ಬೆಂಗಳೂರು: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರನ್ನು ಬಿಜೆಪಿ ವರಿಷ್ಠ ಅಮಿತ್ ಶಾ ಭೇಟಿಯಾಗದಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಬಿಜೆಪಿ ನಾಯಕ ಸಿ.ಟಿ.ರವಿ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಬಿಜೆಪಿಯ ಕೇಂದ್ರ ಕಚೇರಿ ಜಗನ್ನಾಥಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ನಾಲ್ಕೈದು ದಶಕಗಳ ಕಾಲ ಯಡಿಯೂರಪ್ಪರ ಒಡನಾಡಿ ಆಗಿದ್ದವರು. ಈಶ್ವರಪ್ಪ ತಮ್ಮದೇ ಆದ ಪ್ರಭಾವ ಬೆಳಸಿಕೊಂಡಿದ್ದಾರೆ. ಮುಂದಿನ ನಡೆ ಬಗ್ಗೆ ಅವರೇ ಅವರ ತೀರ್ಮಾನ ಮಾಡುತ್ತಾರೆ.
ದೆಹಲಿಗೆ ಕರೆಸಿಕೊಂಡು ಮಾತಾಡದ ವಿಚಾರ ಬಗ್ಗೆ ನಾನು ಏನೂ ಮಾತಾಡುವುದಿಲ್ಲ ಎಂದರು. ಪ್ರೀತಂ ಗೌಡರಿಂದ ಮೈತ್ರಿಗೆ ಇನ್ನೂ ಪೂರ್ಣ ಬೆಂಬಲ ಸಿಗದ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಪ್ರೀತಂ ಗೌಡಗೆ ಒಟ್ಟಾಗಿ ಕೆಲಸ ಮಾಡುವಂತೆ ತಿಳಿಸಲಾಗಿದೆ.
ಇದನ್ನೂ ಓದಿ : ‘ಸುಭಾಷ್ ಚಂದ್ರ ಬೋಸ್’ ಭಾರತದ ಮೊದಲ ಪ್ರಧಾನಿ – ಕಂಗನಾ ವಿಡಿಯೋ ವೈರಲ್
ಪ್ರೀತಂ ಗೌಡ ಪಕ್ಷದ ಮುಖಂಡರು, ಅವರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುವ ವಿಶ್ವಾಸ ಇದೆ. ಬೆಂಗಳೂರಿನಲ್ಲಿ ನಡೆದ ಮೈತ್ರಿ ಸಮನ್ವಯ ಸಭೆಯಲ್ಲೂ ಅವರು ಭಾಗವಹಿಸಿದ್ದು, ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದರು.
ಸುಮಲತಾ ಬಿಜೆಪಿ ಸೇರ್ಪಡೆ ಹಾಗೂ ಮಂಡ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಸಿ.ಟಿ.ರವಿ, ಸುಮಲತಾರ ರಾಜಕೀಯ ಪ್ರಬುದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಎಲ್ಲೂ ಬ್ಯಾಲೆನ್ಸ್ ಕಳೆದುಕೊಳ್ಳದೇ ತೂಕವಾಗಿ ಮಾತನಾಡುತ್ತಾರೆ. ಅವರಿಗೆ ತಮ್ಮದೆ ಆದ ಪ್ರಭಾವ, ಬೆಂಬಲ ಇದೆ. ಮೈತ್ರಿ ಅಭ್ಯರ್ಥಿ ಪರ ಅವರು ಬೆಂಬಲ ಕೊಟ್ಟಿದ್ದಾರೆ. ಮಂಡ್ಯಭಾಗದಲ್ಲಿ ಸುಮಲತಾ ಅವರ ಮೂಲಕ ಪಕ್ಷ ಬಲವರ್ಧನೆ ಮಾಡಲಾಗುತ್ತದೆ. ಸುಮಲತಾ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಒಂದು ದೊಡ್ಡ ಬಲ ಬಂದಂತಾಗಿದೆ.