ಚೆನ್ನೈ: ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತದಿಂದ ಉತ್ತರ ಕರಾವಳಿ ತಮಿಳುನಾಡು, ಪುದುಚೇರಿಯಲ್ಲಿ ಗಾಳಿ ಬೀಸುವ ವೇಗದ ಪ್ರಮಾಣ ಏರಿಕೆ ಪಡೆದುಕೊಂಡಿದ್ದು, ಗಂಟೆಗೆ 65ರಿಂದ 75 ಕಿ.ಮೀ.ವರೆಗೆ ವೇಗಕ್ಕೆ ಸಾಗುತ್ತಿದೆ. ಕೆಲವೊಮ್ಮೆ ಇದರ ವೇಗ 80ಕಿ.ಮೀ.ವರೆಗೆ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ. ಇದರಿಂದ ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ.
ಚಂಡಮಾರುತ ತಮಿಳುನಾಡಿನ ಕರಾವಳಿಗೆ ಸಮೀಪಿಸುತ್ತಿರುವ ಕಾರಣ ಭಾರೀ ಮಳೆಯಾಗಿದೆ. ಅಲ್ಲದೆ, ಚಂಡಮಾರುತ ಇಂದು ಮಧ್ಯರಾತ್ರಿ ಕರಾವಳಿ ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಚೆನ್ನೈನ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಧ್ಯರಾತ್ರಿಯವರೆಗೆ ಚೆನ್ನೈನಿಂದ ತೆರಳುವ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಆದಾಗ್ಯೂ, ಸಬ್ ಅರ್ಬನ್ ರೈಲು ಸೇವೆಗಳು ಸೇರಿದಂತೆ ಇತರೆ ರೈಲುಗಳು ಕಾರ್ಯನಿರ್ವಹಿಸಲಿವೆ. ಮಳೆ ಹಿನ್ನಲೆಯಲ್ಲಿ ಇಂದು ಮತ್ತು ಶನಿವಾರ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಚೆನ್ನೈ, ಚೆಂಗಲ್ಪಟ್ಟು, ವಿಲ್ಲುಪುರಂ, ತಿರುವಳ್ಳೂರು, ವೆಲ್ಲೂರು, ಕಡಲೂರು, ರಾಣಿಪೇಟ್, ಕಾಂಚೀಪುರಂ, ಕಲ್ಲಕುರಿಚಿ, ತಂಜಾವೂರು, ತಿರುವರೂರು, ಮೈಲಾಡುತುರೈ, ನಾಗಪಟ್ಟಣಂ, ಅರಿಯಲೂರ್, ಪೆರಂಬಲೂರು, ಪುದುಮೂರು, ಧರ್ಮಪುರ ಸೇರಿ 19 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಕಾರೈಕಾಲ್‌ನ ಪೂರ್ವ-ಆಗ್ನೇಯಕ್ಕೆ 350 ಕಿಮೀ ಮತ್ತು ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಚೆನ್ನೈನಿಂದ ಸುಮಾರು 440 ಕಿಮೀ ಆಗ್ನೇಯದಲ್ಲಿ ಕೇಂದ್ರೀಕೃತವಾಗಿರುವ ಚಂಡಮಾರುತ ತನ್ನ ತೀವ್ರತೆಯನ್ನು ಕಾಯ್ದುಕೊಂಡು ನಂತರ ಮುಂಜಾನೆ ಚಂಡಮಾರುತವಾಗಿ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
‘ಮಾಂಡೌಸ್’ ಚಂಡಮಾರುತದಿಂದ ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ಉತ್ತರ ಒಳನಾಡಿನ ತಮಿಳುನಾಡು ಮತ್ತು ರಾಯಲಸೀಮಾದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಪುದುಚೇರಿಯಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಕರ್ನಾಟಕದಲ್ಲಿಯೂ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಇಂದಿನಿಂದ ಡಿಸೆಂಬರ್ 13ರವರೆಗೆ ಸಾಧಾರಣ ಮಳೆಯಾಗಲಿದ್ದು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಡಿಸೆಂಬರ್ 13 ರವರೆಗೆ ಹಳದಿ ಅಲರ್ಟ್ ಘೋಷಿಸಿದೆ.
ಚಂಡಮಾರುತ ಪ್ರಭಾವ ಕರ್ನಾಟಕದ ಮೇಲೆ ಅದರಲ್ಲೂ ಪ್ರಮುಖವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇರಲಿದೆ. ಮುಂದಿನ ಮೂರು ದಿನಗಳ ಪೈಕಿ ಡಿಸೆಂಬರ್ 11 ಮತ್ತು 12ರಂದು ಗುಡುಗು ಸಹಿತ ಧಾರಾಕಾರವಾಗಿ ಮಳೆ ಅಬ್ಬರಿಸಲಿದೆ. ಈ 15ಜಿಲ್ಲೆಗಳಲ್ಲಿ ಸರಿಸುಮಾರು 11.5 ಸೆಂಟಿ ಮೀಟರ್‌ವರೆಗೆ ಮಳೆಯಾಗುವ ಮುನ್ಸೂಚನೆ ಇದೆ. ಈ ಎರಡು ದಿನ ಹೊರತಾಗಿ ಉಳಿದ ದಿನಗಳಲ್ಲಿ ಅಷ್ಟಾಗಿ ಮಳೆ ಆಗದೇ ಹಗುರವಾಗಿ ಬರಬಹುದು ಎಂದು ಎನ್ನಲಾಗಿದೆ.
ಎಲ್ಲಡೆ ಚಳಿ ಹಾಗೂ ಮೋಡ ಕವಿದ ಮಬ್ಬು ವಾತಾವರಣ ನಿರ್ಮಾಣವಾಗಲಿದೆ. ರಾಜ್ಯದ ಗರಿಷ್ಠ ತಾಪಮಾನ ಹೊನ್ನಾವರ ಮತ್ತು ಕಾರವಾರದಲ್ಲಿ 34 ಡಿಗ್ರಿ ಸೆಲ್ಸಿಯಸ್, ಮಂಗಳೂರಿನಲ್ಲಿ 32.3 ಡಿಗ್ರಿ ಸೆಲ್ಸಿಯಸ್ ಮತ್ತು ಮೈಸೂರಿನಲ್ಲಿ 30ಡಿಗ್ರಿ ಸೆಲ್ಸಿಯಸ್ ಕಂಡುಬಂದಿದೆ. ಇನ್ನೂ ರಾಜ್ಯದ ಕನಿಷ್ಠ ತಾಪಮಾನ 6.6ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.