ವಿನೋದ ಶ್ರೀರಾಮಪುರ
ಬೆಂಗಳೂರು: ಕೃಷ್ಣರಾಜಪುರದಿಂದ ವೈಟ್ ಫೀಲ್ಡ್ ಮಾರ್ಗಕ್ಕೆ ಮೆಟ್ರೋ ರೈಲು ಸಂಚಾರಕ್ಕೆ ನೆನ್ನೆ(ಮಾರ್ಚ್ 25) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅಪೂರ್ಣಗೊಂಡ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ.
ಸಾರ್ವಜನಿಕರ ಸಂಚಾರ ವ್ಯವಸ್ಥೆಯ ದೊಡ್ಡ ಜಾಲವಾಗಿರುವ ಮೆಟ್ರೋ ಸಾರಿಗೆಯಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸಲಿದ್ದಾರೆ. ನಗರದ ಯಾವುದೇ ಭಾಗಕ್ಕೆ ತಲುಪಲು ಮೆಟ್ರೋ ಸಂಚಾರ ಸಾಮಾನ್ಯವಾಗಿದೆ. ಸಂಚಾರದ ಅಂತಿಮ ನಿಲ್ದಾಣದವರೆಗೂ ಪ್ರಯಾಣಿಸಿ, ಅಲ್ಲಿಂದ ಮತ್ತೊಂದೆಡೆಗೆ ಸಂಚರಿಸುವುದು ಸರ್ವೆಸಾಮಾನ್ಯ.
ಇದನ್ನು ಓದಿ: ಮಂಡ್ಯ ರೋಡ್ ʼಶೋʼಕಿ ಆಯ್ತು, ಇದೀಗ ಮೆಟ್ರೊ ʼಶೋʼ ಗೆ ಮೋದಿ ಸಿದ್ದತೆ!
ಆದರೆ ಸಾರ್ವಜನಿಕರು ಕೆಂಗೇರಿ ನಿಲ್ದಾಣದಿಂದ ಮೆಜೆಸ್ಟಿಕ್ ಮಾರ್ಗವಾಗಿ ಬೈಯ್ಯಪ್ಪನಹಳ್ಳಿಯವರೆಗಿನ ನೇರಳ ಮಾರ್ಗದ ಮೆಟ್ರೋ ರೈಲು ನೇರ ಸಂಪರ್ಕವಿದೆ. ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರವರೆಗಿನ 2.5 ಕಿ.ಮೀ. ಮೆಟ್ರೊ ಮಾರ್ಗದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಜೂನ್-ಜುಲೈವರೆಗೂ ಕಾಯಬೇಕು. ಹೀಗಾಗಿ, ಸಾರ್ವಜನಿಕರು ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ಸಂಚರಿಸಲು ಸಾಧ್ಯವಿಲ್ಲ.
ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವುದು ಕೃಷ್ಣರಾಜಪುರದಿಂದ ವೈಟ್ ಫೀಲ್ಡ್‌ವರೆಗಿನ ಮೆಟ್ರೋ ಮಾರ್ಗವನ್ನು. ಬೆಂಗಳೂರು ನಗರ ಕೇಂದ್ರ ಅಥವಾ ನಗರದ ಬೇರೊಂದು ಪ್ರದೇಶದ ಜನರು, ಸಂಚಾರ ದಟ್ಟಣೆ ಪ್ರದೇಶವಾದ ಕೃಷ್ಣರಾಜಪುರಕ್ಕೆ ಅಥವಾ ವೈಟ್‌ಫೀಲ್ಡ್ ಪ್ರದೇಶಕ್ಕೆ ಹೋಗಬೇಕೆಂದರೆ, ಬೈಯ್ಯಪ್ಪನಹಳ್ಳಿಯವರೆಗೂ ಮೆಟ್ರೋದಲ್ಲಿ ಸಂಚಾರ ಮಾಡಬೇಕು. ಅಲ್ಲಿಂದ ಕೃಷ್ಣರಾಜಪುರವರೆಗೆ ಬಸ್ಸು, ಅಥವಾ ಅನ್ಯ ಸಾರಿಗೆ ಸಂಪರ್ಕ ಮೂಲಕ ಸಂಚಾರ ಮಾಡಬೇಕು. ಮತ್ತೆ ವೈಟ್‌ಫೀಲ್ಡ್ ವರೆಗೆ ಸಂಚರಿಸಲು ಕೃಷ್ಣರಾಜಪುರದಲ್ಲಿ ಮೆಟ್ರೋ ನಿಲ್ದಾಣದಿಂದ ಪ್ರಯಾಣ ಮಾಡಬೇಕು. ಅಲ್ಲದೆ, ವೈಟ್‌ಫೀಲ್ಡ್ ನಿಂದ ನಗರ ಕೇಂದ್ರಕ್ಕೆ ಪ್ರಯಾಣಿಸಲು ಕೆ.ಆರ್.ಪುರಂ ವರೆಗೆ ಮೆಟ್ರೋ ಪ್ರಯಾಣ ಹಾಗೂ ಬೈಯ್ಯಪ್ಪನಹಳ್ಳಿ ವರೆಗೆ ಅನ್ಯ ಸಾರಿಗೆಯನ್ನು ಅವಲಂಬಿಸಬೇಕಿದೆ. ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಇತರೆ ಮಾರ್ಗಕ್ಕೆ ಸಂಚರಿಸಬೇಕು.
ಇದನ್ನು ಓದಿ: ಮೋದಿ ರೋಡ್ ʼಶೋʼಕಿಗೆ ಮರಗಳಿಗೆ ಬಿತ್ತು ಕೊಡಲಿ!
13.71 ಕಿಲೋ ಮೀಟರ್ ಉದ್ದದ ಕಡು ನೇರಳ ಬಣ್ಣ ಮಾರ್ಗದ ವೈಟ್‌ಫೀಲ್ಡ್-ಕೃಷ್ಣರಾಜಪುರವರೆಗಿನ ನಿಲ್ದಾಣಗಳು; ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ ಟ್ರೀ ಪಾರ್ಕ್, ಪಟ್ಟಂದೂಧಿರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರಹಳ್ಳಿ, ಕುಂದಲಹಳ್ಳಿ, ಸೀತಾರಾಮನಪಾಳ್ಯ, ಹೂಡಿ, ಗರುಡಾಚಾರ್‌ಪಾಳ್ಯ, ಸಿಂಗಯ್ಯನಪಾಳ್ಯ (ಮಹದೇವಪುರ) ಮತ್ತು ಕೃಷ್ಣರಾಜಪುರ.
ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಆಳುವ ಪಕ್ಷ ಬಿಜೆಪಿ ತನ್ನ ರಾಜಕೀಯ ಉದ್ದೇಶಕ್ಕಾಗಿ ಸರ್ಕಾರಿ ಕಾರ್ಯಕ್ರಮಗಳ ಮೂಲಕ ಪ್ರಚಾರಗಿಟ್ಟಿಸಿಕೊಳ್ಳಲಿಕ್ಕಾಗಿಯೇ ತಲ್ಲಿನವಾಗಿದೆ ಎಂಬುದು ಇದೀಗ ಬಹಿರಂಗೊಳ್ಳುತ್ತಿವೆ. ಇತ್ತೀಚಿಗೆ ಕಳೆದ ಎರಡು ಮೂರು ತಿಂಗಳಿನಲ್ಲಿ ತರಾತುರಿಯಲ್ಲಿ ಹಮ್ಮಿಕೊಳ್ಳುವ ಸರ್ಕಾರಿ ಕಾರ್ಯಕ್ರಮಗಳ ಮೂಲಕ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ನಡೆಯುತ್ತಿದೆ. ಇದರಿಂದ ಸಮಾರಂಭಕ್ಕಾಗಿ ಸರ್ಕಾರದ ಬೊಕ್ಕಸದ ಹಣವನ್ನು ವ್ಯಯ ಮಾಡಲಾಗುತ್ತಿದೆಯೇ ವಿನಃ ಜನರಿಗೆ ಪೂರ್ಣ ಪ್ರಯೋಜನವಾಗುವ ಯಾವುದನ್ನು ಮಾಡಲಾಗುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ.
ಇಚೇಗಷ್ಟೇ ಉದ್ಘಾಟನೆಗೊಂಡ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಹೆದ್ದಾರಿ ವಿಷಯದಲ್ಲೂ ಇದೇ ಮಾತುಗಳು ಕೇಳಿಬರುತ್ತಿವೆ. ಹೆದ್ದಾರಿ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ ಟೋಲ್ ಶುಲ್ಕ ಸಂಗ್ರಹವೂ ಆರಂಭವಾಗಿದೆ. ಅದ್ದೂರಿ ಉದ್ಘಾಟನಾ ಸಮಾರಂಭ ಸರ್ಕಾರದ ಆಡಳಿತ ಯಂತ್ರದ ಮೂಲಕ ಹಮ್ಮಿಕೊಂಡು ಚುನಾವಣಾ ಪ್ರಚಾರ ಭಾಷಣವನ್ನು ಸರ್ಕಾರಿ ವೇದಿಕೆ ಮೂಲಕ ಮಾಡಲಾಗಿದೆ ಎಂಬುದು ಜಾಹೀರಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ