ್ಲಿ ಹರಿದು ಹಂಚಿ ಹೋಗುತ್ತಿರುವುದಕ್ಕೆ ಕಾರಣವಾದರೂ ಏನು? ಯೋಜನೆ ಇದ್ದೂ ಅದು ದಲಿತರಿಗೆ ಸಿಗದಿರುವುದಕ್ಕೆ ಕಾರಣವೇನು? ಅಚ್ಚರಿ ಬಿಳಿಸಿದೆ ಸರ್ಕಾರದ ಹೇಳಿಕೆಗಳು.

ಕರ್ನಾಟಕದಲ್ಲಿ ಅಸಮಾನ ಶ್ರೇಣಿಕೃತ ತಳ ಸಮುದಾಯಗಳೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು. ಇವರು ಸಾಮಾಜಿಕವಾಗಿ ಅಸ್ಪೃಶ್ಯತೆಗೆ ಒಳಗಾಗಿರುವುದು ಗಂಭೀರ ಸಮಸ್ಯೆಯಾಗಿದೆ. ಈ ಸಮುದಾಯಗಳ  ಆರ್ಥಿಕ ಸಮಸ್ಯೆಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಲಗೊಳ್ಳಲು ಹೋರಾಟಗಳು ನಡೆಯುತ್ತಿವೆ. ಆಳುವ ಸರಕಾರಗಳು ದಲಿತರ ಅಭಿವೃದ್ಧಿಗಾಗಿ ಉಪ ಯೋಜನೆಗಳನ್ನು ತರುತ್ತಿವೆ. ಆ ಯೋಜನೆಗಳು ದಲಿತರಿಗೆ ತಲುಪುತ್ತಿವೆಯಾ ಎನ್ನುವ ಪ್ರಶ್ನೆಯೂ ಸಹಜವಾಗಿ ಮೂಡುತ್ತಿದೆ ಹಾಗಾದರೆ ಆ ಯೋಜನೆಗಳು ಯಾವುವು? ಮುಂದೆ ಓದಿ

ಈ ಕವಿತೆ ಓದಿ : ಇತಿ ಭಾರತದ ದಲಿತ

1975 ರಲ್ಲಿ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ವಿಶೇಷ ಗಮನ ಹರಿಸಲು ಕೇಂದ್ರ ಸರಕಾರದಿಂದ ಟ್ರೈಬಲ್ ಸಬ್ ಪ್ಲ್ಯಾನ್ ಅಂದ್ರೆ ಟಿ.ಎಸ್.ಪಿ ಅಂತಾ ಏನು ಕರೆಯುತ್ತೇವೆ ಅದನ್ನು ರೂಪಿಸಲಾಯಿತು. ತದನಂತರ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ವಿಶೇಷ ಘಟಕ ಯೋಜನೆಯನ್ನು ರೂಪಿಸಲಾಯಿತು. ಆಗಿನ ಕೇಂದ್ರ ಯೋಜನಾ ಆಯೋಗದ ಮಾರ್ಗ ಸೂಚಿಗಳಂತೆ  ಯೋಜನಾ ವೆಚ್ಚದಲ್ಲಿ ಎಲ್ಲಾ ರಾಜ್ಯ ಸರಕಾರಗಳು ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮಿಸಲಿಡಲು ಸೂಚಿಸಲಾಗಿತ್ತು.

ಆದರೆ ರಾಜ್ಯ ಸರಕಾರಗಳು ಜನಸಂಖ್ಯೆ ಆಧಾರದ ಮೇಲೆ ಅನುದಾನವನ್ನು ಹಂಚಿಕೆ ಮಾಡುತ್ತಿರಲಿಲ್ಲ. ಅಭಿವೃದ್ಧಿಗಾಗಿ ಹಣ ಬೇಕು ಎಂದು ಸಂಘಟನೆಗಳು ಹೋರಾಟವನ್ನು ನಡೆಸಿದವು ಪರಿಣಾಮ ಕರ್ನಾಟಕ ರಾಜ್ಯದಲ್ಲಿ 2013 ರಲ್ಲಿ ಕರ್ನಾಟಕ ಅನುಸುಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟುಗಳ ಉಪ ಹಂಚಿಕೆ ಅಧಿನಿಯಮವನ್ನು ಜಾರಿ ಮಾಡಲಾಯಿತು.

ಈ ಕಾಯ್ದೆಯ ಪ್ರಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ತಕ್ಕಂತೆ ಅಭಿವೃದ್ಧಿ ಆಯವ್ಯಯದಲ್ಲಿ (ಡವಲೆಪ್ ಮೆಂಟ್ ಬಜೆಟ್) ಎಸ್.ಸಿ. ಎಸ್, ಪಿ/ ಟಿ.ಎಸ್.ಪಿ ಅಡಿಯಲ್ಲಿ ಅನುದಾನ ಹಂಚಿಕೆ ಮಾಡಲಾಗುತ್ತಿದೆ.  ಅನುದಾನ ವೆಚ್ಚ ಮಾಡದೆ ಇದ್ರೆ ಅಂದ್ರೆ ಖರ್ಚು ಮಾಡದೆ ಇದ್ದರೆ ಲೆಕ್ಕ ತಪಾಸಣೆ ನಡೆಸಿ ನಂತರ ಆರ್ಥಿಕ ವರ್ಷದಲ್ಲಿ ಬಳೆಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಕಾಯ್ದೆ ಜಾರಿಗೆ ಬಂದ ನಂತರ ಬಜೆಟ್ ನಲ್ಲಿ ಸರಕಾರ ಹಂಚಿಕೆ ಮಾಡಿರುವ ಅನುದಾನವನ್ನು ಕೋಷ್ಟಕದಲ್ಲಿ ನೋಡಬಹುದು.

      ಕ್ರ.ಸಂ       ವರ್ಷ   ಎಸ್.ಸಿ.ಎಸ್.ಪಿ

(ರೂ ಕೋಟಿಗಳಲ್ಲಿ )

     ಟಿ.ಎಸ್.ಪಿ

(ರೂ ಕೋಟಿಗಳಲ್ಲಿ )

          ಒಟ್ಟು

(ರೂ ಕೋಟಿಗಳಲ್ಲಿ )

1 2014 – 15 ರಲ್ಲಿ 11518.99 ಕೋಟಿ 4315.18 ಕೋಟಿ 15834.17 ಕೋಟಿ
2 2015 – 16 ರಲ್ಲಿ 11773.54 ಕೋಟಿ 4582.72 ಕೋಟಿ 16356.26 ಕೋಟಿ
3 2016 – 17 ರಲ್ಲಿ 14253.26 ಕೋಟಿ 5631.67 ಕೋಟಿ 19884.93 ಕೋಟಿ
4 2017 – 18 ರಲ್ಲಿ 19647.58 ಕೋಟಿ 8314.76 ಕೋಟಿ 27962.34 ಕೋಟಿ
5 2018 – 19 20957. 15 ಕೋಟಿ 8766.42 ಕೋಟಿ 29723.57  ಕೋಟಿ
6 2019 – 20 21602. 63 ಕೋಟಿ 8842.36 ಕೋಟಿ 30444. 99 ಕೋಟಿ

 

ಈ ಉಪ ಯೋಜನೆಯ ಹಣವನ್ನು ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ, ವಸತಿ ಸೌಕರ್ಯಗಳಿಗೆ, ಆರ್ಥಿಕ ಅಭಿವೃದ್ಧಿ  ಕಾರ್ಯಕ್ರಮಗಳಿಗೆ, ಎಸ್.ಸಿ.ಎಸ್.ಟಿ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸಗಳನ್ನು ಪಡೆಯುವುದಕ್ಕಾಗಿ, ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯಗಳನ್ನು ಪಡೆಯುವದಕ್ಕಾಗಿ, ಕಾಲೋನಿಗಳಿಗೆ ಮೂಲ ಸೌಲಭ್ಯಗಳನ್ನು ಪಡೆಯುವದಕ್ಕಾಗಿ, ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದಕ್ಕಾಗಿ, ಭೂ ರಹಿತ ಕೃಷಿ ಕಾರ್ಮಿಕರಿಗೆ ಖಾಸಗೀ ಜಮೀನನ್ನು ಖರಿದಿಸಲು, ಆರೋಗ್ಯಕ್ಕೆ ಸಂಬಂಧಿಸಿದ  ಕಾರ್ಯಕ್ರಮಗಳಿಗೆ, ಕುಡಿಯುವ ನೀರಿನ ಯೋಜನೆಗೆ, ಪಿಂಚಣಿ ಯೋಜನೆಗೆ, ಅನ್ನ ಭಾಗ್ಯ ಯೋಜನೆ ಸೇರಿದಂತೆ ಇತರೆ ಇಲಾಖೆಗಳಿಗೆ ವಿತರಿಸಲಾಗುತ್ತದೆ.

ಪರಿಶಿಷ್ಟ ಸಮುದಾಯದ ಅಭಿವೃದ್ಧಿಗಾಗಿ ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ)’ ಅಡಿ 2020–21ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ಪರಿಷ್ಕೃತಗೊಳಿಸಿ ಹಂಚಿಕೆ ಮಾಡಲಾದ ಒಟ್ಟು ₹25,616 ಕೋಟಿ. ಇದರಲ್ಲಿ ಡಿಸೆಂಬರ್‌ ಅಂತ್ಯದವರೆಗೆ ₹12,154 ಕೋಟಿ  ರೂ (ಶೇ 47.45) ಮಾತ್ರ ವೆಚ್ಚವಾಡಲಾಗಿದೆ. ಬಜೆಟ್‌ನಲ್ಲಿ ₹27,699 ಕೋಟಿ ಅನುದಾನ ಹಂಚಿಕೆ ಮಾಡಿದ್ದರೂ, ಕೋವಿಡ್‌ ಕಾರಣದಿಂದ ₹2,083 ಕೋಟಿ ಕಡಿತಗೊಳಿಸಲಾಗಿತ್ತು. ಒಟ್ಟು 39 ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ, ಮಾತೃಇಲಾಖೆಗಳಾದ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವಿವಿಧ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಅನುದಾನದಲ್ಲಿ  ಶೇ 44ನ್ನು ಮಾತ್ರ ವೆಚ್ಚಮಾಡಲಾಗಿದೆ ಎಂದು  ಸರಕಾರದ ಅಂಕಿಅಂಶಗಳೆ ಹೇಳುತ್ತಿವೆ.

₹443.91 ಕೋಟಿ ಮೀಸಲಿಟ್ಟಿರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ) ಮತ್ತು ₹253.50 ಕೋಟಿ ಮೀಸಲಿಟ್ಟಿರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ), ಭಾಗ್ಯಲಕ್ಷ್ಮಿ, ಕುಡಿಯುವ ನೀರು ಪೂರೈಕೆ ಸೇರಿದಂತೆ 14 ಯೋಜನೆಗಳಲ್ಲಿ ನಯಾಪೈಸೆ ಖರ್ಚಾಗಿಲ್ಲ. 15ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಅತೀ ಕಡಿಮೆ ಅನುದಾನ ಬಳಕ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸರಕಾರಗಳು ಹಕ್ಕುಗಳನ್ನು ಇಲ್ಲವಾಗಿಸುವ ಕ್ರಮವನ್ನು ಜಾರಿ ಮಾಡುತ್ತಿವೆ. ದಲಿತರಿಗೆ ಮೀಸಲಿಟ್ಟ ಹಣವನ್ನು ಅವರ ಅಭಿವೃದ್ಧಿಗಾಗಿ ಬಳಸಬೇಕು. ಅದಕ್ಕಾಗಿ ಅಧಿಕಾರದ ವಿಕೇಂದ್ರಿಕರಣ ಆಗಬೇಕು ಎಂದು ಅರ್ಥಶಾಸ್ತ್ರಜ್ಞರಾದ ಪ್ರೋ ಟಿ.ಆರ್. ಚಂದ್ರಶೇಖರ್ ರವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಮೊದಲ ದಲಿತ ಬಂಡಾಯ ಮಹಾಡ್ ಕಂಪನಗಳು : ದೇವನೂರ ಮಹಾದೇವ

ಸರಕಾರ ದಲಿತರ ಅಭಿವೃದ್ಧಿಗೆ ನಿಗದಿ ಪಡಿಸಿದ ಹಣದಲ್ಲಿ ಡೀಮ್ಡ್ ಹೆಸರಿನಲ್ಲಿ ಇತರೆ ಇಲಾಖೆಗಳಿಗೆ ಬಳಕೆ ಮಾಡಲಾಗುತ್ತಿದೆ. ದಲಿತರ ಅಭಿವೃದ್ಧಿಗೆ ಇದ್ದ ಹಣವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣಅರಳಹಳ್ಳಿ ಆರೊಪಿಸಿದ್ದಾರೆ.

ದಲಿತರ ಸ್ಥಿತಿಗತಿ ಸುಧಾರಿಸುವ ನೆಪದಲ್ಲಿ ಪ್ರತಿ ಬಜೆಟ್ ನಲ್ಲೂ ಹಣವನ್ನು ಮೀಸಲಿಡಲಾಗುತ್ತಿದೆ. ಆದರೆ ಅದನ್ನೂ ಕಳಕಳಿಯಿಂದ ಅರ್ಥಪೂರ್ಣವಾಗಿ ಖರ್ಚು ಮಾಡುತ್ತಿಲ್ಲ. ಅಂದ್ರೆ ದಲಿತರಿಗೆ ಯೋಜನೆಯನ್ನು ಕೊಟ್ಟಿದ್ದೇವೆ ಎಂಬುದಕ್ಕೆ ಸರಕಾರದಲ್ಲಿ ದಾಖಲೆ ಇದೆ. ಆದರೆ ಜಾರಿ ಆಗ್ತಾ ಇಲ್ಲ ಎನ್ನುವದನ್ನು ಗಮನಿಸಬೇಕಿದೆ. ಯೋಜನೆ ಇದ್ದು ಆ ಹಣ ದಲಿತರಿಗೆ ಸಿಗದಂತಹ ಪರಸ್ಥಿತಿಯನ್ನು ಆಳುವ ಸರಕಾರಗಳು ನಿರ್ಮಾಣ ಮಾಡಿವೆ. ದಲಿತರಿಗಾಗಿಯೇ ಮೀಸಲಿಟ್ಟ ಹಣವನ್ನು ಅವರಿಗಾಗಿ ನೀಡುವ ಮೂಲಕ ಆ ಸಮುದಾಯವನ್ನು ಬಲಪಡಿಸಲು ಸರಕಾರ ಮುಂದಾಗಬೇಕಿದೆ.

ದಲಿತರ ಅಭಿವೃದ್ಧಿ ಹಣ ಬಳಕೆಗೆ ಸರಕಾರದ ನಿರ್ಲಕ್ಷ್ಯ?

 

 

 

Donate Janashakthi Media

Leave a Reply

Your email address will not be published. Required fields are marked *