ಕೋಲಾರ: ಗ್ರಾಮ ದೇವತೆ ಮೆರವಣಿಗೆ ವೇಳೆ ದಲಿತ ಕುಟುಂಬಕ್ಕೆ ಸೇರಿದ ಬಾಲಕನೋರ್ವ ದೇವರನ್ನು ಮುಟ್ಟಿದ್ದಕ್ಕೆ, ಆ ಬಾಲಕನ ಕುಟುಂಬವನ್ನು ಊರಿನ ಸವರ್ಣೀಯರು ಬಹಿಷ್ಕಾರ ಹಾಕಿದ್ದಾರೆ. ಜೊತೆಗೆ ಈ ಬಡ ಕುಟುಂಬಕ್ಕೆ ಅರವತ್ತು ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ ಎಂಬ ಆರೋಪ ಬಂದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಳ್ಳೇರಹಳ್ಳಿಯಲ್ಲಿ ಘಟನೆ ಜರುಗಿದೆ. ಕಳೆದ ಮೂರು ದಿನಗಳ ಹಿಂದೆ ಹುಳ್ಳೇರಹಳ್ಳಿ ಗ್ರಾಮದಲ್ಲಿ ದೇವಾಲಯವೊಂದನ್ನು ಪ್ರತಿಷ್ಟಾಪನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭೂದೇವಿಯ ಉತ್ಸವ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದರು. ಉತ್ಸವದ ವೇಳೆ ದಲಿತ ಕುಟುಂಬಕ್ಕೆ ಸೇರಿದ ಚೇತನ್ ಎಂಬ ಯುವಕ ದೇವರನ್ನು ಮುಟ್ಟಿದ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಆ ಬಾಲಕನ ಕುಟುಂಬಕ್ಕೆ 60 ಸಾವಿರ ರೂ ದಂಡ ಕಟ್ಟುವಂತೆ ಮೇಲ್ಜಾತಿಯ ಕೆಲವರು ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
60 ಸಾವಿರ ದಂಡ ಕಟ್ಟಿ ಇಲ್ಲವಾದಲ್ಲಿ ಗ್ರಾಮದಿಂದ ಬಹಿಷ್ಕರಿಸಲಾಗುವುದು ಎಂದು ಗ್ರಾಮದ ಮುಖಂಡರು, ಬಾಲಕನ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ. ಕೆಲವರ ಮಾಹಿತಿ ಪ್ರಕಾರ, ಉತ್ಸವ ಮೂರ್ತಿಯನ್ನು ಚೇತನ್ ಎಂಬ ಯುವಕ ಹಾಳು ಮಾಡಿದ ಹಿನ್ನೆಲೆ ಅದನ್ನ ಕಟ್ಟಿಕೊಡುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ದಲಿತರ ಮೇಲಿನ ದೌರ್ಜನ್ಯ-ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಬೃಹತ್ ಪ್ರತಿಭಟನೆ
ಈ ಘಟನೆ ಬೆಳಕಿಗೆ ಬರುವಂತೆ, ಚೇತನ್ ಮನೆಗೆ ಪ್ರಗತಿಪರ ಸಂಘಟನೆ ಹಾಗೂ ದಲಿತ ಸಂಘಟನೆಗಳ ಮುಖಂಡರು ಭೇಟಿ ನೀಡಿದ್ದಾರೆ. ಕುಟುಂಬದ ಜೊತೆ ನಿಲ್ಲುವುದಾಗಿ ಹಾಗೂ ದೂರನ್ನು ದಾಖಲಿಸುವುದಾಗಿ ಹೇಳಿದ್ದಾರೆ. ಇದೇ ವೇಳೆ ಬಾಲಕ ನಡೆದ ಘಟನೆಯನ್ನು ವಿವರಿಸುತ್ತಾ, “ನೀನು ಇಲ್ಲಿಗೆ ಬರಬಾರದು. ದೇವರನ್ನು ಮುಟ್ಟಿ ಮೈಲಿಗೆ ಮಾಡಿದ್ದೀಯ. ಅರವತ್ತು ಸಾವಿರ ದಂಡ ಕಟ್ಟಿದರೆ ಮಾತ್ರ ಊರಿನೊಳಗೆ ನಿಮ್ಮ ಕುಟುಂಬ ಪ್ರವೇಶಿಸಬಹುದು” ಎಂದರು. ಅಷ್ಟೆ ಅಲ್ಲದೆ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾರಾಯಣಸ್ವಾಮಿ ಅವರು ಹೊಡೆಯಲು ಬಂದರು” ಎಂದು ತಿಳಿಸಿದ್ದಾನೆ.
ಬಾಲಕನ ತಾಯಿ ಶೋಭಾ ಮಾತನಾಡಿ, “ಅಂದು ನಾನು ಊರಿನಲ್ಲಿ ಇರಲಿಲ್ಲ. ಎಂದಿನಂತೆ ಬೆಳಿಗ್ಗೆ ಎದ್ದು ರೈಲು ಹತ್ತಿ ಬೆಂಗಳೂರಿಗೆ ಹೌಸ್‌ಕೀಪಿಂಗ್ ಕೆಲಸಕ್ಕೆ ಹೋಗಿದ್ದೆ. ಮನೆಗೆ ಬಂದಾಗ ವಿಷಯ ತಿಳಿಯಿತು. ನಮ್ಮನ್ನು ಊರಿನಿಂದ ಹೊರಹಾಕುತ್ತಿದ್ದಾರೆ. ದಂಡ ಕಟ್ಟಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಾವು ಎಲ್ಲಿಂದ ದಂಡ ಕಟ್ಟಬೇಕು? “ನಾವು ದಿನಕ್ಕೆ ಮುನ್ನೂರು ರೂಪಾಯಿ ಕೂಲಿ ಮಾಡೋರು. ಅರವತ್ತು ಸಾವಿರ ರೂ.ಗಳನ್ನು ಎಲ್ಲಿಂದ ತಂದುಕೊಡಲಿ? ಎಂದು ಕಣ್ಣೀರು ಹಾಕಿದರು.