ಪೊಲೀಸ್‌ ವಿಚಾರಣೆಗೆ ಹಾಜರಾದ ಶಾಸಕ ರಮೇಶ್‌ ಜಾರಕಿಹೊಳಿ

ರಮೇಶ್‌ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು: ಸಿ.ಡಿ. ಪ್ರಕರಣ ಸಂಬಂಧ ಯುವತಿ ನೀಡಿದ್ದ ದೂರು ಆಧರಿಸಿ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಈಗಾಗಲೇ ಎಫ್ಐಆರ್ ದಾಖಲಿಸಿಕೊಂಡಿದ್ದು, ಅದರ ವಿಚಾರಣೆಗೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸೋಮವಾರ ಬೆಳಿಗ್ಗೆ ಹಾಜರಾಗಿದ್ದಾರೆ.

‘ಕೆಲಸ‌ ಕೊಡಿಸುವುದಾಗಿ ಆಮಿಷವೊಡ್ಡಿದ್ದ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಯುವತಿ ವಕೀಲರ ಮೂಲಕ ಲಿಖಿತ ರೂಪದಲ್ಲಿ ದೂರು ನೀಡಿದ್ದರು. ಅದರನ್ವಯ ಕಬ್ಬನ್‌ಪಾರ್ಕ್ ಠಾಣೆ‌ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ, ಈ ಪ್ರಕರಣದ ‌ತನಿಖೆ ಜವಾಬ್ದಾರಿ ಎಸ್ಐಟಿಗೆ ಹಸ್ತಾಂತರವಾಗಿಲ್ಲ. ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಕಬ್ಬನ್ ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್, ವಿಚಾರಣೆಗೆ ಬರುವಂತೆ ರಮೇಶ ಜಾರಕಿಹೊಳಿ ಅವರಿಗೆ ಭಾನುವಾರ ನೋಟಿಸ್ ನೀಡಿದ್ದರು.

ನೋಟಿಸ್ ಸ್ವೀಕರಿಸಿದ್ದ ರಮೇಶ್ ಜಾರಕಿಹೊಳಿಯವರು ಇಂದು ಬೆಳಗ್ಗೆ ಬೆಂಗಳೂರಿನ ಆಡುಗೋಡಿಯ ಟೆಕ್ನಿಕಲ್ ಸೆಂಟರ್ ನಲ್ಲಿರುವ ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾದರು.  ಇನ್ಸಪೆಕ್ಟರ್‌ ಮಾರುತಿಯವರು  ಸುಮಾರು 2 ಗಂಟೆಗಳ ಕಾಲ ಅವರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಸಿಡಿ ಪ್ರಕರಣ : ಸಂತ್ರಸ್ತ ಯುವತಿ ನಾಳೆ ನ್ಯಾಯಾಲಯಕ್ಕೆ ಹಾಜರು

ಯುವತಿ ದೂರಿನ ಬಳಿಕ ಕೇಳಿಬಂದ ಹತ್ತುಹಲವು ಆರೋಪ, ಸುತ್ತಿಕೊಂಡಿರುವ ವಿವಾದ, ಬಂಧನ ಭೀತಿ ಹಿನ್ನೆಲೆಯಲ್ಲಿ ಅವರು ವಿಚಾರಣೆಗೆ ಹಾಜರಾಗಿರಬಹುದು ಎಂದು ಹೇಳಲಾಗುತ್ತಿದೆ. ಇಂದು ಸಂತ್ರಸ್ತೆ ಯುವತಿ ಕೂಡ ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಯುವ ಕಾಂಗ್ರೆಸ್ ಪ್ರತಿಭಟನೆ: ಇನ್ನು ತೀವ್ರ ಮಟ್ಟದಲ್ಲಿ ಆರೋಪ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಬೇಕು, ಸರ್ಕಾರ ಅವರಿಗೆ ರಕ್ಷಣೆ ನೀಡುತ್ತಿದೆ, ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗುತ್ತಾ ಯುವ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ತನಿಖಾ ತಂಡ ಕಚೇರಿ ಮುಂದೆ ಇಂದು ತೀವ್ರ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರು.  ಯುವ ಮುಖಂಡರಾದ ಮಿಥುನ್‌ ರೈ,  ಮೊಹಮ್ಮದ್‌  ನಲಪ್ಪಾಡ್‌  ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಬೈಕ್‌ ಮೆರವಣಿಗೆ ಮೂಲಕ ಆಗಮಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು,  ಬ್ಯಾರಿಕೇಡ್‌ ಮುರಿದು ಒಳನುಗ್ಗಲು ಪ್ರಯತ್ನಿಸಿದರು.  ಪೊಲೀಸರು ತಡೆ ಒಡ್ಡಿದ ಪರಿಣಾಮ ಠಾಣೆಯ ಎದುರೇ ಪ್ರತಿಭಟನೆ ನಡೆಸಲು ಮುಂದಾದರು. ಯುವ ಕೈ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *