ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ದಲಿತರ ಕುಂದು ಕೊರತೆ ಸಭೆ

ಉಡುಪಿ: ಜಿಲ್ಲಾ ವ್ಯಾಪ್ತಿಯ ದಲಿತರ ಕುಂದು ಕೊರತೆಗಳ ಸಭೆ ದಿನಾಂಕ ಫೆಬ್ರವರಿ 7ರಂದು ಬೆಳಿಗ್ಗೆ 11ಘಂಟೆಗೆ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಜಿಲ್ಲೆಯಲ್ಲಿ ಬಹುತೇಕ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕಿ ಪ್ರಕರಣವನ್ನು ಮುಕ್ತಾಯ ಗೊಳಿಸುತ್ತಿರುವ ಕುರಿತು ಮುಖಂಡರಾದ ಉದಯ ಕುಮಾರ್ ತಲ್ಲೂರ್, ಜಯನ್ ಮಲ್ಪೆ, ಮೋಹನ್ ಚಂದ್ರ ಕಾಳಾ ವರ್ಕರ್, ಶ್ರೀನಿವಾಸ್ ವಡ್ಡರ್ಸೆ ಪ್ರಶ್ನಿಸುವ ಮೂಲಕ ವಿರೋಧ ವ್ಯಕ್ತ ಪಡಿಸಿದರು. ಇದಕ್ಕೆ ಸರಕಾರದ ಪರ ವಕೀಲರು ಉತ್ತರಿಸಿದರಾದರೂ ಸಮರ್ಪಕವಾದ ಪರಿಹಾರ ದೊರಕಲಿಲ್ಲ.

ಹನೆಹಳ್ಳಿ ಕೃಷ್ಣರವರ ಶೂಟೌಟ್ ಪ್ರಕರಣದ ಬಗ್ಗೆ ಸುಂದರ್ ಮಾಸ್ಟರ್, ವಿಶ್ವನಾಥ್ ಪೇತ್ರಿ, ಆರತಿ ಗಿಳಿಯಾರ್, ಎಸ್ ಪಿ ಯವರನ್ನು ಪ್ರಶ್ನಿಸಿದರು. ಇದಕ್ಕೆj ಉತ್ತರಿಸಿದ ಎಸ್ ಪಿ. ಯವರು ಪ್ರಕರಣ ವನ್ನು ಸಿಓಡಿ ಗೆ ಒಪ್ಪಿಸಿದ್ದಾಗಿ ತಿಳಿಸಿದರು.

ಇದನ್ನೂ ಓದಿ: ಕಾರ್ಮಿಕ ಸಂಹಿತೆ ಜಾರಿಗೆ ವಿರೋಧ: ರಾಜ್ಯ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆಗೆ ಪತ್ರ -ಎಳಮರಂ ಕರೀಂ

ಬ್ರಹ್ಮಾವರದಲ್ಲಿ ಸರ್ವಿಸ್ ರಸ್ತೆಗಳ ಮೇಲೆ ವಾಹನ ಗಳನ್ನು ನಿಲ್ಲಿಸಿ ತೆರಳುತ್ತಿರುವವರ ಬಗ್ಗೆ ಮುಖಂಡರಾದ ಶ್ಯಾಮ್ ರಾಜ್ ಬಿರ್ತಿ, ಮಂಜುನಾಥ್ ಬಾಳ್ ಕುದ್ರು ಎಸ್ ಪಿ ಯವರ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಎಸ್ ಪಿ ಯವರು ತಿಳಿಸಿದರು.

ವಡ್ಡರ್ಸೆ ಅಂಬೇಡ್ಕರ್ ಭವನದ ಸಮಸ್ಯೆ ಬಗ್ಗೆ ಶ್ರೀನಿವಾಸ್ ವಡ್ಡರ್ಸೆ, ಗಂಗೊಳ್ಳಿ ಸೊಸೈಟಿಯಲ್ಲಿ ಪರಿಶಿಷ್ಟಜಾತಿ ವೃತ್ತಿಪರ ಮೀನುಗಾರರ ಸದಸ್ಯತ್ವದ ಗೊಂದಲದ ಬಗ್ಗೆ ಚಂದ್ರಮ ತಲ್ಲೂರು, ಶಶಿ ಬಳ್ಕೂರು ಮಾತನಾಡಿದರು. ಸಂಬಂಧಿಸಿದ ಇಲಾಖೆಗಳ ಮೂಲಕ ಸಮಸ್ಯೆ ಬಗೆಹರಿಸುವ ಭರವಸೆ ಮಾನ್ಯ ಎಸ್ ಪಿ ಯವರಿಂದ ದೊರಕಿತು.

ಉಡುಪಿ ಜಿಲ್ಲೆಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿ ಯಲ್ಲಿ ಅಧಿಕಾರಿಗಳೇ ಇಲ್ಲದಿರುವ ಬಗ್ಗೆ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ದಲಿತ ಸಮುದಾಯದ ಬಗ್ಗೆ ತೋರುವ ನಿರ್ಲಕ್ಷ್ಯತನದ ಬಗ್ಗೆ ದಲಿತ ಮುಖಂಡರು ಬೇಸರ ವ್ಯಕ್ತಪಡಿಸಿದರು. ಕ್ಲಪ್ತ ಸಮಯಕ್ಕೆ ದಲಿತರ ಕುಂದು ಕೊರತೆ ಸಭೆ ಕರೆದು ದಲಿತರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುತ್ತಿರುವ ಎಸ್ ಪಿ ಯವರ ನಡೆಗೆ ವ್ಯಾಪಕ ಪ್ರಶಂಶೆ ವ್ಯಕ್ತವಾಯಿತು.

ಸಭೆಯಲ್ಲಿ ರಮೇಶ್ ಕೋಟ್ಯಾನ್, ಗಣೇಶ್ ನೆರ್ಗಿ, ವಾಸುದೇವ ಮುದ್ದೂರು, ಪರಮೇಶ್ವರ್ ಉಪ್ಪೂರು, ಕುಸುಮ ಕಟ್ಕೆರೆ, ಜ್ಯೋತಿ ಶಿರಿಯಾರ, ಆನಂದ ಮಟಪಾಡಿ, ಹರೀಶ್ ಮಲ್ಪೆ ಇನ್ನಿತರ ದಲಿತ ಮುಖಂಡರು ಹಾಜರಿದ್ದರು.

ಇದನ್ನೂ ನೋಡಿ: ಮುಚ್ಚುವ ಅಂಚಿನಿಂದ.. ನೂರರ ಸಂಭ್ರಮದವರೆಗೆ – ಸರಕಾರಿ ಶಾಲೆಯ ಕಥೆ Janashakthi Media

Donate Janashakthi Media