ದಲಿತ ಯುವಕರ ಮೇಲೆ ಮೂತ್ರ ವಿಸರ್ಜಿಸಿ, ಉಗುಳಿ, ಅದನ್ನು ನೆಕ್ಕುವಂತೆ ಮಾಡಿ ಮರಕ್ಕೆ ನೇತು ಹಾಕಿ ಹಲ್ಲೆ

ಮೇಕೆಗಳು ಮತ್ತು ಪಾರಿವಾಳಗಳನ್ನು ಕದ್ದಿದ್ದಾರೆ ಎಂದು ಆರೋಪ ದಲಿತ

ಶ್ರೀರಾಂಪುರ: ಮೇಕೆಗಳು ಮತ್ತು ಪಾರಿವಾಳಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಮೂವರು ದಲಿತ ಯುವಕರು ಸೇರಿದಂತೆ ನಾಲ್ವರನ್ನು ಮರಕ್ಕೆ ಕಟ್ಟಿ ತಲೆಕೆಳಗೆ ನೇತುಹಾಕಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಸಂತ್ರಸ್ತರದಲ್ಲಿ ಇಬ್ಬರು ಅಪ್ರಾಪ್ತರು ಎಂದು ವರದಿಯಾಗಿದ್ದು, ಘಟನೆಯ ನಂತರ ಗ್ರಾಮಸ್ಥರು ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯು ಆಗಸ್ಟ್ 25 ರಂದು ನಡೆದಿದ್ದು ಆರು ಮಂದಿ ದುಷ್ಕರ್ಮಿಗಳು ಮೂವರು ದಲಿತ ಯುವಕರು ಮತ್ತು ಒಬ್ಬ ಮರಾಠ ಸಮುದಾಯದ ವ್ಯಕ್ತಿಯನ್ನು ಅವರ ಮನೆಗಳಿಂದ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು ಯುವರಾಜ್ ಗಲಾಂಡೆ, ಮನೋಜ್ ಬೋಡಕೆ, ಪಪ್ಪು ಪರ್ಖೆ, ದೀಪಕ್ ಗಾಯಕವಾಡ, ದುರ್ಗೇಶ್ ವೈದ್ಯ ಮತ್ತು ರಾಜು ಬೋರಗೆ ಎಂದು ಗುರುತಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಮಂಗಳೂರು: ದಲಿತ ಬಾಲಕಿಯ ಅತ್ಯಾಚಾರ; 3 ಸಂಘಪರಿವಾರದ ದುಷ್ಕರ್ಮಿಗಳ ಸೆರೆ; ಇನ್ನಿಬ್ಬರು ನಾಪತ್ತೆ

ಆರೋಪಿಗಳು ಯುವಕರನ್ನು ಜಮೀನಿಗೆ ಕರೆದೊಯ್ದು, ಅವರ ಅಂಗಿಗಳನ್ನು ತೆಗೆದು ಕೈಕಾಲುಗಳನ್ನು ಕಟ್ಟಿದರು ಎಂದು ಅಹ್ಮದ್‌ನಗರ ಪೊಲೀಸರು ತಿಳಿಸಿದ್ದಾರೆ. ಇದರ ನಂತರ ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕೂಡಾ ಹಂಚಿಕೊಳ್ಳಲಾಗಿದೆ. ತಮ್ಮನ್ನು ಬಿಟ್ಟುಬಿಡುವಂತೆ ಆರೋಪಿಗಳೊಂದಿಗೆ ಸಂತ್ರಸ್ತ ಯುವಕರು ಮನವಿ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ದಲಿತ ಹಕ್ಕುಗಳ ಹೋರಾಟಗಾರ ಮತ್ತು ವಂಚಿತ್ ಬಹುಜನ ಅಘಾಡಿ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು ಘಟನೆಯ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಘಟನೆಯನ್ನು “ಜಾತಿ ದೌರ್ಜನ್ಯ” ಎಂದು ಹೇಳಿದ್ದಾರೆ. “ಈ ಘಟನೆ ಜಾತಿ ದೌರ್ಜನ್ಯ ಎಂಬುದು ಸಂಪೂರ್ಣ ಸ್ಪಷ್ಟವಾಗಿದೆ. ಜಾತಿ ವ್ಯವಸ್ಥೆಯ ಕಾರಣಕ್ಕೆ ದಲಿತ ಹುಡುಗರೊಂದಿಗೆ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಕಳ್ಳತನದ ಅನುಮಾನದ ಮೇಲೆ ಬೇರೆ ಯಾರ ಮೇಲೆಯಾದರೂ ಈ ರೀತಿ ಹೊಡೆಯಲು ಸಾಧ್ಯವೆ? ಇಲ್ಲ!” ಎಂದು ಹೇಳಿದ್ದಾರೆ.

“ಅವರಿಗೆ ಹಲ್ಲೆ ಮಾಡಲಾಗಿದೆ. ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿ, ಉಗುಳಲಾಗಿದೆ. ಅಲ್ಲದೆ ಉಗುಳನ್ನು ನೆಕ್ಕಲು ಬಲವಂತಪಡಿಸಲಾಗಿದೆ. ಇಷ್ಟೆ ಅಲ್ಲದೆ ಮರಕ್ಕೆ ತಲೆಕೆಳಗಾಗಿ ನೇತುಹಾಕಲಾಯಿತು. ಭೀಕರವಾಗಿದೆ ಅಲ್ಲವೇ? ನನ್ನ ಜನರು ಪ್ರತಿದಿನ ಇದೇ ಅನುಭವವನ್ನು ಎದುರಿಸುತ್ತಾರೆ. ಜಾತಿ ತಾರತಮ್ಯ, ಅವಹೇಳನ, ನಿಂದನೆ, ಅವಮಾನ, ಹಿಂಸೆ, ಕ್ರೌರ್ಯ ಇಲ್ಲಿ ಹೊಸದೇನಲ್ಲ, ಇವೆಲ್ಲದರ ಬಗ್ಗೆ ಸರಕಾರಕ್ಕೆ ಉದಾಸೀನವಿದೆ” ಎಂದು ಪ್ರಕಾಶ್ ಅಂಬೇಡ್ಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಉತ್ತರ ಪ್ರದೇಶ:ದಲಿತ ಬಾಲಕನನ್ನು ಥಳಿಸಿ, ಕೈಯಲ್ಲಿ ಮಲ ತೆಗೆಸಿದ ಧುರುಳರು

ಸಂತ್ರಸ್ತರಲ್ಲಿ ಒಬ್ಬರಾದ ಶುಭಂ ಮಗಡೆ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕೊಲೆ ಯತ್ನ, ಅಪಹರಣ, ಅಕ್ರಮ ತಡೆ ಮತ್ತು ಗಲಭೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ನಾವು ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅಹ್ಮದ್‌ನಗರದ ಪೊಲೀಸ್ ಅಧೀಕ್ಷಕ ರಾಕೇಶ್ ಓಲಾ ತಿಳಿಸಿದ್ದಾರೆ.

ವಿಡಿಯೊ ನೋಡಿ: ನೇರ ಪ್ರಸಾರ | ಸೌಜನ್ಯ ಪ್ರಕರಣ : SIT ರಚಿಸಿ ಮರು ತನಿಖೆಗೆ ಆಗ್ರಹಿಸಿ ಚಲೋ ಬೆಳ್ತಂಗಡಿ ಮಹಾಧರಣಿ

Donate Janashakthi Media

Leave a Reply

Your email address will not be published. Required fields are marked *