ಕಾರ್ಮಿಕ ಸಂಹಿತೆ ಕಾರ್ಮಿಕ ವಿರೋಧಿಯಾಗಿವೆ : ಹಿಟ್ಟಣಗಿ

ಮೈಸೂರು :’ಕೇಂದ್ರ ಸರ್ಕಾರ ಜಾರಿ ಮಾಡಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಶ್ರಮಿಕ ವರ್ಗಕ್ಕೆ ಪ್ರತಿಕೂಲ ಪರಿಣಾಮ ಬೀರಲಿವೆ’ ಎಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿವೃತ್ತ ಸಿಇಓ ವಸಂತ ಕುಮಾರ್ ಹಿಟ್ಟಣಗಿ ಆತಂಕ ವ್ಯಕ್ತಪಡಿಸಿದರು.

ಭಾನುವಾರ ಮೈಸೂರು ನಗರದ ನಂಜರಾಜ ಬಹಾದ್ದೂರ್ ಛತ್ರದಲ್ಲಿ ಆರಂಭವಾದ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ರಾಜ್ಯ ಮಟ್ಟದ ಎರಡು ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂಹಿತೆಯಲ್ಲಿ 40 ಕೋಟಿಗೂ ಹೆಚ್ಚಿರುವ ಕೃಷಿ ಕಾರ್ಮಿಕರನ್ನು ಒಳಗೊಂಡಿಲ್ಲ, ಜೊತೆಗೆ ಬಹುಸಂಖ್ಯೆಯ ಅಸಂಘಟಿತ ವಿಭಾಗವನ್ನು ಹೊರಗಿಡಲಾಗಿದೆ. ಹೀಗಾಗಿ ಕಾರ್ಮಿಕ ಸಂಹಿತೆಗಳು ಸಮಸ್ತ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುತ್ತವೆ ಎಂಬುದು ಸತ್ಯಕ್ಕೆ ದೂರವಾದುದು ಎಂದರು.

‘ಕಾರ್ಖಾನೆಯನ್ನು ಮುಚ್ಚಲು ಸರ್ಕಾರದ ಪೂರ್ವನುಮತಿ ತೆಗೆದುಹಾಕಿರುವುದು ಮಾಲೀಕರ ನಿರಂಕುಶತನಕ್ಕೆ ಎಡೆ ಮಾಡುತ್ತದೆ, ಕಾರ್ಖಾನೆಯಿಂದ ಹೊರಹಾಕಲ್ಪಟ್ಟ ಕಾರ್ಮಿಕರಿಗೆ ಯಾರು ರಕ್ಷಣೆ ಒದಗಿಸಬೇಕು ಎಂಬ ಬಗ್ಗೆ ಸಂಹಿತೆಯಲ್ಲಿ ಸ್ಪಷ್ಟನೆ ಇಲ್ಲ, ಇದು ಆತಂಕಕಾರಿ’ ಎಂದು ಹಿಟ್ಟಣಗಿ ಆತಂಕ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಫೆಡರೇಶನ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ ‘ಎರಡು ದಿನಗಳ ಕಾರ್ಯಾಗಾರದಲ್ಲಿ, ಲೇಬರ್ ಕೋಡ್ ಗಳ ಅಪಾಯಗಳ ಕುರಿತು ಚರ್ಚಿಸಿ, ಹೋರಾಟಗಳನ್ನು ರೂಪಿಸಲು ನಿರ್ಣಯ ಮಾಡುತ್ತೇವೆ, ಲೇಬರ್ ಕೋಡ್ ವಿರುದ್ಧ ಫೆಬ್ರವರಿ 12 ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಭಾಗವಹಿಸಲಿದ್ದಾರೆ’ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್, ಸಿಪಿಎಂ ಮೈಸೂರು ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ರಾಜ್ಯ ಕಾರ್ಯದರ್ಶಿ ಲಿಂಗರಾಜು ಮಳವಳ್ಳಿ, ಮೈಸೂರು ಜಿಲ್ಲಾ ಮುಖಂಡರಾದ ಬಸವಯ್ಯ, ನವೀನ್ ಕುಮಾರ್, ಸೋಮಶಂಕರ್, ರಾಜ್ಯ ಖಜಾಂಚಿ ಯಲ್ಲಾಲಿಂಗ ಇತರರು ಭಾಗವಹಿಸಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಇನ್ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *