ನವದೆಹಲಿ: ಕರ್ನಾಟಕ ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಂಗೀತ ನಿರ್ದೇಶಕ ಇಳಯರಾಜ, ಭಾರತದ ಶ್ರೇಷ್ಠ ಅಥ್ಲೀಟ್ ಪಿ ಟಿ ಉಷಾ ಹಾಗೂ ಖ್ಯಾತ ಚಿತ್ರಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.
ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ತಲಾ ಒಬ್ಬರಂತೆ ಆಯ್ಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬೇರೆ ಬೇರೆ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಕೆಲವರು ಸರಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ಅದರ ಹಿಂದೆ ಬೇರೇನಾದರೂ ಲೆಕ್ಕಾಚಾರವಿದೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಧಾರ್ಮಿಕ/ ಸಾಮಾಜಿಕ, ಕ್ರೀಡಾ, ಸಂಗೀತ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಕೇಂದ್ರ ಸರಕಾರ ಮನ್ನಣೆಯನ್ನು ನೀಡಿದೆ ಎನ್ನುವುದು ಒಂದು ಕಡೆ. ಇನ್ನೊಂದು ಕಡೆ, ಈ ನಾಲ್ವರೂ ದಕ್ಷಿಣ ಭಾರತದವರು ಎನ್ನುವುದು ಇನ್ನೊಂದು ಕಡೆ.
ಕರ್ನಾಟಕದಿಂದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಕೇರಳದಿಂದ ಅಥ್ಲೀಟ್ ಪಿ ಟಿ ಉಷಾ, ತಮಿಳುನಾಡಿನಿಂದ ಸಂಗೀತ ಮಾಂತ್ರಿಕ ಇಳಯರಾಜ, ಆಂಧ್ರಪ್ರದೇಶದಿಂದ ಖ್ಯಾತ ಚಿತ್ರಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.