ಲಕ್ನೋ : ಪೇರಲ ಹಣ್ಣು ಕದ್ದಿದ್ದಾನೆಂದು ಆರೋಪಿಸಿ ದಲಿತ ಯುವಕನನ್ನು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಮನೇನಾ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಸಾವನ್ನಪ್ಪಿರುವ ವ್ಯಕ್ತಿ ಓಂ ಪ್ರಕಾಶ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಅವರ ಸಹೋದರ ಸತ್ಯ ಪ್ರಕಾಶ್ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಸಹೋದರ, “ಕಾಡಿಗೆ ಹೋಗಿದ್ದನು. ಮನೆಗೆ ಹಿಂದಿರುಗುವಾಗ ತೋಟದಲ್ಲಿ ನೆಲದ ಮೇಲೆ ಬಿದ್ದಿದ್ದ ಪೇರಲ ಹಣ್ಣನ್ನು ಎತ್ತಿಕೊಂಡಿದ್ದನು” ಎಂದು ತಿಳಿಸಿದ್ದಾರೆ.
ಅವನ ಕೈಯಲ್ಲಿ ಪೇರಲ ಹಣ್ಣನ್ನು ನೋಡಿದ, ತೋಟದ ಮಾಲೀಕರಾದ ಭೀಮಸೇನ್ ಮತ್ತು ಬನ್ವಾರಿ ಸೇರಿದಂತೆ ಕೆಲವು ಸ್ಥಳೀಯರು ಸೇರಿ ಥಳಿಸಿದ್ದಾರೆ. ಪ್ರಜ್ಞೆ ಕಳೆದುಕೊಳ್ಳುವವರೆಗೂ ಲಾಠಿ ಮತ್ತು ಇತರ ಭಾರವಾದ ಅಸ್ತ್ರಗಳಿಂದ ಅಮಾನುಷವಾಗಿ ಹೊಡೆದಿದ್ದಾರೆ ಎಂದು ಮೃತನ ಸಹೋದರ ಹೇಳಿದ್ದಾರೆ.
ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವನು ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಂಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತೋಟದಲ್ಲಿ ಸೀಬೆಹಣ್ಣು ಕದ್ದನೆಂದು ಕೊಲೆ ಮಾಡಲಾಗಿದೆ. ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯ ಸೆಕ್ಷನ್ 3(2)(ವಿ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಈಗಾಗಲೇ ಇಬ್ಬರನ್ನು ಬಂಧಿಸಿ ಉಳಿದವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.