ಇದು ಭಾರತ ವಸಾಹತುಶಾಹಿ ಆಳ್ವಿಕೆಯಿಂದ ಸ್ವತಂತ್ರಗೊಂಡು ಇನ್ನೂ ಎರಡೂವರೆ ದಶಕಗಳಷ್ಟೇ ಆಗಿದ್ದಾಗ, ದೇಶದ ಸಾಮಾಜಿಕ-ರಾಜಕೀಯ ರಂಗದಲ್ಲಿ ಭಾರೀ ಸಂಚಲನ ಮೂಡಿಸಿದ ಒಂದು ಬಹು ಮಹತ್ವದ ಸಾಮಾಜಿಕ ಚಳುವಳಿಯಾದ ‘ದಲಿತ ಪ್ಯಾಂಥರ್ಸ್’ ಚರಿತ್ರೆಯನ್ನು ಪ್ರಸ್ತುತ ಪಡಿಸುವ ಕೃತಿ. ಸ್ವತಂತ್ರ ಭಾರತ ಒಂದು ಗಣತಂತ್ರವಾಗಿ ತನ್ನ ಮುಂದಿಟ್ಟುಕೊಂಡ ಸ್ವಾತಂತ್ರ‍್ಯ, ಸಮಾನತೆ, ಸೋದರತ್ವ ಮತ್ತು ಸಾಮಾಜಿಕ ನ್ಯಾಯದ ಗುರಿಗಳಿಂದ ದೂರ ಸರಿಯುತ್ತಿದ್ದುದರ ವಿರುದ್ಧ ಯುವಜನರ, ಅದರಲ್ಲೂ ತಳ ಸಮುದಾಯಗಳಿಂದ ಬಂದ ಯುವಜನರ ಹತಾಶೆ ಮತ್ತು ಕ್ರೋಧಕ್ಕೆ 1972 ರಿಂದ 1975ರ ನಡುವೆ ಗಟ್ಟಿ ದನಿ ನೀಡಿದ, ಅವರಲ್ಲಿ ಸಮರೋತ್ಸಾಹವನ್ನು ತುಂಬಿದ ‘ದಲಿತ ಪ್ಯಾಂಥರ್ಸ್’ ಚಳುವಳಿಯ ಸಂಸ್ಥಾಪಕರಲ್ಲಿ ಒಬ್ಬರಾದ ಜಯರಾಂ ವಿಠ್ಠಲ್ ಪವಾರ್ ಇದರ ಲೇಖಕರು. ದಲಿತ
ಈ ಪುಸ್ತಕವನ್ನು ಇದೇ ಜುಲೈ 16ರಂದು ಹೊಸತು ಪತ್ರಿಕೆ ಸಂಪಾದಕರಾದ ಡಾ ಸಿದ್ದನಗೌಡ ಪಾಟೀಲ್ ಅವರು ಬಿಡುಗಡೆ ಮಾಡಲಿದ್ದಾರೆ. ಬಿಡುಗಡೆ ಸಮಾರಂಭ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ‘ರಾ.ಹ.ದೇಶಪಾಂಡೆ ಸಭಾಭವನ”ದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ, ಕರ್ನಾಟಕ ಸರಕಾರದ ಭಾಷಾಂತರ ಇಲಾಖೆಯ ನಿರ್ದೇಶಕರಾದ ಡಾ.ಎಂ.ವೆಂಕಟೇಶ ಮುಖ್ಯ ಅತಿಥಿಗಳಾಗಿರುತ್ತಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಅನುವಾದಕ ಡಾ.ಸದಾಶಿವ ಮರ್ಜಿ, ಪ್ರಕಾಶಕರಾದ ಕ್ರಿಯಾ ಮಾಧ್ಯಮದ ವಸಂತರಾಜ ಎನ್.ಕೆ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ದಲಿತ

‘ದಲಿತ ಪ್ಯಾಂಥರ್ಸ್’ ನ ಇನ್ನೊಬ್ಬ ಸಂಸ್ಥಾಪಕರಾದ ನಾಮದೇವ ಢಸಾಳರೊಂದಿಗೆ ಮೇ 29, 1972ರಂದು ಮುಂಬೈಯ ಒಂದು ಬೀದಿಯಲ್ಲಿ ನಡೆದು ಹೋಗುತ್ತಿರುವಾಗ ಜನ್ಮ ತಾಳಿದ “ದಲಿತ ಪ್ಯಾಂಥರ್ಸ್” ಹೆಸರಿಗೆ ತಕ್ಕಂತೆ ತನ್ನ ಧ್ಯೇಯಸಾಧನೆಗೆ ಬೀದಿಗೆ ಇಳಿಯಿತು ಎನ್ನುವ ಜೆ.ವಿ.ಪವಾರ್ “ದಲಿತ ಪ್ಯಾಂಥರ್ಸ್ ನ ಯುಗ ಉಜ್ವಲ ಅವಧಿಯಾಗಿತ್ತು ..ಈ ಚಳುವಳಿಯೊಂದಿಗೆ ನನ್ನ ಒಡನಾಟ ನನ್ನ ಬದುಕಿನ ಅತ್ಯಂತ ಮಹತ್ವದ ಅವಧಿ. ಆದ್ದರಿಂದ ನನ್ನ ಆತ್ಮವೃತ್ತಾಂತದ ಬದಲು, ದಲಿತ ಪ್ಯಾಂಥರ್ಸ್ ನ ಚಳುವಳಿಯ ಆತ್ಮಚರಿತ್ರೆಯನ್ನು ಬರೆಯಲು ಆದ್ಯತೆ ನೀಡಿದೆ” ಎಂದಿದ್ದಾರೆ.
ನಾಮದೇವ್ ಢಸಾಲ್ ಮತ್ತು ಆರಂಭದಿಂದಲೂ ಈ ಸಂಘಟನೆಯನ್ನು ಪೋಷಿಸಿ ಬೆಳೆಸಿದ ರಾಜಾ ಢಾಲೆ ಈ ಮೊದಲೇ ಈ ಚರಿತ್ರೆಯ ತಮ್ಮ ಆವೃತ್ತಿಗಳನ್ನು ಮರಾಠಿ ಭಾಷೆಯಲ್ಲಿ ರಚಿಸಿದ್ದಾರೆ. ಆದರೂ, ಜೆ.ವಿ.ಪವಾರ್ ಮರಾಠಿ ಭಾಷೆಯಲ್ಲಿ ರಚಿಸಿದ ‘ಡಾ.ಬಿ.ಆರ್.ಅಂಬೇಡ್ಕರ್ ನಂತರದ ಅಂಬೇಡ್ಕರವಾದೀ ಚಳುವಳಿ’ಎಂಬ ಸರಣಿ ಕೃತಿಗಳಲ್ಲಿ ನಾಲ್ಕನೆಯದಾದ ಈ ಕೃತಿಯ ಇಂಗ್ಲಿಷ್ ಅನುವಾದವನ್ನು ಪ್ರಕಟಿಸಿರುವ ಫಾರ್ವರ್ಡ್ ಪ್ರೆಸ್ ಬುಕ್ಸ್ ನ ಮುಖ್ಯಸಂಪಾದಕರು ಇದನ್ನು ದಲಿತ ಪ್ಯಾಂಥರ್ಸ್ ಪ್ರಮಾಣಿತ ಚರಿತ್ರೆ ಎಂದಿದ್ದಾರೆ. ಏಕೆಂದರೆ ಇದರ ಲೇಖಕರು ಸಂಘಟನೆಯ ಇಬ್ಬರು ಪಿತೃಗಳಲ್ಲಿ ಒಬ್ಬರು ಮಾತ್ರವಲ್ಲ, ಅದರ ಪ್ರಧಾನ ಕಾರ್ಯದರ್ಶಿಯಾಗಿ ಅದರ ಎಲ್ಲ ಪತ್ರವ್ಯವಹಾರಗಳು ಮತ್ತು ದಾಖಲೆ-ದಸ್ತಾವೇಜುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವವರು, ಅಷ್ಟೇ ಅಲ್ಲದೆ, ಪೋಲೀಸ್ ಮತ್ತು ಗುಪ್ತಚರ ಇಲಾಖೆಯ ವರದಿಗಳೂ ಸೇರಿದಂತೆ ಮಹಾರಾಷ್ಟ್ರ ಸರಕಾರದ ಬಳಿಯಿರುವ ದಾಖಲೆಗಳನ್ನೂ ಪಡೆದಿರುವವರು ಎಂದು ಅವರು ಹೇಳುತ್ತಾರೆ. ಧಾರವಾಡ
ಸ್ವತಃ ಜೆ.ವಿ.ಪವಾರ್ ಕೂಡ “ದಲಿತ ಪ್ಯಾಂಥರ್ ಚಳವಳಿಯ ಇತಿಹಾಸವನ್ನು ಕೇವಲ ಮೂವರು ವ್ಯಕ್ತಿಗಳು ಮಾತ್ರ ಬರೆಯಬಲ್ಲರು ಎಂದು ನಾನು ಭಾವಿಸುತ್ತೇನೆ, ಸ್ವತ: ನಾನು, ರಾಜಾ ಢಾಲೆ ಮತ್ತು ನಾಮದೇವ ಢಸಾಳ” ಎಂದು ಹೇಳಿದ್ದಾರೆ.
ಫಾರ್ವರ್ಡ್ ಪ್ರೆಸ್ ಬುಕ್ಸ್ ಪ್ರಕಟಿಸಿರುವ, ರಕ್ಷಿತ್ ಸೊನವಣೆಯವರು ಮರಾಠಿಯಿಂದ ಅನುವಾದಿಸಿರುವ “Dalit Panthers : An Authoritative History” ಕೃತಿಯನ್ನು ಆಧರಿಸಿ ಸದಾಶಿವ ಮರ್ಜಿಯವರು ಇದನ್ನು ಕನ್ನಡಕ್ಕೆ ತಂದು ಕೊಟ್ಟಿದ್ದಾರೆ.
ಸಾಮಾಜಿಕ ನ್ಯಾಯ ಒಂದು ಪ್ರಮುಖ ಪ್ರಶ್ನೆಯಾಗಿ ಮತ್ತೆ ಮುನ್ನೆಲೆಗೆ ಬಂದಿರುವ ಪ್ರಸ್ತುತ ಸಮಯದಲ್ಲಿ, ಈ ಕೃತಿಯಲ್ಲಿನ ಮಾಹಿತಿಗಳು, ಅನುಭವಗಳು ಮತ್ತು ವಿಶ್ಲೇಷಣೆಗಳು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟದ ಮುಂದಿನ ದಾರಿಯನ್ನು ರೂಪಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಬಲ್ಲವು.
ಇದನ್ನೂ ಓದಿ : ನನ್ನ ‘ತಮ್ಮಯ್ಯ’, ಅವರ ಸೋವಿಯೆಟ್ ಪುಸ್ತಕಗಳು ಮತ್ತು ಪುಸ್ತಕ ಸಮಯ : ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ ದಲಿತ
ಪುಸ್ತಕದ ಬ್ಲರ್ಬಿನಿಂದ
1972 ರಲ್ಲಿ, ನನ್ನ ಕವಿ-ಸ್ನೇಹಿತ ನಾಮದೇವ್ ಢಸಾಳ ಅವರೊಂದಿಗೆ, ನಾನು ದಲಿತ ಪ್ಯಾಂಥರ್ ನ ಸಹ-ಸಂಸ್ಥಾಪಕನಾಗಿ ಅದನ್ನು ಸ್ಥಾಪಿಸಿದೆ. ಆದಾಗ್ಯೂ, ಇದು ಅಲ್ಪಕಾಲಿಕ ಚಳುವಳಿಯಾಗಿತ್ತು, ಅಮೇರಿಕಾದ ‘ಬ್ಲಾಕ್ ಪ್ಯಾಂಥರ್ಸ್ ನಂತೆ, , ಎಲ್ಲಾ ಅಂಬೇಡ್ಕರ್ ನಂತರದ ಚಳುವಳಿಗಳಲ್ಲಿ ದಲಿತ ಪ್ಯಾಂಥರ್ ಅತ್ಯಂತ ಹೆಚ್ಚು ಮೆಚ್ಚುಗೆಯನ್ನು ಪಡೆದಿದೆ.
ದಲಿತರ ಮೇಲೆ ನಡೆಸಲಾಗುತ್ತಿದ್ದ ದೌರ್ಜನ್ಯಗಳನ್ನು ತಡೆಯಲು ಪ್ರಯತ್ನಿಸಿದ್ದು ದಲಿತ ಪ್ಯಾಂಥರ್ಸ್. ದಲಿತ ಜನಸಾಮಾನ್ಯರಲ್ಲಿ ತಮ್ಮನ್ನು ರಕ್ಷಿಸಲು ಒಂದು ಗುಂಪು ಮತ್ತು ಸಂಘಟನೆ ಇದೆ ಎಂಬ ಪ್ರಜ್ಞೆ ಬೆಳೆಯುತ್ತಿತ್ತು. ಇಂದಿಗೂ, ಹಳ್ಳಿಗಳಲ್ಲಿ ದಲಿತರು ದೌರ್ಜನ್ಯಗಳನ್ನು ಎದುರಿಸಿದಾಗ, ಜನರು ದಲಿತ ಪ್ಯಾಂಥರ್‌ನಂತಹ ಚಳುವಳಿಯ ಪುನರುಜ್ಜೀವನಕ್ಕಾಗಿ ಹಾತೊರೆಯುತ್ತಾರೆ.
ಜನರ ಹೃದಯದಲ್ಲಿರುವ ಈ ಆಶಯವನ್ನು ಜನಸಾಮಾನ್ಯರಲ್ಲಿ ದಲಿತ ಪ್ಯಾಂಥರ್‌ಗೆ ದೊರೆತ ಅತ್ಯಂತ ದೊಡ್ಡ ಮನ್ನಣೆ ಎಂದು ಕಾಣಬಹುದು.
ದಲಿತ ಪ್ಯಾಂಥರ್ ಚಳವಳಿಯ ಇತಿಹಾಸವನ್ನು ಕೇವಲ ಮೂವರು ವ್ಯಕ್ತಿಗಳು ಮಾತ್ರ ಬರೆಯಬಲ್ಲರು ಎಂದು ನಾನು ಭಾವಿಸುತ್ತೇನೆ, ಅವರಲ್ಲಿ ಪ್ರಮುಖವಾಗಿ ಸ್ವತ: ನಾನು, ರಾಜಾ ಢಾಲೆ ಮತ್ತು ನಾಮದೇವ ಢಸಾಳ. ನಾನು ಆರಂಭದಲ್ಲಿ ಸಂಘಟಕನಾಗಿದ್ದೆ ಮತ್ತು ನಂತರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದೆ, ಆದ್ದರಿಂದ ನನ್ನ ಬಳಿ ಎಲ್ಲಾ ಸಂಬAಧಿತ ಪತ್ರವ್ಯವಹಾರ ಮತ್ತು ದಾಖಲೆಗಳಿವೆ. ನನ್ನ ಬರವಣಿಗೆ ಅಧಿಕೃತವಾಗಿದೆ ಮತ್ತು ದಾಖಲೆಗಳಿಂದ ಬೆಂಬಲಿತವಾಗಿದೆ. ದಲಿತ
- ಜೆ.ವಿ. ಪವಾರ್
ಅಮೇರಿಕೆಯ ಬ್ಲಾಕ್ ಪ್ಯಾಂಥರ್ ಚಳುವಳಿಯ ಪ್ರೇರಣೆಯಿಂದ ಭಾರತದಲ್ಲಿ ದಲಿತ ಪ್ಯಾಂಥರ್ ಚಳುವಳಿಯನ್ನು ಅಂಬೇಡ್ಕರ್ ಮಹಾ ಪರಿನಿರ್ವಾಣದ ನಂತರ ರೂಪಿಸಿ ದಲಿತರಲ್ಲಿ ಮಡುಗುಟ್ಟಿದ ಹತಾಶೆ, ನೋವು, ಆತಂಕ ಮತ್ತು ಸದಾ ಭಯದಲ್ಲಿಯೇ ಜೀವಿಸುವ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ ಅವರು ಉಸಿರಾಡುವಂತೆ ಮಾಡಿದ್ದು ದಲಿತ ಪ್ಯಾಂಥರ್ ಸಂಘಟನೆ. 70 ರ ದಶಕದಲ್ಲಿ ಅಂಬೇಡ್ಕರೋತ್ತರ ದಲಿತ ಚಳುವಳಿಗಳೆಲ್ಲ ದಲಿತ ನಾಯಕರ ಅಧಿಕಾರ ಲಾಲಸೆ, ಸ್ವಾರ್ಥತನ, ರಾಜಕೀಯ ಆಕಾಂಕ್ಷೆಗಳು ಹಾಗೂ ಶಿಕ್ಷಿತ ಮಧ್ಯಮ ವರ್ಗಗಳ ನಿರಾಸಕ್ತಿ, ಪರಕೀಯತೆ, ಮೂಲ ಜಾತಿಯ ಬೇರುಗಳನ್ನು ಕಳೆದುಕೊಳ್ಳುವಿಕೆ, ಸಮುದಾಯದ ಬಗೆಗಿನ ತೀವ್ರ ನಿರ್ಲಕ್ಷತೆ ಮುಂತಾದವುಗಳು ಹೆಚ್ಚುತ್ತಿದ್ದ ಕಾಲಘಟ್ಟದಲ್ಲಿ ಸಾಮಾಜಿಕ ಸಂಘಟನೆಯ ದರ್ದು ಇರುವುದನ್ನು ಮನಗಂಡ ಹೊಸ ಪೀಳಿಗೆಯ ದಲಿತ ನಾಯಕರು ಕಟ್ಟಿದ ತೀವ್ರಗಾಮಿ ಪ್ರಗತಿಪರ ಸಂಘಟನೆಯೇ ದಲಿತ ಪ್ಯಾಂಥರ್. ಧಾರವಾಡ
ಸಮಕಾಲೀನ ದಲಿತ ಚಳುವಳಿಯನ್ನು ಅಧ್ಯಯನ ಮಾಡುವ ಸಾಹಿತ್ಯಾಸಕ್ತರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಇತರೆ ದಲಿತ ಅಧ್ಯಯನಾಸಕ್ತರಿಗೆ ಇದೊಂದು ಹೆಚ್ಚು ಪ್ರಸ್ತುತವಾದ ದಾಖಲೆಯಾಗಿರುವುದು
- ಡಾ. ಸದಾಶಿವ. ಮರ್ಜಿ
ಇದನ್ನೂ ನೋಡಿ : ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ಆರಂಭವಾಗಿದ್ದು ಹೇಗೆ? – ವಿಶ್ಲೇಷಣೆ : ಎಚ್. ಆರ್. ನವೀನ್‌ಕುಮಾರ್ Janashakthi ದಲಿತ
