ಬೆಂಗಳೂರು :ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ಸಂಗ್ರಹವಾಗಿರುವ ಹಣವನ್ನು , ಬೇರೆ ವಸ್ತುಗಳ ಖರೀದಿಗೆ ಬಳಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಧನಸಹಾಯದಲ್ಲಿ ಕಮಿಷನ್ ನುಂಗುವ ಸರ್ಕಾರಕ್ಕೆ ನಾಚಿಕೆ ಇಲ್ಲವೇ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಕೆ. ಮಹಾಂತೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಅರ್ಜಿಗೆ ಹಣ ಬಿಡುಗಡೆ ಮಾಡದೇ ಇರುವ ಸರ್ಕಾರದ ನೀತಿಯನ್ನು ಖಂಡಿಸಿ ರಾಜ್ಯ ವ್ಯಾಪಿ ಕಟ್ಟಡ ಕಾರ್ಮಿಕರು ನಡೆಸಿದ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಬಿಜೆಪಿ ಸರ್ಕಾರದಿಂದ ಆರಂಭಗೊಂಡ ಕಲ್ಯಾಣ ಮಂಡಳಿಯ ಖರೀದಿಯ ಭ್ರಷ್ಟಾಚಾರ ಕಾಂಗ್ರೇಸ್ ಸರಕಾರದ ತನಕ ಮುಂದುವರಿದಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಾರ್ಮಿಕ ಮಂತ್ರಿ ಇತ್ತೀಚೆಗೆ ಮಂಡಳಿ ಹಣವನ್ನು ವಿಧ್ಯಾರ್ಥಿಗಳಿಗೆ 7000 ಲ್ಯಾಪ್ ಟಾಪ್ ನ ಪ್ರತಿಯೊಂದರ ಬೆಲೆ ರೂ 71000/- ದಂತೆ ಖರೀದಿಸಿದೆ ಆದರೆ ಮಾರ್ಕೆಟ್ ನಲ್ಲಿ ಇದರ ನಿಜವಾದ ದರ ರೂ, 31000/- ಆಗಿದೆ ಇತ್ತೀಚೆಗೆ ಕಾರ್ಮಿಕ ಮಂತ್ರಿಗಳನ್ನು ಸಂಘಟನೆಗಳು ಭೇಟಿ ಮಾಡಿ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಒತ್ತಾಯಿಸಲಾಯಿತು ಮಂತ್ರಿಗಳು ಹಣದ ಕೊರತೆ ನೆಪವೊಡ್ಡಿದ್ದರು ಆದರೆ ಈಗ ಕೆಲವೇ ಕೆಲವು ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ಬೆಲೆಗೆ ಲ್ಯಾಪ್ ಟಾಪ್ ಖರೀದಿ ಮಾಡಿ ಮಕ್ಕಳ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.
ಇದನ್ನೂ ಓದಿ : ನಮಗೆ ನೆರಳು ನೀಡುವ ಕಟ್ಟಡ ಕಾರ್ಮಿಕರು ಬೀದಿಯಲ್ಲಿದ್ದಾರೆ – ವೆಂಕಟೇಶ್ ಗೌಡ
ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿಯಿಂದ ನೂರಾರು ಕಾರ್ಮಿಕರು ಪೇಟೆ ಸುತ್ತ ಮೆರವಣಿಗೆ ಹೊರಟು ಕುಂದೇಶ್ವರ ಬಳಿ ಇರುವ ಕಾರ್ಮಿಕ ನಿರೀಕ್ಷಕ ಕಚೇರಿ ಎದುರು ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ತಾಲ್ಲೂಕ ಅಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ, ಕೂಡಲೇ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು ಇಲ್ಲವಾದಲ್ಲಿ ಅಕ್ಟೋಬರ್ 26-27 ಜಿಲ್ಲಾಧಿಕಾರಿ ಕಚೇರಿ ಎದುರು ಹಗಲು ರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಟ್ಟಡ ಕಾರ್ಮಿಕ
ಕೊಪ್ಪಳದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಕಟ್ಟಡ ಕಾರ್ಮಿಕರು ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದು ಕುಳಿತ ಘಟನೆ ನಡೆಯಿತು. ಸಿಡಬ್ಲೂಎಫ್‌ಐ ಜಿಲ್ಲಾಧ್ಯಕ್ಷ ಖಾಸೀಂ ಸರ್ದಾರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಾ, ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯಬೇಕಾ? ಕಟ್ಟಡ ಕಾರ್ಮಿಕರ ಮಕ್ಕಳು ಉನ್ನತ ಹುದ್ದೆಗೆ ಹೋಗಬಾರದಾ? ಎಂದು ಪ್ರಶ್ನಿಸಿದರು. ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಗುವ ಶಿಷ್ಯವೇತನವನ್ನು ನೀಡಲು ಸರ್ಕಾರ ಮೀನಮೇಷ ಏಣಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಟ್ಟಡ ಕಾರ್ಮಿಕ
ಬೆಂಗಳೂರು, ಕೋಲಾರ, ಚಿಕ್ಕಬಳ್ಲಾಪುರ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಪ್ಪಳ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ರಾಯಚೂರು, ಕಲಬುರ್ಗಿ, ಬಳ್ಳಾರಿ, ವಿಜಯನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಈ ವಿಡಿಯೋ ನೋಡಿ : ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್‌ಗೆ ಕೊಕ್ಕೆ! ಭುಗಿಲೆದ್ದ ಕಾರ್ಮಿಕರ ಆಕ್ರೋಶ