ಲಕ್ನೋ: ಉತ್ತರಪ್ರದೇಶದಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದ್ದು, ಕಳ್ಳತನ ಆರೋಪದ ಮೇಲೆ ದಲಿತ ಯುವಕನೊಬ್ಬನನ್ನು ಥಳಿಸಲಾಗಿದೆ ಎಂದು ವರದಿಯಾಗಿದೆ. ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಅಷ್ಟೇ ಅಲ್ಲದೇ ಮುಖಕ್ಕೆ ಮಸಿ ಬಳಿದು ಗ್ರಾಮದಲ್ಲಿ ಸುತ್ತಾಡಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದ ಬಹ್ರೈಚ್‌ನ ಹಾರ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿಂದೂ ಸಿಂಗ್ ಗ್ರಾಮದ ಮಜ್ರಾ ಬರ್ಕತಾನ್‌ನಲ್ಲಿ ಈ ಘಟನೆ ನಡೆದಿದೆ.
ಕಂಬಕ್ಕೆ ಕಟ್ಟಿ ಥಳಿಸಿದ್ದೂ ಅಲ್ಲದೆ, ಯುವಕನ ಅರ್ಧ ಮೀಸೆ ಕತ್ತರಿಸಿ ವೀಡಿಯೋ ಮಾಡಿದ್ದಾರೆ. ಸದ್ಯ ಈ ದೃಶ್ಯ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ದಲಿತ ಯುವಕನೊಬ್ಬ ಶಾಲೆಯ ಶೌಚಾಲಯದ ಸೀಟನ್ನು ಕದ್ದಿದ್ದು, ಕೆಲವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದನ್ನು ಕಂಡ ಸ್ಥಳೀಯರು ಸ್ಥಳದಲ್ಲೇ ಶಿಕ್ಷೆ ವಿಧಿಸಲು ಮುಂದಾಗಿ, ಮಾರಣಾಂತಿಂಕ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.