ಚಾಮರಾಜನಗರ:ನಾಗರಿಕತೆ ಎಷ್ಟೇ ಮುಂದುವರೆದರೂ, ಜಾತಿ ಹಾಗೂ ಅಸ್ಪೃಶ್ಯತೆ ಭೂತ ಸಮಾಜವನ್ನು ಬಿಟ್ಟು ಹೋಗಿಲ್ಲ. ದಲಿತ ಮಹಿಳೆಯೊಬ್ಬಳು ಟ್ಯಾಂಕ್ ನಲ್ಲಿಯಲ್ಲಿ ನೀರು ಕುಡಿದರು ಎಂಬ ಕಾರಣಕ್ಕೆ ಟ್ಯಾಂಕಿನಲ್ಲಿದ್ದ ಇಡೀ ನೀರನ್ನು ಖಾಲಿ ಮಾಡಿ ಗೋಮೂತ್ರದಲ್ಲಿ ಶುದ್ಧಿ ಮಾಡಿರುವ ಘಟನೆಯು ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದೆ.
ಈ ಘಟನೆಯು ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಟ್ಯಾಂಕಿನ ನೀರನ್ನು ಖಾಲಿ ಮಾಡಿ, ಗೋಮೂತ್ರ ಸಿಂಪಡಿಸಿ ಸ್ವಚ್ಛ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೀಡಿಯೋ ವೈರಲ್ ಆಗಿದೆ.
ಶುಕ್ರವಾರದಂದು ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನ ಮದುವೆ ನಿಮಿತ್ತ ಗ್ರಾಮಕ್ಕೆ ವಧುವಿನ ಕಡೆಯವರು ಎಚ್.ಡಿ ಕೋಟೆ ತಾಲೂಕಿನ ಸರಗೂರಿನಿಂದ ಬಂದಿದ್ದರು. ಮಧ್ಯಾಹ್ನದ ಊಟ ಮುಗಿಸಿ ಬಸ್ಸಿಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಲಿಂಗಾಯತರ ಬೀದಿಯಲ್ಲಿರುವ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ.
ಅದೇ ಬೀದಿಯಲ್ಲಿದ್ದವರು ಯಾರೋ ಇದನ್ನು ನೋಡಿದ್ದಾರೆ. ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ಆಕೆಗೆ ಬೈದಿದ್ದಾರೆ. ನಂತರ ಎಲ್ಲ ನಲ್ಲಿಯನ್ನು ತೆರೆದು ನೀರು ಖಾಲಿ ಮಾಡಿ ಗಂಜಲ ಹಾಕಿ ಸ್ವಚ್ಛಗೊಳಿಸಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ
ಘಟನೆಯು ಚಾಮರಾಜನಗರ ತಾಲ್ಲೂಕು ಆಡಳಿತದ ಗಮನಕ್ಕೆ ಬಂದಿದ್ದು, ಸ್ಥಳೀಯ ಕಂದಾಯ ನಿರೀಕ್ಷಕ ಸೇರಿದಂತೆ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ. ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ 20ಕ್ಕೂ ಯುವಕರು ಘಟನೆ ನಡೆದಿರುವ ಬಗ್ಗೆ ಲಿಖಿತವಾಗಿ ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ತಾಲೂಕು ತಹಶೀಲ್ದಾರ್ ಐ.ಇ.ಬಸವರಾಜು ಶನಿವಾರ ಕಂದಾಯ ನಿರೀಕ್ಷಕರನ್ನು ಕಳುಹಿಸಿ ವರದಿ ಪಡೆದಿದ್ದೇನೆ. ಅದರ ಆಧಾರದಲ್ಲಿ, ಗ್ರಾಮಕ್ಕೆ ತೆರಳಿ ಸ್ಥಳೀಯರನ್ನು ವಿಚಾರಿಸಿ ಸಂಪೂರ್ಣ ಮಾಹಿತಿ ಕಲೆ ಹಾಕಿ ಸಮಗ್ರ ವರದಿ ನೀಡಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗಿದೆ. ಗ್ರಾಮದಲ್ಲಿ ಎಲ್ಲ ಸಮುದಾಯದವರ ಸಭೆ ನಡೆಸಿ, ಘಟನೆ ನಡೆದಿರುವುದು ನಿಜವೇ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ವರದಿ ಬಂದ ನಂತರ ಕ್ರಮ
ಘಟನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸುದ್ದಿಗಾರರೊಂದಿಗೆ ಮಾತನಾಡಿದ್ದು, ‘ಶನಿವಾರ ಸಂಜೆ ಮಾಹಿತಿ ಸಿಕ್ಕಿತು. ತಕ್ಷಣವೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿದ್ದೇನೆ. ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇನೆ. ವಾಸ್ತವಾಂಶ ಏನುಬೆಂಬುದು ಗೊತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸುತ್ತೇನೆ’ ಎಂದರು.