ದಬ್ಬಾಳಿಕೆಯ ಭೂ ಸ್ವಾಧೀನ ಕ್ರಮ-ಕುಟುಂಬದವರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಕೆ.ಚೌಡೇನಹಳ್ಳಿ ಗ್ರಾಮದ ಎಂಟು ಕುಟುಂಬಗಳ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸಿ, ಅವರು ಕಳೆದ 40 ವರ್ಷಗಳಿಂದ ಉಳುಮೆ ಮಾಡಿಕೊಂಡು ಸ್ವಾಧೀನದಲ್ಲಿರುವ ಭೂಮಿಯನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಕೆ.ಚೌಡೇನಹಳ್ಳಿ ಗ್ರಾಮದ ನಿವಾಸಿಗಳು ಹಾಸನ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ಪ್ರಕರಣದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶ ಮಾಡಿ ಅನ್ಯಾಯಕ್ಕೊಳಗಾಗಿರುವ ರೈತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಮತ್ತು ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೆ, ಈ ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೂ ಯಾವ ಅಧಿಕಾರಿಗಳು ಮತ್ತು ವ್ಯಕ್ತಿಗಳು ಈ ಭೂಮಿಯನ್ನು ಸರ್ವೆ ಮಾಡುವುದಾಗಲಿ, ತೆರವುಗೊಳಿಸಲು ಪ್ರಯತ್ನ ಮಾಡದಂತೆ ಸೂಕ್ತ ನಿರ್ಧೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕೆ.ಚೌಡೇನಹಳ್ಳಿ ಗ್ರಾಮದಔರಾದ ತಿಮ್ಮಮ್ಮ ಕೋಂ ತಿಮ್ಮೇಗೌಡ, ರಮೇಶ ಬಿನ್ ಅಮಾಸೇಗೌಡ, ಸಿ.ಸಿ.ಮಂಜುನಾಥ ಬಿನ್ ಚುಂಚೇಗೌಡ, ಅಶೋಕ ಬಿನ್ ಚನ್ನೇಗೌಡ, ದೊರೆಸ್ವಾಮಿ ಬಿನ್ ಶಿವೇಗೌಡ, ರಂಗೇಗೌಡ ಬಿನ್ ರಂಗೇಗೌಡ, ಸಣ್ಣಮ್ಮ ಕೋಂ ರಂಗೇಗೌಡ, ಮಂಜೇಗೌಡ ಬಿನ್ ರಂಗೇಗೌಡ ಈ 8 ಕುಟುಂಬಗಳಿಗೆ ಇಡೀ ಗ್ರಾಮದಲ್ಲಿ ಬಗರ್‌ಹುಕುಂ ಸಾಗುವಳಿ ಮಂಜೂರೂರಾದಂತೆ 1994–95ನೇ ಸಾಲಿನಲ್ಲಿ ಸರ್ವೆ ನಂಬರ್ 30ರಲ್ಲಿ ತಲಾ ಎರಡು ಎಕರೆಯಷ್ಟು ಭೂಮಿ ಬಗರ್‌ಹುಕುಂ ಸಕ್ರಮೀಕರಣದ ಅಡಿಯಲ್ಲಿ ಮಂಜೂರಾಗಿದೆ. ಇವರುಗಳ ಹೆಸರಿಗೆ ಖಾತೆಯಾಗಿ ಪಹಣಿಯೂ ಕೂಡ ಇವರ ಹೆಸರಿನಲ್ಲಿಯೇ ಬರುತ್ತಿದೆ. ಮಾತ್ರವಲ್ಲ, ಇದೇ ಭೂಮಿಯಲ್ಲಿ ಕಳೆದ 40 ವರ್ಷಗಳಿಂದ ನಿರಂತರವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ತೆಂಗಿನ ಮರಗಳನ್ನು ಬೆಳೆಸಿ ಕೆಲವರು ಮನೆಯನ್ನೂ ಕಟ್ಟಿಕೊಂಡು ಬೋರ್‌ವೆಲ್‌ಗಳ ಸಂಪರ್ಕವನ್ನು ಪಡೆದುಕೊಂಡಿದ್ದಾರೆ.  ಇದೇ ಭೂಮಿಯ ಆಧಾರದಲ್ಲಿ ಬ್ಯಾಂಕ್ ಸಾಲವನ್ನೂ ಪಡೆದಿದ್ದಾರೆ.

ಆದರೆ ಕಳೆದ 40 ವರ್ಷಗಳಿಂದ ಇದೇ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿರುವ ಈ 8 ಕುಟುಂಬಗಳಿಗೆ ಕೆ.ಚೌಡೇನಹಳ್ಳಿಯಲ್ಲಿ ವಾಸವಾಗಿಲ್ಲದ, ಈ ಭೂಮಿಗೆ ಸಂಬಂಧವಿಲ್ಲದ, ಸಾಗುವಳಿಯನ್ನೇ ಮಾಡದ, ಸ್ವಾಧೀನಾನುಭವದಲ್ಲಿಲ್ಲದ ನಾಗಮಣಿ ಕೋಂ ಜಗದೀಶ್ ದೀಕ್ಷಿತ್ ಎಂಬುವವರು ತಾವರೆಕೆರೆಯ ಜಯರಾಮ ಬಿನ್ ರಂಗೇಗೌಡ ಎಂಬುವವರ ಕುಮ್ಮಕ್ಕಿನಿಂದ ಕಳೆದ ಒಂದು ವರ್ಷಗಳಿಂದ ಕೆ.ಚೌಡೇನಹಳ್ಳಿ ಗ್ರಾಮಕ್ಕೆ ಬಂದು ಈ ಭೂಮಿ ನಮಗೆ ಸೇರಬೇಕಾದದ್ದು ಎಂದು ಗಲಾಟೆ ಮಾಡುತ್ತಿದ್ದಾರೆ. ಈ ನಡುವೆ ಜಯರಾಮ ಎಂಬುವವರು ಭೂಮಿಗೆ ಸಂಬಂದಪಟ್ಟ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ದೌರ್ಜನ್ಯಕ್ಕೆ ಮುಂದಾಗಿದ್ದರು. ಅವರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣದ ಬಗ್ಗೆ ಅಲ್ಲಿನ ಎಂಟು ಕುಟುಂಬಗಳು ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಮೂಲಕ ಧಾವೆ ಹೂಡಿದ್ದಾರೆ. ಇದರ ತೀರ್ಪ ಇನ್ನೂ ಬರಬೇಕೆದೆ. ಇಡೀ ಪ್ರಕರಣದ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಜಯರಾಮ ಎಂಬ ವ್ಯಕ್ತಿ ಬಡವರ ಭೂಮಿಯನ್ನು ಲಪಟಾಯಿಸಲು ಮುಂದಾಗಿರುವುದು ಸ್ಪಷ್ಟವಾಗಿದೆ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ಕುಮಾರ್‌, ಚನ್ನರಾಯಪಟ್ಟಣ ತಾಲ್ಲೂಕು ಸಂಚಾಲಕ ಎಚ್.ಎಸ್. ಮಂಜುನಾಥ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ವಾಸುದೇವ ಕಲ್ಕೆರೆ, ಕೆಪಿಆರ್‌ಎಸ್‌ ಜಿಲ್ಲಾ ಕಾರ್ಯದರ್ಶಿ ವಸಂತ್ ಕುಮಾರ್, ರಮೇಶ್, ರಂಗೇಗೌಡ, ಧರ್ಮೇಶ್, ರಮೇಶ್, ದೇವರಾಜು, ಗಿರೀಶ್ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *