ನಾ ದಿವಾಕರ
ಕೋಮುವಾದ ಮತಾಂಧತೆಯೊಂದಿಗೆ ನವ ಉದಾರವಾದವೂ ಕನ್ನಡಿಗರ ಮುಂದಿನ ಸವಾಲಾಗಿದೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಆಳುವ ವರ್ಗಗಳನ್ನು ಅಗ್ನಿಪರೀಕ್ಷೆಗೆ ಒಡ್ಡುವ ಒಂದು ಪ್ರಕ್ರಿಯೆ. ಸಾಮಾನ್ಯವಾಗಿ ಐದು ವರ್ಷಗಳ ಕಾಲ ಆಳ್ವಿಕೆ ನಡೆಸಿ ಶಾಸನಸಭೆಯಲ್ಲಿನ ಬಹುಮತಗಳಿಗೆ ಅನುಗುಣವಾಗಿ ಆಡಳಿತ ನೀತಿಗಳನ್ನು ಪರಿಷ್ಕರಿಸುವ ಚುನಾಯಿತ ಪಕ್ಷಗಳು ರಾಜ್ಯದ ಅಭಿವೃದ್ಧಿಯನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತವೆ ಎನ್ನುವುದನ್ನು ಒರೆ ಹಚ್ಚಿ ನೋಡುವ ಒಂದು ಸಾರ್ವತ್ರಿಕ ಅವಕಾಶವಾಗಿ ಸಾಮಾನ್ಯ ಜನತೆ ಚುನಾವಣೆಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ಆಳ್ವಿಕೆಯಲ್ಲಿ ಕರ್ನಾಟಕಕ್ಕೆ ಪ್ರಶಸ್ತ ಸ್ಥಾನ ಇರುವುದನ್ನು ಗಮನದಲ್ಲಿಟ್ಟುಕೊಂಡೇ, ರಾಜ್ಯ ಸರ್ಕಾರಗಳ ಆರ್ಥಿಕ ಹಾಗೂ ಸಾಮಾಜಿಕ ಆಡಳಿತ ನೀತಿಗಳ ಪರಾಮರ್ಶೆ ಮಾಡಬೇಕಾಗುತ್ತದೆ. ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳನ್ನು ಹೊರತುಪಡಿಸಿದರೆ ಕಾರ್ಪೋರೇಟ್ ಮಾರುಕಟ್ಟೆಗೆ ಅತಿ ಹೆಚ್ಚು ಅನುಕೂಲಕರವಾದ ವಾತಾವರಣವನ್ನು ಕರ್ನಾಟಕದಲ್ಲಿ ನಿರ್ಮಿಸಲಾಗುತ್ತಿರುವುದರಿಂದ, ರಾಜ್ಯದ ಜನತೆ ಈ ಮಾರುಕಟ್ಟೆ ದಾಳಿಯನ್ನು ಎದುರಿಸಬೇಕಾದ ಮಾರ್ಗಗಳ ಕುರಿತೂ ಯೋಚಿಸಬೇಕಿದೆ.
ಕಳೆದ ಐದು ವರ್ಷಗಳ ಆಳ್ವಿಕೆಯಲ್ಲಿ ಕರ್ನಾಟಕದ ಜನತೆ ಎದುರಿಸಿರುವ ಜ್ವಲಂತ ಸಮಸ್ಯೆಗಳನ್ನು ಗಮನಿಸಿದಾಗ ಹಿಂದೆಂದಿಗಿಂತಲೂ ಅತಿ ಹೆಚ್ಚು ಅಭದ್ರತೆ ಮತ್ತು ಅನಿಶ್ಚಿತತೆಯನ್ನು ಎಲ್ಲ ವಲಯಗಳಲ್ಲೂ ಗುರುತಿಸಬಹುದಾಗಿದೆ. ಪೂರ್ವಾರ್ಧದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮತ್ತು ತದನಂತರದ ಬಿಜೆಪಿ ಸರ್ಕಾರ ಅನುಸರಿಸಿದ ನೀತಿಗಳು ಹಾಗೂ ಜಾರಿಗೊಳಿಸಿದ ಕೆಲವು ಕಾಯ್ದೆಗಳು ಕರ್ನಾಟಕದ ದುಡಿಯುವ ವರ್ಗಗಳ ಅಡಿಪಾಯವನ್ನೇ ಅಲುಗಾಡಿಸುವಂತಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ನಿರುದ್ಯೋಗ ಪ್ರಮಾಣದ ಸೂಚ್ಯಂಕಗಳನ್ನು ನೋಡಿದಾಗ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ನಿರುದ್ಯೋಗ ಪ್ರಮಾಣ ಕಡಿಮೆ ಇರುವುದು ಸ್ವಾಗತಾರ್ಹ ಎನಿಸಿದರೂ, ಈ ಸೂಚ್ಯಂಕಗಳ ಮಂಜಿನ ಪರದೆಯ ಹಿಂದಿನ ವಾಸ್ತವಗಳನ್ನು ವಸ್ತುನಿಷ್ಠವಾಗಿ ಪರಾಮರ್ಶಿಸುವುದು ಅಗತ್ಯ. ಉದಾಹರಣೆಗೆ ರಾಜ್ಯದಲ್ಲಿ ಐದು ವರ್ಷಗಳಲ್ಲಿ 4257 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕರ್ನಾಟಕದ ರೈತರು ಗಂಭೀರವಾಗಿ ಯೋಚಿಸಬೇಕಾದ ವಿಚಾರ.
ಬಂಡವಾಳ-ಮಾರುಕಟ್ಟೆ ಮತ್ತು ದ್ವೇಷ ರಾಜಕಾರಣ
ಕರ್ನಾಟಕ ಇಂದು ಗುಜರಾತ್ ಮಾದರಿಯ ಮತ್ತೊಂದು ಪ್ರಯೋಗಶಾಲೆಯಾಗಿ ಚುನಾವಣೆಗಳನ್ನು ಎದುರಿಸುತ್ತಿದೆ. ಆರ್ಥಿಕವಾಗಿ, ಮಾರುಕಟ್ಟೆ ಪರಿಭಾಷೆಯಲ್ಲಿ ಗುಜರಾತ್ ಮಾದರಿ ಎಂದರೆ ನವಉದಾರವಾದಿ ಕಾರ್ಪೋರೇಟ್ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ನೀಡುವುದೆಂದೇ ಅರ್ಥ. ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಹಾಗೂ ದೇಸೀ ಬಂಡವಾಳ ಹೂಡಿಕೆಗೆ ರಾಜ್ಯವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಶೈಕ್ಷಣಿಕ ವಲಯವನ್ನೂ ಸಿದ್ಧಪಡಿಸಿರುವುದನ್ನು ಗಮನಿಸಬೇಕಿದೆ. ಕೃಷಿ ಕಾಯ್ದೆಗಳು ಹಾಗೂ 2019ರ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಯು ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಸುಗಮವಾಗಿಸಿದ್ದರೆ, ಔದ್ಯೋಗಿಕ ವಲಯದಲ್ಲಿ ಕಾರ್ಪೋರೇಟ್ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡಲು ಸಾರ್ವಜನಿಕ ಉದ್ದಿಮೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ಮೂಲದ ವಿಜಯಾ, ಕಾರ್ಪೋರೇಷನ್, ಸಿಂಡಿಕೇಟ್ ಬ್ಯಾಂಕುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ವಿಲೀನ ಪ್ರಕ್ರಿಯೆಗೊಳಗಾಗಿವೆ. ಕನ್ನಡಿಗರ ಅಸ್ಮಿತೆಯಾಗಬೇಕಿದ್ದ ಮೈಸೂರು ಬ್ಯಾಂಕ್ ಸದ್ದಿಲ್ಲದೆ ಎಸ್‌ಬಿಐ ತೆಕ್ಕೆಯೊಳಗೆ ಸೇರಿ ಅದರ ಹೆಜ್ಜೆ ಗುರುತುಗಳೂ ಅಳಿಸಿಹೋಗಿವೆ.
ಕಳೆದ ಐದು ವರ್ಷಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಬಹುಶಃ ಈ ಅವಧಿಯಲ್ಲಿ ರಾಜ್ಯ ಕಂಡಿರುವ ಭ್ರಷ್ಟಾಚಾರದ ಬ್ರಹ್ಮಾಂಡ ರೂಪವನ್ನು ಇತಿಹಾಸದಲ್ಲಿ ಎಂದೂ ಕಂಡಿಲ್ಲ ಎನ್ನಬಹುದು. ಗುತ್ತಿಗೆದಾರ ಸಂಘದ ಶೇ 40ರಷ್ಟು ಕಮಿಷನ್ ಆರೋಪ ಇಂದಿಗೂ ಸಾರ್ವಜನಿಕ ಚರ್ಚೆಯಲ್ಲಿರುವುದರೊಂದಿಗೇ ಪಿಎಸ್‌ಐ ನೇಮಕಾತಿ ಹಗರಣ, ನೇಮಕಾತಿ ಹಗರಣವೂ ರಾಜ್ಯದ ಆಡಳಿತ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದ್ದು ಎಲ್ಲವೂ ವಿಚಾರಣೆಯ ಹಂತದಲ್ಲಿವೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಹಣಕಾಸು ಭ್ರಷ್ಟಾಚಾರ ಒಂದು ಅನಿವಾರ್ಯ ಪ್ರಕ್ರಿಯೆಯಾಗಿರುವುದರಿಂದಲೇ ಈ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ತಾರ್ಕಿಕ ಅಂತ್ಯ ಕಾಣುವುದಿಲ್ಲ. 2016ರ ನಂತರ ರಾಜ್ಯದಲ್ಲಿ ವರದಿಯಾಗಿರುವ 2000ಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳಲ್ಲಿ ಕೇವಲ 345ರಲ್ಲಿ ಮಾತ್ರ ವಿಚಾರಣೆ ಮುಗಿದಿರುವುದು ಇದನ್ನೇ ಸೂಚಿಸುತ್ತದೆ. ಮಾರುಕಟ್ಟೆ ಆರ್ಥಿಕತೆಯಲ್ಲಿ ಸಾರ್ವತ್ರಿಕ ವಾಸ್ತವವೇ ಆಗಿರುವ ಭ್ರಷ್ಟಾಚಾರದ ಪ್ರಕರಣಗಳು ಆಳುವ ಪಕ್ಷಗಳನ್ನು ವಿಚಲಿತಗೊಳಿಸುವುದೂ ಇಲ್ಲ. ಏಕೆಂದರೆ ಸಾಮಾನ್ಯ ಜನತೆಯಿಂದ ಈ ಭ್ರಷ್ಟತೆಯನ್ನು ಮರೆಮಾಚಲು ಸರ್ಕಾರಗಳಿಗೆ ಕೋಮುವಾದ, ಮತಾಂಧತೆ ಮತ್ತು ದ್ವೇಷ ರಾಜಕಾರಣ ನೆರವಾಗುತ್ತವೆ.
ರಾಜ್ಯದಲ್ಲಿ ಭ್ರಷ್ಟಾಚಾರದ ಬಾಹುಗಳು ಆಡಳಿತ ವ್ಯವಸ್ಥೆಯ ಎಲ್ಲ ವಲಯಗಳನ್ನೂ ಆವರಿಸಿರುವಂತೆಯೇ ಕೋಮುದ್ವೇಷದ ಕರಾಳ ಛಾಯೆಯೂ ರಾಜ್ಯದಲ್ಲಿ ದಟ್ಟವಾಗಿ ಕಾಣುತ್ತಿದೆ. ಕರಾವಳಿ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ಅಮಾಯಕರ ಹತ್ಯೆಗಳು, ಪ್ರತಿ ಹತ್ಯೆಗಳು ಮತ್ತು ಮತಾಂಧ ಪಡೆಗಳ ದಾಳಿಗಳು ಅಲ್ಲಿನ ಸೌಹಾರ್ದಯುತ ಬದುಕನ್ನೇ ಅಸ್ಥಿರಗೊಳಿಸಿದೆ. ಹಿಂದುತ್ವ ರಾಜಕಾರಣದ ಕಾರ್ಯಸೂಚಿಯಂತೆ ಕರಾವಳಿ ಮತ್ತು ದಕ್ಷಿಣ ಕನ್ನಡದಲ್ಲಿ ಆರಂಭವಾದ ಹಿಜಾಬ್ ಮತ್ತು ಹಲಾಲ್ ವಿವಾದಗಳು ಅಲ್ಪಸಂಖ್ಯಾತ ಸಮುದಾಯವನ್ನು ಶಾಶ್ವತ ಭೀತಿಯಲ್ಲಿರುವಂತೆ ಮಾಡಿರುವುದು ವಾಸ್ತವ. ಹಿಜಾಬ್ ವಿವಾದ ನ್ಯಾಯಾಲಯದ ಕಟಕಟೆಯಲ್ಲಿದ್ದರೂ, ಎರಡೂ ಕೋಮುಗಳ ಮೂಲಭೂತವಾದಿಗಳ ಹಿತಾಸಕ್ತಿಗಳಿಂದಾಗಿ ಬಲಿಯಾಗಿರುವುದು ಹೆಣ್ಣು ಮಕ್ಕಳ ಶಿಕ್ಷಣ. ಹಿಜಾಬ್ ವಿವಾದವನ್ನು ಮತಧರ್ಮದ ಮಸೂರ ತೊಟ್ಟು ನೋಡದೆ, ಹೆಣ್ಣು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ದೃಷ್ಟಿಯಿಂದ ನೋಡುವ ಪ್ರಬುದ್ಧತೆ ಆಳುವ ವರ್ಗಗಳಲ್ಲಿ ಇಲ್ಲದಿರುವುದರಿಂದ ಇಂದು ಅಸಂಖ್ಯಾತ ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣವಂಚಿತರಾಗುತ್ತಿದ್ದಾರೆ. ಅಲ್ಪಸಂಖ್ಯಾತರ ಆರ್ಥಿಕ ಬೆನ್ನೆಲುಬು ಮುರಿಯುವ ಉದ್ದೇಶದಿಂದೇ ರಾಜ್ಯದಲ್ಲಿ ಭುಗಿಲೆದ್ದ ಹಲಾಲ್ ವಿವಾದ ಮತ್ತು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುವ ಘಟನೆಗಳು, ರಾಜಕೀಯ ಅನಿವಾರ್ಯತೆಗಳಿಂದ ಹಿಂಬದಿಗೆ ಸರಿದಿದ್ದರೂ, ಜನಸಾಮಾನ್ಯರ ನಡುವೆ ಈ ವಿವಾದಗಳು ಸೃಷ್ಟಿಸಿರುವ ಗೋಡೆಗಳನ್ನು ಕೆಡವಿ, ಸಮನ್ವಯ ಸಾಧಿಸಲು ಹಲವು ವರ್ಷಗಳೇ ಬೇಕಾಗಬಹುದು.
ರಾಜ್ಯ ಸರ್ಕಾರ ಜಾರಿಗೊಳಿಸಿದ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುವುದಕ್ಕಿಂತಲೂ ಹೆಚ್ಚಾಗಿ ಆಂತರಿಕ ಕಲಹಗಳನ್ನು ಹೆಚ್ಚಿಸಿವೆ. ಏಕೆಂದರೆ ಈ ಕಾಯ್ದೆಯನ್ನು ಉಲ್ಲಂಘಿಸುವವರನ್ನು ಹಿಡಿದು ಶಿಕ್ಷಿಸುವ ಅಧಿಕಾರವನ್ನು ಅನಧಿಕೃತವಾಗಿ ಕೆಲವೇ ಮತಾಂಧ ಸಂಘಟನೆಗಳು ಪಡೆದುಕೊಂಡಿವೆ. ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯಿದೆ 2020 ಜಾರಿಯಾದ ನಂತರ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಉಂಟಾಗಿರುವ ಬಿಕ್ಕಟ್ಟುಗಳ ಬಗ್ಗೆ ಈವರೆಗೂ ಯಾವುದೇ ಸಮೀಕ್ಷೆ ಅಥವಾ ವರದಿ ಸಿದ್ಧವಾಗಿಲ್ಲ. ಗೋವುಗಳ ರಕ್ಷಣೆಯಾಗುತ್ತಿರುವ ಭ್ರಮೆಯಲ್ಲೇ ಇರುವ ಸರ್ಕಾರಕ್ಕೆ ಬೀಡಾಡಿ ಎತ್ತುಗಳ ಪ್ರಮಾಣ ಹೆಚ್ಚಾಗುತ್ತಿರುವುದಾಗಲೀ, ರೈತರು ಜಾನುವಾರುಗಳನ್ನು ಸಲಹಲೂ ಆಗದೆ, ಮಾರಾಟ ಮಾಡಲೂ ಆಗದೆ, ಬೀದಿಗೆ ಬಿಡುತ್ತಿರುವ ಪ್ರಕರಣಗಳಾಗಲೀ ಸರ್ಕಾರಕ್ಕೆ ಗೋಚರಿಸುತ್ತಿಲ್ಲ. ಜಾನುವಾರುಗಳ ಸಂರಕ್ಷಣೆಯಷ್ಟೇ ಮುಖ್ಯ ಈ ಜಾನುವಾರುಗಳನ್ನೇ ಅವಲಂಬಿಸಿ ಬದುಕು ಸವೆಸುವ ಲಕ್ಷಾಂತರ ರೈತರ ಜೀವನ ಮತ್ತು ಜೀವನೋಪಾಯವನ್ನು ಕುರಿತ ಯಾವುದೇ ಅಧ್ಯಯನಗಳೂ ನಡೆಯದಿರುವುದು ನಮ್ಮ ನಡುವಿನ ಸಾಂಘಿಕ/ಸಾಂಸ್ಥಿಕ ಅಧ್ಯಯನದ ಕೊರತೆಯನ್ನು ಎತ್ತಿ ತೋರಿಸುತ್ತದೆ.
ರಾಜ್ಯದಲ್ಲಿ ತೀವ್ರವಾಗುತ್ತಿರುವ ದ್ವೇಷ ರಾಜಕಾರಣಕ್ಕೆ ಬಲಿಯಾಗುತ್ತಿರುವುದು ಕರ್ನಾಟಕದ ಯುವ ಸಮೂಹ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರವೀಣ್ ನೆಟ್ಟಾರು, ಫಾಝಿಲ್, ಹರ್ಷ, ಚಂದ್ರು, ಇದ್ರಿಸ್ ಪಾಷಾ ಇನ್ನೂ ಹಲವಾರು ಯುವಕರು ಕೋಮು ದ್ವೇಷಕ್ಕೆ ಬಲಿಯಾಗಿದ್ದಾರೆ. ಭಿನ್ನ ಧರ್ಮಗಳ ಯುವಕ ಯುವತಿಯರು ಒಟ್ಟಿಗೆ ಓಡಾಡಲಾಗದ ಪರಿಸ್ಥಿತಿಯನ್ನು ಕರಾವಳಿ ಕರ್ನಾಟಕ ಎದುರಿಸುತ್ತಿದೆ. ಮತಾಂಧ ಪಡೆಗಳು ಅನ್ಯ ಕೋಮಿನೊಡನೆ ಬೆರೆಯುವ ಯುವಕ ಯುವತಿಯರ ಮೇಲೆ ಸಾರ್ವಜನಿಕವಾಗಿಯೇ ದಾಳಿ ನಡೆಸುವ ಮೂಲಕ ಮನುಷ್ಯ-ಮನುಷ್ಯರ ಬಾಂಧವ್ಯದ ಕೊಂಡಿಗಳನ್ನೂ ಕಳಚಿಹಾಕಲಾಗುತ್ತಿದೆ. ಇದೇ ದ್ವೇಷದ ಗೋಡೆಗಳನ್ನು ರಾಜ್ಯಾದ್ಯಂತ ನಡೆಯುವ ಜಾತ್ರೆ ಮತ್ತು ಉತ್ಸವಗಳಿಗೂ ವಿಸ್ತರಿಸುವ ಮೂಲಕ ಮತಾಂಧ ಪಡೆಗಳು, ರಾಜ್ಯದ ಪಾರಂಪರಿಕ ಸಾಮರಸ್ಯ ಮತ್ತು ಸಮನ್ವಯ ಸಂಸ್ಕೃತಿಗೆ ಧಕ್ಕೆ ಉಂಟುಮಾಡುತ್ತಿವೆ. ಈ ಘಟನೆಗಳ ಬಗ್ಗೆ ರಾಜ್ಯ ಸರ್ಕಾರದ ತಣ್ಣನೆಯ ಮೌನ ಸಮಾಜಘಾತುಕ ಶಕ್ತಿಗಳಿಗೆ ಉತ್ತೇಜನಕಾರಿಯಾಗಿ ಪರಿಣಮಿಸಿದೆ.
ಶೋಷಣೆ-ದೌರ್ಜನ್ಯದ ಹೊಸ ಆಯಾಮಗಳು
ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದ ಈ ಪ್ರಕ್ಷುಬ್ಧತೆಯ ನಡುವೆಯೇ ರಾಜ್ಯದ ದುಡಿಯುವ ವರ್ಗಗಳ ಆರ್ಥಿಕ ಅಡಿಪಾಯ ಶಿಥಿಲವಾಗಿರುವುದನ್ನೂ ಕಳೆದ ಐದು ವರ್ಷಗಳಲ್ಲಿ ಗುರುತಿಸಬಹುದು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ಸೇವಾ ಭದ್ರತೆಗಾಗಿ, ಖಾಯಮಾತಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಪ್ರೌಢಶಾಲಾ ಹಂತದಿಂದಲೇ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ಸುಭದ್ರ ನೌಕರಿಗಾಗಿ ಆಗ್ರಹಿಸಿ ಮುಷ್ಕರ ನಿರತರಾಗಿದ್ದಾರೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಬೋಧಕ ಹುದ್ದೆಗಳಿಗೆ ಶಾಶ್ವತ ನೌಕರಿಯನ್ನೇ ಇಲ್ಲವಾಗಿಸುವ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರ, ಶಿಕ್ಷಕರ ನೇಮಕಾತಿ ನಡೆಯುತ್ತಿದ್ದು, ಈ ಬೋಧಕ ಸಿಬ್ಬಂದಿಯ ವೇತನಗಳು ಸಾಮಾನ್ಯ ಮಟ್ಟದ ಜೀವನ ನಡೆಸಲೂ ಪೂರಕವಾಗುವುದಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಹಲವು ದಶಕಗಳಿಂದ ಹೊರಗುತ್ತಿಗೆಯ ಮೇಲೆ ಹಾಗೂ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವ ಬೋಧಕ ಸಿಬ್ಬಂದಿ ತಮ್ಮ ಸೇವಾವಧಿಯ ವಿಸ್ತರಣೆಗಾಗಿ ಬೀದಿಗಿಳಿದು ಹೋರಾಡಬೇಕಿದೆ. ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಶೈಕ್ಷಣಿಕ ವ್ಯವಸ್ಥೆಯ ಖಾಸಗೀಕರಣ ಮತ್ತು ವಾಣಿಜ್ಯೀಕರಣ ಪ್ರಕ್ರಿಯೆಗೆ ವಿದ್ಯುಕ್ತ ಚಾಲನೆ ನೀಡಲಾಗಿದ್ದು, ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು ಸ್ಕಾಲರ್‌ಷಿಪ್ ಸೌಲಭ್ಯವನ್ನೂ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲೂ ಈ ಸಮಸ್ಯೆಯ ಪ್ರಸ್ತಾಪವೇ ಇಲ್ಲದಿರುವುದು, ಆಳುವ ವರ್ಗಗಳ-ಮಾರುಕಟ್ಟೆ ಶಕ್ತಿಗಳ ಧೋರಣೆಯ ಪ್ರತೀಕವೇ ಆಗಿದೆ.
ಈ ನಡುವೆಯೇ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ಮಾಡುವ ಮೂಲಕ ರಾಜ್ಯ ಸರ್ಕಾರ ಕಾರ್ಮಿಕರ ದುಡಿಮೆಯ ಅವಧಿಯನ್ನು ದಿನಕ್ಕೆ ಎಂಟು ಗಂಟೆಯಿಂದ 12 ಗಂಟೆಗೆ ವಿಸ್ತರಿಸಿದೆ. ಇದು ದುಡಿಯುವ ವರ್ಗಗಳ ಮೇಲಿನ ನೇರ ಪ್ರಹಾರವಾಗಿದ್ದು, ಒಂದೆಡೆ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ಚಾರಿತ್ರಿಕ ಹಕ್ಕುಗಳನ್ನು ಕಸಿದುಕೊಂಡಿರುವುದೇ ಅಲ್ಲದೆ ಉದ್ದಿಮೆಗಳ ಮಾಲೀಕರಿಗೆ ಶೋಷಣೆಯ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ. ಈ ಹೊಸ ನೀತಿಯ ಪರಿಣಾಮವಾಗಿ ಹೊಸ ಉದ್ಯೋಗ ಸೃಷ್ಟಿಯೂ ಕುಸಿಯಲಿದ್ದು, ಈಗಾಗಲೇ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ತಂಡೋಪತಂಡವಾಗಿ ವಲಸೆ ಬರುತ್ತಿರುವ ನಿರುದ್ಯೋಗಿ ಯುವ ಸಮೂಹವನ್ನು ಅನಿಶ್ಚಿತತೆಯತ್ತ ದೂಡಲಿದೆ. ಶಾಶ್ವತ ನೌಕರಿಯ ಅವಕಾಶಗಳೇ ಇಲ್ಲದ ನವ ಉದಾರವಾದಿ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಭವಿಷ್ಯದ ಯುವ ತಲೆಮಾರು ತನ್ನ ಜೀವನ ಹಾಗೂ ಜೀವನೋಪಾಯವನ್ನು ಹೇಗೆ ರೂಪಿಸಿಕೊಳ್ಳಲಿದೆ ಎಂಬ ಜಟಿಲ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಶಿಕ್ಷಣವನ್ನೂ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಸರ್ಕಾರಿ ನೌಕರಿಯೇ ಮರೀಚಿಕೆಯಾಗುತ್ತಿರುವ ಸಂದರ್ಭದಲ್ಲೇ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸರ್ಕಾರಗಳ ನಾಟಕೀಯ ನಿರ್ಧಾರಗಳ ಬಗ್ಗೆಯೂ ಗಂಭೀರ ಆಲೋಚನೆ ಮಾಡಬೇಕಿದೆ.
ಈ ಆರ್ಥಿಕ ವಿಚಾರಗಳಿಂದಾಚೆಗೆ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಹೆಚ್ಚಾಗುತ್ತಿರುವುದು, ಅಸ್ಪೃಶ್ಯತೆಯ ಪ್ರಕರಣಗಳು ನಿತ್ಯ ವರದಿಯಾಗುತ್ತಿರುವುದು ಬದಲಾಗುತ್ತಿರುವ ಸಾಂಸ್ಕೃತಿಕ ವಾತಾವರಣದ ದ್ಯೋತಕವಾಗಿಯೇ ಕಾಣುತ್ತದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು ಅಂಕಿ ಅಂಶಗಳಲ್ಲೇ ಸ್ಪಷ್ಟವಾಗುತ್ತವೆ. 2019ರಲ್ಲಿ 13,828, 2020ರಲ್ಲಿ 12,680, 2021ರಲ್ಲಿ 14,468 ಹಾಗೂ 2022ರಲ್ಲಿ 15,942 ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳ ಅತ್ಯಾಚಾರ ಪ್ರಕರಣಗಳ ಸಂಖ್ಯೆ 2,796 ರಷ್ಟು (ಪೋಕ್ಸೋ ಕಾಯ್ದೆಯಡಿ) ದಾಖಲಾಗಿದೆ. ರಾಜಧಾನಿ ಬೆಂಗಳೂರು ನಗರ ವಲಯದಲ್ಲೇ 2019-21ರ ಮೂರು ವರ್ಷದ ಅವಧಿಯಲ್ಲಿ 9 ಸಾವಿರಕ್ಕೂ ಹೆಚ್ಚು ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಜಾತಿ ಶ್ರೇಷ್ಠತೆಯ ಪರಂಪರೆಯಿಂದ ಇನ್ನೂ ಹೊರಬರದ ಕರ್ನಾಟಕ 2018-21ರ ಅವಧಿಯಲ್ಲೇ 7,133 ಅಸ್ಪೃಶ್ಯತೆಯ ಪ್ರಕರಣಗಳನ್ನು ದಾಖಲಿಸಿದೆ. ಕೊಪ್ಪಳ, ಚಿಕ್ಕಮಗಳೂರು, ಪಿರಿಯಾಪಟ್ಟಣ, ಮಾಲೂರು, ಕೊಳ್ಳೆಗಾಲ ಮುಂತಾದೆಡೆ ಸಂಭವಿಸಿರುವ ಅಸ್ಪೃಶ್ಯತೆಯ ಪ್ರಕರಣಗಳು ಮತ್ತು ಸಾಮಾಜಿಕ ಬಹಿಷ್ಕಾರ, ಗೌರವ ಹತ್ಯೆಯ ಪ್ರಕರಣಗಳು ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯದ ಕೊರತೆ ಇರುವುದನ್ನು ಎತ್ತಿ ತೋರುವಂತಿದೆ.
ಈ ನಡುವೆಯೇ ಕರ್ನಾಟಕ ಅತ್ಯಾಧುನಿಕ-ಶರವೇಗದ ವಂದೇಭಾರತ್ ರೈಲು, ಮೈಸೂರು-ಬೆಂಗಳೂರು ದಶಪಥ ಎಕ್ಸ್‌ಪ್ರೆಸ್ ಹೆದ್ದಾರಿ ಮತ್ತು ನಗರೀಕರಣ ಪ್ರಕ್ರಿಯೆಯ ಅವಿಭಾಜ್ಯ ಅಂಗವಾದ ಮೆಟ್ರೋ ರೈಲು, ಮೇಲ್ ಸೇತುವೆಗಳ ನಡುವೆ ತನ್ನ ಅಭಿವೃದ್ಧಿ (?) ಪಥದಲ್ಲಿ ಸಾಗುತ್ತಿದೆ. ಮಾರುಕಟ್ಟೆ ದೃಷ್ಟಿಯಿಂದ ಕರ್ನಾಟಕ ಬಂಡವಾಳ ಹೂಡಿಕೆಗೆ ಪ್ರಶಸ್ತ ಭೂಮಿಕೆಯಾಗಿದ್ದು ಮಾರುಕಟ್ಟೆ ಆರ್ಥಿಕ ಪರಿಭಾಷೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸೂಕ್ತವಾದ ರಾಜ್ಯವಾಗಿದೆ. ನವ ಉದಾರವಾದಿ ಆರ್ಥಿಕ ಚಿಂತನೆಯ ನೆಲೆಯಲ್ಲಿ ಕರ್ನಾಟಕ ಆರ್ಥಿಕವಾಗಿ ಮುನ್ನಡೆ ಸಾಧಿಸಿರುವ ರಾಜ್ಯವಾಗಿಯೂ ಕಾಣುತ್ತದೆ. ಆದರೆ ಈ ಬೆಳೆದು ನಿಂತ ಬೃಹದಾರ್ಥಿಕ ಮಾರುಕಟ್ಟೆಯಆವರಣದಲ್ಲೇ ಸೃಷ್ಟಿಯಾಗಿರುವ ಸಾಮಾಜಿಕ ಕ್ಷೋಭೆ, ಸಾಂಸ್ಕೃತಿಕ ತಾರತಮ್ಯಗಳು, ದುಡಿಯುವ ವರ್ಗಗಳ ಸಾಮಾಜಿಕ-ಆರ್ಥಿಕ ಅನಿಶ್ಚಿತತೆ ಮತ್ತು ಅಭದ್ರತೆ, ಮಹಿಳಾ ಸಮೂಹದ ಆತಂಕಗಳು, ತಳಸಮುದಾಯಗಳು ಎದುರಿಸುತ್ತಿರುವ ನಿರಂತರ ಶೋಷಣೆ ಮತ್ತು ದಬ್ಬಾಳಿಕೆ ಇವೆಲ್ಲವೂ ಸಹ ರಾಜ್ಯದ ಒಟ್ಟಾರೆ ದುಡಿಯುವ ವರ್ಗಗಳ ಹೆಗಲ ಮೇಲಿನ ಬೌದ್ಧಿಕ, ಭೌತಿಕ ಹಾಗೂ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ.
ರಾಜ್ಯ ಕಾಣುತ್ತಿರುವ ಗುಜರಾತ್ ಮಾದರಿಯ “ಆರ್ಥಿಕ ಅಭಿವೃದ್ಧಿ”ಯ ಹಾದಿಯಲ್ಲಿ ಶಿಥಿಲವಾಗುತ್ತಿರುವ ಸಮನ್ವಯದ ಬೇರುಗಳು, ದುರ್ಬಲವಾಗುತ್ತಿರುವ ಸಾಮರಸ್ಯದ ಕೊಂಡಿಗಳು, ಸಡಿಲವಾಗುತ್ತಿರುವ ಸಹಬಾಳ್ವೆಯ ನೆಲೆಗಳು ಹಾಗೂ ಕುಸಿಯುತ್ತಿರುವ ಸಾಂವಿಧಾನಿಕ-ಪ್ರಜಾಸತ್ತಾತ್ಮಕ ಮೌಲ್ಯಗಳು ಇವೆಲ್ಲವೂ ರಾಜ್ಯದ ಶ್ರಮಜೀವಿಗಳನ್ನು ಕಾಡಲೇಬೇಕಾದ ಪ್ರಶ್ನೆಗಳಾಗಿವೆ. ಸಹಬಾಳ್ವೆ- ಸಾಮರಸ್ಯ-ಸೌಹಾರ್ದತೆ ಮತ್ತು ಸೋದರತ್ವವನ್ನು ಕಳೆದುಕೊಂಡು ಸಾಧಿಸುವ ಆರ್ಥಿಕ ಮುನ್ನಡೆ ಬಹುಸಂಖ್ಯೆಯ ತಳಮಟ್ಟದ ದುಡಿಯುವ ವರ್ಗಗಳ ಪಾಲಿಗೆ “ ಕುಸಿವ ತಳಪಾಯದ ಅರಮನೆ “ ಯಂತೆಯೇ ಕಾಣುತ್ತದೆ. ಈ ದೃಷ್ಟಿಯಿಂದಲೇ ಮೇ 10ರ ಚುನಾವಣೆಯನ್ನು ರಾಜ್ಯದ ಸಮಸ್ತ ಶ್ರಮಜೀವಿ ವರ್ಗಗಳು, ಕಳೆದ ಐದು ವರ್ಷಗಳ ಈ ಸಾಧನೆಗಳನ್ನು ಒರೆಹಚ್ಚಿ ನೋಡಿ ಒಂದು ಪರ್ಯಾಯ ಸರ್ಕಾರವನ್ನು ಅಧಿಕಾರಕ್ಕೆ ತರುವ ಸದಾವಕಾಶ ಎಂದು ಪರಿಗಣಿಸಬೇಕಿದೆ. ಸಮಾನತೆ, ಭ್ರಾತೃತ್ವ ಮತ್ತು ಮಾನವ ಸೌಹಾರ್ದತೆಯ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸಲು ಅಧಿಕಾರಾರೂಢ ಸರ್ಕಾರವನ್ನು ಪದಚ್ಯುತಗೊಳಿಸಿ ಒಂದು ಹೊಸ ಸರ್ಕಾರಕ್ಕೆ ಅವಕಾಶ ನೀಡುವ ಸಂಕಲ್ಪದೊಂದಿಗೆ ದುಡಿಯುವ ವರ್ಗಗಳು ಮತಗಟ್ಟೆಗಳಿಗೆ ಹೋಗಬೇಕಿದೆ. ಆದರೆ ಈ ಹಾದಿಯಲ್ಲಿ ಕಾರ್ಮಿಕ ವರ್ಗಗಳ ಹಾಗೂ ಈ ವರ್ಗಗಳನ್ನು ಪ್ರತಿನಿಧಿಸುವ ಸಾಂಘಿಕ ಶಕ್ತಿಗಳ , ರಾಜಕೀಯ ಪಕ್ಷಗಳ ಪಾತ್ರ ಏನು ?
(ಮುಂದುವರೆಯಲಿದೆ)